ಚುನಾವಣಾ ಕೆಲಸವೆಂದರೆ ಹುಡುಗಾಟವೇ (ಬ್ಯಾಂಕರ್ಸ್ ಡೈರಿ)

Team Newsnap
4 Min Read
A reader's opinion ಓದುಗರೊಬ್ಬರ ಅಭಿಪ್ರಾಯ

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು, ಚುನಾವಣೆಯದ್ದೇ ಉಸಿರು. ಅವರನ್ನಿವರು, ಇವರನ್ನವರು ಬೈಯ್ಯುತ್ತಾ ತಾವೇ ಸರಿ ಎಂದು ಮಾತಿನ ಕಾವನ್ನೂ ಈ ಬೇಸಿಗೆಯ ಬಿಸಿಗೆ ಸೇರಿಸುವರು. ಚುನಾವಣೆಯ ಕಾವೇ ಅಂಥದ್ದು; ಕೆಲವೊಮ್ಮೆ ಬಿರುಬೇಸಿಗೆಯೇ ವಾಸಿ ಎನಿಸುವಷ್ಟು ಬಿಸಿ. ರಾಜಕೀಯ ಪಕ್ಷಗಳು ಹೀಗೆ ಕೆಸರೆರಚಾಟ ಮಾಡುವಾಗ ಅನೇಕ ಹಿಂಬಾಲಕರು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದಾದ ಹಣವನ್ನು ಮಾಡಿಕೊಳ್ಳುವುದೂ ಉಂಟು. ಮತದಾರರನ್ನು ಓಲೈಸಲು ಇದೇ ಸಕಾಲವೆಂದು ಸೀರೆಯನ್ನೋ, ಹಣವನ್ನೋ, ಮದಿರೆಯನ್ನೋ, ಕುಕ್ಕರನ್ನೋ, ಫ್ಯಾನನ್ನೋ… ಏನೋ ಒಂದನ್ನು ಕೊಟ್ಟು ತಮಗೆ ಮತ ಹಾಕುವಂತೆ ಬೇಡುವುದು- ಇದೇ ಸುಸಂದರ್ಭ ಎಂದು ಅನೇಕರು ಎಲ್ಲ ಪಕ್ಷದವರು ಕೊಟ್ಟಿದ್ದನ್ನೂ ಪಡೆದು ತಮಗೆ ಬೇಕಾದವರಿಗೇ ಮತ ಹಾಕುವಂಥ ಬುದ್ದಿವಂತ ಮತದಾರರೂ ಇದ್ದಾರೆ.

ಇದು ಚುನಾವಣೆಯ ಒಂದು ಮುಖ. ಚುನಾವಣಾ ಕೆಲಸದಲ್ಲಿ ತೊಡಗಿದ ಸರ್ಕಾರೀ ನೌಕರರ ಕಷ್ಟದ ಮುಖ ಮತ್ತೊಂದು.
ತಿಂಗಳುಗಳ ಹಿಂದಿನಿಂದಲೇ ಚುನಾವಣೆಯ ಕೆಲಸ ಆರಂಭವಾಗಿರುತ್ತದೆ. ಬ್ಯಾಂಕು, ಎಲ್.ಐ.ಸಿ ಗಳ ನೌಕರರನ್ನು ಸರ್ಕಾರ ಸಾಮಾನ್ಯವಾಗಿ ಚುನಾವಣೆಯಲ್ಲಿ ಮೈಕ್ರೋ ಅಬ್ಸರ್ವರ್‍ಗಳಾಗಿ ನೇಮಿಸಿಕೊಳ್ಳುತ್ತದೆ. ಕೆಲಮೊಮ್ಮೆ ಪ್ರಿಸೈಡಿಂಗ್ ಅಧಿಕಾರಿಗಳಾಗಿಯೂ. ಆದರೆ ಬಹುತೇಕ ಸರ್ಕಾರೀ ಇಲಾಖೆಗಳು ಚುನಾವಣೆಯ ಸಮಯದಲ್ಲಿ ಅಗಾಧ ಕೆಲಸದ ಒತ್ತಡವನ್ನು ಅನುಭವಿಸುತ್ತಾರೆ. ಚುನಾವಣೆ ಮತ್ತು ಎಣಿಕೆ ಮುಗಿದ ಮೇಲೆ ಉಸ್ಸಪ್ಪಾ ಎಂದು ಉಸಿರು ಬಿಟ್ಟು, ನಿರಾಳವಾಗಿ ಉಸಿರೆಳೆದುಕೊಳ್ಳುವ ಪರಿಸ್ಥಿತಿ ಇರುತ್ತದೆ.
ಬ್ಯಾಂಕಿಗೂ ಚುನಾವಣೆಗೂ ಏನು ಸಂಬಂಧ ಎಂದಿರಾ? ಇದೆ. ನಾವೂ ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತೇವೆ. ಅದರೊಟ್ಟಿಗೆ ಬ್ಯಾಂಕಿಗೆ ಬರುವ ಗ್ರಾಹಕರು ಚುನಾವಣೆ ಕುರಿತಾಗಿ ಆಡುವ ಮಾತುಗಳು ಕೆಲವೊಮ್ಮೆ ನಗೆಯನ್ನೂ, ಮತ್ತೆ ಕೆಲವೊಮ್ಮೆ ಅಚ್ಚರಿಯನ್ನೂ ತರುತ್ತವೆ.

ನಾ ಒಂದು ವರ್ಷದಿಂದ ಕೆಲಸ ಮಾಡುತ್ತಿರುವ ಹಳ್ಳಿಯಲ್ಲಿ ಈಗೊಂದು ನಾಲ್ಕು ತಿಂಗಳಿಂದ ಈಚೆಗೆ ನಮ್ಮ ಅನೇಕ ಗ್ರಾಹಕರು ಧರ್ಮಯಾತ್ರೆ ಮಾಡಿದ್ದಾರೆ. ಮೊದಮೊದಲು ನಮ್ಮ ಬ್ಯಾಂಕು ಇರುವ ವೃತ್ತದಲ್ಲಿ ಅದೇಕೆ ಅನೇಕ ಬಸ್ಸುಗಳು ಇರುತ್ತವೆ ಎಂದು ನನಗಚ್ಚರಿಯಾಗುತ್ತಿತ್ತು. ಹಿಂದಿನ ದಿನ ನೋಡಿದ ಬಸ್ಸುಗಳು ಬೆಳಿಗ್ಗೆಯ ಹೊತ್ತಿಗೆ ಬ್ಯಾನರುಗಳನ್ನು ಧರಿಸಿ ಕಂಗೊಳಿಸುತ್ತಿದ್ದವು. …………. ಟ್ರಸ್ಟ್, ……….. ಧರ್ಮ ಟ್ರಸ್ಟ್ ಅಂತಲೋ ಹೆಸರು ಇರುತ್ತಿತ್ತು. ಅಂದೆಲ್ಲ ನಮ್ಮಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ. ಧರ್ಮಸ್ಥಳ ಯಾತ್ರೆ, ಚಾಮುಂಡಿ ಬೆಟ್ಟದ ಯಾತ್ರೆ, ಮಹದೇಶ್ವರ ಬೆಟ್ಟದ ಯಾತ್ರೆ ಎಂದೆಲ್ಲ ಆ ಬಸ್ಸುಗಳ ಮೇಲೆ ಬರೆದಿರುತ್ತಿತ್ತು. ಯಾತ್ರೆ ಹೊರಟ ನಮ್ಮ ಗ್ರಾಹಕರನ್ನು ಕೇಳಿದಾಗ ‘ಇದು ಎಲೆಕ್ಸನ್‍ಗೆ ನಿಂತ್ಕೋಬೇಕಂತ ಆಸೆ ಪಡ್ತವ್ರಲ್ಲಾ ಅವ್ರು ಕರ್ಕಂಡ್ ವಯ್ತಾ ಇರಾದು. ನಮ್ಗೂ ಮನ್ಯಾಗೇ ಕುಂತೂ ಕುಂತೂ ಬ್ಯಾಸ್ರ ಆಗಿತ್ತು. ಹವಾ ಬದ್ಲಾತು. ಹ್ಯಾಂಗೂ ಬಿಟ್ಟಿ ಕರಕ್‍ಂಡ್ ವಯ್ತಾರೆ. ಮೊಮ್ಮಕ್ಳೂನೂ ಕರ್ಕಂಡ್ ವಂಟೀವಿ’ ಅಂತ ಬಹುತೇಕ ವೃದ್ಧರು ಹೇಳಿದರು. ಬ್ಯಾಂಕಿಗೆ ಬಂದ ಮತ್ತೆ ಕೆಲವು ಯುವ ಗ್ರಾಹಕರನ್ನು ‘ನೀವ್ಯಾಕೆ ಹೋಗಲಿಲ್ಲ’ ಎಂದು ಕೇಳಿದಾಗ ‘ನಮ್ಗೆ ಮಾಡೋಕೆ ಕೆಲ್ಸ ಇದೆ. ಹೋದವರೆಲ್ಲಾ ಹೇಗೂ ಬಿಟ್ಟಿ ಅಂತ ಮನೇಲಿರೋರು ಹೋಗಿರೋದು. ಹೋಗಿ ಸುತ್ತಾಡ್ಕೊಂಡು ಬರ್ಲಿ ಬಿಡಿ. ನಾವೇನು ಅಲ್ಲಿ ಹೋಗಿ ನಿಮ್ಗೇ ಮತ ಹಾಕ್ತೀವಿ ಅಂತ ಪ್ರಮಾಣ ಮಾಡ್ಬೇಕಿಲ್ಲ’ ಎಂದು ತುಸು ತಮಾಷೆಯ ರೀತಿಯಲ್ಲೇ ಹೇಳಿದರು. ಇಲ್ಲಿ ಚುನಾವಣೆ, ಮತ, ಆಮಿಷ ಎಂಬೆಲ್ಲದರ ಹೊರತಾಗಿ ಒಂದು ದಿನದ ಬಿಟ್ಟಿ ಔಟಿಂಗ್ ಎನ್ನುವ ಭಾವವೇ ಬಹುತೇಕರಲ್ಲಿ ಎದ್ದು ಕಾಣುತ್ತಿತ್ತು.

ಇನ್ನು ಚುನಾವಣಾ ಕಾರ್ಯ ನಿಮಿತ್ತ ಹೋಗುವ ನಮ್ಮ ನೌಕರರ ಪರಿಸ್ಥಿತಿಯನ್ನು ಹೇಳತೀರದು. ನಾನೂ ಮೂರು ಬಾರಿ ಚುನಾವಣಾ ಕಾರ್ಯವನ್ನು ನಿರ್ವಹಿಸಿದ್ದೇನೆ. ಮೊದಲ ಬಾರಿ ನಮ್ಮ ಮನೆಯ ಬಳಿಯ ಬೂತ್‍ನಲ್ಲೇ ನಿಯೋಜನೆಗೊಂಡಿದ್ದೆ. ಮಧ್ಯಾಹ್ನ ಮನೆಗೆ ಊಟಕ್ಕೆ ಬರಬಹುದಿತ್ತು. ಎರಡನೇ ಬಾರಿ ಮಳವಳ್ಳಿ ಕ್ಷೇತ್ರ. ಹಿಂದಿನ ದಿನ ಅಲ್ಲಿಯೇ ಉಳಿಯಬೇಕಿತ್ತು. ರಾತ್ರಿ ವಾಪಸ್ ಬಂದು ಬೆಳಿಗ್ಗೆ ನಾಲ್ಕಕ್ಕೆಲ್ಲಾ ಹೊರಡಬೇಕೆಂದರೆ ನನಗೆ ಕಾರು ಓಡಿಸಲು ಬಾರದು; ಅಷ್ಟು ಹೊತ್ತಿಗೆ ಬಸ್ಸುಗಳಾವುವೂ ಇರವು. ಸ್ನಾನಕ್ಕೆ ಅನುಕೂಲ ಸಿಗುವುದು ದುರ್ಲಭ ಎಂದು ತಿಳಿದಿದ್ದರೂ, ಮುಖಮಾರ್ಜನ ಮಾಡಿ ಬಟ್ಟೆಯನ್ನಾದರೂ ಬದಲಿಸಬೇಡವೇ? ಮತ್ತು ಅಲ್ಲಿ ಕೊಡಬಹುದಾದ ಘಾಟು ಮಸಾಲೆ ಬೆಳ್ಳುಳ್ಳಿ ಮಿಶ್ರಿತ ಊಟ ನನಗೆ ಹಿಡಿಸುವುದು ಬಹುತೇಕ ದೂರದ ಮಾತೇ. ಹಾಗಾಗಿ ಹಿಂದಿನ ರಾತ್ರಿಗೆ, ಮರುದಿನ ಬೆಳಿಗ್ಗೆಗೆ, ಮಧ್ಯಾಹ್ನಕ್ಕೆಂದು ಚಪಾತಿಗಳನ್ನು ಮಾಡಿಕೊಂಡು, ಚಟ್ನಿಪುಡಿಯನ್ನು ತೆಗೆದುಕೊಂಡು ಹೋಗಿದ್ದೆ. ಆದರೆ ಅದೃಷ್ಟಕ್ಕೆ ನನ್ನ ಮನೆಯ ಬಳಿಯ ಕೆನರಾ ಬ್ಯಾಂಕಿನ ಅಧಿಕಾರಿಯೊಬ್ಬರಿಗೂ ಮಳವಳ್ಳಿ ಕ್ಷೇತ್ರವೇ ಆಗಿತ್ತು. ಅವರು ‘ಮೇಡಂ ನಾನು ರಾತ್ರಿ ನನ್ನ ಕಾರಿನಲ್ಲೇ ಮನೆಗೆ ವಾಪಸ್ಸು ಹೋಗಿ ಬೆಳಗಿನ ಜಾವ ಮತ್ತೆ ಬರ್ತಿನಿ. ನೀವೂ ಬರೋದಾದ್ರೆ ಬನ್ನಿ’ ಎಂದು ಕರೆದರು. ಹಸಿದವನಿಗೆ ಕೈತುತ್ತು ಕೊಟ್ಟಂತಾಯಿತು ನನ್ನ ಪರಿಸ್ಥಿತಿ. ಜೊತೆಗೆ ಅದೃಷ್ಟವೆಂದರೆ ಮಳವಳ್ಳಿ ಪಟ್ಟಣದ ಬೂತೊಂದಕ್ಕೇ ನನ್ನ ಹೆಸರು ಲಾಟರಿಯಲ್ಲಿ ಬಂದಿತ್ತು.

ಮಗದೊಂದು ಬಾರಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದೆ. ಅಲ್ಲಿಯೂ ಯಾವುದೋ ಮೂಲೆಯ ಹಳ್ಳಿಯಲ್ಲದೆ ಪಟ್ಟಣದ ಬೂತೊಂದಕ್ಕೇ ನನಗೆ ಕರ್ತವ್ಯ ಒದಗಿತ್ತು. ನಮ್ಮ ದೂರದ ಸಂಬಂಧಿಕರೊಬ್ಬರ ಮನೆ ಅಲ್ಲಿಯೇ ಇದ್ದುದರಿಂದ ಅವರ ಮನೆಯಲ್ಲೇ ರಾತ್ರಿ ತಂಗಿ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದೆ. ಅವರ ಮನೆಯವರು ಹೊತ್ತು ಹೊತ್ತಿಗೆ ಬೂತಿಗೇ ತಿಂಡಿ ಊಟ ತಂದುಕೊಟ್ಟಿದ್ದರು.

ಹಾಗಾಗಿ ನನಗೆ ಚುನಾವಣಾ ಕರ್ತವ್ಯ ಎನ್ನುವುದು ತೀರಾ ದುಸ್ತರ ಅನುಭವವೇನೂ ಆಗಿರಲಿಲ್ಲ.ಮತ ಎಣಿಕೆ ಹಿಂದೆಲ್ಲ ಕೈ ಎಣಿಕೆಯಾಗಿತ್ತು. ಕೈ ಎಣಿಕೆಯ ಕಾಲದಲ್ಲೊಮ್ಮೆ ನಾನೂ ಆ ಕರ್ತವ್ಯ ನಿರ್ವಹಿಸಿದ್ದೇನೆ. ಅದರ ಸೊಗಸೇ ಬೇರೆ. ಸ್ಪರ್ಧಿಗಳ ಕಡೆಯ ಏಜೆಂಟರುಗಳು ಹಾ ಹೂ ಓ ಓಹೋ ಅನ್ನುವುದು ಕೆಲವೊಮ್ಮೆ ತಾರಕಕ್ಕೆ ಏರುತ್ತಿತ್ತು. ಈಗ ತಾಂತ್ರಿಕ ಸಹಾಯ ಇರುವುದರಿಂದ ಸುಲಭವಾಗಿದೆ.

ಆದರೆ ನನ್ನ ಅನೇಕ ಸಹೋದ್ಯೋಗಿಗಳ ಪಾಡಂತೂ ಹೇಳತೀರದು. ರಾತ್ರಿಯೆಲ್ಲಾ ಬೂತಿನಲ್ಲೇ ಮಲಗಿ ಸೊಳ್ಳೆಯ ಸಖ್ಯದಿಂದ ನಿದ್ದೆ ಬಾರದೆ ಬೆಳಿಗ್ಗೆ ಕಣ್ಣೆಲ್ಲ ಕೆಂಪಾಗಿ, ಶೌಚಕ್ಕೂ ಸಮಸ್ಯೆಯಾಗಿ ಹೊಟ್ಟೆ ಬಾತುಕೊಂಡು, ಹತ್ತಿರದ ಯಾವುದೋ ಮನೆಯವರಲ್ಲಿ ಬೇಡಿಕೊಂಡಿದ್ದೂ ಇದೆ. ಇನ್ನು ಎಲೆಕ್ಷನ್ ಬುತ್ತಿಯ ಬಗ್ಗೆ ಹೇಳುತ್ತಾ ಹೋದರೆ ಮತ್ತೆರೆಡು ಪುಟವಾದೀತು. ಅದನ್ನು ಮತ್ತೊಮ್ಮೆ ಹಂಚಿಕೊಳ್ಳುವೆ.

ಚುನಾವಣೆಯ ಕೆಲಸವೆಂದರೆ ಹುಡುಗಾಟವೇ? ಮೈಯ್ಯೆಲ್ಲಾ ಕಣ್ಣಾಗಿರಬೇಕು.

ಈ ಬಾರಿಯ ಚುನಾವಣಾ ಕರ್ತವ್ಯಕ್ಕೆ ಹೋಗುತ್ತಿರುವ ನನ್ನ ಎಲ್ಲ ಸಹೋದ್ಯೋಗಿಗಳಿಗೆ ನನ್ನ ‘ಆಲ್ ದಿ ಬೆಸ್ಟ್’ ಹಾರೈಕೆ…..

IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್, ಮಂಡ್ಯ

Share This Article
Leave a comment