November 15, 2024

Newsnap Kannada

The World at your finger tips!

deepa1

ಪ್ರಕೃತಿ ಎಂಬ ಮಾಯಾ ಜಿಂಕೆಯ ಹಿಂದೆ……….

Spread the love

ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ?
ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ?
ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ ?
ಇದು ಅನಿವಾರ್ಯವೇ ?
ಅನಿರೀಕ್ಷಿತವೇ ?
ಸ್ವೀಕಾರಾರ್ಹವೇ ?

ಪರಿಸರ ತಜ್ಞರ ಅಭಿಪ್ರಾಯ,
ಉದ್ಯಮಿಗಳ ಅಭಿಪ್ರಾಯ,
ಆರ್ಥಿಕ ತಜ್ಞರ ಅಭಿಪ್ರಾಯ,
ರಾಜಕಾರಣಿಗಳ ಅಭಿಪ್ರಾಯ,
ಜನ ಸಾಮಾನ್ಯರ ಅಭಿಪ್ರಾಯ ಏನಿರಬಹುದು ಮತ್ತು ಮಾನವನ ಹಿತಾಸಕ್ತಿಯ ದೃಷ್ಟಿಯಿಂದ ಯಾವುದು ಒಳ್ಳೆಯದು ಎಂದು ಯೋಚಿಸತೊಡಗಿದಾಗ…..

ಭೂಮಿ ಇರುವಷ್ಟೇ ಇದೆ ಮತ್ತು ಹಾಗೆಯೇ ಇರುತ್ತದೆ. ಸ್ವಲ್ಪ ಸಮುದ್ರಗಳ ಕೊರೆತದಿಂದ ಒಂದಷ್ಟು ಸಣ್ಣದಾಗಬಹುದು. ಇರುವ ಭೂಮಿಯನ್ನು ಸಹ ದೇಶಗಳಾಗಿ ವಿಭಜನೆ ಮಾಡಿ ರಿಜಿಸ್ಟರ್ ಮಾಡಿಸಿಕೊಳ್ಳಲಾಗಿದೆ. ಅದು ಇನ್ನು ದೊಡ್ಡದಾಗುವ ಯಾವ ಸಾಧ್ಯತೆಯೂ ಇಲ್ಲ.
ಇರುವುದರಲ್ಲೇ ಅಡ್ಜೆಸ್ಟ್ ಮಾಡಿಕೊಂಡು ಬದುಕಬೇಕಿದೆ.

ಇನ್ನು ಈ ಜಾಗದಲ್ಲಿ ಇರುವ ಮಾನವ ಅವಶ್ಯಕತೆಯ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟು ವರ್ಷಗಳು, ಸಾಕಷ್ಟು ಜನರಿಗೆ ಸಾಕಾಗುವಷ್ಟು ಇದೆ.

ಆದರೆ ಆ ” ಸಾಕಷ್ಟು ” ಎಂಬುದೇ ಬಹುದೊಡ್ಡ ಪ್ರಶ್ನೆ ಮತ್ತು ನಮ್ಮ ಎದುರಿಗಿರುವ ಸವಾಲು.

ಮಳೆ, ಗಾಳಿ, ಕಾಡು, ನೀರು, ಸಮುದ್ರ, ಗಣಿ, ಕೃಷಿ, ಮಣ್ಣು, ಕಲ್ಲು, ಮುಂತಾದ ಎಲ್ಲವೂ ಒಂದು ಮಿತಿಗೆ ಒಳಪಟ್ಟು ಸಾಕಷ್ಟು ಸಿಗುತ್ತದೆ. ಅದು ಈಗ ಮಿತಿ ಮೀರಿದೆ ಎಂದು ಭಾಸವಾಗುತ್ತಿದೆ.

ಭಾರತವನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಳ್ಳೋಣ……..

ಸ್ವಾತಂತ್ರ್ಯ ಪೂರ್ವದಲ್ಲಿ ದಟ್ಟ ಕಾಡುಗಳ, ಗಿರಿ ಶಿಖರಗಳ, ಹಿಮಾಚ್ಛಾದಿತ ಪ್ರದೇಶಗಳ ಸಮೃದ್ಧ ನದಿಗಳ ನಾಡಾಗಿತ್ತು. ಈ ಬೃಹತ್ ದೇಶದ ಜನಸಂಖ್ಯೆ ಸ್ವಾತಂತ್ರ್ಯದ ಸಮಯದಲ್ಲಿ ಕೇವಲ ಸುಮಾರು 36 ಕೋಟಿಯಾಗಿತ್ತು. ವಾಹನಗಳು ತುಂಬಾ ಕಡಿಮೆ. ಮನೆಗಳು ಸಹ ಹೆಚ್ಚಿರಲಿಲ್ಲ. ಸಹಜವಾಗಿಯೇ ಕೃಷಿ ಮತ್ತು ಕೈಗಾರಿಕಾ ಆಗಿನ ಅವಶ್ಯಕತೆಗೆ ಮಾತ್ರ ಸೀಮಿತವಾಗಿತ್ತು.

ಸ್ವಾತಂತ್ರ್ಯ ನಂತರ ಬೆಳವಣಿಗೆಯ ವೇಗ ಹೆಚ್ಚಾಗತೊಡಗಿತು. ಜನಸಂಖ್ಯೆ ಅದರ ಜೊತೆಗೆ ಜನರ ಅವಶ್ಯಕತೆಗಳು ಬೆಳೆಯುತ್ತಾ ಹೋದವು. ತಂತ್ರಜ್ಞಾನದ ಕೊಡುಗೆ ಕೂಡ ಇದರ ಜೊತೆಯಾಯಿತು. 1990 ರ ಜಾಗತೀಕರಣದ ಪರಿಣಾಮವಾಗಿ ತೀವ್ರವಾದ ಕ್ರಾಂತಿ ಉಂಟಾಯಿತು. ಜನಸಂಖ್ಯೆ, ವಾಹನಗಳು, ಕಟ್ಟಡಗಳು, ಕೈಗಾರಿಕೆಗಳು, ಕೃಷಿ ಚಟುವಟಿಕೆಗಳು, ರಸ್ತೆಗಳು, ಜಲಾಶಯಗಳು ಎಲ್ಲವೂ ಹಲವಾರು ಪಟ್ಟು ಜಾಸ್ತಿಯಾದವು. ರಿಯಲ್ ಎಸ್ಟೇಟ್ ಎಂಬುದು ಬಹುದೊಡ್ಡ ಉದ್ಯಮ ಮತ್ತು ದಂಧೆಯಾಯಿತು. ಕಾಡುಗಳ ಕಡಿಮೆಯಾದವು, ಕೆರೆಗಳು ಮಾಯವಾದವು, ನದಿ ಮೂಲಗಳನ್ನು ಮುಚ್ಚಲಾಯಿತು, ಕೊಳವೆ ಬಾವಿಗಳು ನೀರನ್ನು ಹೀರಿದವು.

ಈ ಎಲ್ಲವೂ ಸಹ ನಮ್ಮದೇ ಸರಕಾರಗಳು ನಮ್ಮದೇ ಜನರಿಗಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಎಂದು ಭಾವಿಸಲಾಗಿದೆ.

ಹಾಗಾದರೆ ಅಭಿವೃದ್ಧಿ ಮತ್ತು ಅದರಿಂದ ಮನುಷ್ಯನಿಗೆ ಆಗುವ ತೊಂದರೆ ಎರಡೂ ಜೊತೆಯಾಗಿಯೇ ಸಾಗುತ್ತದೆ ಎಂದಾಯಿತು. ಅಂದ ಮೇಲೆ ಈ ಗೊಣಗಾಟ ಏಕೆ ?

ಇಲ್ಲಿ ಈ ಎರಡರ ನಡುವಿನ ಸಮತೋಲನದ ವಿವೇಚನೆ ಬಹಳ ಮುಖ್ಯ.

ಸರ್ಕಾರವನ್ನು ನಡೆಸುವ ಪಕ್ಷಗಳಿಗೆ ಅಧಿಕಾರ ಒಂದು ತಾತ್ಕಾಲಿಕ ಬಾಡಿಗೆ ಮನೆ ಇದ್ದಂತೆ. ಅದು ತುಂಬಾ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೇವಲ ತೇಪೆ ಹಾಕುವ ಕೆಲಸ ಮಾತ್ರ ಮಾಡುತ್ತದೆ.

ಜನಸಂಖ್ಯೆಗೆ ಒಂದು ಮಿತಿ ಹಾಕಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕಾಗಿತ್ತು. ಆ ಕೆಲಸವನ್ನು ಮಾಡಲಿಲ್ಲ. ಪ್ರಕೃತಿಗೆ ಹೆಚ್ಚಿನ ತೊಂದರೆಯಾಗದ ರೀತಿ ಅತ್ಯಂತ ಸೂಕ್ಷ್ಮವಾಗಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗಿತ್ತು. ಅದನ್ನು ಯಾರೂ ಮಾಡಲಿಲ್ಲ. ಈಗ ಅದರ ಪರಿಣಾಮ ಭೀಕರವಾಗಿದೆ.

ಎಲ್ಲರೂ ಈಗ ಹೇಳುತ್ತಿರುವುದು ಪ್ರಕೃತಿಯ ಮೇಲೆ ಮನುಷ್ಯ ಮಾಡಿದ ದೌರ್ಜನ್ಯಕ್ಕೆ ಪ್ರತಿಫಲವಾಗಿ ಪ್ರಕೃತಿ ಈಗ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಇದು ನಿರೀಕ್ಷಿವಲ್ಲವೇ ?

ಪ್ರಕೃತಿ ವಿಕೋಪಗಳಾದ ಭೂಕಂಪ, ಸುನಾಮಿ, ಪ್ರವಾಹ, ಬರ ಮುಂತಾದುವು ಪ್ರತಿನಿತ್ಯವೂ ಆಗುವುದಿಲ್ಲ. ಯಾವಾಗಲೋ ಅಪರೂಪಕ್ಕೆ ಸಂಭವಿಸುತ್ತದೆ. ಆದರೆ ಅದು ಮಾಡುವ ಅಪಘಾತ ತೀವ್ರ ಸ್ವರೂಪದ್ದಾಗಿರುತ್ತದೆ.

ಯೂರೋಪಿಯನ್ ದೇಶಗಳು ಈ ವಿಷಯದಲ್ಲಿ ನಮಗೆ ಮಾದರಿ ಆಗಬಹುದು. ಏಕೆಂದರೆ ಅವು ಸಾಕಷ್ಟು ಅಭಿವೃದ್ಧಿ ಹೊಂದಿಯೂ ಪ್ರಕೃತಿಯ ಸಹಜತೆಯನ್ನು ಕಾಪಾಡಿಕೊಂಡು ಬಂದಿವೆ.

ಒಟ್ಟಿನಲ್ಲಿ ಅಭಿವೃದ್ಧಿಯ ಮೂಲ ಅಂಶಗಳಾದ ರಸ್ತೆ, ವಾಹನ, ಸಂಪರ್ಕ, ಔಷಧಿ, ಮೊಬೈಲ್, ಬಂದೂಕು, ಬಾಂಬುಗಳು ಇತ್ಯಾದಿ ಎಲ್ಲವೂ ಮೇಲ್ನೋಟಕ್ಕೆ ಮನುಷ್ಯನನ್ನು ಹೆಚ್ಚು ನೆಮ್ಮದಿ ಮತ್ತು ಆರಾಮದಾಯಕ ಜೀವನದತ್ತ ಮುನ್ನಡೆಸುತ್ತಿದೆ ಎಂದು ಭಾಸವಾದರು ಆಂತರ್ಯದಲ್ಲಿ ಇದೇ ಅಭಿವೃದ್ಧಿ ಮನುಷ್ಯನನ್ನು ಅವಸಾನದತ್ತ ಕೊಂಡೊಯ್ಯುತ್ತಿದೆ. ಗಂಟಲಿನಲ್ಲಿರುವ ಬಿಸಿ ತುಪ್ಪದಂತಾಗಿದೆ ನಮ್ಮ ಪರಿಸ್ಥಿತಿ.
ಎಂತಹ ವಿಪರ್ಯಾಸ……

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!