December 26, 2024

Newsnap Kannada

The World at your finger tips!

basavanna

ಬಸವ ಜಯಂತಿ (Basava Jayanti) – 2022

Spread the love

ಬಸವಣ್ಣನವರು 1131 ರಲ್ಲಿ ಕರ್ನಾಟಕದ ಉತ್ತರ ಭಾಗದ ಬಸವನ ಬಾಗೇವಾಡಿ ಪಟ್ಟಣ ಅಂದರೆ ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಬಸವಣ್ಣನವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ.

ಹನ್ನೆರಡನೆಯ ಶತಮಾನದಲ್ಲಿನಡೆದ ವಚನ ಚಳವಳಿಯ ಹರಿಕಾರರಲ್ಲಿ ಪ್ರಮುಖರಾದವರು ಬಸವಣ್ಣ. ಶರಣ,ವಚನಕಾರ,ಸಮಾಜ ಸುಧಾರಕ, ಧಾರ್ಮಿಕ ಮಹಾ ಕ್ರಾಂತಿಯ ನೇತಾರ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.

ಬಿಜ್ಜಳನ ರಾಜ್ಯದ ಭಂಡಾರಿಯಾಗಿದ್ದ ಬಸವಣ್ಣ, ಭಕ್ತಿ ಭಂಡಾರಿಯೂ ಆಗಿದ್ದರು.ಕೂಡಲ ಸಂಗಮದೇವ ಇವರ ವಚನಗಳ ಅಂಕಿತ.ಬಿಜ್ಜಳನ ಅಂಧಶ್ರದ್ಧೆಯ ವಿರುದ್ಧ ಸಿಡಿದು ನಿಂತು ಅನುಭವ ಮಂಟಪ ನಿರ್ಮಿಸಿದರು.

ಕಾಯಕವೇ ಕೈಲಾಸ ಎಂದು ಸಾರಿ, ಪ್ರತಿಯೊಬ್ಬರಲ್ಲೂ ದುಡಿದು ತಿನ್ನುವ ಹುಮ್ಮಸ್ಸು ತುಂಬಿದರು. ‘ವಸುದೈವ ಕುಟುಂಬಕಂ’ ಎನ್ನುತ್ತಾ ಎಲ್ಲರಲ್ಲೂ ಸಹೋದರತ್ವದ ಸಂದೇಶ ಸಾರಿದರು.

ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ.

ಅಕ್ಷಯ ತೃತೀಯದಂದೇ ಆಚರಣೆ ಏಕೆ?

ಕರ್ನಾಟಕದ ಗಾಂಧಿಯಂದು ಪ್ರಸಿದ್ಧರಾದ ಹರ್ಡೇಕರ ಮಂಜಪ್ಪನವರು 1913ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆ ಶುರು ಮಾಡಲು ನಿಶ್ಚಯಿಸಿದರು. ವೀರಶೈವ, ಲಿಂಗಾಯತ ಸಮಾಜದ ಸಂಘಟನೆಗಾಗಿ ಬಸವ ಜಯಂತಿ ಆಚರಿಸಲು ಹೊರಟ ಅವರಿಗೆ ಬಸವಣ್ಣ ಜನಿಸಿದ ದಿನಾಂಕ ತಿಳಿಯದಿರುವುದು ದೊಡ್ಡ ಗೊಂದಲವಾಯಿತು. ಆಗ ಮುರುಘಾಮಠದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಕ್ಷಯ ತದಿಗೆಯಂದು ಬಸವ ಜಯಂತಿ ಆಚರಿಸಲು ತಿಳಿಸಿದರು. ಅಂದಿನಿಂದಲೂ ಅಕ್ಷಯ ತೃತೀಯದಂದು ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.

ಬಸವಣ್ಣನವರ ವಚನಗಳು

ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆನ್ನು ನೀಡಿವೆ, ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ, ಹೃದಯ ವೈಶಾಲ್ಯತೆ ಗೈರು ಹಾಜರಾದಾಗ ನಿಮ್ಮ ಭಕ್ತಿಗೆ ಅರ್ಥವಿರುವುದಿಲ್ಲ, ಮೂಲದಲ್ಲಿ ಸತ್ವವಿರದ ತೋರಿಕೆಯ ಭಕ್ತಿಯು ಮಂಗನ ಕೈಯೊಳಗೆ ಮಾಣಿಕ್ಯದಂತೆ , ಬೆಲೆ ತಿಳಿಯದೆ ಹೋದೀತು,ಎಂಬ ಸಂಗತಿಗಳನ್ನು ವಚನಗಳ ಮೂಲಕ ವಿವರಿಸಿದ್ದಾರೆ.

ಇವನಾರವ, ಇವನಾರವ ಎಂದೆನ್ನದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ” ಎಂದು ಸಮಾಜದ ಎಲ್ಲ ವರ್ಗದ ಜನರನ್ನು ಒಂದು ಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದರು.

ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ಜಲವೊಂದೇ ಶೌಚಾ ಚಮನಕ್ಕೆ ! ಕುಲವೊಂದೇ ತನ್ನ ತಾನರಿದವಂಗೆ ! ಫಲವೊಂದೇ ಫಡದರ್ಶನ ಮುಕ್ತಿಗೆ ನಬಿಲವೊಂದೇ ಕೂಡಲ ಸಂಗಮದೇವ ನಿಮ್ಮನರಿದವಂಗೆ

ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ ಅಧಮರೆನಿಸಿಕೊಳ್ಳುತ್ತೇವೆ, ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

ಕಳ್ಳತನ ಮಾಡಬೇಡ,ಕೊಲ್ಲಬೇಡ,ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ – ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ಇದೇ ಮಾರ್ಗ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂಬಂತೆ ಬಸವಣ್ಣ ತಿಳಿಸಿದ್ದಾರೆ.

ಇದನ್ನು ಓದಿ: ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ

ಬಸವಣ್ಣನವರ ತತ್ವಗಳು

  • ಒಬ್ಬನೇ ದೇವರು. ಅವನಿಗೆ ಅನೇಕ ಹೆಸರುಗಳಿವೆ.
  • ಭಕ್ತಿಯಿಂದ ಆತನಿಗೆ ಸಂಪೂರ್ಣವಾಗಿ ಶರಣಾಗು.
  • ಕರುಣೆಯು ಎಲ್ಲಾ ಧರ್ಮಗಳ ಮೂಲವಾಗಿದೆ. ಎಲ್ಲಾ ಜೀವಿಗಳನ್ನು ದಯೆಯಿಂದ ನಡೆಸಿಕೊಳ್ಳಿ. ಎಲ್ಲರ ಕಲ್ಯಾಣಕ್ಕಾಗಿ ಬದುಕು. ಸ್ವಾರ್ಥ ಮತ್ತು ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬದುಕಬೇಡಿ.
  • ಈ ಜಗತ್ತಿನಲ್ಲಿ ಸ್ವೀಕಾರಾರ್ಹರಾಗಿರುವವರು ಮುಂದಿನ ಪ್ರಪಂಚದಲ್ಲಿಯೂ ಸ್ವೀಕಾರಾರ್ಹರಾಗುತ್ತಾರೆ. ಜನರು ಗೃಹಸ್ಥರಾಗಿ ಸರಿಯಾದ ಜೀವನವನ್ನು ನಡೆಸಬೇಕು, ಆಗ ಮಾತ್ರ ಅವರು ಆಧ್ಯಾತ್ಮಿಕ ಜೀವನಕ್ಕೆ ಯೋಗ್ಯರಾಗುತ್ತಾರೆ. ಕುಟುಂಬವನ್ನು ತ್ಯಜಿಸಿ ಸನ್ಯಾಸಿಯಾಗಬೇಕಾಗಿಲ್ಲ.
  • ‘ನಾನು ಇದನ್ನು ಕೊಡುತ್ತೇನೆ’ ಅಥವಾ ‘ನಾನು ಅದನ್ನು ಮಾಡುತ್ತೇನೆ’ ಎಂದು ಯಾವ ಮನುಷ್ಯನೂ ಹೆಮ್ಮೆ ಪಡಬಾರದು. ಒಬ್ಬ ಮನುಷ್ಯನು ತನ್ನ ಹೃದಯದಲ್ಲಿ ಭಕ್ತಿಯಿಂದ ಮಾಡಬೇಕು. ಇದು ಪ್ರದರ್ಶನ ಅಥವಾ ಪ್ರಚಾರಕ್ಕಾಗಿ ಅಥವಾ ಸಾರ್ವಜನಿಕ ಪ್ರಶಂಸೆಗಾಗಿಯೂ ಇರಬಾರದು.
  • ಬಾಹ್ಯ ಧಾರ್ಮಿಕ ವಿಧಿವಿಧಾನಗಳಿಗಿಂತ ನಿಜವಾದ ಭಕ್ತಿ ಮತ್ತು ಸದ್ಗುಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಒಬ್ಬ ವ್ಯಕ್ತಿಯು ಒಳಗೆ ಮತ್ತು ಹೊರಗೆ ಶುದ್ಧ ಮತ್ತು ಉತ್ತಮ ಜೀವನವನ್ನು ನಡೆಸಬೇಕು. ಧರ್ಮಗ್ರಂಥಗಳು ಮತ್ತು ಸಂಪ್ರದಾಯಗಳಿಗಿಂತ ಶುದ್ಧ ಮನಸ್ಸು ಮುಖ್ಯವಾಗಿದೆ.
  • ಎಲ್ಲಾ ಜನರು ಧಾರ್ಮಿಕ ಜೀವನಕ್ಕೆ ಸಮಾನ ಅವಕಾಶಗಳನ್ನು ಹೊಂದಿರಬೇಕು. ಹುಟ್ಟು, ವೃತ್ತಿ, ಸ್ಥಾನ ಅಥವಾ ಲಿಂಗ ಯಾವುದೇ ವ್ಯತ್ಯಾಸವನ್ನು ಮಾಡಬಾರದು.
https://kannada.thenewsnap.com/world-smile-day-2022/

ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದರೆ ನರಕ ಎಂದು ಸಾರುವ ಮೂಲಕ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅವರ ಕೊಡುಗೆ ಅಪಾರ.

Copyright © All rights reserved Newsnap | Newsever by AF themes.
error: Content is protected !!