December 3, 2024

Newsnap Kannada

The World at your finger tips!

Ugadi 2024

ವರ್ಷದಲ್ಲಿ ಬೇವು ಬೆಲ್ಲ .

Spread the love

ಹೊಸ ವರ್ಷವನ್ನು ಹಿಂದೂ ಧರ್ಮದ ಪ್ರಕಾರ ಯುಗಾದಿ ಹಬ್ಬದ ಆಚರಣೆ ಮಾಡುವ ಮೂಲಕ ನಮ್ಮ ಪೂರ್ವಜರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದರು.ಆದರೆ ಇತ್ತೀಚೆಗೆ ನಾವೆಲ್ಲರೂ ಜನವರಿ ೧ ರಂದು Happy new year ಅಂತ ಹೊಸ ವರ್ಷಾಚರಣೆಯನ್ನೇ ಆಚರಿಸುವುದು ಹೆಚ್ಚಾಗಿದೆ.

image 1
ಸತೀಶ್ ಹಿರೇಮಠ್

ಬೇವು ಬೆಲ್ಲದೊಂದಿಗೆ ಯುಗಾದಿಯನ್ನು ಏಕೆ ಆಚರಿಸುತ್ತಾರೆ ಎಂದರೆ ಜೀವನವೆಂದರೆ ಸಿಹಿ ಕಹಿಗಳ ಸಮ್ಮಿಲನ ಎಂದು ಸತ್ಯ ಅರಿಯಲು ನಮ್ಮ ಹಿರಿಯರು ಮಾಡಿಟ್ಟ ಅರ್ಥಪೂರ್ಣ ಆಚರಣೆ ಎಂದು ಹೇಳಬಹುದು.

2023 ರಲ್ಲಿ ನಡೆದು ಬಂದ ದಾರಿಯೊಮ್ಮೆ ನೋಡಿದರೆ ಹಲವಾರು ಸುಖ ದುಃಖವನ್ನು ದೇಶದ ಜನರು ಅನುಭವಿಸಿದ್ದಾರೆ.ಆದರೆ ಹೊಸ ವರ್ಷದ ಹೊಸ್ತಿಲಿನಲಿ ನಮ್ಮೊಳಗೆ ಹೊಸ ವಿಚಾರಗಳು ಶುರುವಾಗುತ್ತವೆ ಬರುವ ವರ್ಷದಲಿ ಹೇಗೆ ಜೀವನದಲ್ಲಿ ಬದಲಾವಣೆಗಳನ್ನು ಕೈಗೊಳ್ಳಬೇಕು ಮತ್ತು ಹೊಸ ಯೋಜನೆಗಳನ್ಬು ಹಾಕಿಕೊಂಡು ಹೊಸ ಹುರುಪಿನಲ್ಲಿ ಮಾನಸಿಕವಾಗಿ ಸಜ್ಜಾಗುತ್ತೇವೆ.ಆದರೆ ಪ್ರತಿ ವರ್ಷದ ಒಂದೊಂದು ದಿನವೂ ,ಒಂದೊಂದು ಕ್ಷಣವೂ ಅತ್ಯಮೂಲ್ಯ ಎಂದುಕೊಳ್ಳಬೇಕು.ಕಹಿ ಅನುಭವ ಆದಾಗ ಆ ಕ್ಷಣದ ಸಮಯವನ್ನೇ ದೂರಿ ಬಿಡುತ್ತೇವೆ.ಅದು ನಮ್ಮೊಳಗಿನ ಸಂಕುಚಿತ ಭಾವ ಮಾತ್ರ .

ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ಸುಖ ದುಃಖ ಗಳನ್ನು ಅನುಭವಿಸಲೇಬೇಕು.ಆದರೆ ಕಷ್ಟದ ಕ್ಷಣಗಳೇ ಆಗಲಿ ಅಥವಾ ಸುಖದ ಕ್ಷಣಗಳೇ ಆಗಲಿ ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ.

ಚಲಿಸುವ ಕಾಲ ಚಕ್ರದಲ್ಲಿ ಒಮ್ಮೆ ಮೇಲೆ ಹೋಗಬಹುದು ,ಒಮ್ಮೆ ಕೆಳಗೆ ಇಳಿಯಬಹುದು,ಆದರೆ ಮೇಲೆ ಕೆಳಗೆ ಹೋದಾಗ ಕಷ್ಟ- ಸುಖಗಳ ಅನುಭವ ಎಲ್ರಿಗೂ ಆಗಿರುತ್ತೆ.ಜೀವನದ ಸಂಭ್ರಮ ಈ ಎರಡನ್ನೂ ಅನುಭವಿಸುವುದರಲ್ಲಿಯೇ ಅಡಗಿದೆ.ಅವುಗಳನ್ನು ನಿಭಾಯಿಸಲು ಬಾರದಿದ್ದಾಗ ಜೀವನವೆಂದರೆ ಬರೀ ದುಃಖವೇ ಅನಿಸುತ್ತದೆ.ದುಃಖದ ಸಮಯವನ್ನೇ ದೂರುತ್ತ ಕೂತರೆ ಮುಂದೆ ಬರುವ ಸುಖದ ಕ್ಷಣಗಳ ಸಂಭ್ರಮವೂ ಅದರಲ್ಲೇ ಕಳೆದುಹೋಗುತ್ತದೆ.

ಬಹಳ ಜನರು ನೋವು ನಲಿವುಗಳ ನಿರ್ವಹಣೆ ಮಾಡಲಾಗದೆ ಒದ್ದಾಡುತ್ತಾರೆ ‌.ಏಕೆಂದರೆ ಜೀವನ ಅಂದರೆ ಅವರಿಗೆ ನಲಿವು ಮಾತ್ರ ಇರುತ್ತದೆ ನೋವು ಬರುವುದೇ ಇಲ್ಲ ಅನ್ಕೊಂಡು ಅದು ಬರಲೂಬಾರದು ಅಂತ ಆ ಭಗವಂತನಿಗೂ ಬೇಡಿಕೊಳ್ಳುತ್ತಾರೆ .ಆದರೆ ಎರಡೂ ಯಾವ ದೇವರು ತಡೆದರೂ ಬರದೆ ಇರಲಾರವು.

ಪ್ರತಿ ವರ್ಷದ ಹೊಸ್ತಿಲಿನಲ್ಲಿರುವಾಗ ಆಚರಣೆಯ ಸಮಯದಲ್ಲಿ ನಾವೆಲ್ಲರೂ ಆಶಿಸುವುದು ನಮ್ಮ ಜೀವನದ ಈ ವರ್ಷ ಸಂತೋಷದಿಂದ ಕೂಡಿರಲಿ ಅಂತಾನೆ .ಧನಾತ್ಮಕವಾಗಿ ಯೋಚಿಸುವ ನಾವು ಶುಭಾಶಯವನ್ನೇ ಕೋರುತ್ತೇವೆ ಹಾಗಂತ ವರ್ಷವಿಡೀ ನಾವು ಖುಷಿಯ ಕ್ಷಣವನ್ನೇ ಬಯಸಿದರೆ ಅದು ಸಾಧ್ಯವೇ ..? ಪ್ರತಿ ದಿನ ಊಟದಲ್ಲಿ ಸಿಹಿಯನ್ನೇ ತಿನ್ನಲೂ ನಾಲಿಗೆಯೂ ಒಪ್ಪುವುದಿಲ್ಲ.ನಾಲಿಗೆಗೆ ಬೇರೆ ಬೇರೆ ರುಚಿಯ ಅನುಭವ ಪ್ರತಿದಿನವೂ ಬೇಕಲ್ಲವೇ .? ಅದರಂತೆ ಜೀವನವೂ.

ಜೀವನದ ಜೋಕಾಲಿಯಲ್ಲಿ ಮೇಲೆ ಹೋದಾಗ ಹಿಗ್ಗದೆ ,ಕೆಳಗೆ ಇಳಿದಾಗ ಕುಗ್ಗದೆ ಸಾಗುವುದು ಕಲಿಯಬೇಕು.ನಾವು ದುಃಖದ ಕ್ಷಣಗಳನ್ನು ಸುಖದ ಕ್ಷಣಗಳಿಂದ ಮುಚ್ಚಿ ಹಾಕುವ ಕಲೆಯನ್ನು ಕಲಿಯಬೇಕಾಗುತ್ತದೆ.ಆ ಕಲೆಯನ್ನು ಒಂದೇ ಬಾರಿಗೆ ಕಲಿಯಲು ಅಸಾಧ್ಯ .

ಬಹಳ ಜನ ಪೋಷಕರು ಹುಟ್ಟಿನಿಂದ ತಮ್ಮ ಮಕ್ಕಳಿಗೆ ಕಷ್ಟವೆಂದರೇನು ಗೊತ್ತಾಗದಂತೆ ಬೆಳೆಸಬೇಕು ಎಂದು ಯಾವುದೇ ಕೊರತೆ ಇಲ್ಲದಂತೆ ಬೆಳೆಸುತ್ತಾರೆ.ಮಕ್ಕಳ ಮೇಲಿನ ಅತಿಯಾದ ವ್ಯಾಮೋಹ ಕೆಲವೊಂದು ಸಲ ಅವರಿಗೆ ಬದುಕಿನ ಪಾಠವನ್ನು ಕಲಿಸದಂತೆ ಮಾಡುತ್ತದೆ.ಅತಿಯಾದ ಕಾಳಜಿಯೂ ಅವರ ಬುದ್ದಿಗೆ ಮಂಕು ಕವಿಯುವಂತೆ ಮಾಡುತ್ತದೆ.ಅದೇ ಪೋಷಕರು ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಮುಂದೆಯೇ ಮಕ್ಕಳು ಬದುಕಿನ ಪರೀಕ್ಷೆಗಳಲ್ಲಿ ಸೋತಾಗ ಅವರ ಆ ಸ್ಥಿತಿಗೆ ತಮ್ಮ ವ್ಯಾಮೋಹವೇ ಕಾರಣವಾಯಿತೇನೋ ಎಂದು ಕೊರಗುತ್ತಾರೆ.

ಬಹಳ ಜನ ತಂದೆ ತಾಯಿ ಚೆನ್ನಾಗಿ ಉಣಿಸಿ ತಿನ್ನಿಸಿ ಚೆನ್ನಾಗಿ ಬೆಳೆಸುತ್ತಾರೆ ವಿನಃ ಎಲ್ಲವನ್ನೂ ಎದುರಿಸಿ ಹೇಗೆ ಬೆಳೆಯಬೇಕು ಎಂದು ಕಲಿಸುವುದಿಲ್ಲ .ಜವಾಬ್ದಾರಿಯುತ ಪಾಲಕರು ಮಕ್ಕಳಿಗೆ ಜವಾಬ್ದಾರಿಗಳನ್ನು ನಿಭಾಯಿಸಲು ಕಲಿಸಿದಾಗಲೇ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

ಭೂಮಿ ಮೇಲಿನ ಎಲ್ಲಾ ಜೀವಿಗಳೂ ತಮ್ಮ ಪೀಳಿಗೆಗೆ ಹುಟ್ಟಿನಿಂದಲೂ ಹೇಗೆ ಬದುಕಬೇಕು ಮತ್ತು ಎಲ್ಲವನ್ನೂ ಹೇಗೆ ಧೈರ್ಯದಿಂದ ಎದುರಿಸಿ ಈ ಜಗತ್ತಿನಲ್ಲಿ ಅರ್ಥಪೂರ್ಣವಾಗಿ ಬದುಕಬೇಕು ಎನ್ನುವುದು ಕಲಿಸುತ್ತವೆ.ಮನುಷ್ಯ ಮಾತ್ರ ಆ ಪಾಠ ತಮ್ಮ ಪೀಳಿಗೆಗೆ ಕಲಿಸುವುದರಲ್ಲಿ ಎಡವುತ್ತಾನೆ.

ಭೂಮಿ ಮೇಲೆ ಬಿದ್ದ ಒಂದು ಬೀಜ ಕೂಡ ಮಳೆಯಲ್ಲಿ ಮಿಂದೊಡನೆ ಮೊಳಕೆಯೊಡೆದು ಮೇಲೇಳಲು ಪ್ರಯತ್ನಿಸುತ್ತದೆ .ಮೇಲೆ ಬಂಡೆಗಲ್ಲಿದ್ದರೂ ಆಕಾಶ ನೋಡಲು ಬೇರೆ ಕಡೆಯಿಂದ ಮುಖ ಮಾಡುತ್ತ ಬಂಡೆಗಲ್ಲನ್ನೇ ಆಶ್ರಯವನ್ನಾಗಿಸಿಕೊಂಡು ಮೇಲೆದ್ದು ಜಯಿಸುತ್ತದೆ.ಗಾಳಿ ಮಳೆಗಳನ್ನು ತಡೆದುಕೊಂಡು ಸಸಿ ಇರುವಾಗಲೇ ಗಟ್ಟಿಯಾಗಿ ಮುಂದೊಂದು ದಿನ ಎಲ್ಲವನ್ನೂ ಸಹಿಸಿಕೊಂಡು ಹೆಮ್ಮರವಾಗಿ ನಿಸರ್ಗಕ್ಕೆ ತನ್ನ ಮಹತ್ತರ ಕೊಡುಗೆ ನೀಡುತ್ತದೆ.

ಈ ಜಗತ್ತಿನಲ್ಲಿ ಪ್ರತಿ ದಿನವೂ ನಮ್ಮ ಮನಸ್ಸಿಗೆ ಹಿಡಿಸುವ ಸನ್ನಿವೇಶಗಳು ನಡೆಯುತ್ತವೆ ಅದರಂತೆ ಮನಸ್ಸಿಗೆ ಇಷ್ಟವಾಗದ ಸನ್ನಿವೇಶಗಳೂ ಗತಿಸುತ್ತವೆ ಯಾವುದನ್ನೂ ನಿರಾಕರಿಸದೆ ಎಲ್ಲವನ್ನೂ ಸ್ವೀಕರಿಸಿದಾಗ ಮಾತ್ರ ಬದುಕು ದೇವರು ನೀಡಿದ ಪ್ರಸಾದವಾಗುತ್ತದೆ .ಯಾವುದೂ ಶಾಶ್ವತವಲ್ಲ ಅಂತ ಅಂದ್ಮೇಲೆ ನೋವು ಹೇಗೆ ಜಾಸ್ತಿ ಸಮಯ ಉಳಿದುಕೊಳ್ಳಲು ಸಾಧ್ಯ..? ಅಲ್ವ ಅಂತಹ ಅನುಭವ ಆದಾಗ ಮುಂದಿನ ದಿನದ ನಲಿವು ನೀಡಲು ಆ ದೇವರೆ ಇಂದಿನಿಂದಲೇ ಪರೀಕ್ಷೆ ನೀಡುತ್ತಿರುವನು ಅಂದುಕೊಳ್ಳೋಣ.

ಪ್ರತಿ ವರ್ಷ ಕ್ಯಾಲೆಂಡರ್ ಬದಲಾಗುವುದೇ ವಿನಃ ಬದುಕಿನ ಪರೀಕ್ಷೆಗಳು ಬದಲಾಗದು .ಪ್ರತಿ ದಿನವೂ ಒಂದೊಂದು ಸವಾಲು ನಮ್ಮ ಜೀವನಕ್ಕೆ ಅಡ್ಡಲಾಗಿ ಬಂದು ಬಿಡುತ್ತವೆ .ಅದನ್ನರಿತು ಏನೆ ಬಂದರೂ ಜಯಿಸುತ್ತ ಮುಂದೆ ಸಾಗಬಲ್ಲೆ ಎಂಬ ಆತ್ಮ ವಿಶ್ವಾಸದಿಂದ ಬದುಕೋಣ.


ಪ್ರತಿ ದಿನವೂ ಹೊಸ ದಿನ ಎಂದುಕೊಂಡಾಗ ಎಷ್ಟು ಹೊಸ ವರ್ಷಗಳು ಬಂದರೂ ಜೀವನದಲ್ಲಿ ಬರುವ ಎಲ್ಲಾ ದಿನಗಳನ್ನು ಸಾರ್ಥಕವಾಗಿ ಅನುಭವಿಸಬಹುದು.

ಹಳೆಯ ವರ್ಷದಲ್ಲಿ ನಮ್ಮ ನೋವು ನಲಿವುಗಳಿಗೆ ಕಾರಣಗಳೇನಿರಬಹುದು ಎಂದು ತರ್ಕಕ್ಕೆ ತಂದುಕೊಂಡಾಗಲೆ ಹೊಸ ವರ್ಷದಲ್ಲಿ ಆ ಕಾರಣದಿಂದ ಕಲಿತ ಪಾಠದೊಂದಿಗೆ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆದರೆ ಅದುವೇ ಹೊಸ ಜೀವನವಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!