January 4, 2025

Newsnap Kannada

The World at your finger tips!

madduru sabe

ಮಂಗಳವಾರ ಮದ್ದೂರಿನಲ್ಲಿ ಕೆಯುಡಬ್ಲ್ಯೂಜೆ ಸರ್ವ ಸದಸ್ಯರ ವಾರ್ಷಿಕ ಸಭೆ

Spread the love

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಫೆಬ್ರವರಿ ೨ರ ಮಂಗಳವಾರ ಬೆಳಿಗ್ಗೆ ೧೦ಗಂಟೆಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಶಿವಪುರ ಬಳಿ ಇರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶಿವಾನಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ  ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿದೆ. ಪತ್ರಕರ್ತರ ಸಮಸ್ಯೆ, ಪತ್ರಕರ್ತರಿಗೆ ಸಿಗಬೇಕಾದಂತಹ ಸೌಲಭ್ಯ, ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಎದುರಿಸಿದ ಸಂಕಷ್ಟ, ಪತ್ರಕರ್ತರ ಸಂಘದ ಬೈಲಾ ತಿದ್ದುಪಡಿ, ಸಂಘದ ಶ್ರೇಯೋಭಿವೃದ್ಧಿ ಬಗ್ಗೆ ಬೆಳಿಗ್ಗೆ ಯಿಂದ ಸಂಜೆಯವರೆಗೂ ಸುದೀರ್ಘ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಸಭೆಯನ್ನು ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಉದ್ಘಾಟಿಸಲಿದ್ದಾರೆ. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಸುರೇಶ್‌ಗೌಡ, ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಜಿ.ಪಂ. ಅಧ್ಯಕ್ಷೆ ನಾಗರತ್ನ ಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೌಡ್ಲೆ ಚನ್ನೇಗೌಡ, ಗೋಪಾಲ್ ಶ್ರೀವತ್ಸ, ರಮೇಶ್ ಗೌಡ ಅವರನ್ನು ಅಭಿನಂದಿಸಲಾಗುವುದು ಎಂದರು.

ಸಭೆಗೆ ಐಎಫ್‌ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಎಷ್ಯಾ ಪತ್ರಕರ್ತರ ಸಂಘದ ಸಂಚಾಲಕ ಮದನ್‌ಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷರಾದ ಮತ್ತೀಕೆರೆ ಜಯರಾಂ, ಪುಂಡಲೀಕ ಬಾಳೋಜಿ, ಕಾರ್ಯದರ್ಶಿಗಳಾದ ಸಂಜೀವ್ ರಾವ್, ಬಂಗ್ಲೆ ಮಲ್ಲಿಕಾರ್ಜುನ, ಖಜಾಂಚಿ ಉಮೇಶ್ವರ್, ಮಂಡ್ಯ ಜಿಲ್ಲಾ ಪದಾಧಿಕಾರಿಗಳಾದ ನವೀನ್ ಚಿಕ್ಕಮಂಡ್ಯ, ಎಂ.ಕೆ.ಮೋಹನ್‌ರಾಜ್, ಡಿ.ಎಲ್.ಲಿಂಗರಾಜು, ಸೋಮಶೇಖರ ಕೆರಗೋಡು, ಪಿ.ಜೆ.ಚೈತನ್ಯಕುಮಾರ್, ಕೌಡ್ಲೆ ಚನ್ನಪ್ಪ, ಅಣ್ಣೂರು ಲಕ್ಷ್ಮಣ್, ಕೃಷ್ಣಸ್ವರ್ಣಸಂದ್ರ, ಕೆ.ಎನ್.ರವಿ, ಕೆ.ಸಿ.ಮಂಜುನಾಥ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಈ ಹಿಂದಿನಿಂದಲೂ ಸಂಘ ಬದ್ಧವಾಗಿ ಬಂದಿದೆ. ಸರ್ವಸದಸ್ಯರ ಸಭೆಯಲ್ಲಿ ಸಂಘದ ಅಭಿವೃದ್ಧಿ ಹಾಗೂ ಪತ್ರಕರ್ತರ ಏಳ್ಗೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಈಗಾಗಲೇ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಭವನಗಳಿವೆ. ಆದರೆ ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನಗಳಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕು ಕೇಂದ್ರಗಳಲ್ಲೂ ಪತ್ರಿಕಾ ಭವನ ತೆರೆಯಲು ೨೫ ಲಕ್ಷ ರೂ. ಅನುದಾನ ನೀಡುವಂತೆ ಜೊತೆಗೆ ಬಜೆಟ್ ನಲ್ಲಿ ಈ ಕುರಿತು ಹಣ ಮೀಸಲಿಡುವಂತೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಸಭೆ ಆರಂಭಕ್ಕೂ ಮುನ್ನ ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಈ ಭಾಗದ ಸಂಸ್ಕೃತಿ ಸಾರುವ ಕಲಾತಂಡಗಳ ಮೆರವಣಿಗೆ ಮಾಡಲಾಗುವುದು. ರಾಜ್ಯದ ಮೂಲೆ ಮೂಲೆಂದ ಭಾಗವಹಿಸುವ ಪತ್ರಕರ್ತರಿಗಾಗಿ ಮಂಡ್ಯ ಶೈಲಿಯ ಮುದ್ದೆ ಊಟ ಸೇರಿದಂತೆ ಈ ಭಾಗದ ಸೊಗಡನ್ನು ಉಣ ಬಡಿಸಲಾಗುವುದು. ಜೊತೆಗೆ ಈ ಭಾಗದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾಧ್ಯಕ್ಷ ನವೀನ್ ಚಿಕ್ಕಮಂಡ್ಯ, ರಾಜ್ಯ ಸಮಿತಿ ಸದಸ್ಯರಾದ ಸೋಮಶೇಖರ್ ಕೆರಗೋಡು, ಡಿ.ಎಲ್.ಲಿಂಗರಾಜು, ತಾಲ್ಲೂಕು ಅಧ್ಯಕ್ಷ ರವಿಸಾವಂದಿಪುರ, ಪ್ರಧಾನ ಕಾರ್ಯದರ್ಶಿ ನಂದೀಶ್, ಜಿಲ್ಲಾ ನಿರ್ದೇಶಕರಾದ ಶಿವನಂಜಪ್ಪ, ಅಣ್ಣೂರು ಸತೀಶ್ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!