ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಲ್‌ಐಸಿ ಸಹಯೋಗದೊಂದಿಗೆ ಜಾರಿಗೆ ತಂದಿದ್ದ ‘ಭಾಗ್ಯಲಕ್ಷ್ಮಿ ಯೋಜನೆ’ಯನ್ನು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ ಹಸ್ತಾಂತರಿಸಲು ಮುಂದಾಗಿದ್ದಾರೆ.
ಈ ಯೋಜನೆಯನ್ನು ಮರುವಿನ್ಯಾಸಗೊಳಿಸಿ ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ ಯೋಜನೆ’ ಗೆ 2020-21 ನೇ ಸಾಲಿನಲ್ಲಿ ಮುಂದುವರಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಂದ ಅನುಮೋದನೆಯನ್ನೂ ಪಡೆದಿದ್ದಾರೆ.
ಏನಿದು ಭಾಗ್ಯ ಲಕ್ಷ್ಮಿ ಯೋಜನೆ?
ಭಾಗ್ಯಲಕ್ಷ್ಮಿ ಯೋಜನೆಯು ಬಡ ಕುಟುಂಬಗಳಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದಾಗ 1 ಲಕ್ಷ ರೂಪಾಯಿಗಳನ್ನು ನೀಡುವ ಯೋಜನೆಯಾಗಿದೆ. ಬಿಪಿಎಲ್ ಕುಟುಂಬದಲ್ಲಿಜನಿಸಿದ ಹೆಣ್ಣುಮಕ್ಕಳಿಗೆ ಬಾಂಡ್ ನೀಡುವ ಯೋಜನೆಯೂ ಇದಾಗಿದೆ. ಯಡಿಯೂರಪ್ಪನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಆಗ ಎಲ್‌ಐಸಿ ಈ ಯೋಜನೆಯ ಏಜೆನ್ಸಿಯಾಗಿತ್ತು.
ಏಜೆನ್ಸಿಯ ಬದಲಾವಣೆ ಏಕೆ?
ಈಗ ಯಡಿಯೂರಪ್ಪನವರ ಅಧ್ಯಕ್ಷತೆಯ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಯ ಏಜೆನ್ಸಿಯನ್ನು ಎಲ್‌ಐಸಿಯಿಂದ ಅಂಚೆ ಕಛೇರಿಗೆ ಬದಲಿಸುತ್ತಿದೆ. ಕಾರಣ, ಭಾಗ್ಯಲಕ್ಷ್ಮಿ ಯೋಜನೆಯಡಿಯ ಫಲಾನುಭವಿಗಳ ಬಾಂಡ್ ಅವಧಿಯ ಬಳಿಕ ಫಲಾನುಭವಿಗಳಿಗೆ ಕೊಡಬೇಕಾದ ಮೊತ್ತವನ್ನು ಕೊಡಲು ತಕರಾರು ಮಾಡುತ್ತಲೇ ಇತ್ತು. ಅಲ್ಲದೇ ಬಡ್ಡಿಯ ದರ ಕಡಿಮೆ ಬೀಳುವದರಿಂದ, ಕೊರತೆಯ ಮೊತ್ತವನ್ನು ಸರ್ಕಾರವೇ ಭರಿಸಬೇಕೆಂದು ಆಗ್ರಹಿಸುತ್ತಿತ್ತು. ಹಾಗಾಗಿ ‘ಭಾಗ್ಯಲಕ್ಷ್ಮಿ ಯೋಜನೆ’ಯನ್ನು ಅಂಚೆ ಕಛೇರಿಯ ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ ಹಸ್ತಾಂತರ ಮಾಡಲಾಗುತ್ತಿದೆ.
ಅಂಚೆ ಕಛೇರಿಗೆ ಯೋಜನೆಯನ್ನು ವರ್ಗ ಮಾಡಿರುವುದರಿಂದ ಫಲಾನುಭವಿಗಳಿಗೆ ಯಾವುದೇ ನಷ್ಟವಾಗುವದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ