ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ವ್ರತಕ್ಕೆ ಪತಿ ಸಂಜೀವಿನಿ ವ್ರತವೆಂಬ ಹೆಸರೂ ಇದೆ. ಪತ್ನಿಯು ಪತಿಯ ಆಯಸ್ಸು, ಆರೋಗ್ಯ ಶ್ರೇಯೋಭಿವೃದ್ಧಿಗಳಿಗಾಗಿ ಉಮಾ ಮಹೇಶ್ವರನನ್ನು ಆರಾಧಿಸುವ ಪದ್ಧತಿ. ಆದರೆ ಈಗ ಇತ್ತೀಚೆಗೆ ಹೊಸ ಪದ್ಧತಿಗಳು ಪ್ರಾರಂಭವಾಗಿವೆ. ಪತಿಯನ್ನೇ ಕೂರಿಸಿ ಅವರ ಕಾಲು ತೊಳೆದು ಪಾದಕ್ಕೆ ಪೂಜೆ ಮಾಡಿ ಧೂಪ ದೀಪಗಳನ್ನು ಬೆಳಗುವುದು. ಆದರೆ ಮೂಲತಃ ವ್ರತದ ರೀತಿ ನಿಯಮಗಳು ಬೇರೆಯೇ ಇವೆ.
ಆಷಾಢ ಶ್ರಾವಣಗಳೇ ಹಾಗೆ ಜಿಟಿ ಜಿಟಿ ಮಳೆ, ಹಬ್ಬಗಳ ಸಾಲು, ರುಚಿ ರುಚಿಯಾದ ಬಗೆ ಬಗೆಯಾದ ತಿಂಡಿಗಳು. ಆಷಾಢದ ಕೊನೆಯ ದಿನದಿಂದ ಪ್ರಾರಂಭವಾಗುವ ಹಬ್ಬಗಳು ಸರಿಸುಮಾರು ನವರಾತ್ರಿಯ ವರೆಗೂ ಆಚರಿಸಲ್ಪಡುತ್ತವೆ. ಈ ಆಚರಣೆಗಳಲ್ಲಿ ವೈಜ್ಞಾನಿಕ ಕಾರಣಗಳಿವೆ, ಬಾಂಧವ್ಯಗಳಿವೆ. ಈ ಸಮಯದಲ್ಲಿ ಆಚರಿಸುವ ವ್ರತ, ಪೂಜೆಗಳು ಧಾರ್ಮಿಕ ಹಿನ್ನೆಲೆಗಳನ್ನು ಹೊಂದಿವೆ.
ಜ್ಯೋತಿರ್ಭೀಮೇಶ್ವರ ವ್ರತ ಅಥವಾ ಭೀಮನ ಅಮಾವಾಸ್ಯೆ ವ್ರತದಿಂದ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಇದನ್ನು ಪತಿ ಸಂಜೀವಿನಿ ವ್ರತವೆಂದೂ ಕರೆಯಲಾಗುತ್ತದೆ. ಇದನ್ನು ಪೂಜೆಯ ರೂಪದಲ್ಲಿ ಅವಿವಾಹಿತರು ಆಚರಿಸಿದರೆ ವ್ರತದ ರೂಪದಲ್ಲಿ ಸುಮಂಗಲಿಯರು ಆಚರಿಸುತ್ತಾರೆ. ಈ ವ್ರತದ ಹಿನ್ನೆಲೆಯಲ್ಲಿ ಸಾಕಷ್ಟು ಕತೆಗಳಿವೆ. ಒಂದೊಂದು ಕಡೆ ಒಂದೊಂದು ರೀತಿಯ ಉಲ್ಲೇಖಗಳಿವೆ.
ಆಷಾಢಮಾಸದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಅಥವಾ ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ದಿನ ಮಂಗಳ ಸ್ನಾನ ಮಾಡಿ, ಮಡಿಯುಟ್ಟು , ಭಕ್ತಿಯಿಂದ ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಒಂದು ಪೀಠ ಇಟ್ಟು ಅದರ ಮೇಲೆ ಅಕ್ಕಿಯನ್ನು ಹರಡಿ, ಅದರ ಮೇಲೆ ತುಪ್ಪದ ದೀಪಗಳನ್ನು ಹಚ್ಚಿ, ಆ ದೀಪಗಳನ್ನೇ ಉಮಾ ಸಹಿತ ಪರಮೇಶ್ವರನೆಂದು ಭಾವಿಸಿ ಆವಾಹಿಸಿ ನಾನಾ ವಿಧವಾದ ಪತ್ರೆ, ಪುಷ್ಪಗಳಿಂದ ಆರಾಧಿಸುವುದು. ಈ ವ್ರತವನ್ನು ಮಾಡಿದಾಗ ಕಡುಬನ್ನು ನೈವೇದ್ಯ ಮಾಡಬೇಕು. ಸುಮಂಗಲಿಯರು ಮದುವೆಯಾದ ವರ್ಷದಿಂದ ಈ ವ್ರತ ಪ್ರಾರಂಭಿಸಿ ಕಡುಬನ್ನು ಬ್ರಾಹ್ಮಣರಿಗೆ ಉಪಾಯನದಾನ ಮಾಡಬೇಕು. ಹೀಗೆ ಒಂಭತ್ತು ವರ್ಷ ಶ್ರದ್ಧಾ ಭಕ್ತಿಗಳಿಂದ ಉದ್ಯಾಪನೆ ಮಾಡಬೇಕು. ವ್ರತ ಮಾಡಿದಾಗ ಒಂಭತ್ತು ಗಂಟಿನ ದಾರವನ್ನು ಮಂತ್ರಪುರಸ್ಸರವಾಗಿ ಕೈಗೆ ಕಟ್ಟಿಕೊಂಡು ಚಂದ್ರನಿಗೆ ಅರ್ಘ್ಯಪ್ರದಾನ ಮಾಡಿ, ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ, ಯಥಾಶಕ್ತಿ ದಾನದಕ್ಷಿಣೆಗಳಿಂದ ತೃಪ್ತಿ ಪಡಿಸಿ ನಂತರ ತಾನು ಕತೆಯನ್ನು ಕೇಳಿದ ನಂತರ ಭೋಜನ ಮಾಡಬೇಕು.
ಭೀಮನ ಅಮಾವಾಸ್ಯೆ ವ್ರತದಲ್ಲಿ ಭ್ರಾತೃತ್ವದ ಸಂಕೇತವೂ ಇದೆ. ಕಡುಬಿನ ಸಾಮಾಗ್ರಿಗಳನ್ನೇ ಬಳಸಿ ವೃತ್ತಾಕಾರದ ಪದಾರ್ಥಗಳನ್ನು ತಯಾರಿಸಬೇಕು. ಇದನ್ನು ಭಂಡಾರ ಎಂದು ಕರೆಯಲಾಗುತ್ತದೆ. ವ್ರತ ಪೂರೈಸಿದ ನಂತರ ಮನೆ ಬಾಗಿಲ ಹೊಸ್ತಿಲ ಮೇಲೆ ಇದನ್ನು ಇರಿಸಿ ಅಣ್ಣ, ತಮ್ಮಂದಿರು ಮೊಣಕೈ ಬಳಸಿ ಒಡೆದು ಅಕ್ಕ ತಂಗಿಯರಿಗೆ ಭಕ್ಷ್ಯ ಬೇಕೋ ಭಂಡಾರ ಬೇಕೋ ಎಂದು ಕೇಳಿ ಅದನ್ನು ಇಬ್ಬರೂ ಹಂಚಿಕೊಂಡು ತಿನ್ನುವ ಸಂಪ್ರದಾಯವಿದೆ. ಈ ಸಮಯದಲ್ಲಿ ಸೋದರರಿಗೆ ಸೋದರಿಯರು ಕಾಣಿಕೆ,ಉಡುಗೊರೆಗಳನ್ನು ನೀಡುತ್ತಾರೆ.ಇದು ಅಕ್ಕ ತಮ್ಮ, ಅಣ್ಣ ತಂಗಿಯರ ಸಂಬಂಧ ಮತ್ತು ಬಾಂಧವ್ಯಗಳನ್ನು ಹೆಚ್ಚಿಸುತ್ತವೆ. ಇದೇ ರೀತಿ ಒಂಭತ್ತು ವರ್ಷ ವ್ರತ ಮಾಡಿ ಭಂಡಾರ ಒಡೆಸಿಕೊಂಡು ಉದ್ಯಾಪನೆ ಮಾಡಿದಾಗ ಸೋದರರಿಗೆ ಯಥಾಶಕ್ತಿ ದೀಪಗಳನ್ನು ನೀಡುವ ಪರಿಪಾಠವಿದೆ.
ಎಲ್ಲಾ ವ್ರತಗಳಲ್ಲೂ ಇಂತಿಷ್ಟು ವರ್ಷ ಆಚರಿಸಿ ಉದ್ಯಾಪನೆ ಮಾಡಬೇಕೆಂಬ ಪದ್ಧತಿ ಇದೆ. ಯಾವುದೇ ವ್ರತವಾದರೂ ಅದರ ಪರಿ ಸಮಾಪ್ತಿಯಾಗುವುಗು ಉದ್ಯಾಪನೆಯ ಮೂಲಕವೇ. ವ್ರತ ಪ್ರಾರಂಭಿಸಿದ ನಂತರ ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸ ಬಾರದು. ಅವಧಿ ಪೂರ್ಣಗೊಳಿಸಿ ಉದ್ಯಾಪನೆ ಮಾಡಬೇಕು.
ಕಾವೇರಿ ಭಾರದ್ವಾಜ್
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ