ನ್ಯೂಸ್ ಸ್ನ್ಯಾಪ್
ಮಂಡ್ಯ
ಕೇವಲ ಹುಂಡಿ ಹಣಕ್ಕಾಗಿ ಮೂವರು ಅರ್ಚಕರು ಕಂ ಸೆಕ್ಯೂರಿಟಿಗಳನ್ನು ಭೀಕರವಾಗಿ ಕೊಲೆ ಮಾಡಿದ ಘಟನೆಯ ಹಿಂದೆ ಒಂದು ಕರುಣಾಜನಕ ಸ್ಟೋರಿಯೂ ಇದೆ. ಕೊಲೆಯಾದ ಮೂವರ ಪೈಕಿ ಒಬ್ಬನಿಗೆ ಮಾತ್ರ ಮದುವೆಯಾಗಿರಲಿಲ್ಲ. ಉಳಿದಿಬ್ಬರಿಗೆ ಮದುವೆಯಾಗಿ ಹೆಂಡತಿ, ಪುಟ್ಟ ಮಕ್ಕಳಿದ್ದಾರೆ. ದೇವಸ್ಥಾನದ ಅರ್ಚಕರು ಹಾಗೂ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಮೂವರು ಕುಟುಂಬ ಈಗ ಅನಾಥವಾಗಿದೆ. ಯಾವುದೇ ತಪ್ಪು ಮಾಡದೇ ಇದ್ದರೂ ನಿದ್ದೆಯಲ್ಲಿದ್ದ ಇವರುಗಳನ್ನು ಭೀಕರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು ಕುಟುಂಬಗಳಿಗೆ ಆಘಾತ ತಂದು ಒಡ್ಡಿದ್ದಾರೆ.
ದೋಚಿದ್ದು 12 ಲಕ್ಷ ಹಣ ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಅರಕೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಮಲಗಿದ್ದ ಗಣೇಶ್, ಪ್ರಕಾಶ್ ಹಾಗೂ ಆನಂದ ಅವರನ್ನು ಗುರುವಾರದ ಮಧ್ಯ ರಾತ್ರಿಯ ನಂತರ ಮಾರಾಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿ, ಹುಂಡಿಯನ್ನು ದುಷ್ಕರ್ಮಿಗಳು ಕದ್ದು ತೆಗೆದುಕೊಂಡು ಹೋಗಿದ್ದಾರೆ. ಸುಮಾರು 8 ತಿಂಗಳಿನಿಂದ ಭರ್ತಿಯಾಗಿ ತುಂಬಿದ್ದ ಹುಂಡಿಯಲ್ಲಿ 12 ರಿಂದ ಲಕ್ಷ ರು ಹಣ ಇತ್ತು ಎಂದು ಹೇಳಲಾಗಿದೆ. ಸುಮಾರು 18 ಕೆ ಜಿ ಗೂ ಹೆಚ್ಚಿದ್ದ ಬೆಳ್ಳಿಯ ಆಭರಣಗಳನ್ನು ತೆಗೆದುಕೊಂಡು ಹೋಗಿಲ್ಲ. ಅಲ್ಪ ಪ್ರಮಾಣದಲ್ಲಿದ್ದ ಚಿನ್ನಾಭರಣವನ್ನೂ ಮುಟ್ಟದೇ ಕೇವಲ ಹುಂಡಿಯನ್ನು ಮಾತ್ರ ಕದ್ದಿದ್ದಾರೆ.
ಯಜಮಾನರಿಲ್ಲದೇ ಅನಾಥವಾದ ಕುಟುಂಬಗಳು
ಈ ಮೂವರು ಅರ್ಚಕರು ಗುತ್ತಲು ಬಡಾವಣೆಯ ನಿವಾಸಿಗಳು. ಗಣೇಶನಿಗೆ ಪತ್ನಿ ಹಾಗೂ ಒಂದು ಹೆಣ್ಣು ಮಗುವಿದೆ. ಪ್ರಕಾಶ್ ನಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. 40 ವರ್ಷ ಆನಂದ್ ಮಾತ್ರ ಮದುವೆಯಾಗಿರಲಿಲ್ಲ. ಹಗಲು ವೇಳೆಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರುಗಳು, ರಾತ್ರಿ ವೇಳೆ ದೇವಸ್ಥಾನ ಕಾವಲುಗಾರರಾಗಿಯೂ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 12.30 ರ ವೇಳೆಗೆ ಪೊಲೀಸರು ಬೀಟ್ ಮಾಡಿಕೊಂಡು ದೇವಸ್ಥಾನದಲ್ಲಿ ಇದ್ದ ಪಾಯಿಂಟ್ ಪುಸ್ತಕಕ್ಕೆ ಸಹಿ ಹಾಕಿ ಹೋದ ನಂತರ, ಈ ದುಷ್ಕೃತ್ಯ ಎಸಗಿದ್ದಾರೆಂದು ಪೊಲೀಸ್ ಮೂಲಗಳು ಹೇಳಿವೆ.
ಹುಂಡಿ ಹಣ ಎಣಿಕೆ ಮಾಡಲು ಸಲಹೆ
ದೇವಸ್ಥಾನದ ಹುಂಡಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ. ಎಣಿಕೆ ಮಾಡುವಂತೆ ಪೊಲೀಸರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಕಳೆದ 8 ತಿಂಗಳಿನಿಂದಲೂ ಹಣ ಎಣಿಕೆ ಮಾಡಿರಲಿಲ್ಲ. ದೇವಸ್ಥಾನದ ಆವರಣದಲ್ಲಿದ್ದ ಇದ್ದ ಸಿಸಿಟಿವಿ ಕೂಡ ಸ್ಥಗಿತಗೊಂಡಿತ್ತು. ಈ ಎಲ್ಲಾ ಸಂಗತಿತಿಳಿದುಕೊಂಡವರೇ ಹುಂಡಿಯನ್ನು ಕದ್ದು ಹಣ ತೆಗೆದುಕೊಂಡು ಹೋಗಿದ್ದಾರೆ. ತಾವು ಹುಂಡಿ ಕದಿಯುವುದಕ್ಕೆ ಮೂವರು ಕಾವಲುಗಾರರು ಪ್ರತಿರೋಧ ವ್ಯಕ್ತಪಡಿಸಬಹುದು ಎನ್ನುವ ಕಾರಣಕ್ಕಾಗಿ ಮೂವರನ್ನು ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ. ದೇವಸ್ಥಾನದ ಎಲ್ಲಾ ಮಾಹಿತಿಗಳನ್ನು ಬಲ್ಲವರೇ 8 ರಿಂದ 10 ಮಂದಿ ಸೇರಿ ಇಂತಹ ಕೃತ್ಯ ಎಸಗಿರಬಹುದು ಎಂದು
ಪೊಲೀಸರು ಲೆಕ್ಕಾಚಾರ ಹಾಕಿದ್ದಾರೆ.
5 ಲಕ್ಷ ರು ಪರಿಹಾರ
ಮಂಡ್ಯದ ಅರಕೇಶ್ವರ ದೇವಸ್ಥಾನದ ಮೂವರು ಅರ್ಚಕರನ್ನು ಭೀಕರವಾಗಿ ಕೊಲೆಗೈದ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೃತಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ನೀಡಿದ್ದಾರೆ. ಅತ್ಯಂತ ಕಷ್ಟದ ಸ್ಥಿತಿಯಲ್ಲಿರುವ ಈ ಮೂವರು ಬಡ ಕುಟುಂಬಗಳ ಸದಸ್ಯರಿಗೆ ಇಂತಹ ನೆರವು ಅಗತ್ಯವಾಗಿತ್ತು ಎನ್ನಲಾಗಿದೆ.
ಮಂಡ್ಯ ಜಿಲ್ಲಾ ಮಂತ್ರಿ ನಾರಾಯಣ ಗೌಡ ಅರಕೇಶ್ವರ ಸ್ಬಾಮಿ ದೇವಸ್ಥಾನ ಕ್ಕೆ ಭೇಟಿ ಮಾಹಿತಿ ಪಡೆದುಕೊಂಡರು
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ