ಜೀವ ಮೋಹಕಿಂತ ವಸ್ತು ಮೋಹವೇ? (ಬ್ಯಾಂಕರ್ಸ್ ಡೈರಿ)

Team Newsnap
4 Min Read

ಅಂದು ಆ ಹುಡುಗಿ ಖಾತೆ ತೆರೆಯಬೇಕೆಂದು ಬ್ಯಾಂಕಿಗೆ ಬಂದಾಗಲೇ ಮಧ್ಯಾಹ್ನ ಮೂರೂವರೆ ದಾಟಿತ್ತು. ಮರುದಿನ ಅಂಬೇಡ್ಕರ್ ಜಯಂತಿ ಮತ್ತು ಅದರ ಮರುದಿನ ಗುಡ್ ಫ್ರೈಡೆ. ಹಾಗಾಗಿ ಎರಡು ದಿನಗಳ ರಜೆಯ ನಿಮಿತ್ತ ಬ್ಯಾಂಕಿನಲ್ಲಿ ಗ್ರಾಹಕರು ತುಂಬಿ ತುಳುಕುತ್ತಿದ್ದರು. ಮಾಡುವ ಕೆಲಸ ಗುಡ್ಡೆಯಷ್ಟಿತ್ತು. ಜೊತೆಗೆ ಖಾತೆ ತೆರೆಯುವ ಆಪ್ ಯಾಕೋ ನಿಧಾನವಾಗಿ ಕುಂಟುತ್ತಿತ್ತು. ಶತಪ್ರಯತ್ನ ಮಾಡಿದರೂ ಆಧಾರ್ ವೆಬ್ಸೈಟಿನಿಂದ ಭಾವಚಿತ್ರವನ್ನು ಪಡೆಯಲು ಅದು ಹಿಂದೇಟು ಹಾಕುತ್ತಿತ್ತು. ಇನ್ನು ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಆ ಹುಡುಗಿಗೆ ‘ಶನಿವಾರ ಬೆಳಿಗ್ಗೆ ಹತ್ತಕ್ಕೇ ಬಾಮ್ಮಾ. ಅಕೌಂಟ್ ಓಪನ್ ಮಾಡಿಕೊಡುತ್ತೇನೆ’ ಎಂದೆ. ಅವಳೂ ‘ಸರಿ ಮೇಡಂ’ ಎಂದು ಹೇಳಿ ತಂದಿದ್ದ ದಾಖಲೆಗಳನ್ನು ನನಗೇ ಕೊಟ್ಟು ಹೊರಟಳು. ಶನಿವಾರ ಬೆಳಿಗ್ಗೆ ಅವಳ ದಾಖಲೆ ನೋಡಿ ಅವಳಿಗೆ ಹೇಳಿದ್ದು ನೆನಪಾಯಿತು. ಹನ್ನೆರೆಡರ ತನಕ ಬರದಿದ್ದಾಗ ನಾನೇ ಕರೆಮಾಡಿ, ‘ಆಪ್ ಸರಿಯಾಗಿದೆ ಬನ್ನಿ’ ಎಂದು ಕರೆದೆ ‘…………………ಸತ್ತುಹೋಗಿದ್ದಾರೆ/ನೆ, ನಾ ಮೈಸೂರಿನಲ್ಲಿ ಇದೀನಿ. ಸೋಮವಾರ ಬರ್ತೀನಿ’ ಎಂದದ್ದು ಮಾತ್ರ ಗೊತ್ತಾಯಿತು. ಯಾರು ಸತ್ತು ಹೋಗಿದ್ದರೆಂದಳೋ ಕೇಳಿಸಲಿಲ್ಲ. ಆ ಹುಡುಗಿ ಅದೇನು ಹೇಳಿದಳೋ, ಗದ್ದಲದಲ್ಲಿ ನನಗೇನು ಕೇಳಿಸಿತೋ ಊಹಿಸುವುದು ತರವಲ್ಲವೆಂದು ಸುಮ್ಮನಾದೆ.

ಸೋಮವಾರ ಬೆಳಿಗ್ಗೆ ಸಿ.ಡಿ.ಎಂನಲ್ಲಿ ಜನ ತುಂಬಿದ್ದ ನಗದನ್ನು ತೆಗೆದು ಎಣಿಸಿ ಟ್ಯಾಲಿ ಮಾಡುವುದರಲ್ಲಿ ಹನ್ನೆರೆಡಾಗಿತ್ತು. ಅದನ್ನೆಲ್ಲ ಮುಗಿಸಿ ನನ್ನ ಕೌಂಟರಿಗೆ ಬರುವಷ್ಟರಲ್ಲಿ ಆ ಹುಡುಗಿ ನಿಹಾರಿಕ ನನ್ನ ಸೀಟಿನ ಮುಂದೆ ಕುಳಿತಿದ್ದಳು. ಅವಳ ತಾತ ಬೆಳಿಗ್ಗೆಯೇ ಬಂದು ಹೋಗಿದ್ದರು. ಆತ ಮಂಡ್ಯದಲ್ಲಿ ಹೆಸರುವಾಸಿಯಾದವರೇ. ಖಾತೆ ತೆರೆಯುವ ಪ್ರಕ್ರಿಯೆಯ ನಡುವೆ ನಾನು ‘ಮೈಸೂರಿಂದ ಯಾವಾಗ ಬಂದ್ಯಪ್ಪಾ?’ ಎಂದು ಕೇಳಿದೆ. ‘ಆಂಟೀ ನಿನ್ನೇನೇ ಬಂದ್ವಿ. ನನ್ನ ತಮ್ಮ ಸತ್ತೋದ ಅದಕ್ಕೆ ಹೋಗಿದ್ವಿ’ ಎಂದಳು. ಈ ಹುಡುಗಿಯೇ ಸುಮಾರು ಇಪ್ಪತ್ತು ವಯಸ್ಸನ್ನು ಮುಟ್ಟಿರಲಿಲ್ಲ. ಇನ್ನು ಅವಳ ತಮ್ಮ? ನನಗೆ ಒಂದು ಕ್ಷಣ ಶಾಕ್. ಮಾತು ಬರದಂತಾಯಿತು. ಅವಳು ಸಾಧಾರಣವಾಗೇ ಇದ್ದಳು. ‘ನಿನ್ನ ತಮ್ಮಾನಾ?’ ಎಂದೆ. ‘ಹೂ. ನಮ್ಮ ಚಿಕ್ಕಪ್ಪನ ಮಗ’ ಎಂದಳು. ‘ಏನಾಗಿತ್ತು?’ ನನ್ನ ಪ್ರಶ್ನೆ. ‘ಅವನದ್ದು ಪಿ ಯು ಸಿ ಮೊದಲ ವರ್ಷದ ಎಕ್ಸಾಂ ಮುಗಿದಿದೆ. ಮೊಬೈಲ್ ಗೀಳು ಹತ್ತಿಸಿಕೊಂಡರೆ ಸರಿಯಾಗಿ ಓದಲ್ಲ ಅಂತ ಚಿಕ್ಕಮ್ಮ ಅವನ ಮೊಬೈಲ್ ಅನ್ನು ಅವರ ಹತ್ತಿರ ಇಟ್ಟುಕೊಂಡಿದ್ದರು. ಎಸ್.ಎಸ್.ಎಲ್.ಸಿ ಪಾಸಾದ ಮೇಲೆ ರಜದಲ್ಲಿ ಮೊಬೈಲ್ ಆಟಗಳ ಹುಚ್ಚು ಹತ್ತಿಸಿಕೊಂಡಿದ್ದ. ಕಾಲೇಜು ಶುರುವಾದ ಮೇಲೆ ಚಿಕ್ಕಮ್ಮ ಮೊಬೈಲ್ ಕಿತ್ತು ಇಟ್ಟುಕೊಂಡಿದ್ದರು. ಅದಕ್ಕೆ ಸಿಟ್ಟುಮಾಡಿಕೊಂಡು ಸ್ಯೂಸೈಡ್ ಮಾಡಿಕೊಂಡ’ ಎಂದಳು. ಇದು ಬಹಳ ಸಾಧಾರಣ ವಿಷಯವೆಂಬಂತೆ ಹೇಳಿದ ಹುಡುಗಿಯ ಮುಖವನ್ನು ಮತ್ತೊಮ್ಮೆ ನೋಡಿದೆ. ದುಃಖವೂ, ಸಂಕಟವೂ, ಬೇಸರವೂ ಇರದೆ ಅತ್ಯಂತ ಸಾಮಾನ್ಯವಾಗಿತ್ತು. ಬಹುಶಃ ಇಂಥ ಕೆಲವು ಘಟನೆಗಳನ್ನು ಆಕೆ ಕೇಳಿರಬೇಕು ಅಥವಾ ನೋಡಿರಬೇಕು. ಇದನ್ನು ಓದಿ : ಮಹಾಲಯ ಅಮಾವಾಸ್ಯೆ (ಪಿತೃಪಕ್ಷ)

ಇದು ಒಂದು ಮನೆಯ ಕಥೆಯೇನಲ್ಲ. ವಿಶ್ವದಾದ್ಯಂತ ಅನೇಕ ಮಕ್ಕಳು ಇಂಥ ಆಟಗಳಿಂದ ಅಥವಾ ಮೊಬೈಲ್ ಚಟದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. 2017 ರ ಮೇ 25 ರಂದು ವಿಶ್ವ ಆರೋಗ್ಯ ಸಂಸ್ಥೆ ‘ಗೇಮಿಂಗ್ ಡಿಸ್‍ಆರ್ಡರ್’ ಅನ್ನು ಕೂಡ ನಡವಳಿಕೆ ಚಟ (ಬಿಹೇವಿಯರಲ್ ಅಡಿಕ್ಷನ್) ಎಂದು ಖಾಯಿಲೆಗಳ ವರ್ಗೀಕರಣದಲ್ಲಿ ಗುರುತಿಸಿದೆ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಪೋಷಕರ ಆದ್ಯ ಕರ್ತವ್ಯ. ಮಕ್ಕಳು ಮನೆಯ ಬೆಳಕು. ಕಾಪಾಡಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ.

ಆ ಕ್ಷಣಕ್ಕೆ ನನಗೆ ಇನ್ನೊಂದು ಮನೆಯ ವ್ಯಥೆಯೂ ನೆನಪಿಗೆ ಬಂದಿತು. ನಮ್ಮ ಗ್ರಾಹಕಿಯೊಬ್ಬಳು ಒಮ್ಮೆ ಅಂಗಡಿಯೊಂದರಲ್ಲಿ ಸಿಕ್ಕಿದಾಗ ಹೀಗೇ ಮಾತಿಗೆ ಬಂದು ನಾ ‘ಯಾಕೆ ತುಂಬಾ ದಿನದಿಂದ ಬ್ಯಾಂಕಿನ ಕಡೆ’ ಎಂದು ಕೇಳಿದೆ. ಆಕೆ ‘ನನ್ನ ತಮ್ಮನ ಮಗ ಹೋಗ್ಬಿಟ್ಟ. ನನ್ನ ತಮ್ಮನ್ನ ಅವನ ಹೆಂಡತೀನಾ ಸಮಾಧಾನ ಮಾಡೋದಕ್ಕೆ ದಿನಾ ಅವರ ಮನೆಗೆ ಹೋಗ್ತೀನಿ. ನಂಗೂ ಏನೋ ಬೇಸರ ಏನೂ ಬೇಡ ಅನಿಸ್ತಿದೆ’ ಎಂದರು. ‘ಎಷ್ಟು ವಯಸ್ಸು ಮಗೂಗೆ’ ಎಂದು ಕೇಳಿದೆ. ‘ಹತ್ತು’ ಎಂದರು. ‘ಛೇ ಪಾಪ ಏನಾಗಿತ್ತು?’ ಎಂದೆ. ‘ಬ್ಲೂ ವೇಲ್ ಅಂತೇನೋ ಅಂತಾರಲ್ಲ ಅದು ಆಡ್ತಾ ಇದ್ದ ಅವ್ನು. ಅದು ಗೊತ್ತಾಗಿ ಅವಳಮ್ಮ ಮಗೂ ಜೀವಕ್ಕೆಲ್ಲಿ ತೊಂದ್ರೆ ಆಗುತ್ತೋ ಅಂತ ಮೊಬೈಲ್ ಕಿತ್ತುಕೊಂಡ್ಳು. ಅಷ್ಟರಲ್ಲಾಗ್ಲೇ ಮಗು ಅಡಿಕ್ಟ್ ಆಗ್ಬಿಟ್ಟಿತ್ತು ಅನ್ಸುತ್ತೆ. ಊಟ ತಿಂಡಿ ಬಿಟ್ಟು ಅತ್ತ. ಅಮ್ಮಾನೂ ಕೊಡಲ್ಲ ಹಠ ಮಾಡಿದ್ಲು. ಅವ್ಳು ಮಾಡಿದ್ದೂ ಸರಿ ತಾನೇ? ಮಗನ ಭವಿಷ್ಯಕ್ಕೆ ಅಂತ ಆ ತೀರ್ಮಾನ ತೊಗೊಂಡ್ಳು. ಆದ್ರೆ ಯಾರಿಗೆ ಗೊತ್ತಿತ್ತು ಹೀಗಾಗುತ್ತೆ ಅಂತ. ಒಂದಿನ ಶಾಲೆಯಿಂದ ಮಗು ಮನೆಗೇ ಬರಲಿಲ್ಲ. ಮರುದಿನ ಹತ್ತಿರದ ಕೆರೆಯಲ್ಲಿ ಹೆಣ ಸಿಕ್ಕಿತು’ ಎಂದರು. ಆಕೆಯ ಕಣ್ಣಿಂದ ಆ ಕ್ಷಣವೂ ಹನಿಯುಕ್ಕಿತು. ನನಗೋ ಆ ಮಕ್ಕಳ ಮೇಲೆ ಕೋಪವುಕ್ಕಿತು. ತಂದೆ ತಾಯಿಯರ ಪ್ರೀತಿ – ಸಂಕಟಗಳ ಬಗೆಗೆ ಯೋಚಿಸಲೇ ಇಲ್ಲವಲ್ಲಾ ಅವರು ಎಂದು.

ಜೀವಮೋಹಕ್ಕಿಂತ ವಸ್ತುಮೋಹವೇ ಅಧಿಕವಾಯಿತೇ? ಮನೆಯವರ ಪ್ರೀತಿಗಿಂತ ಆಟದ ಮೋಹವೇ ಅಧಿಕವಾಯಿತೇ?
ಪ್ರಶ್ನೆ ಇನ್ನೂ ಕಾಡುತ್ತಲೇ ಇದೆ.

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್ ಮಂಡ್ಯ
Share This Article
Leave a comment