December 23, 2024

Newsnap Kannada

The World at your finger tips!

Bankers dairy

ಚಿನ್ನ ಮತ್ತು ಅನ್ನ(ಬ್ಯಾಂಕರ್ಸ್ ಡೈರಿ)

Spread the love
IMG 20180306 WA0008 1 edited

ಹೀಗೊಂದು ದಿನ ಸುಮಾರು ನಾಲ್ಕು ಗಂಟೆಯ ಸಮಯ. ಗ್ರಾಹಕರೊಬ್ಬರು ಬ್ಯಾಂಕಿಗೆ ಬಂದರು. ಬಾಗಿಲು ಹಾಕುವ ಹೊತ್ತಾಗಿತ್ತು. ಎಲ್ಲಿ ಬ್ಯಾಂಕಿನ ವ್ಯವಹಾರ ಮುಕ್ತಾಯವಾಗಿಬಿಡುತ್ತದೋ ಎಂಬ ಆತಂಕ ಅವರ ಮುಖದಲ್ಲಿ ಕಾಣುತ್ತಿತ್ತು. ಬಂದವರೇ ಸೀದಾ ನನ್ನ ಕೌಂಟರಿನಲ್ಲಿ ಕುಳಿತರು. ಅವರ ಎಫ್.ಡಿ ರಿನ್ಯೂ ಮಾಡಬೇಕಿತ್ತು. ಆಗ ಯಥಾಪ್ರಕಾರ ಇದನ್ನು ಬೇಕಾದರೆ ಇನ್ಷೂರೆನ್ಸ್‍ನಲ್ಲಿ ತೊಡಗಿಸಬಹುದು ಅಥವಾ ಮ್ಯೂಚುಯಲ್ ಫಂಡ್ಸ್‍ನಲ್ಲಿ ಇಡಬಹುದು ಪೂರ್ಣ ವಿವರವನ್ನು ತಿಳಿದು ಯೋಚಿಸಿ, ನಿರ್ಧಾರ ನಿಮದೇ ಎಂದು ಹೇಳಿದೆ. ‘ಯಾವ ಇನ್ಶೂರೆನ್ಸೋ ಏನೋ, ನಾಮಿನಿಯೇ ಹಣಕ್ಕಾಗಿ ಕೊಂದುಬಿಡ್ತಾರೆ. ಅಂಥಾ ಕಾಲ ಬಂದುಬಿಟ್ಟಿದೆ. ನಾಮಿನಿ ಇರಲಿ ಬಿಡಲಿ ಆಸ್ತಿ ಜಾಸ್ತಿ ಇದ್ದರೂ ಜೀವ ಭಯ ಇದ್ದೇ ಇದೆ’ ಎಂದು ನಿಟ್ಟುಸಿರು ಬಿಟ್ಟರು. ಏನಾಯಿತು ಎಂಬ ನನ್ನ ಪ್ರಶ್ನೆಗೆ ‘ನೋಡಿ ಮೇಡಂ ನಮ್ಮ ಮನೆಯ ಎದುರಿನಲ್ಲಿ ಒಂದು ಹುಡುಗಿ ಇದ್ದಳು. ಮದುವೆಯಾಗಿ ಹತ್ತು ವರ್ಷಗಳೇ ಆಗಿವೆ. ಇಬ್ಬರು ಮಕ್ಕಳಿದ್ದಾರೆ. ಗಂಡ ಹತ್ತಾರು ಮಕ್ಕಳನ್ನು ತಿದ್ದಿ ತೀಡುವ ಮೌಲಿಕ ಉದ್ಯೋಗದ ಶಿಕ್ಷಕ. ಆದರೆ ಅವನಲ್ಲೇ ಯಾವ ಮೌಲ್ಯಗಳೂ ಇಲ್ಲ. ಅವನ ಹೆಂಡತಿಯ ತಂದೆ ತಾಯಿಗಳು ಕೆಲ ವರ್ಷಗಳ ಹಿಂದೆ ತೀರಿಹೋದರು. ಅಣ್ಣ ತಮ್ಮ ಅಕ್ಕ ತಂಗಿ ಯಾರೂ ಇಲ್ಲ. ಅಣ್ಣನೋ ಯಾರೋ ಇದ್ದರಂತೆ ಅವರೂ ಬದುಕಿಲ್ಲ. ಕೋಟ್ಯಾಂತರ ರೂಪಾಯಿ ಆಸ್ತಿ ಅವಳ ಹೆಸರಿನಲ್ಲಿ ಇತ್ತು. ಅದನ್ನು ಮಾರಿಬಿಡು ಎಂದು ಗಂಡ ಅನೇಕ ಬಾರಿ ಹೇಳುತ್ತಿದ್ದನಂತೆ. ಆಕೆ ಅದಕ್ಕೆ ಒಪ್ಪುತ್ತಿರಲಿಲ್ಲ. ತಂದೆ ಮನೆಯ ಆಸ್ತಿ, ಮಾರಿಬಿಟ್ಟರೆ ಗಂಡ ಎಲ್ಲಿ ಅವನೇ ಇಟ್ಟುಕೊಂಡುಬಿಡುತ್ತಾನೋ ಎಂಬ ಭಯ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಅದು ಸಹಾಯಕ ಎಂದು ಮಾರಲು ಒಪ್ಪುತ್ತಿರಲಿಲ್ಲವಂತೆ. ಇಷ್ಟರ ಜೊತೆಗೆ ಆ ಆಸ್ತಿ ಅವಳಿಗೆ ಒಂದು ರೀತಿಯ ಆರ್ಥಿಕ ಭದ್ರತೆಯನ್ನು ಕೊಡುತ್ತಿತ್ತು. ಇವಳು ಮಾರಲು ಒಪ್ಪುವುದೇ ಇಲ್ಲ ಎಂದು ಗೊತ್ತಾದ ನಂತರ ಒಂದು ರಾತ್ರಿ ಆಕೆಯನ್ನು ದಿಂಬು ಅಮುಕಿ ಉಸಿರುಗಟ್ಟಿಸಿ ಸಾಯಿಸಿಬಿಟ್ಟು ಹೃದಯಾಘಾತ ಆಗಿದೆ ಎಂದು ಎಲ್ಲರನ್ನೂ ಕೂಗಿ ಕರೆದು ಹೇಳಿದ. ಹುಡುಗಿಯ ಚಿಕ್ಕಪ್ಪ ಬಂದವರೇ ನಮಗೆ ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರು ನೀಡಿದರು. ಸತ್ತವಳ ಒಂದು ಕೈ ನೀಲಿಗಟ್ಟಿತ್ತು. ರಾತ್ರಿ ಹೊತ್ತು ಗಂಡ ಹೆಂಡಿರ ಜಗಳದ ಸದ್ದು ನನ್ನ ರೂಮಿನವರೆವಿಗೂ ಕೇಳುತ್ತಿತ್ತು. ಹಾಗಾಗಿ ಆಗ ನನಗೆ ಅನುಮಾನ ಬಂದು ಅದು ಯಾಕೆ ಹೀಗಾಗಿದೆ ಎಂದು ಪೆÇಲೀಸಿನವರನ್ನು ಕೇಳಿದೆ. ದೂರು ಬಂದಿದ್ದರಿಂದ ಅವರು ಮೊದಲು ಗಂಡನನ್ನು ಮತ್ತು ಅವನ ಮನೆಯವರನ್ನು ಪ್ರಶ್ನಿಸಿದರು. ಇಂಟರಾಗೇಷನ್ನಿನಲ್ಲಿ ಗಂಡನೇ ಕೊಂದಿರುವುದು ಬೆಳಕಿಗೆ ಬಂದಿತು. ಪೆÇಲೀಸಿನವರು ಗಂಡನ ಮೊಬೈಲ್ ಬ್ರೌಸಿಂಗ್ ಹಿಸ್ಟರಿ ತೆಗೆದು ನೋಡಿದರೆ ತಿಂಗಳುಗಟ್ಟಲೆಯಿಂದ ಕೊಲೆ ಮಾಡುವ ಬೇರೆ ಬೇರೆ ವಿಧಾನಗಳನ್ನು ಆತ ಹುಡುಕಾಡಿದ್ದುದು ತಿಳಿದುಬಂದಿತು.. ಅವನ ಮೊಣಕೈಯಿಂದ ಅವಳ ಕೈ ಮೇಲೆ ಭಾರ ಹೇರಿದ್ದರಿಂದ ಅದು ನೀಲಿಗಟ್ಟಿತ್ತು. ಈಗ ಗಂಡ ಜೈಲಿನಲ್ಲಿ ಇದ್ದಾನೆ.’ ಎಂದರು. ‘ಅಷ್ಟು ಕೋಟಿಗಳನ್ನು ಇಟ್ಟುಕೊಂಡು ಅವರು ಏನು ಮಾಡುತ್ತಾರೆ. ನೆಮ್ಮದಿಯೇ ಇರದ ಮೇಲೆ ಮತ್ತು ಜೈಲಿನಲ್ಲಿ ಇದ್ದು ಯಾವ ಸುಖ ಅನುಭವಿಸುತ್ತಿದ್ದಾನೆ’ ಎಂದು ನಾನು ಅಚ್ಚರಿಯನ್ನು ವ್ಯಕ್ತಪಡಿಸಿದೆ. ಅದಕ್ಕೆ ಆಕೆ ‘ಮೇಡಂ ಎಷ್ಟು ದುಡ್ಡು ಇದ್ದರೂ ಏನು ಪ್ರಯೋಜನ? ಮುಂಚೆಯೂ ಅಷ್ಟೇ ತಿಂದರೆ ಎಲ್ಲಿ ಖರ್ಚಾಗುತ್ತದೋ ಎಂದು ಅಗುಳು ಎಣಿಸಿ ತಿನ್ನುತ್ತಾರೆ. ಬೀದಿಯಲ್ಲಿ ಬಿದ್ದ ತರಗೆಲೆಗಳನ್ನು ಆಯ್ದು ಮನೆಯ ಹಂಡೆಯೊಲೆ ಉರಿಸುತ್ತಾರೆ. ಈಗ ಇನ್ನೂ ಸರಿಯೇ ಸರಿ.’ ಎಂದರು. ‘ಹೊಟ್ಟೆ ತುಂಬಾ ತಿನ್ನೋಕೆ ಇರದ ಐಶ್ವರ್ಯ ಇದ್ದರೆಷ್ಟು ಬಿಟ್ಟರೆಷ್ಟು? ಪಾಸ್ ಪುಸ್ತಕವನ್ನು ನೋಡಿದರೆ ಹೊಟ್ಟೆ ತುಂಬುವುದೇ?’ ಎಂದು ನಾನೂ ಒಗ್ಗರಣೆ ಹಾಕಿ ನಿಟ್ಟುಸಿರಿಟ್ಟು ಆಕೆಯನ್ನು ಬೀಳ್ಕೊಂಡೆ.

ಇದನ್ನು ಕೇಳುತ್ತಿದ್ದ ಕಾಸ್ಮೆಟಿಕ ಸರ್ಜನ್ ಒಬ್ಬರು ‘ಮೇಡಂ ಜನಕ್ಕೆ ಎಷ್ಟು ಆಸೆ, ದುರಾಸೆ ಮತ್ತು ಮೂಢನಂಬಿಕೆ ಎಲ್ಲವು ಕಲೆತುಬಿಟ್ಟಿದೆ. ಮೊನ್ನೆ ಮೊನ್ನೆ ಯಾರೋ ಕಳ್ಳ ಕಿವಿಯ ಓಲೆಯನ್ನು ಕಿತ್ತು ಓಡುವಾಗ ಆಕೆಯ ಕಿವಿಯ ತೂತು ಹರಿದು ರಕ್ತ ಧಾರಾಕಾರವಾಗಿ ಸುರಿಯುತ್ತಿತ್ತು. ಕೂಡಲೇ ನಮ್ಮಲ್ಲಿ ಬಂದು ಕಿವಿಯನ್ನು ಹೊಲೆಸಿಕೊಂಡರು. ಮನುಷ್ಯತ್ವ ಇರದ ಕಳ್ಳರು ಮೇಡಂ. ಕಿವಿ ಹೊಲೆಯುವುದು ಎಂದಾಗ ನಿಮಗೊಂದು ವಿಷಯ ಹೇಳಬೇಕು. ನಮ್ಮಲ್ಲಿ ಕಿವಿ ತೂತನ್ನು ಹೊಲಿಸಲು ಎಪ್ಪತ್ತು ಜನ ಬಂದರೆ ಅದರಲ್ಲಿ ಐವತ್ತು ಮಂದಿ ವಯೋವೃದ್ಧರೇ ಆಗಿರುತ್ತಾರೆ. ಚಿಕ್ಕ ಪುಟ್ಟವರು ಕಿವಿಗೆ ಪುಟ್ಟದು ಹಾಕಿಕೊಂಡರೂ ಆದೀತು ಇಲ್ಲದಿದ್ದರೆ ಹಾಕದಿದ್ದರೂ ಆದೀತು (ಹಣೆಗೆ ಇಡುವ ಹಾಗೆ) ಎಂಬ ಭಾವನೆ. ಆದರೆ ಮದುವೆಗೆ ನಿಂತ ಹೆಣ್ಣುಮಕ್ಕಳನ್ನು ತಂದೆ ತಾಯಿಯರು ಹಾಗೆ ಬಿಡುತ್ತಾರೆಯೇ? ಅದಕ್ಕೆ ಕಿವಿ ಹೊಲಿಸಲು ಕಳಿಸುತ್ತಾರೆ. ಅದರೆ ಈ ಮುದುಕಿಯರು ಹರಳಿನ ಓಲೆಯನ್ನು ಹಾಕಿಕೊಳ್ಳಬೇಕು ಎಂಬ ಆಸೆಯಿಂದ ಬರುತ್ತಾರೆ. ಆದರೆ ಒಂದು ಮುದುಕಿ ಆಸೆಯ ಜೊತೆಗೆ ಒಂದು ನಂಬಿಕೆಯ ಬಗ್ಗೆಯೂ ಹೇಳಿದರು. ಸತ್ತ ಮೇಲೆ ಹೂಳುವಾಗ ಕಿವಿಗೆ ಓಲೆ ಹಾಕದಿದ್ದರೆ ಮುಕ್ತಿ ಇಲ್ಲವಂತೆ, ಸ್ವರ್ಗಕ್ಕೆ ದಾರಿ ಇಲ್ಲವಂತೆ ಅದಕ್ಕೆ ನಾವು ಕಿವಿಯನ್ನು ಹೊಲಿಸಿಕೊಳ್ಳುವುದು ಎಂದರು’ ಎಂದು ಡಾಕ್ಟರ್ ಹೇಳಿದಾಗ ಚಿನ್ನದ ವಿಷಯ ಬದುಕಿದ್ದಾಗ ಮಾತ್ರವೇ ಕಾಡುವುದಿಲ್ಲ ಸತ್ತ ಮೇಲೂ ಕಾಡುತ್ತದೆಯೇ ಎನಿಸಿತು.

ಆ ಕ್ಷಣ ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಹುಡುಗನೊಬ್ಬನ ನೆನಪು ಒಡನೆಯೇ ಮೂಡಿತು. ಮಹಡಿಯ ಮೇಲೆ ಮಹಡಿಗಳನ್ನು ಕಟ್ಟಿಕೊಂಡು ಬಾಡಿಗೆಗೆ ಕೊಟ್ಟಿದ್ದರೂ, ಕೈತುಂಬಿ ತುಳುಕುವಷ್ಟು ಚಿನ್ನ ಕೊಂಡಿದ್ದರೂ, ಒಳ್ಳೆಯ ಕಾರಿದ್ದರೂ ಇನ್ನೂ ಬೇಕೆಂಬಾಸೆ, ಮತ್ತಷ್ಟು ಕೊಳ್ಳುವಾಸೆ. ಇನ್ನೊಂದೆರಡು ಸೈಟ್ ಕೊಳ್ಳಬೇಕು, ಇನ್ನೊಂದು ಮನೆ ಕಟ್ಟಬೇಕು. ಇನ್ನೂ ತುಂಬಾ ಚಿನ್ನ ತೆಗೆದುಕೊಳ್ಳಬೇಕು ಎನ್ನುತ್ತಿದ್ದ. ‘ಈ ದುರಾಸೆ ಎಂದೂ ಒಳ್ಳೆಯದಲ್ಲ. ಆಸೆ ಇರಬೇಕು ಸಾಧಿಸಲು. ಆದರೆ ಅತಿಯಾದ ಆಕಾಂಕ್ಷೆಗಳು ಬದುಕಿನ ದಾರಿಯನ್ನು ತಪ್ಪಿಸಿಬಿಡುತ್ತದೆ’ ಎಂದು ನಾನೇ ಎಷ್ಟೋ ಬಾರಿ ಹೇಳಿದ್ದಿದೆ. ‘ಅಕ್ಕಾ ನಾನು ಸತ್ತ ಮೇಲೆ ನನ್ನನ್ನು ಮಲಗಿಸಿದ ಗುಂಡಿಯೊಳಗೆ ಒಂದಿಷ್ಟು ಚಿನ್ನವನ್ನು ಹಾಕದಿದ್ದರೆ ನಾನು ಭೂತವಾಗಿಬಿಡುತ್ತೇನೆ. ನನಗೆ ಅಷ್ಟು ಇಷ್ಟ ಚಿನ್ನ ಎಂದರೆ’ ಎನ್ನುತ್ತಿದ್ದ. ‘ಪ್ರಕೃತಿ ಚಿನ್ನ ಮತ್ತು ಅನ್ನವನ್ನು ಒಂದೇ ತಕ್ಕಡಿಯ ಎರಡು ತಟ್ಟೆಗಳಲ್ಲಿ ಇಟ್ಟಿರುತ್ತದೆ. ಯಾವೊಂದು ಮೇಲೆ ತೂಗುತ್ತದೆಯೋ ಮತ್ತೊಂದು ಕೆಳಕ್ಕೆ ತೂಗುತ್ತದೆ. ಚಿನ್ನ ಹೆಚ್ಚಾದರೆ ಅನ್ನ ಕೊರತೆಯಾಗುತ್ತದೆ; ಅನ್ನ ಹೆಚ್ಚಾಗಿದ್ದರೆ ಚಿನ್ನದ ಕೊರತೆಯಾಗಿರುತ್ತದೆ. ಇದು ಸಾಮಾನ್ಯ ನಿಸರ್ಗದ ನಿಯಮ’ ಎಂದು ಅದೆಷ್ಟು ಬಾರಿ ಹೇಳಿದ್ದೆನೋ ನೆನಪಿಲ್ಲ. ಈಗೀಗ ಆ ಹುಡುಗ ಸದಾ ಸುಸ್ತು ಸುಸ್ತು ಎನ್ನುತ್ತಿದ್ದ. ಏಕೆಂದು ಕೇಳಲು ‘ಹೈ ಡಯಾಬಿಟಿಕ್. ಖುಷಿಯಾಗಿ ಅನ್ನ ತಿನ್ನುವ ಹಾಗಿಲ್ಲ. ದಿನಾ ಗೋಧಿಯೋ, ರಾಗಿಯೋ ಒಂದು. ಹೊಟ್ಟೆ ತುಂಬ ತಿನ್ನುವ ಹಾಗಿಲ್ಲ; ಬೇಕೆನಿಸಿದ್ದನ್ನು ತಿನ್ನಬೇಕೆಂದರೆ ಭಯ ಆಗುತ್ತೆ. ಏನು ಬದುಕೋ ಏನೋ? ಆರೋಗ್ಯ ಒಂದಿದ್ದರೆ ಸಾಕು ಅದೇ ನೆಮ್ಮದಿ. ಜೀವನ ಸಾಕಾಗಿದೆ ಅಕ್ಕಾ’ ಎಂದ. ‘ನಿನಗೆ ಚಿನ್ನ ಎಂದರೆ ಪ್ರಾಣ ಅಲ್ವಾ? ಅನ್ನ ತಿಂದರೆ ಡಯಾಬಿಟಿಸ್ ಜಾಸ್ತಿ ಆಗುತ್ತೆ ಚಿನ್ನ ತಿಂದರೆ ಏನೂ ಆಗುವುದಿಲ್ಲ ತಿನ್ನಪ್ಪಾ ಬೇಕಾದಷ್ಟಿದೆಯಲ್ಲ ಮನೆಯಲ್ಲಿ’ ಎಂದೆ. ಉತ್ತರ ಬರಲಿಲ್ಲ.

ನಿಸರ್ಗದಲ್ಲಿ ಎಲ್ಲವೂ ಸಮತೋಲದಲ್ಲಿ ಇರಬೇಕು. ಒಂದು ಹೆಚ್ಚಾದರೆ ಮತ್ತೊಂದು ಕಡಿಮೆಯಾಗುತ್ತದೆ.
ಆ ತಕ್ಕಡಿಯನ್ನು ತೂಗುವ ಕೈ ಎಂದೂ ಸೋಲುವುದಿಲ್ಲ

ಡಾ.ಶುಭಶ್ರೀಪ್ರಸಾದ್, ಮಂಡ್ಯ.

Copyright © All rights reserved Newsnap | Newsever by AF themes.
error: Content is protected !!