‘ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು ಕೆಟ್ಟ ಅಮ್ಮಂದಿರು ಇರುವುದಿಲ್ಲ ಎನ್ನುವ ಗಾದೆ ಮಾತಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಲಾಕರ್ ದಾಖಲೆ ಪಡೆಯಲು ಹೋದಾಗ ನಮ್ಮ ಅರಿವಿಗೆ ಬಂದ ‘ಅಮ್ಮನನ್ನು ಭಿಕ್ಷೆಗೆ ಬಿಟ್ಟ ಸಿರಿವಂತ ಮಗಳ’ ಬಗ್ಗೆ ಮತ್ತೊಮ್ಮೆ ನಿಮಗೆ ಹೇಳುತ್ತೇನೆ’ ಎಂದು ಕಳೆದ ತಿಂಗಳ ಅಂಕಣದಲ್ಲಿ ಹೇಳಿದ್ದೆ.
ಮತ್ತೊಂದು ಲಾಕರ್ ಕಥೆ ಇದು. ಎಷ್ಟು ಕರೆ ಮಾಡಿದರೂ ವಿಜಯಮ್ಮ ಅವರಿಗೆ ಕರೆ ಹೋಗುತ್ತಿರಲಿಲ್ಲ. ಕಡೇ ಪಕ್ಷ ಮೂರು ವರ್ಷಗಳಿಂದ ಆಕೆ ಲಾಕರ್ ಅಪರೇಟ್ ಮಾಡಿರಲಿಲ್ಲ, ಬಾಡಿಗೆಯನ್ನೂ ಕಟ್ಟಿರಲಿಲ್ಲ. ಹಾಗಾಗಿ ಒಂದೋ ಬಾಡಿಗೆ ಕಟ್ಟಬೇಕು ಅಥವಾ ಕೀ ವಾಪಸ್ ಕೊಟ್ಟು ಲಾಕರ್ ಮುಕ್ತಾಯಗೊಳಿಸಬೇಕು. ಗತ್ಯಂತರವಿಲ್ಲದೆ ನಾನು, ನಮ್ಮ ಆಫೀಸರ್ ಮತ್ತು ನಮ್ಮ ಅಧೀನ ಸಿಬ್ಬಂದಿ ಬ್ಯಾಂಕಿನ ಕಾರಿನಲ್ಲೇ ಹುಡುಕಿಕೊಂಡು ಹೋದೆವು. ನಮ್ಮ ಅಧೀನ ಸಿಬ್ಬಂದಿ ಸತೀಶನಿಗೆ ಮನೆಯ ಜಾಡು ತಿಳಿದಿತ್ತು. ಹಾಗಾಗಿ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಬೆಳಕನ್ನೇ ಕಾಣದ ಕಾಂಪೌಂಡನ್ನು ಹೆದರೀ ಹೆದರೀ ಹೊಕ್ಕೆವು. ರಸ್ತೆಯ ಬೆಳಕು ದೊಡ್ಡ ಕಂದೀಲಿನಂತೆ ಬೆಳಕನ್ನು ಅಲ್ಲಿಗೂ ದಾಟಿಸುತ್ತಿದ್ದವು. ದೊಡ್ಡ ಕಾಂಪೌಂಡು. ಅಲ್ಲಲ್ಲಿ ಗಿಡ ಮರ ಹಸಿರಾಗಿದ್ದವು. ಮನೆ ಹಿಂಭಾಗಕ್ಕೆ ಇತ್ತು. ಮನೆಯ ಬಾಗಿಲನ್ನು ತಟ್ಟುವುದಕ್ಕೂ ಆಸ್ಪದ ಇಲ್ಲದ ಹಾಗೆ ಮನೆಯ ಮುಂಭಾಗಕ್ಕೆ ದೊಡ್ಡ ಮರ ಉರುಳಿಬಿದ್ದು ಅಡ್ಡಲಾಗಿತ್ತು. ನಮಗೆ ಅದನ್ನು ದಾಟಿ ಹೋಗಲು ಭಯ ಎನಿಸಿತು. ‘ಹೊಸ್ತಿಲಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಬಸವಣ್ಣನವರ ವಚನ ನೆನಪಿಗೆ ಬಂದಿತು. ಜೀವದ ಯಾವ ಲಕ್ಷಣವೂ ಆ ಮನೆಯಲ್ಲಿ ಕಾಣುತ್ತಿರಲಿಲ್ಲ. ಸತೀಶ ‘ಅಕ್ಕಾ ನಾ ಒಂದು ಸಲ ಬಂದಿದ್ದೆ. ಮನೆಯೊಳಗೇ ಕತ್ತಲಲ್ಲಿ ಇರುತ್ತಾರೆ ಕೂಗೋಣ’ ಎಂದ. ನಮ್ಮ ಜೊತೆ ಬಂದಿದ್ದ ಕಾರಿನ ಚಾಲಕ ಭಾರೀ ಆಳು. ಹಾಗಾಗಿ ಸಮಯ ಸಂದರ್ಭ ಎಂದು ಕೂಗಿಕೊಂಡರೆ ಓಡಿ ಬರುತ್ತಾನೆ ಎಂಬುದೇ ನಮಗೆ ಒಂದು ಬಗೆಯ ಧೈರ್ಯ. ‘ರೀ ವಿಜಯಮ್ಮಾ ವಿಜಯಮ್ಮ ಇದ್ದೀರಾ’ ಎಂದು ಮೂವರೂ ಸರತಿಯ ಮೇರೆಗೆ ಕೂಗಿದೆವು. ಸದ್ದು ಗದ್ದಲವೂ ಇಲ್ಲ – ಬೆಳಕೂ ಇಲ್ಲ. ನಾವುಗಳು ಮೊಬೈಲ್ ಟಾರ್ಚ್ ಹಾಕಿಕಿಂಡು ನಿಂತಿದ್ದೆವು. ಹೊರಟೇ ಬಿಡೋಣ ಎಂದುಕೊಳ್ಳುವುದರೊಳಗೆ ಮನೆಯ ಬಾಗಿಲು ಕಿರ್ರ್ ಎಂದಿತು. ಎರಡು ಆಕೃತಿಗಳು ಕತ್ತಲ ಬಾಗಿಲಿನಿಂದ ಸಣ್ಣ ಟಾರ್ಚಿನ ಬೆಳಕಿನೊಂದಿಗೆ ಬಂದವು. ಒಬ್ಬರು ಎಪ್ಪತ್ತರ ವೃದ್ಧೆ, ಇನ್ನೊಬ್ಬ ರೋಗಿಯಂತಿದ್ದ ನಲವತ್ತರ ನಡುವಯಸ್ಕ. ‘ಯಾರು ನೀವು ಏನು ಬೇಕಿತ್ತು’ ಎಂಬ ಪ್ರಶ್ನೆ ತುಸು ಭಯದಲ್ಲೇ ಬಂದಿತು. ಅದು ಸಹಜವೂ. ಅವರಿಗೆ ಧೈರ್ಯ ಕೊಡಲೆಂದು ನಾನು ಮೊಬೈಲ್ ಬೆಳಕನ್ನು ನನ್ನ ಮುಖಕ್ಕೆ ಬಿಟ್ಟುಕೊಂಡೆ. ಏಕೆಂದರೆ ಆಕೆ ನನಗೆ ಹಿಂದಿನಿಂದಲೂ ಪರಿಚಿತೆ. ಹಿಂದೆ ನಾನು ಇದೇ ಶಾಖೆಯಲ್ಲಿ ಇದ್ದಾಗ ನಿಶ್ಚಿತ ಠೇವಣಿಯ ವಿಭಾಗದ ಖಾಯಂ ಗಿರಾಕಿ. ಹಾಗಾಗಿ ನನ್ನ ನೋಡಿದರೆ ಆಕೆಯ ದಿಗಿಲು ಕಡಿಮೆಯಾಗಬಹುದು ಎಂಬುದು ನನ್ನ ಅನಿಸಿಕೆ. ಅಂತೆಯೇ ಆಯಿತು. ‘ಓ ಶುಭಾ ಮೇಡಂ. ಇಷ್ಟು ವರ್ಷ ಎಲ್ಲಿ ಹೊರಟು ಹೋಗಿದ್ರಿ?’ ಎಂದು ಗೆಲುವಾಗಿ ಮಾತನಾಡಿದರು. ‘ಲಾಕರ್ ಗೆ ನೀವು ಬಾಡಿಗೆಯನ್ನು ಕಟ್ಟಿಲ್ಲವಲ್ಲಾ ಕಟ್ಟಿಬಿಡಿ, ಅದನ್ನು ಕೇಳೋಕೇ ಬಂದೆವು’ ಎಂದೆವು. ಅವರ ಪೂರ್ವಾಪರದ ಸುರುಳಿ ತೆರೆದುಕೊಳ್ಳತೊಡಗಿತು. ‘ನನ್ ಮಗ್ಳು ನಮಗೆ ಮೋಸ ಮಾಡ್ಬಿಟ್ಳು. ನಮ್ಮ ಹೆಸರಿನಲ್ಲಿ ಇದ್ದ ಎಫ್.ಡಿ. ಗಳನ್ನೆಲ್ಲಾ ಏನೋ ನೆಪ ಹೇಳಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಬಿಟ್ಟಳು. ಮಗಳು ಎಂದು ನಂಬಿದ್ದೇ ಮುಳುವಾಯಿತು. ಈಗ ನನಗೆ ದುಡಿಯುವ ವಯಸ್ಸಿಲ್ಲ’ ಎಂದ ಕೂಡಲೇ ಮಗ ಮಾತನಾಡಿ ‘ನನಗೆ ಖಾಯಿಲೆ ಇದೆ. ಆಗಾಗ ತಲೆಸುತ್ತಿ ಬಿದ್ದುಬಿಡ್ತೀನಿ. ಮೈಯ್ಯಲ್ಲಿ ಶಕ್ತಿ ಇಲ್ಲ. ಇದ್ದ ಚೂರು ಪಾರು ದುಡ್ಡು ಆಸ್ಪತ್ರೆಗೇ ಹೋಯಿತು’ ಎಂದ. ಆ ತಾಯಿ ‘ಕಷ್ಟ ಪಟ್ಟು ನನ್ನ ಮಗನ ಜೀವ ಉಳಿಸಿಕೊಂಡಿದ್ದೀನಿ. ಎಲೆಕ್ಟ್ರಿಕ್ ಬಿಲ್ಲು ಕಟ್ಟೋಕೂ ನಮಗೆ ಶಕ್ತಿಯಿಲ್ಲ. ಓಡಾಡಿ ಗೃಹಜ್ಯೋತಿ ಮಾಡಿಸೋರೂ ಯಾರೂ ಇಲ್ಲ. ಮೊಬೈಲ್ ಕರೆನ್ಸಿ ರೀಚಾರ್ಜ್ ಮಾಡಿಸೋಕೂ ಆಗಲ್ಲ. ಈಗ ಉಳಿದಿರೋದು ಇದೊಂದೇ ಮನೆ. ಇದನ್ನು ಮಾರಿ ದುಡ್ಡು ಇಡುಗಂಟು ಇಟ್ಟುಕೊಳ್ಳೋಣ ಎಂದರೆ ಸೈನ್ ಮಾಡೋಕೂ ಮಗಳು ಬರಬೇಕು, ಆಮೇಲೆ ಅದನ್ನೂ ಕಿತ್ತುಕೊಳ್ಳುತ್ತಾಳೆ. ನಾವಿಬ್ಬರೂ ಈಗ ದಿನಾ ಭಿಕ್ಷೆ ಬೇಡಿ ತಿನ್ನುತ್ತಾ ಇದ್ದೇವೆ. ಸ್ವಲ್ಪ ದಿನ ನಮ್ಮ ರಸ್ತೆಯಲ್ಲಿ ಬೇಡುತ್ತೇವೆ. ಕೆಲವು ದಿನ ಸ್ವಲ್ಪ ದೂರ ಹೋಗಿ ಬೇಡುತ್ತೇವೆ. ಇಲ್ಲಿ ಎಲ್ಲ ಗುರ್ತು ಕಂಡವರು, ನಾವು ಚೆನ್ನಾಗಿ ಬಾಳಿ ಬದುಕಿದ್ದನ್ನು ನೋಡಿದವರು. ನಮ್ಮ ಯಜಮಾನರು ಇದ್ದಾಗ ನಾನು ರಾಣಿಯ ಹಾಗೆ ಇದ್ದೆ. ಈಗ ತಿರಿದು ತಿನ್ನೋ ಗತಿ ಬಂದಿದೆ. ಅದೂ ನಾ ಹೆತ್ತ ಮಗಳಿಂದ. ಅವಳು ಈಗ ಜಬರ್ದ್ಸ್ತಾಗಿ ಬದುಕ್ತಾ ಇದ್ದಾಳೆ. ನಮ್ ದುಡ್ಡು, ಅವಳ ಗಂಡ ದೊಡ್ಡ ಕೆಲಸದಲ್ಲಿ ಇದ್ದಾನೆ ಆ ದುಡ್ಡು ಎಲ್ಲಾ ಮಜ ಮಾಡ್ತಾ ಇದಾಳೆ. ಅಮ್ಮ ತಮ್ಮ ಅಂತ ಪ್ರೀತಿ ಹೋಗ್ಲಿ ಕರುಣೇನೂ ಇಲ್ಲ. ನಮಗೆ ಬಾಡಿಗೆ ಕಟ್ಟುವ ಚೈತನ್ಯ ಇಲ್ಲ. ಆಗಲ್ಲ’ ಎಂದರು. ‘ಸರಿ ಹಾಗಿದ್ರೆ, ನಾಳೆ ಬ್ಯಾಂಕಿಗೆ ಬಂದು ಒಂದು ಅರ್ಜಿ ಕೊಟ್ಟು ಕೀ ಸರಂಡರ್ ಮಾಡಿ, ಕ್ಲೋಸ್ ಮಾಡಿಬಿಡೋಣ’ ಎಂದೆವು. ‘ಅದಾಗಲ್ಲ. ನಾವ್ಯಾಕೆ ಕ್ಲೋಸ್ ಮಾಡಬೇಕು. ಇವತ್ತು ಶಕ್ತಿ ಇಲ್ಲ ಅಂದ್ರೆ ಮುಂದೇನೂ ಇರಲ್ವಾ? ನಮಗೆ ಅವಶ್ಯಕತೆ ಇದೆ ನಾವು ಕ್ಲೋಸ್ ಮಾಡಲ್ಲ’ ಎಂದು ಮಕ್ಕಳಂತೆ ಹಠದ ಮಾತನಾಡಿದರು. ‘ಮುಂದೆ ಬೇಕಾದಾಗ ತೆಗೆದುಕೊಳ್ಳೋರಂತೆ ಈಗ ಕ್ಲೋಸ್ ಮಾಡಿ’ ಎಂದು ಮೂವರೂ ಅವರ ಮನ ಒಲಿಸಲು ಪ್ರಯತ್ನಿಸಿದೆವು. ಬಡಪೆಟ್ಟಿಗೆ ಆಕೆ ಒಪ್ಪಲಿಲ್ಲ. ಕೊನೆಗೆ ‘ಹೀಗೇ ಆದ್ರೆ ಕಾನೂನಿನ ಪ್ರಕಾರ ಪತ್ರ ಕಳಿಸಬೇಕಾಗುತ್ತೆ’ ಎಂದು ಮೆತ್ತಗೆ ಹೇಳಿದೆವು. ಆಕೆ ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟಳು. ‘ಲಾಕರ್ ನನ್ದು ನನ್ ಮಗಳದ್ದು ಇಬ್ಬರ ಹೆಸರಲ್ಲೂ ಇತ್ತಲ್ಲ್ವಾ? ಒಳ್ಳೆದಾಯ್ತು. ನನಗೆ ಲಾಯರ್ ನೋಟೀಸ್ ಕೊಡಿ. ಅದನ್ನು ಅವಳಿಗೆ ತಲುಪಿಸುತ್ತೀನಿ. ಅವಳನ್ನು ಕೋರ್ಟಿಗೆ ಎಳೀತೀನಿ. ನೀವು ನೋಟೀಸ್ ಕೊಟ್ಟರೆ ನನಗೆ ಉಪಯೋಗ ಆಗುತ್ತೆ. ಇಂಥಾ ಮಗಳು ಯಾರಿಗೂ ಇರಬಾರದು. ಜಡ್ಜಿಗೂ ಗೊತ್ತಾಗುತ್ತೆ ಎಂಥೆಂಥಾ ಮಕ್ಕಳು ಇರ್ತಾರೆ ಅಂತ.’ ಎಂದವರೇ ಲಾಯರ್ ನೋಟೀಸ್ ಕೊಡಿ ಕೊಡಿ ಎಂದು ನಮಗೆ ದುಂಬಾಲು ಬಿದ್ದರು. ಇದೊಳ್ಳೆ ಗ್ರಹಚಾರಕ್ಕೆ ಬಂತಲ್ಲಾ ಎನಿಸಿಬಿಟ್ಟಿತು ಮೂವರಿಗೂ. ಇದಾಗುವ ಹೊತ್ತಿಗೆ ನಾವು ಅಲ್ಲಿ ತಲುಪಿ ಒಂದು ಗಂಟೆಯೇ ಆಗಿತ್ತು. ಬ್ಯಾಂಕಿನಲ್ಲಿ ರಾಶಿ ಕೆಲಸ ಕಾಯುತ್ತಿದ್ದವು. ನಾವು ಹೊರಡುವ ಆತುರ ತೋರಿ ‘ನಾಳೆ ಬ್ಯಾಂಕ್ ಗೆ ಬನ್ನಿ ಮ್ಯಾನೇಜರ್ ಜೊತೆ ಮಾತನಾಡೋರಂತೆ. ಏನಾದ್ರೂ ಪರಿಹಾರ ಸಿಗುತ್ತೆ’ ಎಂದು ಹೊರಡುವ ವೇಳೆಗೆ ಆಕೆ ‘ಶುಭಾ ಮೇಡಂ ನೀವು ನ್ಯೂಸ್ ನಲ್ಲಿ ಕೆಲಸ ಮಾಡ್ತಿದ್ರಿ ಅಲ್ವಾ? ನಿಮಗೆ ಗೊತ್ತಿರುವ ನ್ಯೂಸ್ ಚಾನೆಲ್ ಅವರನ್ನು ಕರೆದುಕೊಂಡು ಬನ್ನಿ. ಪ್ರಪಂಚಕ್ಕೇ ಗೊತ್ತಾಗಲಿ ಎಂಥಾ ಮಕ್ಕಳು ಇರ್ತಾರೆ ಅಂತ. ಅದ್ರಲ್ಲೂ ಹೆಣ್ಣು ಮಕ್ಕಳು ಹೀಗೂ ಇರ್ತಾರೆ ಅಂತ ಎಲ್ಲಾರಿಗೂ ಗೊತ್ತಾಗಲಿ’ ಎಂದು ನನ್ನ ಬೆನ್ನು ಬಿದ್ದರು. ಆಕೆ ಹೇಳಿದ್ದನ್ನೇ ಹೇಳೀ ಹೇಳಿ ಎಲ್ಲರಿಗೂ ತಲೆ ಚಿಟ್ಟು ಬರುತ್ತಿತ್ತು. ಹೇಗೋ ತಪ್ಪಿಸಿಕೊಂಡರೆ ಸಾಕು ಎನಿಸುತ್ತಿತ್ತು ಎಲ್ಲರಿಗೂ. ಆಕೆ ಅವರ ಅಳಿಯ ಕೆಲಸ ಮಾಡುತ್ತಿದ್ದ ಕಚೇರಿಯ ವಿಳಾಸವನ್ನೂ ಕೊಟ್ಟರು. ನನಗೂ ಆಕೆಯ ಮಗಳ ಮುಖಚಹರೆ ನೆನಪಿನಲ್ಲೇ ಇತ್ತು. ‘ನಾಳೆ ಬನ್ನಿ ಬ್ಯಾಂಕಿಗೆ ಮಾತನಾಡೋಣ’ ಎಂದು ಹೇಳಿ ಹೊರಟೆವು.
ಮರುದಿನ ತಾಯಿ ಮಗ ಇಬ್ಬರೂ ಬ್ಯಾಂಕಿಗೆ ಬಂದರು. ಅವರ ಮಾತಿನ ಧಾಟಿಯ ಅರಿವಿದ್ದ ನಾವು ಮೂವರೂ ನಮ್ಮ ನಮ್ಮ ಸೀಟು ಬಿಟ್ಟು ಏಳಲೇ ಇಲ್ಲ. ನಮ್ಮ ಜೊತೆ ಮಾತನಾಡಿದ ಎಲ್ಲವನ್ನೂ ಮ್ಯಾನೇಜರ್ ಅವರ ಮುಂದೂ ಕಥೆ ಹೇಳಿದರು. ಮ್ಯಾನೇಜರ್ ಕೂಡ ಬಾಡಿಗೆ ಕಟ್ಟಲಾಗದಿದ್ದರೆ ಈಗ ಕ್ಲೋಸ್ ಮಾಡಿ. ಮುಂದೆ ಹೊಸತು ತೆಗೆದುಕೊಳ್ಳುವಿರಂತೆ ಎಂದು ಎಷ್ಟು ಹೇಳಿದರೂ ಒಪ್ಪದೇ ಒಂದು ಗಂಟೆಯ ಮಾತುಕತೆಯ ನಂತರ ಮ್ಯಾನೇಜರ್ ತಲೆ ಕೂಡ ಚಿಟಿಚಿಟಿ ಎಂದು ಮೆಲ್ಲಗೆ ಜಾಗ ಖಾಲಿ ಮಾಡಿದರು.
ನಾವುಗಳು ಆಕೆಯ ಅಳಿಯ ಕೆಲಸ ಮಾಡುವ ಜಾಗದಲ್ಲಿ ತಲಾಶ್ ಮಾಡಿ ವಿಷಯ ತಿಳಿದುಕೊಂಡೆವು ಆದರೆ ಆತ ಸಿಗಲಿಲ್ಲ. ಇದಾಗಿ ಎರಡು ದಿನಗಳ ನಂತರ ಗುಂಡಗುಂಡಗೆ ಇದ್ದ ‘ಆ ಸಿರಿವಂತ ಮಗಳು’ ಬ್ಯಾಂಕಿಗೆ ಬಂದಳು. ಎಫ್.ಡಿ ರೆನ್ಯೂವಲ್ ಗೆಂದು ಬಂದಿದ್ದಳು. ನಾನು ನಮ್ಮ ಆಫೀಸರ್ ಗೆ ‘ನೋಡಿ ಮೇಡಂ ಅವಳೇ ವಿಜಯಮ್ಮನ ಮಗಳು. ಹೇಗಾದರೂ ಮಾಡಿ ನಿಮ್ಮ್ ಹತ್ರ ಅಥವಾ ಮ್ಯಾನೇಜರ್ ಹತ್ರ ಅವಳನ್ನು ಕಳಿಸುತ್ತೇನೆ. ಮಾತಾಡಿ’ ಎಂದೆ. ಅಷ್ಟರಲ್ಲಿ ಸತೀಶನೂ ಬಂದು ‘ಅವಳೇ ಆ ಮಗಳು’ ಎಂದ. ನಾನು ಮ್ಯಾನೇಜರ್ ಚೇಂಬರಿಗೆ ಹೋಗಿ ಆವರಿಗೂ ಸೂಚನೆ ಕೊಟ್ಟು ಎಫ್.ಡಿ ಸೆಕ್ಷನ್ ಹುಡುಗಿಗೆ ಫೋನ್ ಕರೆ ಮಾಡಿ ಅವಳ ಎಫ್.ಡಿ ಸಹಿ ಮಾಡಲು ಮ್ಯಾನೇಜರ್ ಬಳಿಯೇ ಕಳಿಸಿ ಎಂದು ಹೇಳಿದೆ. ವಿಷಯ ತಿಳಿದ ಆಕೆ ತಾ ಬಾಡಿಗೆ ಕಟ್ಟಲೊಲ್ಲೆ ಎಂದು ಹಠ ಹಿಡಿದಳು. ‘ನನಗೂ ನನ್ನ ಅಮ್ಮನಿಗೂ ಯಾವುದೇ ಸಂಬಂಧ ಇಲ್ಲ ಈಗ. ನನ್ನ ಹೆಸರನ್ನು ತೆಗೆಸಿಬಿಡಿ ಅವರೊಬ್ಬರ ಹೆಸರೇ ಇರಲಿ ಎಂದು ನಾನು ಹಿಂದೆಯೇ ಪತ್ರ ಕೊಟ್ಟಿದ್ದೆ. ನನ್ನ ಹೆಸರು ಯಾಕೆ ಇದೆ?’ ಎಂದು ಪ್ರಶ್ನಿಸಿದಳು. ಸಾಕ್ಷಿ ಕೇಳಿದ್ದಕ್ಕೆ ಏನೂ ಇಲ್ಲ ಎಂದಳು. ತನ್ನ ಗಂಡನನ್ನು ಕೇಳಬೇಕು ಎಂದು ಹೇಳಿ ಹೊರಟಳು. ಅವಳ ಫೋನ್ ನಂಬರ್ ತೆಗೆದುಕೊಂಡು ನಾಳೆ ನಾಡಿದ್ದರಲ್ಲೇ ಬರಬೇಕೆಂದು ನಮ್ಮ ಆಫೀಸರ್ ತಾಕೀತು ಮಾಡಿ ಕಳಿಸಿದರು. ಅದೇನೋ ಹೇಗೋ ವಯಸ್ಸಾದ ಅಮ್ಮ, ಖಾಯಿಲೆಯ ಮಗ, ಗುಂಡಗುಂಡಗಿನ ಮಗಳು, ನರಪೇತಲ ಅಳಿಯ ಎಲ್ಲರೂ ಬ್ಯಾಂಕಿಗೆ ಒಟ್ಟಿಗೇ ಬಂದರು. ಒಬ್ಬರ ಮುಖ ಕಂಡರೆ ಮತ್ತೊಬ್ಬರು ತಲೆ ಆಚೆ ಈಚೆ ಮಾಡುತ್ತಿದ್ದರು. ಹೇಗೋ ಏನೋ ಮಗಳು ಅಳಿಯ ಕೊನೆಗೆ ಅರ್ಧ ಬಾಡಿಗೆ ಕೊಡಲು ಒಪ್ಪಿದರು. ‘ಇನ್ನರ್ಧ ಅವರ ಹತ್ತಿರವೇ ಇಸ್ಕೊಳಿ’ ಎಂದಳು ಹೊರಟಳು ಮಗಳು.
ಹೆಣ್ಣು ಮಕ್ಕಳು ಎಂದರೆ ಅಂತಃಕರಣ ಉಳ್ಳವರು, ಕರುಣೆ, ಸಹನೆ, ಪ್ರೀತಿ, ತಾಳ್ಮೆಗಳ ತವರು ಎಂದೆಲ್ಲ ಹೇಳುವ ಈ ನೆಲದಲ್ಲಿ ತಾಯಿಯ ಬಳಿಯಿದ್ದ ಎಲ್ಲವನ್ನೂ ಕಸಿದುಕೊಂಡು ಭಿಕ್ಷೆಗೆ ನಿಲ್ಲಿಸಿದ ಮಗಳನ್ನು ನೋಡಿ ಏನೂ ಹೇಳಲು ತೋಚದೆ ನಿಂತೆ.
‘ತಾಯೀನೇ ತರಿದು ತಿನ್ನೋಳು ಅತ್ತೇನ ಬಿಟ್ಟಾಳ್ಯೇ?’ ಎಂಬ ಗಾದೆ ಆ ಕ್ಷಣ ಏತಕ್ಕೆ ನೆನಪಿಗೆ ಬಂದಿತೋ ನಾಕಾಣೆ.
ಲಾಕರ್ ದಾಖಲೆಗಳನ್ನು ಪಡೆಯಲು ಓಡಾಡಿದಾಗ ಆದ ಅನುಭವ ಅಷ್ಟಿಷ್ಟಲ್ಲ. ನನ್ನ ಅನುಭವದ ಭಂಡಾರಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿವೆ. ಹೀಗೆ ಓಡಾಡುವಾಗ ಅರೆಬರೆ ತಲೆ ಕೆಟ್ಟ ತಾಯಿಯೊಬ್ಬರ ಮನೆಯ ಕಥೆ, ಓಡಾಡಲು ಕಾಲು ಸಹಕರಿಸದಿದ್ದರೂ ನಮ್ಮನ್ನು ಉಪಚರಿಸಿದ ದಂಪತಿಗಳ ಕಥೆಯನ್ನು ಮುಂದಿನ ತಿಂಗಳು ಹೇಳುತ್ತೇನೆ.
-ಡಾ.ಶುಭಶ್ರೀ ಪ್ರಸಾದ್, ಮಂಡ್ಯ
‘ಕೆಟ್ಟ ಮಕ್ಕಳು ಇರುತ್ತಾರೆಯೇ ಹೊರತು ಕೆಟ್ಟ ಅಮ್ಮಂದಿರು ಇರುವುದಿಲ್ಲ ಎನ್ನುವ ಗಾದೆ ಮಾತಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಲಾಕರ್ ದಾಖಲೆ ಪಡೆಯಲು ಹೋದಾಗ ನಮ್ಮ ಅರಿವಿಗೆ ಬಂದ ‘ಅಮ್ಮನನ್ನು ಭಿಕ್ಷೆಗೆ ಬಿಟ್ಟ ಸಿರಿವಂತ ಮಗಳ’ ಬಗ್ಗೆ ಮತ್ತೊಮ್ಮೆ ನಿಮಗೆ ಹೇಳುತ್ತೇನೆ’ ಎಂದು ಕಳೆದ ತಿಂಗಳ ಅಂಕಣದಲ್ಲಿ ಹೇಳಿದ್ದೆ. Banker’s Diary. Banker’s Diary, Banker’s Diary, Banker’s Diary, Banker’s Diary, Banker’s Diary,Banker’s Diary. Banker’s Diary, Banker’s Diary, Banker’s Diary, Banker’s Diary, Banker’s Diary
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ