ಮೂಲಸೌಲಭ್ಯ ಅಭಿವೃದ್ಧಿಗೆ 100 ಟ್ರಿಲಿಯನ್ ಡಾಲರ್ ಹೂಡಿಕೆ: ಮೋದಿ .
ಭಾರತದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ 100 ಟ್ರಿಲಿಯನ್ ಡಾಲರ್‍ನಷ್ಟು ಅಗಾಧ ಮೊತ್ತವನ್ನು ಹೂಡಲಾಗುವುದು. ದೇಶದಲ್ಲಿ ಬಂಡವಾಳ ಹೂಡಿಕೆದಾರರ ಪಾಲಿಗೆ ಹಿಂದಿನ ಕೆಂಪುಪಟ್ಟಿಯ ಸಮಸ್ಯೆ ಕೊನೆಗೊಂಡಿದ್ದು, ಈಗ ರತ್ನಗಂಬಳಿಯ ಸ್ವಾಗತವಿದೆ. ಅದರಲ್ಲೂ ಬೆಂಗಳೂರು ತಂತ್ರಜ್ಞಾನ, ನಾವೀನ್ಯತೆ ಮತ್ತು ಸಮರ್ಥ ನಾಯಕತ್ವದ ತವರಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಜೈಲಿನಲ್ಲಿರುವ ಮುರುಘಾ ಸ್ವಾಮೀಜಿಗೆ ಬಿಗ್ ಶಾಕ್: ಮುರುಘಾ ಮಠ ಸರ್ಕಾರ ಅಧೀನಕ್ಕೆ
25ನೇ ವರ್ಷದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಬುಧವಾರ ಉದ್ದೇಶಿಸಿ ವರ್ಚುಯಲ್ ಅಗಿ ಮಾತನಾಡಿದ ಮೋದಿ ಅವರು, ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ಅದರಲ್ಲೂ ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ ಎಂದರು. ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್‌ಗಳ ಒಕ್ಕೂಟದ ಸಹಯೋಗದಲ್ಲಿ ಈ ಸಮಾವೇಶವನ್ನು ಏರ್ಪಡಿಸಿದೆ.
ಹೆಲ್ತ್ ಟೆಕ್, ಫಿನ್ ಟೆಕ್, ಎಡುಟೆಕ್ ಸೇರಿದಂತೆ ಎಲ್ಲ ರಂಗಗಳನ್ನೂ ಭಾರತೀಯರು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಯುವಶಕ್ತಿಯಿಂದ ಕೂಡಿರುವ ಸಮಕಾಲೀನ ಜಗತ್ತಿನಲ್ಲಿ ಪ್ರತಿಭೆಯ ಜಾಗತೀಕರಣ ನಡೆಯುತ್ತಿದೆ. ಭಾರತದಲ್ಲಿ 81 ಸಾವಿರ ನವೋದ್ಯಮಗಳಿದ್ದು, ಯೂನಿಕಾರ್ನ್‌ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್ ಆಗಿದೆ. ಜತೆಗೆ, ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು ಕಳೆದ ಎಂಟು ವರ್ಷಗಳಲ್ಲಿ 40 ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದೆ ಎಂದು ಅವರು ನುಡಿದರು.
ತಂತ್ರಜ್ಞಾನದ ಮೂಲಕ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣಗಳನ್ನು ಸಾಧಿಸಲಾಗುತ್ತಿದೆ. ಜತೆಗೆ, ಭ್ರಷ್ಟಾಚಾರಕ್ಕೂ ಇದು ತೆರೆ ಎಳೆದಿದೆ. ಭಾರತವಂತೂ ಈಗ ಮಾಹಿತಿ ಸೂಪರ್ ಹೈವೇ ಆಗಿದೆ. ಕೊರೋನಾ ಪಿಡುಗಿನ ವಿರುದ್ಧ ಹೋರಾಟ, ಶಿಕ್ಷಣ, ನೇರ ನಗದು ವರ್ಗಾವಣೆ, ಜನ್‌ಧನ್, ಆಧಾರ್, ಇ-ಮಾರ್ಕೆಟ್ ಎಲ್ಲವನ್ನೂ ಭಾರತವು ತಂತ್ರಜ್ಞಾನದ ಸಮರ್ಥ ಬಳಕೆಯ ಮೂಲಕ ಯಶಸ್ವಿಯಾಗಿ ಕೈಗೊಂಡಿದೆ ಎಂದು ಮೋದಿ ವಿವರಿಸಿದರು.
ಹೂಡಿಕೆದಾರರ ನಂಬಿಕೆ ಮತ್ತು ದೇಶದಲ್ಲಿರುವ ತಂತ್ರಜ್ಞಾನದ ಶಕ್ತಿ ಎರಡೂ ಸೇರಿದರೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಾಗಲಿದೆ. ಇದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲಕರವಾಗಿದ್ದು, ದೊಡ್ಡ ಗ್ರಾಹಕರನ್ನು ಸೃಷ್ಟಿಸಿದೆ. ಈಗ ಗ್ರಾಮೀಣ ಭಾಗಗಳಲ್ಲಿ ಬ್ರಾಡ್‌ಬ್ಯಾಂಡ್ ಕ್ರಾಂತಿ ನಡೆಯುತ್ತಿದ್ದು, ಮೊಬೈಲ್‌ನ ವ್ಯಾಪಕ ಬಳಕೆಯಿಂದಾಗಿ ಪ್ರಪಂಚವೇ ಬೆರಗಿನಿಂದ ನೋಡುತ್ತಿರುವಂಥ ಡಿಜಿಟಲ್ ಆರ್ಥಿಕತೆ ನಮ್ಮಲ್ಲಿ ರೂಪುಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.
ತಂತ್ರಜ್ಞಾನದ ಅಳವಡಿಕೆ ಮೂಲಕ ನಾವು 200 ಕೋಟಿಗೂ ಹೆಚ್ಚು ಕೊರೋನಾ ಲಸಿಕೆ ನೀಡಿದ್ದೇವೆ. ಹಾಗೆಯೇ 200 ದಶಲಕ್ಷ ಕುಟುಂಬಗಳ 600 ದಶಲಕ್ಷ ಜನರಿಗೆ ಆಯುಷ್ಮಾನ್ ಭಾರತ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ನಮ್ಮಲ್ಲಿ ಸಿಗುತ್ತಿರುವಷ್ಟು ಅಗ್ಗದ ದರದಲ್ಲಿ ಡೇಟಾ ಎಲ್ಲೂ ಸಿಗುತ್ತಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಭಾರೀ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಆಸ್ಟ್ರೆಲಿಯಾದ ಸಹಾಯಕ ವಿದೇಶಾಂಗ ಸಚಿವ ಟಿಮ್ ಪ್ಯಾಟ್ಸ್, ಫಿನ್ಲೆಂಡ್‌ನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ಕೊನೆನ್, ಅರಬ್ ಸಂಯುಕ್ತ ಸಂಸ್ಥಾನದ ಸಚಿವ ಒಮರ್ ಬಿನ್ ಸುಲ್ತಾನ್, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್‌ಟಿಪಿಐನ ಉನ್ನತ ಪ್ರತಿನಿಧಿಗಳಾದ ಅರವಿಂದ್‌ಕುಮಾರ್ ಮತ್ತು ಶೈಲೇಂದ್ರ ತ್ಯಾಗಿ, ವಿಜಯ್ ಚಂದ್ರು, ಜಿತೇಂದ್ರ ಛಡ್ಡಾ, ಕಿಂಡ್ರೆಲ್ ಸಂಸ್ಥಾಪಕ ಮಾರ್ಟಿನ್ ಶ್ರೋಟರ್, ಉದ್ಯಮಿ ನವೀನ್ ತೆವಾರಿ ಉಪಸ್ಥಿತರಿದ್ದರು.
ಉಳಿದಂತೆ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ ವಿ ನಾಯ್ಡುಇದ್ದರು.
- ಬೆಳ್ಳೂರು ಸಮೀಪ ಸಾರಿಗೆ ಬಸ್ ಗೆ ಕಾರು ಢಿಕ್ಕಿ : ನಾಲ್ವರ ಸಾವು
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ