December 23, 2024

Newsnap Kannada

The World at your finger tips!

deepa1

ನೀಲಿ ಅಶ್ಲೀಲತೆಯ ಅಥವಾ ಅನಂತತೆಯ ಸಂಕೇತವೋ…?

Spread the love

Blue – A Symbol of……

ಒಂದು ನೀಲಿ ಚಿತ್ರದ ಸುತ್ತಾ…..

ನೀಲಿ ಬಣ್ಣ – ಆಕಾಶದ ಅನಂತತೆಯ ಸಂಕೇತ…..

ನೀಲಿ – ಸಾಗರದ ಅಗಾಧತೆಯ ಸಂಕೇತ……..

ನೀಲಿ – ದೂರ ದೃಷ್ಟಿಯ, ತೀಕ್ಷ್ಣ ದೃಷ್ಟಿಯ ( X Ray ) ಸಂಕೇತ……

ಅದೇ ನೀಲಿ ಅಶ್ಲೀಲತೆಯ ಸಂಕೇತ ಎಂದೂ ಕರೆಯಲಾಗುತ್ತದೆ…….

ಹುಚ್ಚನೊಬ್ಬ ಮಾನವೀಯ ಮೌಲ್ಯಗಳ – ನೈತಿಕ ಮೌಲ್ಯಗಳ ನಾಶ ತಡೆಯಲು ಕಾಲ್ನಡಿಗೆಯಲ್ಲಿ ರಾಜ್ಯ ಸುತ್ತುತ್ತಿದ್ದಾನೆ…..

ವ್ಯವಸ್ಥೆಯೊಂದು ಅದನ್ನು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುತ್ತಿದೆ………

ನೀಲಿ ದೃಶ್ಯಗಳಲ್ಲಿ ಅಭಿನಯಿಸಿದ ಖಳನಾಯಕರು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತೆ ಜನರ ಬೆಂಬಲ ಪಡೆದು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ……

ಅಂದರೆ ಜನಗಳ ಕಣ್ಣು ಮನಸ್ಸು ಬುದ್ದಿ ಸಹ ನೀಲಿಯಾಗಿದೆ ಎಂದು ಭಾವಿಸಬಹುದೆ………

ನೈತಿಕತೆ – ಅನೈತಿಕತೆಯ ವ್ಯಾಖ್ಯಾನ ಏನೇ ಇರಲಿ, ಶೀಲ ಅಶ್ಲೀಲಗಳ ಭಾವ ಏನೇ ಆಗಿರಲಿ, ಸಭ್ಯತೆ ಅಸಭ್ಯತೆಯ ಅರ್ಥ ಏನಾದರೂ ಆಗಿರಲಿ ಈ ಸಮಾಜದಲ್ಲಿ
” ಹೇಳುವುದು ಒಂದು ಮಾಡುವುದು ಇನ್ನೊಂದು ” ಎಂಬುದಂತೂ ಸದಾ ಸಾಕ್ಷಿಯ ಸಮೇತ ದೃಢ ಪಡುತ್ತಲೇ ಇದೆ………….

ನನ್ನ ನೀಲಿ ಕಣ್ಣು ಬಡತನದ ದೃಶ್ಯಗಳನ್ನು ನೋಡುತ್ತಿದೆ,

ನನ್ನ ನೀಲಿ ಮನಸ್ಸು ಅಜ್ಞಾನದ ಮೌಡ್ಯದ ದೃಶ್ಯಗಳನ್ನು ಗಮನಿಸುತ್ತಿದೆ,

ನನ್ನ ನೀಲಿ ಹೃದಯ ಅನೇಕ ಜಾತಿ ಅಸಮಾನತೆಯ ಭ್ರಷ್ಟಾಚಾರದ ಅಮಾನವೀಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ,

ನನ್ನ ನೀಲಿ ಅಕ್ಷರಗಳು ಮಾನವೀಯತೆಯನ್ನು ಹುಡುಕುತ್ತಿವೆ…..

ಬಹುಶಃ ಇನ್ನು ಮುಂದೆ ಇನ್ನಷ್ಟು ನೀಲಿ ದೃಶ್ಯಗಳು ಬಯಲಾಗಬಹುದು,

ಇಡೀ ಸಮಾಜ ಸರ್ಕಾರ ಮಾಧ್ಯಮಗಳು ನೀಲಿಮಯವಾಗಬಹುದು,

ಆದ್ದರಿಂದ ಮಾನಸಿಕವಾಗಿ ಸಿದ್ದರಾಗಿ……..

ನೀಲಿ ನಮ್ಮ ಅತ್ಮಾವಲೋಕನಕ್ಕೆ ಒಂದು ಸಾಧನವಾಗಲಿ,

ನೀಲಿ ನಮ್ಮ ನೈತಿಕ ಶುದ್ದತೆಯ ಸಂಕೇತವಾಗಲಿ,

ನೀಲಿ ಸಾಮಾಜಿಕ ಬದಲಾವಣೆಯ ಸಂದೇಶವಾಗಲಿ,


ಮಾರುಕಟ್ಟೆಯಲ್ಲಿ ಸಿಡಿ ಮತ್ತು ಡೈರಿಗಳು ಮಾರಾಟಕ್ಕಿವೆ………

ಡೈರಿ ಬೇಕಾ ಸಾರ್ ಡೈರಿ,
ಲಂಚದ ವಿಷಯ ಸ್ಪಷ್ಟವಾಗಿ ಬರೆದಿಡಲು,
ಸೀಡಿ ಬೇಕಾ ಸಾರ್ ಸೀಡೀ,
ಮಂಚದ ವಿಷಯ ಸ್ಪಷ್ಟವಾಗಿ ತೆರದಿಡಲು,
ದೆಹಲಿ ದೊರೆಗಳಿಗೆ ಸಲ್ಲಿಸುವ ಕಪ್ಪದ ಬಗ್ಗೆ ಬರೆದಿಡುವ ಡೈರಿ,.
ಉಪ ಪತ್ನಿಯರ ಸರಸ ಸಲ್ಲಾಪದ ಬಗ್ಗೆ ಮಾಹಿತಿ ತಿಳಿಯಲು ಸೀಡಿ ಬೇಕಾ
ಮತದಾರನಿಗೆ ಒಡ್ಡಿದ ಹಣದ ಆಮಿಷದ ಲೆಕ್ಕ ಇಡುವ ಡೈರಿ,

ವಿರೋಧಿಗಳನ್ನು ಸದೆಬಡಿಯಲು ತಂತ್ರ ಕುತಂತ್ರ ದಾಖಲಿಸುವ ಸೀಡಿ.

ಡೈರಿ ಬೇಕಾ – ಸೀಡಿ ಬೇಕಾ – ಸಾರ್,

ಟಿವಿಯವರು ಸ್ಪಷ್ಟವಾಗಿ ಪ್ರದರ್ಶಿಸಲು ಸಾಧ್ಯವಾಗುವ ಸೀಡಿ,

ಪತ್ರಿಕೆಯವರು ಸ್ಪಷ್ಟವಾಗಿ ಪ್ರಕಟಿಸಲು ಸಾಧ್ಯವಾಗುವ ಡೈರಿ,

ಸಂಭಾಷಣೆ – ದೃಶ್ಯಗಳನ್ನು ಸುಲಭವಾಗಿ ತಿರುಚಬಲ್ಲ ಸೀಡಿ,

ರಾಮನ ಲೆಕ್ಕ – ಕೃಷ್ಣನ ಲೆಕ್ಕ ಸರಿಯಾಗಿ ಮೂಡಿಸಬಲ್ಲ ಡೈರಿ,

ವೀಕ್ಷಕರಿಗೆ ರೋಮಾಂಚನ ಉಂಟು ಮಾಡಬಲ್ಲ ಸೀಡಿ,

ಸಾರ್ವಜನಿಕರಿಗೆ ಮಂಕುಬೂದಿ ಎರಚಲು ಸಾಧ್ಯವಾಗುವಂತ ಡೈರಿ.

ಸೀಡಿ ಬೇಕಾ – ಡೈರಿ ಬೇಕಾ – ಸಾರ್,

ವಿವಿಧ ಬಣ್ಣದ – ವಿವಿಧ ಆಕಾರದ ಡೈರಿಗಳು ಸೀಡಿಗಳು,

ಹೀಗೆ ಕೂಗುತ್ತಾ ರೈಲು ನಿಲ್ದಾಣದಲ್ಲಿ ಡೈರಿ ಸೀಡಿ ವ್ಯಾಪಾರ ಮಾಡುತ್ತಿದ್ದ 12 ವರ್ಷದ ಬಾಲಕ.

ಆಗ ನಾನು ” ಮರಿ, ಈಗಿನ ಆರ್ಥಿಕ ಸಂಕಷ್ಟ ಮತ್ತು ಬೆಲೆ ಏರಿಕೆ ಬಗ್ಗೆ ಬರೆದಿಡಲು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ದಾಖಲಿಸುವ ಸಿಡಿ ಮತ್ತು ಡೈರಿ ಇದೆಯೇ ” ಎಂದು ಕೇಳಿದೆ.

ಅದಕ್ಕೆ ಅವನು ” ಛೆ ..ಛೆ ..ಅಷ್ಟೊಂದು ಅಪ್ರಯೋಜಕ ಡೈರಿ ನಾನು ಮಾರುವುದಿಲ್ಲ ಸಾರ್. ಅದನ್ನು ಯಾರೂ ಕೊಳ್ಳುವುದಿಲ್ಲ ” ಎಂದು ಉತ್ತರಿಸಿದ.

ನಾನು ” ಹೋಗಲಿ, ಪರಿಸರ ಸಂರಕ್ಷಣೆ – ಮಹಿಳಾ ಸ್ವಾತಂತ್ರ್ಯ – ದಿನನಿತ್ಯದ ಸತ್ಯ ಮುಂತಾದ ವಿಷಯಗಳ ಬಗ್ಗೆ ಬರೆಯಲಾದರೂ ಡೈರಿ ಮತ್ತು ಸಿಡಿ ನಿನ್ನ ಬಳಿ ಇದೆಯಾ ” ಎಂದು ಕೇಳಿದೆ.

ಅದಕ್ಕೆ ಅವನು ” ಥೂ. ಥೂ . ಏನ್ಸಾರ್ ನೀವು ಹುಟ್ಟಿದ್ದು 1942 ಅನಿಸುತ್ತದೆ. ಹಳೇ ಕಾಲದ ಡೈರಿ ಕೇಳ್ತಾ ಇದ್ದೀರಲ್ಲ. ಆ ವಿಷಯ ಈಗ ಯಾರೂ ಬರೆಯುವುದಿಲ್ಲ. ಅದೆಲ್ಲಾ ಈಗ ಮ್ಯೂಸಿಯಂನಲ್ಲಿಟ್ಟಿರುತ್ತಾರೆ. ಈಗೇನಿದ್ದರೂ ಲಂಚದ ವಿಷಯ ಮಂಚದ ವಿಷಯ ಕೊಲೆ ವಿಷಯ ಅತ್ಯಾಚಾರದ ವಿಷಯ ಮುಂಡಾ ಮೋಚುವ ವಿಷಯ ಇಂತದ್ದೇ ಬರೆಯಲು ಮತ್ತು ಮಾತನಾಡಲು ಡೈರಿ ಮತ್ತು ಸಿಡಿ ಕೊಳ್ಳುತ್ತಾರೆ. ಬಹಳ ಡಿಮ್ಯಾಂಡ್ ಇದೆ ಸಾರ್. ನಿಮಗ್ಯಾವುದು ಬೇಕು ” ಎಂದ.

ಪಾಪ ಅವನನ್ನು ನಿರಾಸೆ ಮಾಡಬಾರದೆಂದು ಕೊಲೆಯ ವಿಷಯ ಬರೆಯುವ ಒಂದು ಡೈರಿ ಮತ್ತು ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳು ನರಳುವುದನ್ನು ಚಿತ್ರಿಸಿ ಟಿವಿಯವರಿಗೆ ಕೊಡಲು ಒಂದು ಸೀಡಿ ಕೊಂಡುಕೊಂಡು ರೈಲು ಹತ್ತಿದೆ.

ನಿಮಗೆ ಯಾವ ರೀತಿಯ ಡೈರಿ ಬೇಕಾಗಿತ್ತೋ…..

ಸಮಾಜ ಬದಲಾಗುತ್ತಿದೆ……

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!