ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಹಾಗೂ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪತ್ರ ಬರೆದ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.
ಕೆ.ಜೆ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಮತ್ತು ಸ್ಯಾಂಡಲ್‌ವುಡ್‌ನ ಡ್ರಗ್ಸ್ ಪ್ರಕರಣಗಳ ತನಿಖೆಯನ್ನು ನಿಲ್ಲಿಸುವಂತೆ ಬಂದ ಬೆದರಿಕೆ ಪತ್ರಗಳ ಕುರಿತು ತನಿಖೆ ಮಾಡಲು ಸಿಸಿಬಿ ಹಾಗೂ ಕೇಂದ್ರ ಪೋಲೀಸರ ಸಹಯೋಗದೊಂದಿಗೆ ನಾಲ್ಕು ವಿಶೇಷ ತಂಡಗಳ ರಚನೆ ಮಾಡಲಾಗಿತ್ತು.
ಬಂಧಿತರು ಯಾರು?
ನ್ಯಾಯಾಲಯ ಹಾಗೂ ಪೋಲೀಸ್ ಕಛೇರಿಗಳಿಗೆ ಬಾಂಬ್ ಬೆದರಿಕೆ ಪತ್ರಗಳನ್ನು ಕಳುಹಿಸಿರುವ ವ್ಯಕ್ತಿ ತುಮಕೂರು ಜಿಲ್ಲೆಯ ತಿಪಟೂರು ಮೂಲದ ರಾಜಶೇಖರ್ ಮತ್ತು ಗುಬ್ಬಿ ತಾಲೂಕಿನ ಹಾಗಲವಾಡಿಯ ವೇದಾಂತ್ ಈ ಪತ್ರ ಕಳುಹಿಸಿದ ಖದೀಮರೆಂದು ಪೋಲೀಸರಿಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಪೋಲೀಸರು ಈ ಇಬ್ಬರನ್ನೂ ಬಂಧಿಸಿದ್ದಾರೆ. ನಿನ್ನೆ ರಾತ್ರಿಯಿಂದಲೇ ಬೆದರಿಕೆ ಪತ್ರ ಕಳುಹಿಸಿದವರ ಪತ್ತೆಗೆ ಜಾಲ ಬೀಸಿ ಕಾರ್ಯಾಚರಣೆ ನಡೆಸುತ್ತಿದ್ದರು.
ಯಾರು ರಾಜಶೇಖರ್?
ರಾಜಶೇಖರ್ ತುಮಕೂರು ಜಿಲ್ಲೆಯ ತಿಪಟೂರು ಮೂಲದವರು. ರಾಜಶೇಖರ್ ತಮ್ಮ ಷಡ್ಡಕ ರಮೇಶ್ ಅವರ ಮೇಲೆ ಪೋಲಿಸ್ ಆಪಾದನೆ ಬರಲೆಂದು ಈ ರೀತಿಯ ಬೆದರಿಕೆ ಪತ್ರವನ್ನು ತನ್ನ ಸ್ನೇಹಿತ ಹಾಗಲವಾಡಿಯ ವೇದಾಂತ್ ಅವರಿಂದ ಪೋಸ್ಟ್ ಮಾಡಿಸಿದ್ದ.
ರಾಜಶೇಖರ್-ರಮೇಶ್ ಒಂದೇ ಕುಟುಂಬದ ಅಕ್ಕ-ತಂಗಿಯರನ್ನು ಮದುವೆ ಆಗಿದ್ದರು. ಅತ್ತೆ ಮನೆಯ ಆಸ್ತಿಗೋಸ್ಕರ ಯಾವಾಗಲೂ ಕೌಟುಂಬಿಕ ಕಲಹ ನಡೆಯುತ್ತಲೇ ಇತ್ತು. ಅತ್ತೆ ಮನೆಯ ಆಸ್ತಿ ಸಂಪೂರ್ಣವಾಗಿ ತನಗೇ ದಕ್ಕಬೇಕು ಎಂಬ ಉದ್ದೇಶದಿಂದ ಪೋಲೀಸರಿಗೆ ರಮೇಶ್ ಅವರ ಆಧಾರ್ ಕಾರ್ಡ್ ಪ್ರತಿಯೊಂದನ್ನು ಇಟ್ಟು ಬೆದರಿಕೆ ಪತ್ರ ಕಳುಹಿಸಿದ್ದ. ರಮೇಶ್ ಬಂಧಿತರಾದರೆ ಆಸ್ತಿ ಸಂಪೂರ್ಣವಾಗಿ ಆಸ್ತಿ ತನಗೇ ದಕ್ಕುತ್ತದೆ ಎಂಬ ಆಸೆಯಿಂದ.
ಈ ದುಷ್ಕೃತ್ಯದ ಯೋಜನೆಯಲ್ಲಿ ಹಾಗಲವಾಡಿಯ ತನ್ನ ಸ್ನೇಹಿತ ವೇದಾಂತ್‌ನನ್ನು ರಾಜೇಶೇಖರ್ ಸೇರಿಸಿಕೊಂಡಿದ್ದ. ಬಾಂಬ್ ಬೆದರಿಕೆಯ ಪತ್ರವನ್ನು ವೇದಾಂತ್‌ನಿಂದಲೇ ಬರೆಸಿದ ರಾಜಶೇಖರ್ ಅದನ್ನು ಚೇಳೂರಿನ ಪೋಸ್ಟ್ ಆಫೀಸಿನಿಂದ ಪೋಸ್ಟ್ ಮಾಡಿಸಿದ್ದ. ಬಾಂಬ್ ಬೆದರಿಕೆ ಪತ್ರದ ಮೂಲವನ್ನು ಹುಡುಕಿಕೊಂಡ ಹೋದ ಪೋಲೀಸರಿಗೆ ರಾಜಶೇಖರ್ ಹಾಗೂ ವೇದಾಂತ್‌ನ ದುಷ್ಕೃತ್ಯ ಪತ್ತೆಯಾಗಿದೆ. ಈಗ ಈ ಇಬ್ಬರೂ ಪೋಲೀಸರ ಅತಿಥಿಗಳಾಗಿದ್ದಾರೆ.
ನಿನ್ನೆ ಸಂಜೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ಬೆದರಿಕೆ ಪತ್ರ ಬಂದಿದ್ದು, ಪತ್ರದಲ್ಲಿ ವೈರ್ಗಳಿರುವುದನ್ನು ಕಂಡು ತೀವ್ರ ಆತಂಕಕ್ಕೊಳಗಾಗಿದ್ದಾರೆ ಜಡ್ಜ್. ಅವರು ತಕ್ಷಣವೇ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸರ ಜೊತೆಗೆ ಸ್ಥಳಕ್ಕೆ ಆಗಮಿಸಿದ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಪತ್ರ ಎಂಬುವುದು ಗೊತ್ತಾಗಿತ್ತು. ನಂತರ ಹಲಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಕಮೀಷನರ್ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೂ ಸಹ ಇದೇ ರೀತಿಯ ಬೆದರಿಕೆ ಪತ್ರಗಳು ಬಂದಿದ್ದವು. ಪತ್ರದ ಜೊತೆ ಡಿಟೋನೇಟರ್ ಮಾದರಿಯ ವಸ್ತುಗಳು ಹಾಗೂ ವೈರ್‌ಗಳು ಇದ್ದವು. ಇವುಗಳನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ಕಾರಣದಿಂದಲೇ ನಿನ್ನೆ ಸಂಜೆಯಿಂದ ಪೋಲೀಸ್ ಕಮಿಷನರ್ ಕಛೇರಿಗೆ ಹಾಗೂ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಬಿಗಿ ಭದ್ರತೆ ಜದಗಿಸಲಾಗಿತ್ತು.
ಹೈಕೋರ್ಟ್ ನ್ಯಾಯಾಧೀಶರ ಆದೇಶದಂತೆ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ತಪಾಸಣೆ ನಡೆಸಿದಾಗ ಬಾಂಬ್‌ಗೆ ಸಂಬಂಧಪಟ್ಟ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದ ಕೊಂಚ ನಿರಾಳತೆ ಉಂಟಾಗಿದೆ.
ಹುಸಿ ಪತ್ರಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ‘ಸಿಸಿಬಿ ತನಿಖೆ ನಡೆಸುತ್ತಿರುವ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಹಾಗೂ ಡಿ.ಜೆ. ಹಳ್ಳಿ – ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಪತ್ರಗಳು ಬಂದಿವೆ. ಈ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿಕೆ ಸಹ ನೀಡಿದ್ದರು.
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ