December 23, 2024

Newsnap Kannada

The World at your finger tips!

election,politics,siddu

ಅತ್ತಿಬೆಲೆ ಅಗ್ನಿ ದುರಂತ: ಸಿಐಡಿ ತನಿಖೆಗೆ ಆದೇಶ – ಸಿಎಂ

Spread the love
  • ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರ;

ಸರ್ಕಾರದಿಂದ ಗಾಯಾಳುಗಳ ಚಿಕಿತ್ಸಾ ವೆಚ್ಚ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಅತ್ತಿಬೆಲೆ ಅಗ್ನಿದುರಂತದ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳನ್ನು ನೀಡಲಾಗುವುದು.ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅತ್ತಿಬೆಲೆಯಲ್ಲಿ ನಡೆದ ಅಗ್ನಿದುರಂತದ ಘಟನಾ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ

ಅಕ್ಟೋಬರ್ 7 ರಂದು ಸುಮಾರು ಮಧ್ಯಾಹ್ನ 3.15 ರಿಂದ 3.30 ಗಂಟೆ ಸಮಯದೊಳಗೆ ಬೆಂಕಿ ಅನಾಹುತ ನಡೆದಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ.

ರಾಮುಸ್ವಾಮಿರೆಡ್ಡಿ ಎಂಬುವರು ಪರವಾನಗಿ ಪಡೆದು ಪಟಾಕಿ ಮಾರಾಟದ ವ್ಯವಹಾರ ಮಾಡುತ್ತಿದ್ದರು. ನಿನ್ನೆ 3.00 ಗಂಟೆ ಸಮಯದಲ್ಲಿ ತಮಿಳುನಾಡಿನಿಂದ ಟ್ರಕ್ ಗಳಲ್ಲಿ ಪಟಾಕಿಗಳು ಬಂದಿದ್ದು, ಬೆಂಕಿ ಹೇಗೆ ಪಟಾಕಿಗಳ ಮೇಲೆ ಬಿತ್ತು ಎನ್ನುವಿ ನಿಖರ ಕಾರಣ ತಿಳಿದುಬಂದಿಲ್ಲ. ಅಧಿಕಾರಿಗಳು ಇಲ್ಲಿ ಪರಿಶೀಲಿಸಿದ ಮೇಲೆ, ಸ್ಪೋಟಕಗಳ ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಕಂಡುಬಂದಿದೆ ಎಂದರು.

ಪರವಾನಾಗಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ದಿ.13.9.2023 ರಂದು ನವೀಕರಿಸಲಾಗಿದೆ. ದಿ:31.10.2028 ರವರೆಗೆ ಜಾರಿಯಲ್ಲಿದೆ. ಮತ್ತೊಂದು ಪರವಾನಗಿ 18.1.2021 ರಂದು 28.1.2026 ರವರೆಗೆ ಜಾರಿಯಲ್ಲಿರಲಿದೆ. ಜಯಮ್ಮ, ಕೋಂ ದಿ. ಸಿದ್ದಾರೆಡ್ಡಿ, ಅನಿಲ್ ರೆಡ್ಡಿ ಬಿನ್ ಸಿದ್ದಾರೆಡ್ಡಿ ಎಂಬುವವರು ಈ ಸ್ಥಳದ ಮಾಲೀಕರು ಎಂದು ವಿವರಿಸಿದರು.

ನಿರ್ಲಕ್ಷ್ಯ ಎದ್ದುಕಾಣುತ್ತಿದೆ :

ಗೋದಾಮಿನ ಸ್ಥಳ ಬಹಳ ಕಿರಿದಾಗಿದ್ದು, ಇದರಲ್ಲಿ 14 ಜನರು ಮೃತಪಟ್ಟಿದ್ದಾರೆ. ಎಲ್ಲರೂ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿಯವರು. ಅವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ರಜಾ ಸಮಯದಲ್ಲಿ ಓದಿಗಾಗಿ ಹಣ ಸಂಪಾದನೆಗಾಗಿ ಬಂದವರು. ಒಬ್ಬ ಮ್ಯಾನೇಜರ್ ನ್ನು ಹೊರತುಪಡಿಸಿ ಯಾರೂ ಖಾಯಂ ನೌಕರರಿಲ್ಲ. ಸ್ಫೋಟಕಗಳಿಗೆ ಅಗತ್ಯವಾದ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ಗೋದಾಮು ಅಧಿಕೃತವೋ ಅಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಹಿಂಭಾಗದಲ್ಲಿ 200 ಅಡಿಗಳವರೆಗೂ ಗೋದಾಮು ಇದೆ. ಎಲ್ಲೂ ಕೂಡ ಅಗ್ನಿ ಶಾಮಕಗಳನ್ನು ಅಳವಡಿಸಿಲ್ಲ. ಒಟ್ಟಾರೆ ಮೇಲ್ನೋಟಕ್ಕೆ ಪರವಾನಗಿ ಹೊಂದಿದವರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದರು.

ದೊಡ್ಡ ದುರಂತ :

ಘಟನೆಯ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. 14 ಜನ ಮೃತಪಟ್ಟಿರುವುದು ದೊಡ್ಡ ದುರಂತ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರೆಲ್ಲರ ಕುಟುಂಬ ದವರಿಗೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ರಾಮುಸ್ವಾಮಿರೆಡ್ಡಿ , ನವೀನ್, ಅನಿಲ್ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ. .285, 286 ,337, 338, 437, 304 ಪರಿಚ್ಛೇಧದಡಿ ಎಫ್ ಐ.ಆರ್ ಕೂಡ ದಾಖಲಾಗಿದೆ. ಅವರ ಮೇಲೆ ತನಿಖೆ ಮಾಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸೂಕ್ತ ಪರಿಶೀಲನೆ ಅಗತ್ಯ :

ಜಿಲ್ಲಾಧಿಕಾರಿ ಗಳನ್ನು ವಿಚಾರಿಸಿದಾಗ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ನಿರಾಕ್ಷೇಪಣಾ ಪತ್ರ ನೀಡಿದ್ದರು ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಗಳು ಖುದ್ದಾಗಿ ಭೇಟಿ ನೀಡಬೇಕಾಗಿತ್ತು. ನಿರಾಕ್ಷೇಪಣಾ ಪತ್ರ ನೀಡಿದವರು ಸ್ಫೋಟಕಗಳ ಕಾಯ್ದೆಯಲ್ಲಿನ ಅಗತ್ಯಗಳನ್ನು ನೋಡಿ ಕೊಡಬೇಕಿತ್ತು. ಏಕೆಂದರೆ ಪರವಾನಗಿಯನ್ನು ಸ್ಫೋಟಕಗಳ ಕಾಯ್ದೆಯಡಿಯಲ್ಲಿ ನೀಡಲಾಗಿದೆ. ಜಿಲ್ಲಾಧಿಕಾರಿಗಳೂ ಕೂಡ ಸ್ಥಳ ಪರಿಶೀಲನೆ ಮಾಡಿ ನೀಡಬೇಕಿತ್ತು. ಈ ಬಗ್ಗೆ ಸೂಕ್ತ ಪರಿಶೀಲನೆಯಾಗಬೇಕು ಎಂದರು.

ಸಂಗ್ರಹ ಮಾಡಲು ಪರವಾನಗಿ ಇರಲಿಲ್ಲ 1000 ಕೆಜಿ ಯನ್ನು ಮಾರಾಟ ಮಾಡಲು ಪರವಾನಗಿ ಇದ್ದು, ಬಹುಶಃ ಸಂಗ್ರಹ ಮಾಡಲು ಪರವಾನಗಿ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜ್ಯದಲ್ಲಿ 6 ಮಂದಿ DySP ಗಳ ವರ್ಗಾವಣೆ

ಚರ್ಚೆಯ ನಂತರ ಮುನ್ನೆಚ್ಚರಿಕಾ ಕ್ರಮ :

ದೀಪಾವಳಿ ಹಬ್ಬ ಹತ್ತಿರವಿರುವುದರಿಂದ ಮುಂದೆ ಅಗತ್ಯ ಕ್ರಮಗಳನ್ನು ಚರ್ಚೆ ಮಾಡಿ ಕೈಗೊಳ್ಳಲಾಗುವುದು. ಈಗೆ ಈ ಅನಾಹುತವಾಗಿರುವ ಬಗ್ಗೆ ತನಿಖೆ ಯಾಗುತ್ತದೆ ಎಂದರು. ತಮಿಳುನಾಡಿನ ಆರೋಗ್ಯ ಸಚಿವರೂ ಆಗಮಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರೂ ಕೂಡ ತಲಾ 3 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ ಎಂದರು.

Copyright © All rights reserved Newsnap | Newsever by AF themes.
error: Content is protected !!