ಮುರುಘಾ ಮಠ ಶಿವಮೂರ್ತಿ ಗೆ ಜಾಮೀನು ಮಂಜೂರು : ಆದರೂ ಬಿಡುಗಡೆ ಅಸಾಧ್ಯ

Team Newsnap
1 Min Read

ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪೋಕ್ಸೋ ಕೇಸ್‌ನಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಶಿವಮೂರ್ತಿ ಚಿತ್ರದುರ್ಗದ ಮುರುಘಾ ಮಠ ಪ್ರವೇಶಿಸುವಂತಿಲ್ಲ. ಅವರ ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಇಬ್ಬರಿಂದ ಶ್ಯೂರಿಟಿ ಒದಗಿಸಬೇಕು, ಕೋರ್ಟ್‌ ವಿಚಾರಣೆಗೆ‌ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಹಾಜರಾಗಬೇಕು. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ.

ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಮಠ ಶಿವಮೂರ್ತಿ ಗೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿದೆ. ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿದೆ. ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೆ ಮಾತ್ರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಪ್ರಕರಣ ಹಿನ್ನಲೆ

 ಚಿತ್ರದುರ್ಗದ ಬೃಹನ್ಮಠದ ಅಧೀನದಲ್ಲಿದ್ದ ಹಾಸ್ಟೆಲ್‌ ವಿದ್ಯಾರ್ಥಿನಿಯರ ಮೇಲೆ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಲವು ವಿದ್ಯಾರ್ಥಿನಿಯರು ಆರೋಪ ಮಾಡಿದ್ದರು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೂಲಕ ವಿದ್ಯಾರ್ಥಿನಿಯರು ಮೈಸೂರಿನ ಠಾಣೆ ಮೆಟ್ಟಿಲೇರಿದ್ದರು.

ವಿದ್ಯಾರ್ಥಿನಿಯರ ದೂರಿನ ಮೇರೆಗೆ ಮುರುಘಾ ಮಠದ ಶಿವಮೂರ್ತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಳಿಕ ಆ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿತ್ತು. ಬಳಿಕ ʼಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆʼಯಡಿ ಪೊಲೀಸರು ಶಿವಮೂರ್ತಿಯನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದರು.

Share This Article
Leave a comment