ನವೆಂಬರ್‌ 17-18 & 19ರಂದು ಬೆಂಗಳೂರು ಟೆಕ್‌ ಸಮಿಟ್‌ – 2021

Team Newsnap
2 Min Read

ರಾಜ್ಯ ಸರಕಾರ ಆಯೋಜಿಸುವ ಪ್ರತಿಷ್ಠಿತ ಬೆಂಗಳೂರು ಟೆಕ್‌ ಸಮಿಟ್‌-‌2021 (ಬಿಟಿಎಸ್) ನವೆಂಬರ್‌ 17-18 & 19ರಂದು ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಟೆಕ್‌ ಸಮಿಟ್‌ಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ವರ್ಷ ಈ ಸಮಿಟ್‌ಗೆ ʼನೆಕ್ಸ್ಟ್‌ ಇಸ್‌ ನೌʼ (Next is Now) ಎಂಬ ಟ್ಯಾಗ್‌ಲೈನ್‌ ಇತ್ತು. ಈ ವರ್ಷ ʼಡ್ರೈವ್‌ ಇನ್‌ ದಿ ನೆಕ್ಸ್ಟ್‌ʼ (Driving thr Next) ಎನ್ನುವ ಟ್ಯಾಗ್‌ಲೈನ್‌ ನಿಗದಿ ಮಾಡಲಾಗಿದೆ ಎಂದರು.

ಕೋವಿಡ್‌ ಕಾರಣಕ್ಕೆ ಈ ವರ್ಷವೂ ವರ್ಚುಯಲ್‌ ಮತ್ತು ಭೌತಿಕ ವೇದಿಕೆ ಒಳಗೊಂಡಂತೆ ಹೈಬ್ರಿಡ್‌ ಪದ್ಧತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು

ashwathnarayan
ಪ್ರಧಾನಿ ಮೋದಿ ಉದ್ಘಾಟನೆ

ಈ ಟೆಕ್‌ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸುವ ಉದ್ದೇಶ ಇದ್ದು ಅವರನ್ನು ಆಹ್ವಾನಿಸಲಾಗುವುದು. ಅದೇ ರೀತಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಅವರನ್ನು ಸಮಿಟ್‌ಗೆ ಆಹ್ವಾನಿಸಲು ನಿರ್ಧರಿಸಲಾಗಿದೆ.

ತಂತ್ರಜ್ಞಾನ ಮತ್ತು ಹೆಲ್ತ್‌ಕೇರ್‌ ಕ್ಷೇತ್ರದ ಪ್ರಮುಖ ಕಂಪನಿಗಳ ಮುಖ್ಯಸ್ಥರನ್ನು ಕರೆಯುವ ಉದ್ದೇಶ ಇದೆ ಎಂದರು.

ಟೆಕ್‌ ಸಮಿಟ್‌ಗೆ ಪೂರ್ವಭಾವಿ ಯಾಗಿ ಬಿಯಾಂಡ್‌ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಟೆಕ್‌ ಸಮಿಟ್‌ಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳನ್ನೂ ದೊಡ್ಡ ಪ್ರಮಾಣದಲ್ಲೇ ನಡೆಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಹಿಂದಿನ ಶೃಂಗದಲ್ಲಿ ಗ್ಲೋಬಲ್‌ ಅಲೆಯನ್ಸ್‌ ಒಕ್ಕೂಟಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿ ಭಾರತೀಯ ಹೂಡಿಕೆದಾರರ ಮೈತ್ರಿಕೂಟಕ್ಕೆ ಮಹತ್ವ ಕೊಡಲಾಗುತ್ತಿದೆ. ಈ ಮೂಲಕ ವಿವಿಧ ರಾಜ್ಯಗಳು ಹಾಗೂ ಎತ್ತರದ ಸಾಧನೆ ಮಾಡಿರುವ ಖಾಸಗಿ ಕಂಪನಿ, ವ್ಯಕ್ತಿಗಳು ಭಾಗಿಯಾಗವಂತೆ ಮಾಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.

ಈ ಮೂರು ನಗರಗಳಲ್ಲಿ ನಡೆಯಲಿರುವ ಸಭೆಗಳಲ್ಲಿ ವರ್ಚುಯಲ್‌ ವೇದಿಕೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಐಟಿ ಸಚಿವ ರವಿಶಂಕರ್‌ ಪ್ರಸಾದ್‌, ಆರೋಗ್ಯ ಸಚಿವ ಡಾ.ಹರ್ಷವರ್ಧನ್‌, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ. ಜತೆಗೆ, ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.‌ಯಡಿಯೂರಪ್ಪ ಅವರು ಪಾಲ್ಗೊಳ್ಳುವರು ಎಂದು ಡಿಸಿಎಂ ಮಾಹಿತಿ ನೀಡಿದರು.

Share This Article
Leave a comment