ವಂಚಕರಿದ್ದಾರೆ ಎಚ್ಚರ (ಬ್ಯಾಂಕರ್ಸ್ ಡೈರಿ)

Team Newsnap
4 Min Read
Beware of Fraudsters (Banker's Diary)
IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್ ಮಂಡ್ಯ

ಕೇವಲ ಬಡ್ಡಿ ಲೆಕ್ಕಾಚಾರ, ಹಣ ಕೊಟ್ಟು ಪಡೆವ ಬ್ಯಾಂಕಿಂಗ್ ಈಗ ಇಲ್ಲ. ಅದರೊಟ್ಟಿಗೆ ವಿಮೆ, ಮ್ಯೂಚುಯಲ್ ನಿಧಿ ಸಂಗ್ರಹಗಳೇ ಮೊದಲ್ಗೊಂಡು ಆನ್ ಲೈನ್ ಬ್ಯಾಂಕಿಂಗ್ ಸೇರೆದಂತೆ ಅನೇಕ ಸೇವಾ ಕೆಲಸಗಳನ್ನೂ ಎಲ್ಲಾ ಬ್ಯಾಂಕಿನವೂ ನಿರ್ವಹಿಸುತ್ತಿದ್ದಾರೆ. ಕೆಲಸ ಹೆಚ್ಚು, ಸಿಬ್ಬಂದಿ ಕಡಿಮೆ ಎನ್ನುವ ಕಾರಣಕ್ಕೆ ಒತ್ತಡವೂ ಹೆಚ್ಚಾಗುತ್ತಿದೆ.  ಬ್ಯಾಂಕರುಗಳಿಗೆ ಒತ್ತಡ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

ಇಂಥ ಹೊತ್ತಿನಲ್ಲಿ ಬ್ಯಾಂಕಿನವರಿಗೆ ಈಚೆಗೆ ಹೊಸ ತಲೆನೋವು ಶುರುವಾಗಿದೆ.
*ಅಂದು ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಕೆ ಎಸ್ ಆರ್ ಟಿ ಸಿ ಡ್ರೈವರ್ ಮಂಜಣ್ಣ (ಹೆಸರು ಬದಲಿಸಲಾಗಿದೆ) ಬ್ಯಾಂಕಿಗೆ ಓಡಿ ಬಂದರು. ಮುಖದಲ್ಲಿ ಏನೋ ಗಾಬರಿ. ಅವರ ಪಾಸ್ ಪುಸ್ತಕ ನೋಡಿದ ಮೇಲೆಯೇ ಅವರ ಹೆಸರು ತಿಳಿದಿದ್ದು. ಅಷ್ಟೇನೂ ಸದಾ ಬ್ಯಾಂಕಿಗೆ ಬರುವವರಲ್ಲ. ‘ಮೇಡಂ  ನನ್ ಪಾಸ್ ಪುಸ್ತಕದಲ್ಲಿ ದುಡ್ಡೇನಾದ್ರೂ ಕಟ್ ಆಗಿದ್ಯಾ ನೋಡಿ?’ ಎಂದು ಕೇಳಿದರು. ನೋಡಿದೆ. ಹದಿನಾಲ್ಕು ಸಾವಿರ ಡ್ರಾ ಆಗಿತ್ತು. ಹೇಳಿದ ತಕ್ಷಣ ಆತನ ಮುಖ ವಿವರ್ಣವಾಯಿತು. ‘ಮೇಡಂ ನಾ ಮುಳುಗಿಹೋದೆ. ಅವನ್ಯಾವನೋ ನಿಮ್ ಬ್ಯಾಂಕಿಂದ ಅಂತ ಹೇಳಿ  ಎ.ಟಿ.ಎಂ ಕಾರ್ಡ್ ಅವಧಿ ಮುಗ್ದೋಗತ್ತೆ. ನಂಬರ್ ಹೇಳಿ ರಿನ್ಯೂ ಮಾಡ್ತೀವಿ ಅಂದ ನಾ ಹೇಳಿದೆ.  ಆಮೇಲೆ ಒ.ಟಿ.ಪಿ ಕೇಳಿದ ಬ್ಯಾಂಕಿನವರಲ್ವಾ  ಅಂತ ಅದ್ನೂ ಹೇಳ್ದೆ. ಹೀಗಾಗೋಯ್ತಾ? ಈ ತಿಂಗ್ಳು ರೇಷನ್‍ಗೆ ಏನ್ ಮಾಡ್ಲಿ? ನಾ ಸಂಬಳಾನೇ ನೆಚ್ಕೊಂಡು ಬದ್ಕು ನಡ್ಸೋರು. ಮನೆ ಬಾಡ್ಗೆ ಹೇಗೆ ಕಟ್ಲಿ? ಒಬ್ಬನ ದುಡಿಮೆ, ಅದೂ ಇಲ್ದಂಗಾಯ್ತು. ಅಯ್ಯೋ ದೇವ್ರೇ’ ಅನ್ನುತ್ತ ತಲೆಯ ಮೇಲೆ ಕೈ ಹೊತ್ತು ಅಳುತ್ತಾ ಕುಳಿತುಬಿಟ್ಟರು. ಸುಮಾರು ಹದಿನೈದು ನಿಮಿಷವಾದ ಮೇಲೆ ಕಣ್ಣೊರೆಸಿಕೊಂಡು ಹೊರಟುಹೋದರು.

ಅದು ಆನ್ ಲೈನ್ ವಂಚನೆ. ಎಷ್ಟೇ ಜಾಗೃತಿ ಮೂಡಿಸಲೆತ್ನಿಸಿದರೂ ಜನ ಮೋಸಹೋಗುತ್ತಲೇ ಇರುತ್ತಾರೆ. ನಿಮಗೆ ಯಾರಾದರೂ ಕರೆ ಮಾಡಿ ಆಧಾರ ಸಂಖ್ಯೆ, ಪಾನ್ ಸಂಖ್ಯೆ, ಖಾತೆ ಸಂಖ್ಯೆ, ಎ.ಟಿ.ಎಂ ಕಾರ್ಡ್ ಸಂಖ್ಯೆ ಅಥವಾ ಒ.ಟಿ.ಪಿ ಕೇಳಿದರೆ ಕೊಡಬೇಡಿ ಎಂದು ಸಮಯ ಸಿಕ್ಕಾಗಲೆಲ್ಲ ನಾವುಗಳು ಹೇಳಿದರೂ, ಅದಾವುದೋ ಜ್ನಾನದಲ್ಲಿ ಅವುಗಳನ್ನು ಕೊಟ್ಟು ಹೆದರಿ ಬ್ಯಾಂಕಿಗೆ ಓಡಿಬರುತ್ತಾರೆ. ಫೋನಿನಲ್ಲಿ ಯಾರು ಏನೇ ಕೇಳಿದರೂ ಬ್ಯಾಂಕಿಗೇ ಬನ್ನಿ. ಫೋನಿಗೆ ಪ್ರತಿಕ್ರಿಯಿಸಬೇಡಿ ಎಂದರೂ ಮೋಸಗಾರರ ಮಾತಿಗೆ ಸಿಲುಕಿಬಿಡುತ್ತಾರೆ.

ಬ್ಯಾಂಕುಗಳು ಕೂಡ ತಮ್ಮ ಗ್ರಾಹಕರಿಗೆ ಫೋನ್ ನಲ್ಲಿ ‘ಬ್ಯಾಂಕು ಎಂದಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಏನೇ ಅನುಮಾನಗಳಿದ್ದಲ್ಲಿ ನಿಮ್ಮ ಹತ್ತಿರದ ಶಾಖೆಯನ್ನು ನೇರವಾಗಿ ಸಂಪರ್ಕಿಸಿ’ ಎಂಬ ಜಾಗೃತಿಯ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತವೆ.

ಮೇಲೆ ಹೇಳಿದ ಘಟನೆ ಹತ್ತನೆಯ ತರಗತಿಯನ್ನೂ ಓದಿರದ ಡ್ರೈವರಿನದ್ದು. ಆದರೆ ದೊಡ್ಡ ದೊಡ್ಡ ಓದನ್ನು ಓದಿ ಇಂಥ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ಕಾಲೇಜಿನ ಪ್ರೋಫೆಸರಗಳೂ, ಹೈಸ್ಕೂಲಿನ ಮುಖ್ಯ ಮೇಷ್ಟ್ರೂ ಮೋಸ ಹೋಗಿರುವ ಅನೇಕ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಎಲ್ಲವನ್ನೂ ಹೇಳಲಾದೀತೇ?
ಅದಿರಲಿ. ಇಂಥ ವಂಚನೆಯನ್ನು ಜನಸಾಮಾನ್ಯರಿಗೆ ತಿಳಿಸಿ, ಆದನ್ನು ಕಂಡುಹಿಡಿದು ನ್ಯಾಯ ಕೊಡಿಸುವ ಪೋಲೀಸ್ ಇಲಾಖೆಯ ಸಿಬ್ಬಂದಿಗಳೂ ವಂಚನೆಗೆ ಒಳಗಾಗೋದು ನನಗೆ ನಿಜಕ್ಕೂ ಅಚ್ಚರಿಯೆನಿಸುತ್ತದೆ.

*ಸರಿಸುಮಾರು ನಾಲ್ಕು ಗಂಟೆಯಾಗುತ್ತಿತ್ತು. ಇನ್ನೊಂದೆರಡು ನಿಮಿಷಗಳಲ್ಲಿ ಬ್ಯಾಂಕಿನ ಬಾಗಿಲನ್ನು ಹಾಕಬೇಕಿತ್ತು. ಪೋಲೀಸ್ ಕೆಂಪುಪುಟ್ಟೇಗೌಡರು (ಹೆಸರು ಬದಲಿಸಲಾಗಿದೆ)  ಬ್ಯಾಂಕಿನೊಳಗೆ ದಢಾರನೆ ಒಳಹೊಕ್ಕರು. ‘ಮೇಡಂ ನಾ ದುಡ್ಡು ಡ್ರಾ ಮಾಡ್ಬೇಕಿತ್ತು’ ಎಂದರು. ಯೂನಿಫಾರಂ ಹಾಕಿರಲಿಲ್ಲ. ನಾನೂ ಆ ಶಾಖೆಗೆ ಹೊಸಬಳಿದ್ದೆ. ಅವರ್ಯಾರು ಎಂಬುದು ಗೊತ್ತಿರಲಿಲ್ಲ.  ಯಾರಾದರೇನು ನಮಗೆ ‘ಸರಿ ಮಾಡ್ಕೊಳಿ. ಇನ್ನೇನು ಸಮಯ ಮುಗ್ಯತ್ತೆ. ಬೇಗ ಚೆಕ್ ಬರೀರಿ’ ಎಂದೆ. ‘ಚೆಕ್ ತಂದಿಲ್ಲ ಮನೇಲಿದೆ ಎರಡು ಲಕ್ಷ ಬೇಕು’ ಎಂದರು. ಅವರಿಗೆ ಚೆಕ್ ಪುಸ್ತಕ ಇರುವಾಗ ಬ್ಯಾಂಕಿನ ಹಿಂಪಡೆತದ ಚಲನಿನಲ್ಲಿ ಐವತ್ತು ಸಾವಿರಕ್ಕಿಂತ ಹೆಚ್ಚಿಗೆ ನೀಡಲು ನಮ್ಮ ಸಿಸ್ಟಂ ಬಿಡುವುದಿಲ್ಲ. ಆದನ್ನೇ ನಾನು ಹೇಳಿದೆ. ಆತ ಕಕ್ಕಾಬಿಕ್ಕಿಯಾದಂತೆ ‘ಮನೆಗೆ ಹೋಗಿ ತರಲು ಸಮಯವಿಲ್ಲ ನನ್ ಅಕೌಂಟಿನಲ್ಲಿ ಹಣ ಹಾಗೇ ಬಿಡಲು ನನಗೆ ಧೈರ್ಯವಿಲ್ಲ’ ಎಂದರು. ‘ಹಾಗಂದ್ರೇನು ಸರ್? ಏನಾಯ್ತು?’ ಎಂದು ಕೇಳಿದ ಮೇಲೆಯೇ ಆತ ಬಾಯ್ಬಿಟ್ಟಿದ್ದು  ‘ಯಾರೋ ಕರೆ ಮಾಡಿ ನಾವು    …… ಇಂಥಾ ಬ್ಯಾಂಕಿಂದ ಮ್ಯಾನೇಜರ್ ಕರೆ ಮಾಡ್ತಾ ಇರೋದು. ನೀವು ಹೊಸಾ ಎ.ಟಿ.ಎಂ ಕಾರ್ಡಿಗೆ ಅಪ್ಲೈ ಮಾಡಿದ್ರಲ್ಲಾ ಅದನ್ನು ಇಷ್ಯೂ ಮಾಡಲು ಒಂದು ಒ.ಟಿ.ಪಿ ಬರುತ್ತೆ ಕೊಡಿ ಅಂದರು. ನಾನೂ ಯಾವುದೋ ಒತ್ತಡದಲ್ಲಿದ್ದೆ ಕೊಟ್ಟುಬಿಟ್ಟೆ. ನನ್ನ ಅಕೌಂಟಿನಿಂದ ಒಂದು ಲಕ್ಷ ರೂಪಾಯಿಯ ಟ್ರಾನ್ಸಾಕ್ಷನ್ ಮಾಡಿ ಬಿಟ್ಟಿದ್ದಾರೆ. ಹಳ್ಳಿಯಲ್ಲಿ ಹೊಸ ಮನೆಗೆ ಕೈ ಹಾಕಿದ್ದೆ. ಪಾಯಕ್ಕೆಂದು ಇಟ್ಟಿದ್ದ ಹಣವನ್ನು ….ಮಕ್ಳು ದೋಚಿಬಿಟ್ಟಿದ್ದಾರೆ. ಇನ್ನೂ ಹೆಚ್ಚಿನ ಹಣಾನ ಅವ್ರು ಡ್ರಾ ಮಾಡ್ಬಿಟ್ರೆ ಕಷ್ಟ. ಅದ್ಕೇ ನಾನೇ ಡ್ರಾ ಮಾಡಿಕೊಳ್ಬೇಕು ಮೇಡಂ’ ಎಂದರು. ‘ಅದಕ್ಕೇನಂತೆ ಒಂದು ಅರ್ಜಿ ಬರೆದುಕೊಡಿ. ನಿಮ್ಮ ಹಣವನ್ನು ಹೋಲ್ಡ್ ಮಾಡಿರುತ್ತೇನೆ ಈಗ. ನಾಳೆ ಚೆಕ್ ತಂದು ಹಣ ಹಿಂಪಡೆಯುವಿರಂತೆ’ ಎಂದೆ. ಆ ಕೆಲಸಗಳನ್ನೆಲ್ಲ ಆತ ಪೂರೈಸಿಕೊಂಡು ಹೊರಡುವಾಗ ‘ಮೇಡಂ ಫೋಲೀಸಿನವರೇ ಹೀಗೆ ಹಣ ಕಳ್ಕೊಂಡ್ರು ಅಂದ್ರೆ ನಮ್ ಮರ್ಯಾದೆ ಏನಾಗುತ್ತೆ. ಯಾರಿಗೂ ನನ್ ವಿಷ್ಯ ಹೇಳ್ಬೇಡಿ ಎಂದರು. ಅದಕ್ಕೇ ಅವರ ಹೆಸರನ್ನು ಬಹಿರಂಗಪಡಿಸಿಲ್ಲ.
ಇದು ಒಬ್ಬ ಫೋಲೀಸಿನವರದ್ದಲ್ಲ. ಇನ್ನೊಬ್ಬ ಫೋಲೀಸಿನವರು ಹುಷಾರಿಲ್ಲದೆ ಮಲಗಿದ್ದ ತಮ್ಮ ಹೆಂಡತಿಯ ಮೊಬೈಲ್ ಕಾಲ್ ರಿಸೀವ್ ಮಾಡಿ ಆಕೆಯ ಅನಾರೋಗ್ಯದ ಕುರಿತಾಗಿ ಚಿಂತಿತರಾಗಿ ಆ ಯೋಚನೆಯಲ್ಲೇ (ಹಾಗಂತ ಅವರೇ ಹೇಳಿದ್ದು) ಒ.ಟಿ.ಪಿ ಕೊಟ್ಟು ಹಣ ಡ್ರಾ ಆದ ಬಗ್ಗೆ ಮೆಸೇಜ್ ಬಂದ ಕೂಡಲೇ ಬ್ಯಾಂಕಿಗೆ ಓಡಿ ಬಂದಿದ್ದರು.

ಹೊಸ ಹೊಸ ಆವಿಷ್ಕಾರಗಳು ಹೆಚ್ಚಾದಷ್ಟೂ ವಂಚಕರ ಸಂಶೋಧನೆಯೂ ಹೆಚ್ಚಾಗಿ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೈ ಬಗ್ಗಿಸದೆ ಕೆಲಸ ಮಾಡರೆ ಕುಳಿತಲ್ಲಿಂದಲೇ ಲಕ್ಷಾಂತರ ರೂಪಾಯಿಗಳ ಹಣವನ್ನು ಗಳಿಸಬೇಕೆಂಬ ದುರಾಲೋಚನೆ ಹೆಚ್ಚಾಗುತ್ತಿದೆ. ಹೊಸ ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಸುಲಭವೇನಲ್ಲ.

ಬುದ್ಧಿವಂತರಿಗಿಂತ ಬುದ್ಧಿವಂತರು ಈ ಆನ್ಲೈನ್ ಕಳ್ಳರು.  ಎಷ್ಟು ಹೇಳಿದರೂ ಒಂದಲ್ಲಾ ಒಂದು ರೀತಿಯಲ್ಲಿ ಮೋಸಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಪರಿಹಾರವೆಂದರೆ  ಗ್ರಾಹಕರು ಎಚ್ಚರಿಕೆ ವಹಿಸುವುದು. ಎ.ಟಿ.ಎಂ ಕಾರ್ಡಿನ ಜೊತೆ ಪಾಸ್ ವರ್ಡ್ ಇಡದಿರುವುದು, ಒ.ಟಿ.ಪಿ ಸೇರಿದಂತೆ ಇನ್ಯಾವುದೇ ವೈಯಕ್ತಿಕ ಮಾಹಿತಿಯನ್ನು ಫೋನಿನಲ್ಲಿ ಕೊಡದಿರುವುದನ್ನು ರೂಢಿಸಿಕೊಳ್ಳಬೇಕು.

ಜಾಗೃತಿಯೇ ಇಂಥವಕ್ಕೆಲ್ಲ ಮದ್ದು.

Share This Article
Leave a comment