December 22, 2024

Newsnap Kannada

The World at your finger tips!

leelavathi

ಮತ್ತೊಬ್ಬರ ಚಾರಿತ್ರ್ಯ ಪ್ರಶ್ನಿಸುವವರೆಲ್ಲಾ ಸಾಚಾಗಳಾ…?

Spread the love
HIRIYURU PRAKASH
ಹಿರಿಯೂರು ಪ್ರಕಾಶ್.

ಯಾರಾದ್ರೂ ಒಬ್ರು ತೀರಿಕೊಂಡಾಗ, ಅವರ ಹಿನ್ನೆಲೆ‌ ಮುನ್ನೆಲೆಗಳ ಬಗೆಗೆ ಅಥವಾ ಅವರ ವೈಯಕ್ತಿಕ ವಿಚಾರಗಳ ಬಗೆಗೆ ಅನಗತ್ಯ ಚರ್ಚೆ ಮಾಡದೇ, ಸಮಾಜಕ್ಕೆ ಅವರ ಕೊಡುಗೆಯನ್ನು ಮಾತ್ರ ಸ್ಮರಿಸಿ‌ ಸಹೃದಯತೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವುದಿದೆಯಲ್ಲಾ….ಅದು ಹೊಟ್ಟೆಗೆ ಅನ್ನ‌ ತಿನ್ನುವವರು ಹಾಗೂ ಯಃಕಿಂಚಿತ್ ಸಂಸ್ಕಾರ ಉಳಿಸಿಕೊಂಡಿರೋರು ಮಾಡುವ ಮೊದಲ ಕೆಲಸ.

ಮೃತರ ಶರೀರಕ್ಕೆ ಅಂತಿಮ‌ ವಿಧಿ‌ವಿಧಾನಗಳು ಮುಗಿದು ಅವರ ಕುಟುಂಬದವರಿಗೆ ಆ ನೋವಿನಿಂದ ಹೊರಬರುವ ಕಿಂಚಿತ್ ಶಕ್ತಿ ಬರುವವರೆಗಾದರೂ ತೆಪ್ಪಗಿದ್ದು ಆನಂತರ ಮೃತರ ಕುರಿತಾದ ಅಂತೆ ಕಂತೆಗಳ ಬೊಂತೆಯನ್ನು ಸಾಮಾಜಿಕ ಜಾಲತಾಣಗಳ ಸಂತೆಯಲ್ಲಿ ಹರಾಜಿಗೆ ಇಡುವ ಮಾನಗೇಡಿ ಕೆಲಸವನ್ನು ಕೇಮಿಲ್ಲದ ಖಬರ್ ಗೇಡಿಗಳು ಬೇಕಾದ್ರೆ ಮಾಡಬಹುದಿತ್ತು !

ಆದರೆ , ಕಂಡವರ ಮನೆಯ ವಿಷಯ ಅಂದ್ರೆ ಸಾಕು, ಮೈಯೆಲ್ಲಾ ಮೆದುಳಾಗಿ ,ನಾಲಿಗೆಯೆಲ್ಲಾ ವಿಷವಾಗಿ ಧಡಕ್ಕನೇ ಎಗರಿ ಬೀಳುವ‌ ಅಲ್ಸೇಷನ್ನುಗಳಂತೆ‌ ಅಮರಿಕೊಳ್ಳುವ ಅಯೋಗ್ಯ ಶಿಖಾಮಣಿಗಳಿಗೆ ಇಂತಹಾ ಸೂಕ್ಷ್ಮ ಸಂವೇದನೆಗಳು ಅರ್ಥವಾದೀತಾದರೂ ಹೇಗೆ ?

ಕನ್ನಡವೂ ಸೇರಿದಂತೆ ಇತರೆ ಭಾಷೆಗಳಲ್ಲಿ‌ ಐದು ದಶಕಗಳಿಗೂ ಹೆಚ್ಚು ಸುಧೀರ್ಘವಾಗಿ ಸುಮಾರು‌ 600 ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಲೆಜೆಂಡ್ ಆಗಿದ್ದ ಹಿರಿಯ ಕಲಾವಿದೆ ಎಂ. ಲೀಲಾವತಿಯವರು ವಯೋ ಸಹಜ ಖಾಯಿಲೆಗಳಿಂದ ನಿಧನರಾಗಿ ಅವರ ದೇಹವಿದೀಗ ಮಣ್ಣಲ್ಲಿ ಮಣ್ಣಾಗಿ ಅವರ ಅವಿಸ್ಮರಣೀಯ ನೆನಪು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಿಗೆ ಸೇರಿಹೋಗಿ ಕೆಲವೇ ಕ್ಷಣಗಳಾಗಿವೆ.

ಒಂದೆಡೆ ಲೀಲಾವತಿಯವರನ್ನು ತನ್ನೊಡಲಲ್ಲಿ ಹಾಕಿಕೊಂಡ ಭೂಮಾತೆಯ ದೃಶ್ಯಗಳಿದ್ದರೆ ಇನ್ನೊಂದೆಡೆ ಅಮ್ಮನೇ ಸರ್ವಸ್ವವೆಂದು ಅದರಂತೇ ಬಾಳಿದ ಪುತ್ರ ವಿನೋದ್ ರಾಜ್ ರ ರೋದನ ಎಂಥವರ ಕಣ್ಣಲ್ಲೂ ನೀರುಕ್ಕಿಸುತ್ತದೆ. ಇಂತಹಾ ಸನ್ನಿವೇಶದಲ್ಲಿ ಮನುಷ್ಯತ್ವವಿರುವ ಯಾರೇ ಆಗಲೀ ಮಾಡುವ‌ ಮೊದಲ ಕೆಲಸವೆಂದರೆ, ಸಾಧ್ಯವಾದರೆ ಮೃತರ ಕುಟುಂಬಕ್ಕೆ ಸಾಂತ್ವನ‌ ಹೇಳುವುದು, ಅಂತಿಮ ನಮನ ಸಲ್ಲಿಸುವುದು ಅಥವಾ ಅದಾಗದಿದ್ದರೆ ತೆಪ್ಪಗಿರುವುದು !

ಆದರೆ ಈ” ಮೂರನ್ನು ಬಿಟ್ಟ ” ಕೆಲವರು ಮಾತ್ರವೇ ಮಾಧ್ಯಮಗಳ ಅಥವಾ ಡಿಜಿಟಲ್ ಮಾಧ್ಯಮಗಳ ಮೂಲಕ ಮೃತರ ವೈಯಕ್ತಿಕ ವಿಚಾರಗಳ ಬಗೆಗೆ ಅವರ ಸಂಬಂಧಗಳ ಬಗೆಗೆ ನಿರಂತರವಾಗಿ ಕೆದ ಕೆದಕಿ, ಕೆಸರೆರೆಚಿ ಲಾಭ ಗಳಿಸುತ್ತಾರೆ ಅಥವಾ ತಮ್ಮೊಳಗೆ ತಹತಹಿಸುವ ಅಪಪ್ರಚಾರ ಸೃಜಿಸುವ ಅಥವಾ ‌ಕುತೂಹಲ ಕೆರಳಿಸುವ ಖರಾಬು ತೀಟೆಯನ್ನು ತೀರಿಸಿಕೊಳ್ಳುತ್ತಾ ಉರಿವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡುತ್ತಾರೆ.

ಲೀಲಾವತಿಯವರ ವಿಚಾರದಲ್ಲಿ ಆಗುತ್ತಿರುವುದು ಇದೇನೇ ! ಚಿತ್ರರಂಗದಲ್ಲಿ ಮಾಡಿದ ಲೀಲಾವತಿಯಮ್ಮನ‌ ಬೃಹತ್ ಸಾಧನೆ ಬಗೆಗೆ, ಸಮಾಜಕ್ಕೆ ಅವರು ನೀಡಿದ ಕೊಡುಗೆ ಬಗೆಗೆ, ಅವರ ಅದ್ಭುತ ಅಭಿನಯ ಕೌಶಲ್ಯದ ಬಗೆಗೆ , ಚಿತ್ರರಂಗಕ್ಕೆ ಅವರು ಸಲ್ಲಿಸಿದ ಒಟ್ಟಾರೆ ಸೇವೆಯ ಕುರಿತಂತೆ, ಕಡು ಕಷ್ಟದಲ್ಲಿ ಹುಟ್ಟಿಬೆಳೆದ ಹೆಣ್ಣುಮಗಳಾದರೂ ಜೀವನಹೋರಾಟದಲ್ಲಿ ಕೆಚ್ಚೆದೆಯಿಂದ ಬಾಳಿ‌ಬೆಳಗಿದ ಅವರ ಹೋರಾಟ ಮನೋಭಾವವನ್ನು ಸ್ಮರಿಸಿ ಅವರನ್ನು ಭಾವ ಪೂರ್ಣವಾಗಿ ಬೀಳ್ಕೊಡುವ ಬದಲಿಗೆ ಅನೇಕಾನೇಕ ಪ್ರಚಾರಪ್ರಿಯ ತೀಟೆಮಲ್ಲರು , ಗಾಸಿಪ್ ಶೂರರೂ ಹಾಗೂ ಸಾಮಾಜಿಕ ಜಾಲತಾಣದ ಮಹಾನ್ ಜ್ಞಾನಪೀಠಿಗಳು ತಮ್ಮವೇ ಆದ ಕೊಂಕು ರೀತಿಯಲ್ಲಿ ಅವರ ವೈಯಕ್ತಿಕ ಬದುಕಿನ ವಿಚಾರಗಳಿಗೆ ಕೈ‌ಹಾಕಿ, ಕೆದಕಿ, ರಗಡು ರಾಡಿಯೆಬ್ಬಿಸುವ ಕೃತ್ಯದಲ್ಲಿ ಮೈಮರೆತು ಸುಖ ಕಾಣುತ್ತಿವೆ.

ಯಾರೋ‌ ಒಬ್ಬ, ” ಲೀಲಾವತಿಯವರನ್ನು ಸ್ವರ್ಗದಲ್ಲಿ‌ ಬರಮಾಡಿಕೊಂಡ ರಾಜ್” ಎಂಬ ವಿಕೃತ ಕಲ್ಪನೆಯೊಂದಿಗೆ ಇಲ್ಲ ಸಲ್ಲದ ಸಂಬಂಧವನ್ನು ಬೆರೆಸಿ ವಿಕಟವಾಗಿ ಅಕ್ಷರಗಳನ್ನು ಪೋಣಿಸಿ ಮಜಾ ತೆಗೆದುಕೊಂಡರೆ, ಇನ್ನೂ ಕೆಲವು ಅಲ್ಲಂಡೆ ಡಿಜಿಟಲ್ ಮೀಡಿಯಾಗಳ “ಖನ್ನಡ”ದ ಕ್ಯಾತ ನ್ಯೂಸ್ ರೀಡರ್ ಗಳು , ” ರಾಜ್ ಮತ್ತು ಲೀಲಾ ರ ಲಿಂಕ್ ಏನು ಗೊತ್ತೇ ? ಎಂಬ ತಲೆಬರಹದಡಿಯಲ್ಲಿ ಅಸಭ್ಯವಾಗಿ ಒದರುತ್ತಾ ಅದನ್ನು ರೋಚಕ ಸುದ್ದಿಯನ್ನಾಗಿಸಲು ಸರ್ಕಸ್ ಮಾಡುತ್ತಿದ್ದಾರೆ. ಲೀಲಾವತಿಯವರ ಮಗನಿಗೆ ಮನಸಾರೆ ಅಳಲೂ‌ ಬಿಡದೇ ಅವರ ಬೆನ್ನತ್ತಿರುವ ಬೇತಾಳದ‌ ಕೆಲ ಸುದ್ದಿಮಾಧ್ಯಮಗಳು ಪದೇ ಪದೇ ಲೀಲಾವತಿ- ರಾಜ್ ಸಂಬಂಧಗಳ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳಿ ಅವರ ದುಃಖದ ಗಾಯಕ್ಕೆ ಬರೆ ಎಳೆದೆಳೆದು ವಿಕೃತಾನಂದ ಹೊಂದುತ್ತಿದ್ದಾರೆ .

ಇದನ್ನೆಲ್ಲಾ ನೋಡಿದಾಗ ನಿಜವಾಗಿಯೂ ಇವರಲ್ಲಿ ನಯಾಪೈಸೆಯಷ್ಟಾದರೂ ಮನುಷ್ಯತ್ವ ಅಥವಾ ಅರೆಪಾವಿನಷ್ಟಾದರೂ ವಿವೇಕ ಅಂತ ಇನ್ನೂ ಏನಾದರೂ ಉಳಿದಿದೆಯಾ ಎನಿಸಿಬಿಡುತ್ತದೆ ! ಆಲ್ ರೈಟ್… ಸಾರ್ವಜನಿಕ ಜೀವನದ ಸೆಲೆಬ್ರಿಟಿ ಬಗೆಗೆ ತಿಳಿಯುವ ಕುತೂಹಲ ಜನರಲ್ಲಿ ಇದ್ದೇ ಇರುತ್ತದೆ ಎಂದೇ ಇಟ್ಟುಕೊಳ್ಳೋಣ. ಆದರೆ ಯಾವುದಕ್ಕೇ ಆಗಲೀ ಕೊನೇಪಕ್ಷ ಒಂದು ಸಮಯ, ಸಂಧರ್ಭ ,ಸಂಸ್ಕಾರ ಅನ್ನೋದು ಇರಬೇಕಲ್ಲವೇ ?

ತನ್ನ ಕೆಟ್ಟ ಕುತೂಹಲಗಳನ್ನು ತಣಿಸಿಕೊಳ್ಳಲು ಮತ್ತೊಬ್ಬರ ಭಾವನೆಗಳ ಜೊತೆ ಚೆಲ್ಲಾಟವಾಡುವುದು ಮನುಷ್ಯನ ಬುದ್ದಿವಂತಿಕೆಯಲ್ಲ….. ಮೃಗತ್ವ !!

  • ಮರೆಯುವ ಮುನ್ನ *

ಇದೇ ಲೀಲಾವತಿ- ರಾಜ್ ರ ವೈಯಕ್ತಿಕ ಸಂಬಂಧಗಳ ಬಗೆಗೆ ಕತೆ ಕಟ್ಟಿ ,ನೂರಾರು ಪುಟಗಳನ್ನು ಕುಟ್ಟಿ, ಆಕರ್ಷಕ ಟೈಟಲ್ ಕೊಟ್ಟು ವರ್ಣರಂಜಿತವಾಗಿ ಅಕ್ಷರ ವ್ಯಭಿಚಾರಗಳೊಂದಿಗೆ ಲಕ್ಷಾಂತರ ಹಣ ಸಂಪಾದನೆ ಮಾಡಿ ಕೊನೆಗೆ ಮಸಣ ಸೇರಿದವರ ಇತಿಹಾಸವೂ ಕರುನಾಡ ಸಾಂಸ್ಕ್ರತಿಕ ಚರಿತೆಗಳಲ್ಲಿದೆ. ಅಂದಿನಿಂದ ಈ ಕಾಮಧೇನುವಿನಂತಹ ಸಬ್ಜೆಕ್ಟನ್ನು ಅಡಿಪಾಯವಾಗಿಟ್ಟುಕೊಂಡು ಜನರ ತಣಿಯದ ಕುತೂಹಲದ ದೌರ್ಬಲ್ಯವನ್ನೇ ಬಂಡವಾಳವನ್ನಾಗಿಸಿ ಸುದ್ದಿ ಮಾಡುತ್ತಲೇ ಬಂದ ಖದೀಮರ ಹರಿವೇ ನಮ್ಮಲ್ಲಿದೆ.

ಕೇವಲ ಇದು ಅಲ್ಲಿಗೇ ಮುಗಿಯದೇ ವಿನೋದ್ ರಾಜ್ ರ ಮದುವೆ ವಿಷಯವನ್ನೂ ಕೆದಕಿ ಸುದ್ದಿ ಮಾಡಿ ಅನಗತ್ಯ ರಂಪಮಾಡಿ ರಾಡಿಯೆಬ್ಬಿಸಿ ಲೀಲಾವತಿಯವರ ಹಾಗೂ ಅವರ ಕುಟುಂಬದ ನೆಮ್ಮದಿಯನ್ನೂ ಹಾಳು ಮಾಡಿದ್ದ ನರರಕ್ಕಸರ ಪಡೆಯೂ ಇತ್ತು.

ನನ್ನ ಸಿಂಪಲ್ ಪ್ರಶ್ನೆಯೆಂದರೆ ಹೀಗೆ ಮತ್ತೊಬ್ಬರ ವೈಯಕ್ತಿಕ ಸಂಬಂಧಗಳ ಬಗೆಗೆ ಪ್ರಶ್ನೆ‌ ಮಾಡಿದವರೆಲ್ಲಾ ಶ್ರೀರಾಮ ಚಂದ್ರನಂಥವರಾ..? ಅವರೆಲ್ಲಾ ತಮ್ಮ‌ ಬದುಕಿನುದ್ದಕ್ಕೂ ಪವಿತ್ರರಾಗಿ ಬಾಳಿ‌ ಬದುಕಿದವರಾ ಅಥವಾ ‌ಬದುಕುತ್ತಿರುವವರಾ ? ಇವರೆಲ್ಲಾ ಆಂತರ್ಯದಲ್ಲಿ- ಬಾಹ್ಯದಲ್ಲಿ ಒಂದೇ ರೀತಿ ಇರುವ ಸಾಚಾಗಳಾ.? ಒಮ್ಮೆ ಕನ್ನಡಿ‌ಮುಂದೆ ನಿಂತು , ತಮ್ಮ ಎದೆ ಮೇಲೆ ಕೈ‌ಯಿಟ್ಟು ಪ್ರಾಮಾಣಿಕವಾಗಿ ಉತ್ತರಿಸಲಿ.

ಹೀಗೆ ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಹಗುರವಾಗಿ ಮಾತನಾಡುವ ಚಟ ತೀರಿಸಿಕೊಳ್ಳುವವರೆಲ್ಲಾ, ತಾವು ಕೊಚ್ಚೆಗುಂಡಿಯಲ್ಲಿ ಉರುಳಾಡುತ್ತಲಿದ್ದು ಮತ್ತೊಬ್ಬರ ಮೈಮೇಲಿನ‌ ಕೆಸರಿನ‌ ಹನಿ‌ ಸಿಡಿದುದನ್ನು ಎತ್ತಿ ತೋರಿಸುವ ಪಾತಕಿಗಳಿದ್ದಂತೆ ! ಪಕ್ಕದ ಎಲೆಯವನ‌ ಮೇಲಿರುವ ಇರುವೆಯನ್ನು ಎತ್ತಿ ತೋರಿಸುವವನಿಗೆ ತನ್ನ ಎಲೆ ಮೇಲೆ ಸತ್ತು ಬಿದ್ದಿರುವ ಹಂದಿ ಮಾತ್ರ ಕಾಣಲಾರದೇಕೆ..?

ಇಷ್ಟೆಲ್ಲಾ ತರ್ಕ-ಕುತರ್ಕಗಳ ತಪರಾಕಿಗಳನ್ನು ಇನ್ನು ನೋಡಲಾಗದೇ ಕೇಳಲಾಗದೇ ಇಹಲೋಕದ ವ್ಯವಹಾರ ಮುಗಿಸಿ ನಿರುಮ್ಮಳವಾಗಿ ಬಾರದ ಲೋಕದತ್ತ ನಡೆದ ಕನ್ನಡ ಚಿತ್ರರಂಗದ ಪ್ರತಿಭಾವಂತ ಅಭಿನೇತ್ರಿ ಡಾ. ಲೀಲಾವತಿಯಮ್ಮನವರಿಗೆ ನಿಷ್ಕಲ್ಮಶ ಮನದವರೆಲ್ಲರ ಭಾವತುಂಬಿದ ಶ್ರದ್ಧಾಂಜಲಿ.

ಹೋಗಿ ಬನ್ನಿ ಅಮ್ಮಾ…

ಓಂ ಶಾಂತಿ.

Copyright © All rights reserved Newsnap | Newsever by AF themes.
error: Content is protected !!