December 23, 2024

Newsnap Kannada

The World at your finger tips!

ravath da

ಸಕಲ ಸೇನಾ ಗೌರವಗಳೊಂದಿಗೆ ಬಿಪಿನ್ ರಾವತ್ ದಂಪತಿಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಪುತ್ರಿಯರು

Spread the love

ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಇಂದು ಸಕಲ ಅತ್ಯುನ್ನತ ಸೇನಾ ಗೌರವಗಳೊಂದಿಗೆ ದೆಹಲಿಯ ಕಂಟೋನ್ಮೆಂಟ್ ಸ್ಕ್ವೇರ್ ಚಿತಾಗಾರದಲ್ಲಿ ನಡೆಯಿತು.
ರಾವತ್ ದಂಪತಿ ಸೇರಿ 13 ಮಂದಿಯ ಪಾರ್ಥಿವ ಶರೀರವನ್ನು ನಿನ್ನೆ ದೆಹಲಿಯ ಪಾಲಂ ವಾಯುನೆಲೆಗೆ ತರಲಾಯಿತು.

ಪ್ರಧಾನಿ ಸೇರಿ ಗಣ್ಯರು ಸೇನಾ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದ್ದರು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಮರಾಜ್ ಮಾರ್ಗ್ ನಿವಾಸದಲ್ಲಿ ರಾವತ್ ದಂಪತಿ ಭೌತಿಕ ಕಾರ್ಯಗಳು ನಡೆಯಿತು.

ಮೂರು ಸೇನಾ ಪಡೆಗಳ ಬ್ಯಾಂಡ್ ಜೊತೆಗೆ ಮೆರವಣಿಗೆ ಮೂಲಕ ಮನೆಗೆ ಪಾರ್ಥಿವ ಶರೀರವನ್ನು ತರಲಾಯಿತು. ರಾವತ್ ದಂಪತಿಗೆ ನಮನ ಸಲ್ಲಿಸಲು ಬಂಧು-ಬಾಂಧವರಿಗೆ ಮಧ್ಯಾಹ್ನ 2 ಗಂಟೆವರೆಗೂ ಅವಕಾಶ ನೀಡಲಾಗಿತ್ತು.

ಮಧ್ಯಾಹ್ನ 2 ಗಂಟೆಗೆ ಕಾಮರಾಜ್ ಮಾರ್ಗದಿಂದ ಬ್ರಾರ್ ವೃತ್ತದ ಸ್ಮಶಾನದವರೆಗೂ ರಾವತ್ ದಂಪತಿಯ ಮೆರವಣಿಗೆ ನಡೆಯಿತು.

ರಾವತ್ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆಯನ್ನು ರಾಜಾಜಿ ಮಾರ್ಗ, ತೀನ್ ಮೂರ್ತಿ ಮಾರ್ಗ, 11 ಮೂರ್ತಿ, ಸರ್ದಾರ್ ಪಟೇಲ್ ಮಾರ್ಗ, ದೌಲಾ ಖಾನ್ ಮೂಲಕ ದೆಹಲಿ ಕಟೋನ್ಮೆಂಟ್‍ನ ಬ್ರಾರ್ ಸ್ಕ್ವೇರ್ ಚಿತಾಗಾರದವರೆಗೆ ತರಲಾಯಿತು. ಚಿತಾಗಾರಕ್ಕೆ ಬರುತ್ತಿದ್ದಂತೆ ಪಾರ್ಥಿವ ಶರೀರವನ್ನು 6 ಸೇನಾಧಿಕಾರಿಗಳು ಹೊತ್ತು ಸಾಗಿದರು. 800 ಸೇನಾಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು, 17 ಸುತ್ತು ಕುಶಾಲತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಲಾಯಿತು. ತಲಾ 99 ಮಂದಿ ಇರುವ ಭೂಸೇನೆ, ನೌಕಾ ಸೇನೆ, ವಾಯುಸೇನೆಯ ಬ್ಯಾಂಡ್‍ನಿಂದ ಗೌರವ ನಮನ ಸಲ್ಲಿಸಲಾಯಿತು.

ರಾವತ್ ನಿವಾಸದಿಂದ 9 ಕಿ.ಮೀ ವರೆಗಿನ ಅಂತಿಮಯಾತ್ರೆ ಆರಂಭವಾಗುತ್ತಿದ್ದಂತೆ ರಸ್ತೆಗಳ ಇಕ್ಕೆಲಗಳಲ್ಲಿ ಜನಸ್ತೋಮ ಕೂಡಿತ್ತು. ಎಲ್ಲರೂ ಜಯಘೋಷ ಕೂಗುತ್ತಾ ದಂಡನಾಯನಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. 99 ಮಿಲಿಟರಿ ಧ್ವಜಧಾರಿಗಳು ಧ್ವಜ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಸಂಜೆ 4:30 ಗಂಟೆಗೆ ಧೌಲಾಖಾನ್‍ನ ಬ್ರಾರ್ ಕ್ರಿಮೆಟೋರಿಯಂನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ದಂಪತಿ ಅಂತ್ಯಕ್ರಿಯೆ ನಡೆಯಿತು. ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತಿಮ ವಿಧಿವಿಧಾನ ನೆರವೇರಿಸಿದರು.

ಅಂತ್ಯಕ್ರಿಯೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು.

Copyright © All rights reserved Newsnap | Newsever by AF themes.
error: Content is protected !!