December 24, 2024

Newsnap Kannada

The World at your finger tips!

nalvdi krishnaraj vadeyar

ಹೊಸತನದ ಹರಿಕಾರ,ಜನ ಮೆಚ್ಚಿದ ನೇತಾರ

Spread the love

ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿಯೂ ಕೂಡ ಧನ್ಯತಾ ಭಾವಮೂಡುವುದು.ಏಕೆಂದರೆ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. ಜನಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿ ಜನಪರ ಕಾಳಜಿಯ ನೇತಾರರೆನಿಸಿದರು.
ಇವರ ನಿಸ್ವಾರ್ಥ ಸೇವೆಯ ಪ್ರತಿಫಲವೇ ಅವರಿಗಿರುವ ‘ರಾಜರ್ಷಿ’ ಎಂಬ ಬಿರುದು.

WhatsApp Image 2023 06 03 at 3.41.37 PM
ಅಭಿಜ್ಞಾ ಪಿ.ಎಮ್.ಗೌಡ
ಮಂಡ್ಯ

“ಆಡುಮುಟ್ಟದ ಸೊಪ್ಪಿಲ್ಲ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲವೆಂದು” ಹೇಳಬಹುದು. ಕೃಷಿ, ಕೈಗಾರಿಕೆ,ನೀರಾವರಿ, ಜಲ ವಿದ್ಯುತ್‌, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರುನಾಡ ಅಭಿವೃದ್ಧಿಗೆ ಒಡೆಯರ್ ರವರ ಕೊಡುಗೆ ಅಪಾರ.

*೧೯೦೨ ರಲ್ಲಿ ಅಧಿಕಾರಕ್ಕೆ ಬಂದಾಗ ಯಾವ ಸಂಸ್ಥಾನವು ಕೂಡ ಕಾಣದ ಅಭಿವೃದ್ಧಿಯನ್ನು ಮೈಸೂರು ಸಂಸ್ಥಾನ ಮಾಡಿದ್ದರಿಂದ ಮೈಸೂರು ಸಂಸ್ಥಾನಕ್ಕೆ “ಮಾದರಿ ಮೈಸೂರು”ಎನ್ನುವ ಕೀರ್ತಿಯನ್ನು ತಂದುಕೊಟ್ಟವರು.

*ಶಿವನ ಸಮುದ್ರದಲಿ ಕಾವೇರಿ ನದಿಯ ನೀರಿನ ಮೂಲಕ ಜಲವಿದ್ಯುತ್ ಆರಂಭಿಸಿ ಏಷ್ಯಾಖಂಡದಲ್ಲೆ ಮೊಟ್ಟ ಮೊದಲ ಭಾರಿಗೆ ೧೯೦೫ ರಲ್ಲಿ ಬೆಂಗಳೂರು ಜಲವಿದ್ಯುತ್ತನ್ನು ಪಡೆಯುವಂತೆ ಮಾಡಿದ ಹೆಗ್ಗಳಿಕೆ ಇವರದ್ದು.

*೧೯೧೫ರಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಿಸಿ.ಕನ್ನಡ ಭಾಷಾ ಪ್ರೇಮವನ್ನು ಹೆಚ್ಚಿಸುವುದರ ಮೂಲಕ ಕನ್ನಡ ಸಾಹಿತ್ಯ,ಸಂಸ್ಕೃತಿ, ಸಂಗೀತ, ಶಿಕ್ಷಣ, ವಾಸ್ತುಶಿಲ್ಪ, ಪ್ರವಾಸೋದ್ಯಮ ಇನ್ನಿತರ ವಿಭಾಗಗಳ‌ ಕಲಿಕೆಗೆ ಉತ್ತೇಜನ ನೀಡುತ್ತ ಕನ್ನಡ ಭಾಷೆಯನ್ನು ಉಳಿಸಿ ,ಬೆಳಸಲು ಪ್ರೇರಣಕರ್ತರಾದರು.

*೧೯೧೮ ರಲ್ಲಿ ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್. ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ “ಮಿಲ್ಲರ್ ಸಮಿತಿ” ರಚಿಸಿ ಆ ಮೂಲಕ ಬ್ರಾಹ್ಮಣ ಹಾಗೂ ಆಂಗ್ಲೋ ಇಂಡಿಯನ್ ಅವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಸಮುದಾಯಗಳನ್ನು ಹಿಂದೂಗಳೆಂದೇ ಪರಿಗಣಿಸಿ ಶೇಕಡಾ ೭೫% ರಷ್ಟು ಹಿಂದುಳಿದ ಜಾತಿಗಳಿಗೆ ಮೀಸಲಾತಿ ವ್ಯವಸ್ಥೆ ಕಲ್ಪಿಸಿ ಭಾರತ ದೇಶದ “ಮೀಸಲಾತಿ ವ್ಯವಸ್ಥೆಯ ಪಿತಾಮಹ” ಎನಿಸಿಕೊಂಡರು.

*ಆಡಳಿತವು ಸುಲಭವಾಗಿ ನಡೆಯಲು ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟು, ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳನ್ನು ರಚನೆ ಮಾಡಿ ,ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸುವಂತೆ ಮಾಡಿದರು.ಈ ಮುಖೇನ ಸ್ವಚ್ಚತೆ, ವೈದ್ಯಕೀಯ ಸೇವೆ, ಶಿಕ್ಷಣ ಸೌಲಭ್ಯ, ಪ್ರವಾಸೋದ್ಯಮ ಹಾಗೂ ನೀರಿನ ಸೌಕರ್ಯಗಳನ್ನು ಒದಗಿಸುವುದು ಅವರ ಆಡಳಿತದ ಪ್ರಮುಖ ಐದು ಗುರಿಗಳಾಗಿದ್ದವು.

*ಹಾಗೆಯೆ ೧೯೩೧ ರಲ್ಲಿ ರೈಲ್ವೇ ಮಾರ್ಗಗಳನ್ನು ನಿರ್ಮಾಣ ಮಾಡುವುದರ ಮೂಲಕ ರಾಜ್ಯದ ನಾನಾ ಭಾಗಗಳಿಗೆ ಸಂಪರ್ಕಗಳನ್ನು ಕಲ್ಪಿಸಿ ಆರ್ಥಿಕ ವ್ಯವಸ್ಥೆಯನ್ನು ಭದ್ರಪಡಿಸಿದ್ದು ಸಹ ಅವರ ಸಾಧನೆಗಳಲ್ಲಿ ಒಂದಾಗಿದೆ.ಅವರು ನಿರ್ಮಿಸಿದ ರೈಲ್ವೆ ಮಾರ್ಗಗಳು ಇಂತಿವೆ…

ಮೈಸೂರು – ಅರಸೀಕೆರೆ
ಬೆಂಗಳೂರು – ಚಿಕ್ಕಬಳ್ಳಾಪುರ
ಚಿಕ್ಕಜಾಜೂರು – ಚಿತ್ರದುರ್ಗ
ನಂಜನಗೂಡು – ಚಾಮರಾಜನಗರ
ತರೀಕೆರೆ – ನರಸಿಂಹರಾಜಪುರ
ಶಿವಮೊಗ್ಗ – ಆನಂದಪುರ

*ಶಿಕ್ಷಣ ಕ್ಷೇತ್ರದಲ್ಲೂ ಕೂಡ ಅಭೂತಪೂರ್ವ ಸಾಧನೆ ಹಾಗು ಸುಧಾರಣೆಗಳನ್ನು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.ಇವರ ಕಾಲದಲ್ಲೆ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಗಳವರೆಗೆ ಉಚಿತ ಹಾಗು ಕಡ್ಡಾಯ ಶಿಕ್ಷಣವನ್ನು ಜಾರಿಯಲ್ಲಿದದ್ದು ಬಹಳ ಹೆಮ್ಮೆ ಎನಿಸುತ್ತದೆ.
ಸರ್ವಶಿಕ್ಷಣದೊಂದಿಗೆ ಬುಡಕಟ್ಟು ಜನಾಂಗ, ಗಿರಿಜನ, ಅರಣ್ಯವಾಸಿಗಳಿಗೆ ಮೊಟ್ಟ ಮೊದಲು ಶಾಲೆಗಳನ್ನು ತೆರೆದರು ಹಾಗು ಅಸ್ಪೃಶ್ಯರಿಗಾಗಿ ಪ್ರತ್ಯೇಕ ಶಾಲೆಗಳನ್ನು ಕೆಲವು ಕಡೆಗಳಲ್ಲಿ ಪ್ರಾರಂಭಿಸಿದರು.೧೯೦೨ ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯಶಾಲೆ ,೧೯೦೫– ಮೈಸೂರಿನಲ್ಲಿ ತಾಂತ್ರಿಕ ಶಾಲೆ ಸ್ಥಾಪನೆ,೧೯೦೬ ರಲ್ಲಿ ಕುರುಡ ಹಾಗೂ ಮೂಕ ಮಕ್ಕಳಿಗೆ ಶಾಲೆ ,೧೯೧೧ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಆರಂಭಿಸಿದರು.
೧೯೧೮ ರಲ್ಲಿ ಶಾಲಾ ಪ್ರವೇಶಕ್ಕಾಗಿ ಜಾತಿ ಪದ್ದತಿಯನ್ನು ನಿರ್ಮೂಲನೆ ಮಾಡಿ,೧೯೧೯ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕವನ್ನು ರದ್ದು ಮಾಡಿದರು.ದೇಶದಲ್ಲೆ ಮೊಟ್ಟಮೊದಲ ಬಾರಿಗೆ ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿ ದಾಖಲೆ ನಿರ್ಮಿಸಿದ ಕೀರ್ತಿಯು ಕೂಡ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಸಲ್ಲುತ್ತದೆ..

*ಇವರು ಜಾರಿ ಮಾಡಿದಂತಹ ಸಾಮಾಜಿಕ ಕಾನೂನುಗಳು ಜನಪರ ಕಾಳಜಿಯಿಂದ ಕೂಡಿದ್ದವು.೧೯೦೯ ರಲ್ಲಿ ದೇವದಾಸಿ ಪದ್ಧತಿ ನಿಷೇಧಿಸಿದರು.೧೦೧೦ ರಲ್ಲಿ ಬಸವಿ ಪದ್ಧತಿ ಹಾಗೂ ಗೆಜ್ಜೆಪೂಜೆ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಿದರು.೧೯೩೬ರಲ್ಲಿ ವೇಶ್ಯಾ ವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ ಮಾಡಿದ್ದಲ್ಲದೇ ವಿಧವೆಯರಿಗೆ ಮರು ವಿವಾಹ ಮಾಡಿಕೊಳ್ಳುವ ಕಾಯ್ದೆ ಹಾಗೂ ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ವ್ಯವಸ್ಥೆಯನ್ನು ಮಾಡಿದರು.೧೯೨೭ ರಲ್ಲಿ ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಕಲ್ಪಿಸಿಕೊಟ್ಟರು.ಇವೆಲ್ಲವೂ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾನೂನಾತ್ಮಕ ಸಾಧನೆಗಳಾಗಿವೆ..

ಮೈಸೂರು ಅರಸರಾದ ನಾಲ್ವಡಿ ಕೃಷ್ಣ ರಾಜ ಒಡೆಯರು ಕಾವೇರಿ ನದಿ ನೀರು ವ್ಯರ್ಥ್ಯವಾಗಿ ಹರಿಯುವುದನ್ನು ಕಂಡ ಅವರು ಆ ಕಡೆ ಬೆಟ್ಟ, ಈ ಕಡೆ ಬೆಟ್ಟಕ್ಕೆ ಅಡ್ಡಲಾಗಿ ಕಾವೇರಿ ನದಿಗೆ ಕಟ್ಟೆಯೊಂದ ಕಟ್ಟಿಸಲು ನಾಲೆ ತೆಗೆಸಿ, ನೀರು ಹರಿಸಿದರು. ಇದರಿಂದ ಹುರುಳಿ ಬಿತ್ತುವ ಹೊಲದಲ್ಲೆಲ್ಲ ಸಿಹಿ ಕಬ್ಬು, ಬಂಗಾರ ಬಣ್ಣದ ಭತ್ತದ ಬೆಳೆ ಬೆಳೆದವು.ಇದು ಇವರ ಜನಪರ ಕಾಳಜಿಯ ಕುರಿತಾಗಿ ತಲೆಮಾರುಗಳಿಂದ ಜನರ ಬಾಯಲ್ಲಿ ಹಚ್ಚಹಸಿರಾಗಿರುವ ಮಾತಾಗಿವೆ.

ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆಯ ಹಿಡುವಳಿ ಭೂಮಿಗೆ ನೀರುಣಿಸುವುದು, ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಸುವುದು ಹಾಗೂ ಶಿವನ ಸಮುದ್ರ ವಿದ್ಯುದಾಗಾರಕ್ಕೆ ನಿಯಮಿತವಾಗಿ ನೀರು ಹರಿಯುವಂತೆ ಮಾಡುವುದು– ಈ ಮೂರು ಉದ್ದೇಶಗಳನ್ನು ಮೂಲವಾಗಿಟ್ಟುಕೊಂಡು ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಗ್ರಾಮದ ಬಳಿ ಅಣೆಕಟ್ಟೆಯನ್ನು ಕಟ್ಟಿಸಿ, ಸರಿ ಸುಮಾರು ೧,೨೦,೦೦೦ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿ, ಬರಡು ನೆಲದಲ್ಲಿ ಹಸಿರುಕ್ಕಿಸಿ ಜನ ಮಾನಸದಲ್ಲಿ ಹಸಿರಾಗಿದ್ದಾರೆ.ಈ ಮುಖೇನ ಕೃಷ್ಣಸಾಗರ ಅಣೆಕಟ್ಟು ಕರ್ನಾಟಕದ ಅಸ್ಮಿತೆ ಕನ್ನಡಿಗರ ಸಾಮರ್ಥ್ಯವನ್ನು ವಿಶ್ವದೆದುರು ತೆರೆದಿಟ್ಟ ಸ್ಮಾರಕವಾಗಿದೆ.

*ಇವರ ಕಾಲದಲ್ಲಿ ಸರಿ ಸುಮಾರು ೨೭೦ಕ್ಕೂ ಹೆಚ್ಚು ಬೃಹತ್ ಆಸ್ಪತ್ರೆಗಳು ನಿರ್ಮಿತವಾಗಿದ್ದು ಇವೆಲ್ಲವು ಈಗಲೂ ಜನಕಲ್ಯಾಣಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.

*ಇವರ ಕಾಲದಲ್ಲಿ ಹಲವಾರು ಬ್ಯಾಂಕುಗಳು ನಿರ್ಮಾಣಗೊಂಡವು.ಹಾಗೆಯೆ ವಹಿವಾಟುಗಳು ಸಹ ನಡೆಯುತ್ತಿದ್ದವು.ಹಾಗೆಯೆ ೧೯೦೬ ರಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ರೈತರಿಗಾಗಿಯೇ ಅಡಮಾನ ವ್ಯವಸ್ಥ ಪದ್ದತಿ ಪ್ರಾರಂಭಿಸಿದರು… ರಾಜಶ್ರೀ ,ಸಾಮಾಜಿಕ ಚಿಂತನೆಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ

*ಬೃಹತ್ ಮಟ್ಟದ ಕೈಗಾರಿಕ ಅಭಿವೃದ್ದಿಗಳು ಇಂದಿಗೂ ದೇಶದೆಲ್ಲಡೆ ಹೆಸರು ಮಾಡಿವೆ ಅವರು ಸ್ಥಾಪಿಸಿದ ಒಂದೊಂದು ಕೈಗಾರಿಕೆಗಳು ಸಹ ಅತಿ ಮುಖ್ಯವಾದವುಗಳಾಗಿವೆ..
ಭದ್ರಾವತಿಯ ಕಬ್ಬಿಣದ ಕಾರ್ಖಾನೆ
ಬೆಂಗಳೂರಿನ ಮೈಸೂರು ಸ್ಯಾಂಡಲ್
ಸಾಬೂನು ಕಾರ್ಖಾನೆ
ಮೈಸೂರಿನ ಗಂಧದೆಣ್ಣೆ ಕಾರ್ಖಾನೆ
ಸಿಮೆಂಟ್ ಕಾರ್ಖಾನೆ
ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ
ಮೈಸೂರು ಪೇಪರ್ ಮಿಲ್ ಕಾರ್ಖಾನೆ
ಮಂಗಳೂರು ಹೆಂಚು ಕಾರ್ಖಾನೆ
ಷಹಬಾದಿನ ಸಿಮೆಂಟ್ ಕಾರ್ಖಾನೆ
ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ
ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದರು.ಹೀಗೆ ನಾಲ್ವಡಿ ಕೃಷ್ಣದೇವರಾಯರ ಸಾಧನೆಗಳು ಅಪಾರ ,ಅಸಂಖ್ಯಾತವಾಗಿದ್ದು ಜನಮಾನಸದೊಳಗೆ ಎಂದೆಂದಿಗೂ ಅಜರಾಮರವಾಗಿವೆ.

ಒಂದೇ ಮಾತಿ‌ನಲ್ಲಿ ಹೇಳಬಹುದಾದರೆ ಇವರನ್ನು “ಆಧುನಿಕ ಮೈಸೂರು ರಾಜ್ಯದ ಪಿತಾಮಹ”.ಎಂದು ಕರೆಯುವರು.

Copyright © All rights reserved Newsnap | Newsever by AF themes.
error: Content is protected !!