ಮಂಡ್ಯದ ಮುಸ್ಕಾನ್‍ರನ್ನು ತನಿಖೆಗೆ ಒಳಪಡಿಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

Team Newsnap
1 Min Read

ಕಾಲೇಜಿನ ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದ ಮಂಡ್ಯದ ಮುಸ್ಕಾನ್‍ರನ್ನು ತನಿಖೆಗೆ ಒಳಪಡಿಸುವಂತೆ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗ್ಡೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಕುರಿತು ಪ್ರಸ್ತಾಪಿಸಿರುವ ಅವರು, ಈ ಹಿಂದೆ ಹಿಜಬ್ ವಿವಾದ ತಾರಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

ಇದಕ್ಕುತ್ತರವಾಗಿ ಮುಸ್ಕಾನ್ ಎಂಬ ಬುರ್ಖಾಧಾರಿ ವಿದ್ಯಾರ್ಥಿನಿಯು ‘ಅಲ್ಲಾ ಹೋ ಅಕ್ಬರ್’ ಎಂದು ಕೂಗಿದ್ದ ವೀಡಿಯೋ ಜಗತ್ತಿನೆಲ್ಲಡೆ ಪ್ರಮುಖ ನ್ಯೂಸ್ ಚಾನೆಲ್‍ಗಳಲ್ಲಿ ಪ್ರಸಾರವಾಗಿ, ಈ ವಿದ್ಯಾರ್ಥಿನಿಯು ದಿಢೀರ್ ಪ್ರಸಿದ್ಧಿಯನ್ನು ಪಡೆದಿದ್ದ ಘಟನೆ ಇದಾಗಿದೆ.

ಈ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಸಂಘಟನೆಗಳಿಂದ ಪ್ರಶಂಸೆಯ ನುಡಿಗಳು ಹಾಗೂ ಬಹುಮಾನಗಳ ಘೋಷಣೆ ಮಾಡಲಾಗಿತ್ತು.

ಹೀಗಿರುವಾಗ ನಿಷೇಧಿತ ಮುಸ್ಲಿಂ ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾದ ಮುಖ್ಯಸ್ಥ ಆಯಮನ್-ಅಲ್-ಜವಾಹರಿ ಇತ್ತೀಚೆಗೆ ಈ ವಿದ್ಯಾರ್ಥಿನಿಯ ಕುರಿತು ‘ಭಾರತದ ಸರ್ವಶ್ರೇಷ್ಟ ಮಹಿಳೆ’ ಎಂದು ಹೊಗಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ.

ಬೀಬಿ ಮುಸ್ಕಾನ್ ವಿದ್ಯಾರ್ಥಿನಿಗೆ ಹಿಜಾಬ್ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಕುರಿತಂತೆ ಕೂಲಂಕುಷವಾದ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.

Share This Article
Leave a comment