ಸಿರಿಯಾದ ಉಗ್ರಗಾಮಿ ಸಂಘಟನೆಗಳಲ್ಲಿ ಬೆಂಗಳೂರಿನ ಯುವಕರು

Team Newsnap
1 Min Read

ರಾಜ್ಯ ರಾಜಧಾನಿ ಬೆಂಗಳೂರಿನ ಯುವಕರು ಸಾಲು ಸಾಲಾಗಿ ಸಿರಿಯಾದ ಉಗ್ರ ಸಂಘಟನೆಯಾದ ಹಿಜ್ಬುಲ್ ತೆಹ್ರಿರ್​ ಸಂಘಟನೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಎನ್​ಐಎ ತನಿಖೆಯಿಂದ ಬಯಲು ಮಾಡಿದೆ.

ಎನ್​ಐಎ ಇತ್ತೀಚೆಗೆ ಬೆಂಗಳೂರಲ್ಲಿ ಹಿಜ್ಬುತ್ ತೆಹ್ರಿರ್ ಉಗ್ರರನ್ನು ಬಂಧಿಸಿತ್ತು. ಈ ಪ್ರಕರಣದ ತನಿಖೆಯ ಬೆನ್ನುಹತ್ತಿದ ಅಧಿಕಾರಿಗಳು ಇದೀಗ ಅನೇಕ ಸ್ಫೋಟಕ ಮಾಹಿತಿಗಳನ್ನು ಹೊರಗೆಡಹುತ್ತಿದ್ದಾರೆ.

ಎನ್ಐಎ ತನಿಖೆಯಂತೆ 2013-14 ರಲ್ಲಿ ಬೆಂಗಳೂರಿನಿಂದ 5 ಯುವಕರು ಸಿರಿಯಾಗೆ ತೆರಳಿದ್ದಾರೆ. ಈ 5 ಯುವಕರನ್ನು ನಗರದ ಇರ್ಫಾನ್ ನಾಸೀರ್ ಮತ್ತು ಅಬ್ದುಲ್ ಅಹ್ಮದ್ ಖಾದರ್ ಎಂಬವರೇ ಸಿರಿಯಾಗೆ ಕಳುಹಿಸಿದ್ದಾರೆ ಎಂಬ ಅಂಶವೂ ಇದೀಗ ಬಹಿರಂಗವಾಗಿದೆ.

ಇರ್ಫಾನ್ ನಾಸೀರ್ ಹಾಗೂ ಅಬ್ದುಲ್ ಆಹ್ಮದ್ ಖಾದರ್ ನಿಷೇಧಿತ ಹಿಜ್ಬುತ್ ತೆಹ್ರಿರ್ ಸಂಘಟನೆ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಶಂಕಿತ ಉಗ್ರ ವೈದ್ಯ ಅಬ್ದುರ್ ರೆಹಮಾನ್ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದ ಎನ್​ಐಎ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು. ಖುರಾನ್ ಸರ್ಕಲ್ ಎಂದು ಮಾಡಿಕೊಂಡು ಬೆಂಗಳೂರಿನಿಂದ ಸಿರಿಯಾಗೆ ಕಳುಹಿಸಿ ಐಸಿಸ್ ಪರ ಕೆಲಸ ಮಾಡಲು ಯುವಕರನ್ನು ಈ ಆರೋಪಿಗಳು ಪ್ರಚೋದಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈಗಾಗಲೇ ಇಬ್ಬರು ಯುವಕರು ಸಿರಿಯಾದಲ್ಲಿ ಹತ್ಯೆಯಾಗಿರುವುದು ಪತ್ತೆ ಹಚ್ಚಿರುವ ಎನ್​ಐಎ ಸಿರಿಯಾದಿಂದ ಮತ್ತೆ ಭಾರತಕ್ಕೆ ಬಂದಿದ್ದ ಓರ್ವನನ್ನೂ ಸಹ ಬಂಧಿಸಿದೆ. ಆದರೆ ಇದುವರೆಗೂ ಉಳಿದ ಇಬ್ಬರು ಇನ್ನೂ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಅಲ್ಲದೆ 2014 ರ ನಂತರ ಇನ್ನೂ ಎಷ್ಟು ಮಂದಿಯನ್ನ ಸಿರಿಯಾಗೆ ಕಳುಹಿಸಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

Share This Article
Leave a comment