ವೈದ್ಯೋ ನಾರಾಯಣೋ ಹರಿ…
ಕೊರೋನಾ ಸಂದರ್ಭದ ಅತ್ಯಂತ ಪ್ರಮುಖ ವೃತ್ತಿ ಮತ್ತು ವ್ಯಕ್ತಿಗಳು ನೀವು. ಜೀವರಕ್ಷಕ ಸೇವೆ ಎಂಬುದು ಇದರ ಇನ್ನೊಂದು ಮುಖ.
ಆದರೆ ಕಳೆದ ಒಂದು ವರ್ಷದ ಅವಧಿಯ ಬೆಳವಣಿಗೆಗಳು ಇದಕ್ಕೆ ವಿರುದ್ಧವಾಗಿದೆ ಮತ್ತು ಆ ರೀತಿಯ ಸುದ್ದಿಗಳು ಮತ್ತು ಭಾವನೆಗಳು ಜನರಲ್ಲಿ ಮೂಡುತ್ತಿದೆ.
ಹೇಗೆ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಮಠಾಧೀಶರು ಮುಂತಾದವರು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಮಾರಾಟ ಮಾಡಿ ಸಂಪೂರ್ಣ ವಾಣಿಜ್ಯೀಕರಣವಾಗಿ ಸಮಾಜದಲ್ಲಿ ತಮಗೆ ಇದ್ದ ನೈತಿಕ ಗೌರವವನ್ನು ಕಳೆದುಕೊಂಡರೋ ಹಾಗೆಯೇ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಈ ಸಂದರ್ಭದಲ್ಲಿ ತನ್ನ ನೈತಿಕತೆ ಮಾರಾಟಕ್ಕಿಟ್ಟಿದೆ.
ಜನರ ಜೀವ ರಕ್ಷಣೆಯ ವಿಷಯದಲ್ಲಿ ಸೈನಿಕರಂತೆ ಇಡೀ ವೈದ್ಯಕೀಯ ಸಿಬ್ಬಂದಿ ದುಡಿಯುತ್ತಿರುವುದು ನಿಜ ಆದರೆ ಅದೇ ಸಮಯದಲ್ಲಿ ಹಣಕ್ಕಾಗಿ ತಮ್ಮ ವೃತ್ತಿ ಧರ್ಮವನ್ನು ವಿವೇಚನೆಯನ್ನು ಕಳೆದುಕೊಂಡು ಕೇವಲ ಹಣ ಮಾಡುವ ದಂಧೆಯಾಗಿಸಿರುವ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ.
ಒಂದು ದಿನಕ್ಕೆ ಸಾಮಾನ್ಯ ಜನರು ಭರಿಸಲಾಗದ ಹಾಸಿಗೆ ತಪಾಸಣೆ ಡಾಕ್ಟರುಗಳ Consultation ಔಷಧಿ ಹೀಗೆ ಸಾವಿರಾರು ರೂಪಾಯಿಗಳ ಬಿಲ್ ಮಾಡಲಾಗುತ್ತಿದೆ. ಹತ್ತು ಹದಿನೈದು ದಿನಗಳಲ್ಲಿ ಲಕ್ಷಗಳು ದಾಟಿ ಹೋಗುತ್ತಿದೆ. ನಿಜಕ್ಕೂ ಈ ತುರ್ತು ಪರಿಸ್ಥಿತಿಯಲ್ಲಿ ಇದು ಅತ್ಯಂತ ಅಮಾನವೀಯ.
ಈ ಅವ್ಯವಸ್ಥೆ ಕೇವಲ ಹಣದ ವಿಷಯದಲ್ಲಿ ಮಾತ್ರವಲ್ಲದೆ ಚಿಕಿತ್ಸೆಯ ವಿಧಾನದಲ್ಲೂ ಬೇಜವಾಬ್ದಾರಿ ಕಾಣಬರುತ್ತಿದೆ. ಸಮಗ್ರ ಅಧ್ಯಯನ ಮಾಡದೆ ಕೇವಲ ಆ ಕ್ಷಣದ ಅನಿವಾರ್ಯ ಪರಿಸ್ಥಿತಿ ಗಮನಿಸಿ ಹೆಚ್ಚಿನ ಪ್ರಮಾಣದಲ್ಲಿ ಡೋಸ್ ನೀಡಿ ಅದರಿಂದಾಗುವ ದುಷ್ಪರಿಣಾಮಗಳೇ ಅತ್ಯಂತ ಅಪಾಯಕಾರಿ ಹಂತ ತಲುಪಿರುವ ಘಟನೆಗಳು ಸಾಕಷ್ಟು ನಡೆಯುತ್ತಿವೆ…
ಒತ್ತಡದ ಸಮಯದಲ್ಲಿ ಈ ರೀತಿಯ ಒಂದಷ್ಟು ಘಟನೆಗಳು ಸಹಜ. ಆದರೆ ಇದು ವೈದ್ಯಕೀಯ ವೃತ್ತಿ, ಜೀವನ್ಮರಣದ ಪ್ರಶ್ನೆ. ಎಷ್ಟು ಎಚ್ಚರಿಕೆ ವಹಿಸಿದರು ಕಡಿಮೆಯೇ. ಸಾಮಾನ್ಯ ಜನರಿಗೆ ವೈದ್ಯಕೀಯ ವಿಷಯದಲ್ಲಿ ಯಾವುದೇ ತಿಳಿವಳಿಕೆ ಇಲ್ಲ. ವೈದ್ಯರ ಜವಾಬ್ದಾರಿ ಹೆಚ್ಚು.
ಅನೇಕ ಆಸ್ಪತ್ರೆಗಳಲ್ಲಿ ಕೇವಲ Consultant charge ಎಂದು 25000 ಕ್ಕೂ ಹೆಚ್ಚು ಹಣದ ಬಿಲ್ ಮಾಡುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಇಡೀ ದೇಶದ ಆರ್ಥಿಕ ಮತ್ತು ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಜೀವ ಉಳಿಸಿಕೊಳ್ಳುವುದೇ ಒಂದು ಸಾಧನೆಯಾಗಿದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಲೋಕ ಮಾನವೀಯತೆ ಮೆರೆಯಬೇಕಿದೆ. ಅದು ಶತಶತಮಾನಗಳ ಕಾಲ ನೆನಪಿನಲ್ಲಿ ಉಳಿದು ಇತಿಹಾಸದಲ್ಲಿ ದಾಖಲಾಗುತ್ತದೆ.
ಇದೊಂದು ವೈದ್ಯಕೀಯ ಲೋಕಕ್ಕೆ ಅಪೂರ್ವ ಅವಕಾಶ. ದೇಶದ ಪ್ರತಿ ಪ್ರಜೆಯು ಆಸ್ಪತ್ರೆ ಮತ್ತು ವೈದ್ಯರನ್ನು ನೆನೆಯುವ ಸಮಯ. ಸೇವೆಗಾಗಿ ಒಂದು ಸುಸಮಯ. ಹಣ ಯಾವಾಗಲಾದರೂ ಮಾಡಬಹುದು. ಆದರೆ ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆ ತೋರುವುದು ಬಹುಮುಖ್ಯ. ಕೇವಲ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲ ವೈಯಕ್ತಿಕವಾಗಿ ಸಹ ಸಮಾಜಕ್ಕೆ ಕೊಡಬಹುದಾದ ಬಹುದೊಡ್ಡ ಕೊಡುಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದು.
ದುಡ್ಡಿನಿಂದ ಎಲ್ಲವನ್ನೂ ಕೊಳ್ಳಬಹುದು ಆದರೆ ಆರೋಗ್ಯವನ್ನಲ್ಲ, ಆದರೆ ಇಂದು ಅನಾರೋಗ್ಯದ ಹೆಸರಿನಲ್ಲಿ ದುಡ್ಡನ್ನು ಕೊಳ್ಳುತ್ತಿರುವುದು ವೈದ್ಯಕೀಯ ಲೋಕದ ಕಳಂಕ ಎಂದು ಕರೆಯಬಹುದು.
ಹೆಣದ ಮೇಲೆ ಹಣ, ಅಜ್ಞಾನ ಮೇಲೆ ಹಣ, ಜೀವ ಭಯದ ಮೇಲೆ ಹಣ, ಸಂಬಂಧಗಳ ಮೇಲೆ ಹಣ, ತುರ್ತು ಪರಿಸ್ಥಿತಿಯ ಮೇಲೆ ಹಣ, ಮಾನವೀಯತೆಯ ಮೇಲೆ ಹಣ ಹೀಗೆ ಮನುಷ್ಯನ ಬದುಕಬೇಂಬ ಆಸೆಯ ಮೇಲೆ ಹಣ ಮಾಡತೊಡಗಿದರೆ ಮಂದೆ ಇದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಈಗಲೂ ಕಾಲ ಮಿಂಚಿಲ್ಲ. ಅನೇಕ ಮಾನವೀಯ ಗುಣದ ಜನಸ್ನೇಹಿ ಸಮಾಜಮುಖಿ ವೈದ್ಯರುಗಳು ಸಾಕಷ್ಡು ಇದ್ದಾರೆ. ಅವರ ಘನತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ವೈದ್ಯಕೀಯ ಸಂಘಟನೆಗಳು ತಮ್ಮಲ್ಲೇ ಚರ್ಚೆ ಮಾಡಿಕೊಂಡು ಮಾನವೀಯತೆಯ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದ ಸೇವೆ ನೀಡಿದಲ್ಲಿ ಅವರದೇ ಮೌಲ್ಯ ಉಳಿಯುತ್ತದೆ.
ಕೇವಲ 50 ವರ್ಷಗಳ ಹಿಂದೆ ಇದೇ ಡಾಕ್ಟರುಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದರು, ರೋಗಿಗಳೊಂದಿಗೆ ಯಾವ ರೀತಿಯ ಸಂಬಂಧ ಉಳಿಸಿಕೊಂಡಿದ್ದರು ಎಂಬುದನ್ನು ಒಮ್ಮೆ ಅವಲೋಕನ ಮಾಡಿ ಅಥವಾ ಹಿರಿಯರಿಂದ ಕೇಳಿ ತಿಳಿಯಿರಿ…..
ಆಸ್ಪತ್ರೆಗಳು ಸಂಜೀವಿನಿ ಸಿಗುವ ಕಾಡುಗಳು ಎಂಬ ಭಾವನೆಗಳು ಮರೆಯಾಗಿ ಯಮಧೂತರ ಆವಾಸಸ್ಥಾನ ಎಂಬಂತೆ ಭಾಸವಾಗುತ್ತಿರುವುದು ವಿಷಾದನೀಯ. ಸಾಮಾನ್ಯ ಜನರ ಆಂತರ್ಯದ ಧ್ವನಿಯನ್ನು ಬೇಗ ಗುರುತಿಸಿ ಅತ್ಯಂತ ಕಷ್ಟ ಪಟ್ಟು ಅನೇಕ ವರ್ಷಗಳಿಂದ ಉಳಿಸಿಕೊಂಡಿರುವ ” ವೈದ್ಯೋ ನಾರಾಯಣೋ ಹರಿ ” ಎಂಬ ನಾಣ್ಣುಡಿಯನ್ನು ನಿಜ ಮಾಡಲು ಪ್ರಯತ್ನಿಸಿ ಎಂಬ ಮನವಿಯೊಂದಿಗೆ…………..
- ವಿವೇಕಾನಂದ. ಹೆಚ್.ಕೆ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
ಏಕಾದಶಿ ಉಪವಾಸದ ಬಗ್ಗೆ ವೈಜ್ಞಾನಿಕ ಚಿಂತನೆ ಏನು ಹೇಳುತ್ತದೆ?