December 23, 2024

Newsnap Kannada

The World at your finger tips!

mandya,rain,damage

Ashlesha rains: Huge disturbance in districts including Mandya

ಆಶ್ಲೇಷ ಮಳೆಯ ಅಬ್ಬರ : ಮಂಡ್ಯ ಸೇರಿದಂತೆ ಜಿಲ್ಲೆಗಳಲ್ಲಿ ಭಾರಿ ಅವಾಂತರ

Spread the love

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆಯ ಅಬ್ಬರ ಜೋರಾಗಿದೆ. ವರುಣನ ಆರ್ಭಟಕ್ಕೆ ಮಂಡ್ಯ, ತುಮಕೂರು, ಚಾಮರಾಜನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಅವಾಂತರಗಳೇ ಸೃಷ್ಟಿಯಾಗಿವೆ. ಅಬ್ಬರಿಸಿದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಊರುಗಳೇ ಮುಳುಗಡೆಯಾಗಿಬಿಟ್ಟಿವೆ.

ರಾಜ್ಯದಲ್ಲಿ ವರುಣ ಮತ್ತೆ ಅಬ್ಬರಿಸೋಕೆ ಶುರು ಮಾಡಿದ್ದಾನೆ. ಕರಾವಳಿ, ಮಲೆನಾಡು ಜೊತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ನದಿಗಳು ತುಂಬಿ ಹರಿಯುತ್ತಿವೆ. ಹಳ್ಳಕೊಳ್ಳಗಳು ಭೋರ್ಗರೆದು ಹರಿಯುತ್ತಿವೆ. ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ರೈತರು ಬೆಳೆದ ಬೆಳೆಗಳು ಕೊಚ್ಚಿ ಹೋಗುತ್ತಿವೆ. ಗುಡ್ಡಗಾಡಿನ ಮಂದಿಗೆ ಭೂಕುಸಿತದ ಭೂತ ಮತ್ತೆ ಬೆನ್ನುಬಿದ್ದಿದೆ.ಇದನ್ನು ಓದಿ –18ನೇ ವಯಸ್ಸಿನಲ್ಲಿ ಮೋಹಕತಾರೆ ರಮ್ಯಾ ಹೇಗಿದ್ದರು ನೋಡಿ

ರಣ ಭೀಕರ ಮಳೆಗೆ ಮಂಡ್ಯ ಜಿಲ್ಲೆಯಲ್ಲೂ ನೆರೆಪರಿಸ್ಥಿತಿ ಎದುರಾಗಿದೆ. ಅಲ್ಲದೇ ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಮದ್ದೂರು ಪಟ್ಟಣಕ್ಕೆ‌ ಜಲ ದಿಗ್ಬಂಧನವಾಗಿದೆ. ಮದ್ದೂರಿನ ಕೊಲ್ಲಿ ಸರ್ಕಲ್ ಬಡಾವಣೆಗೆ ನೀರು ನುಗ್ಗಿದ್ದು, ಮನೆ, ಅಂಗಡಿ ಮುಂಗಟ್ಟುಗಳೆಲ್ಲಾ ಜಲಾವೃತವಾಗಿವೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಸೊಳ್ಳೆಪುರ- ಕಿಕ್ಕೇರಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹಳ್ಳತುಂಬಿ ಹರಿಯುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿದ್ದು, ಜನರು ಓಡಾಡಲು ಹರಸಾಹಸಪಡುವಂತಾಗಿದೆ.

ತುಮಕೂರು ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜಯಮಂಗಲಿ ಹಾಗೂ ಸುವರ್ಣಮುಖಿ ನದಿ ಮೈ ತುಂಬಿ ಹರಿಯುತ್ತಿವೆ. ಪರಿಣಾಮ ಕೊರಟಗೆರೆ ತಾಲೂಕಿನ ಹಲವು ಗ್ರಾಮಗಳಿಗೆ ನದಿ ನೀರು ನುಗ್ಗಿ ಗ್ರಾಮದ ಜನರು ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಗಿದೆ. ಭಾರೀ ಮಳೆಯಿಂದ ತುಮಕೂರಿನ ಹೊಸಳಯ್ಯನ ತೋಟ ಮತ್ತು ಭಾರತಿನಗರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ಕ – ತಂಗಿ ಎಂಬ ಕೆರೆ ನೀರು ಬಂದು ಮನೆಗಳೆಲ್ಲಾ ಜಲಾವೃತವಾಗಿದೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜ್ಯೋತಿ ಗಣೇಶ್‌ಗೆ ಸ್ಥಳೀಯರು ಘೇರಾವ್​ ಹಾಕಿದರು.

ಚಾಮರಾಜನಗರದಲ್ಲಿ ನಿರಂತರ ಮಳೆಗೆ ಹನೂರು ತಾಲೂಕು ಕೊರಮನಕತ್ತರಿ ಬಳಿ ಜೆ. ವಿಲೇಜ್ ಹಳ್ಳದ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕೊಳ್ಳೇಗಾಲ-ಸತ್ಯಮಂಗಲ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಲವು ದಿನಗಳಿಂದ ಸೇತುವೆ ಶಿಥಿಲಗೊಂಡಿದೆ. ಆದ್ರೆ ಸೇತುವೆ ದುರಸ್ಥಿಗೆ ಯಾವ ಅಧಿಕಾರಿಗಳು ಮುಂದಾಗುತ್ತಿಲ್ಲ ಅಂತಾ ಸ್ಥಳೀಯರು
ಆಕ್ರೋಶ ಹೊರಹಾಕುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!