ಬೆಳೆಯೂ ನಿನ್ನದೇ, ಬೆಲೆಯೂ ನಿನ್ನೆದೆ ……ಎಪಿಎಂಸಿ ಕಾಯ್ದೆಗೆ ತಿದ್ದಪಡಿ ರೈತರಿಗೆ ಲಾಭ – ನಷ್ಟ ಎಷ್ಟು ?

Team Newsnap
5 Min Read

ಸಂಪಾದಕೀಯ – ಕೆ.ಎನ್.ರವಿ

ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಈ ಕಾಯ್ದೆಯ ಅಂಗೀಕಾರವನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ರೈತ ಸಮೂಹವೂ ಕೂಡ ಬೀದಿಗೆ ಇಳಿದು ಹೋರಾಟ ಮಾಡುತ್ತಿದೆ.
ವಾಸ್ತವವಾಗಿ ಈ ಕಾಯ್ದೆಯಿಂದ ರೈತರಿಗಾಗುವ ಲಾಭ ಮತ್ತು ನಷ್ಟಗಳ ಬಗ್ಗೆ ವಿರೋಧ ಪಕ್ಷಗಳು ಅಷ್ಟಾಗಿ ಯೋಚಿಸಿದಂತೆ ಕಾಣುತ್ತಿಲ್ಲ. ಸ್ವತಃ ಅನೇಕ ರೈತರಿಗೆ ಈ ಹೊಸ ಕಾಯ್ದೆಯಿಂದ ಆಗುವ ಲಾಭಗಳ
ಬಗ್ಗೆ ತಿಳಿದಿಲ್ಲ. ಎಪಿಎಂಸಿಯಲ್ಲಿ ದಲ್ಲಾಳಿಗಳು, ಎಪಿಎಂಸಿ ಆಡಳಿತ ಮಂಡಳಿ ಹಾಗೂ ಜನ ಪ್ರತಿನಿಧಿಗಳು, ರೈತರನ್ನು ಹೇಗೆ ಸುಲಿಗೆ, ಶೋಷಣೆ ಮಾಡುತ್ತಿದ್ದರು? ಈ ಕಾರಣದಿಂದ ರೈತರಿಗೆ ಹೇಗೆ ಅನ್ಯಾಯವಾಗುತ್ತಿದೆ ? ಎನ್ನುವುದರ ಬಗ್ಗೆ ವಿವರ ಇಲ್ಲಿದೆ.

ಪ್ರಸ್ತುತ 90% ಕ್ಕಿಂತ ಹೆಚ್ಚಿನ ರೈತರಿಗೆ ಸದ್ಯಕ್ಕೆ ಎಪಿಎಂಸಿ ಹಾಗೂ ಎಂಎಸ್ ಪಿ ಯಿಂದ ಯಾವುದೇ ಲಾಭ ಸಿಗುತ್ತಿಲ್ಲ. ರೈತರು ಈಗಲೂ ಖಾಸಗಿಯವರನ್ನೇ ನೆಚ್ಚಿಕೊಂಡಿದ್ದಾರೆ.

farm

ರೈತರ ಆತ್ಮಹತ್ಯೆ ಪ್ರಕರಣಗಳು ವರ್ಷಂಪ್ರತೀ ಏಕೆ ಹೆಚ್ಚುತ್ತಿವೆ? ಇಷ್ಟೊಂದು ದೊಡ್ಡ ಪ್ರಮಾಣದ ರೈತರ ಬೆಳೆಗಳ ಮಾರಾಟಕ್ಕೆ ಖಾಸಗಿ ಮಾರುಕಟ್ಟೆ, ವರ್ತಕರು, ಕಾರ್ಪೊರೇಟ್ ಕುಳಗಳೇ ಗತಿಯಾಗಿವೆ. ಆದರೂ ಆರ್ಥಿಕ ಪರಿಸ್ಥಿತಿ ಇನ್ನೂ ಏಕೆ ಸುಧಾರಿಸಿಲ್ಲ? ಆರ್ಥಿಕ ಸಮೀಕ್ಷೆಗಳ ಪ್ರಕಾರ ದೇಶದ 17 ರಾಜ್ಯಗಳಲ್ಲಿ ಕೃಷಿ ಕುಟುಂಬಗಳ (ದೇಶದ ಶೇ 50 ಜನಸಂಖ್ಯೆಗಿಂತ ಹೆಚ್ಚು ) ವಾರ್ಷಿಕ ವರಮಾನ 70,000 ರೂಪಾಯಿಗಳಿಗಿಂತಲೂ ಕಡಿಮೆ. ಖಾಸಗಿಯವರನ್ನೇ ನೆಚ್ಚಿಕೊಂಡಿರುವ ದೇಶದ ಶೇ. 90 ರಷ್ಟು ರೈತರಿಗೆ ಅದೇಕೆ ಇದುವರೆಗೂ ಅವರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ? ಈ ಕಾರಣಕ್ಕಾಗಿ ಎಪಿಎಂಸಿ ತಿದ್ದುಪಡಿ ಬೆಳೆಯೂ ನಿನ್ನದೇ, ಬೆಲೆಯೂ ನಿನ್ನದೇ ನೀತಿಯಿಂದ, ರೈತರು ತನಗೆ ಇಷ್ಟವಾದ ಕಡೆ ಉತ್ಪನ್ನ ಮಾರಾಟ ಮಾಡುವ ಮೂಲಕ ದಲ್ಲಾಳಿ , ವ್ಯಾಪಾರಸ್ಥರ ಹೆಡಮುರಿ ಕಟ್ಟಿ ಹೊಸ ದಿಕ್ಕಿಗೆ ರೈತರು ಹೆಜ್ಜೆ ಹಾಕಬಾರದೇಕೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ

ಎಪಿಎಂಸಿಯಲ್ಲಿನ ಲೋಪಗಳೇನು ?

  • ಎಪಿಎಂಸಿ ಸ್ಥಾಪನೆಯ ಮೂಲ ಉದ್ದೇಶ ರೈತ ಹಿತ ಕಾಯುವುದು.
  • ರೈತರು ತಾವು ಬೆಳೆದ ಬೆಳೆಗಳನ್ನು ತಂದು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಒಂದು ಕೇಂದ್ರ ಸ್ಥಾನವೇ ಎಪಿಎಂಸಿ
  • ಇಲ್ಲಿ ರೈತನಿಗೆ ತನ್ನ ಬೆಳೆಗೆ ಬೆಲೆ ನಿಗದಿ ಮಾಡುವ ಅವಕಾಶವಿಲ್ಲ.
  • ದಲ್ಲಾಳಿಗಳೇ ನಿಗದಿ ಮಾಡಿದ ದರಕ್ಕೆ ತನ್ನ ಬೆಳೆ ಮಾರಾಟ ಮಾಡಬೇಕು.
  • ಉತ್ಪನ್ನಗಳ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗುತ್ತಿದೆ.
  • ಆದರೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರ ಆಣತಿಯಂತೆ ವಹಿವಾಟು ನಡೆಯುತ್ತದೆ. ಬೆಲೆ ನಿಗದಿಯಾಗುತ್ತದೆ.
  • ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರೇ ಬೇಡಿಕೆ – ಪೂರೈಕೆಯನ್ನು ಸೃಷ್ಠಿ ಮಾಡುವ ಕಲೆ ಹೊಂದಿದ್ದಾರೆ. ಅದು ರೈತ ಸಮುದಾಯಕ್ಕೆ ಗೊತ್ತಾಗುವುದಿಲ್ಲ.
  • ರೈತರನ್ನು ಶೋಷಣೆ ಮಾಡಲು ಹತ್ತಾರು ಮಾರ್ಗಗಳು ಉಂಟು. ಪ್ರತಿ ಉತ್ಪನ್ನಗಳ ಮೇಲೆ ಎಪಿಎಂಸಿಗೆ ನೀಡಬೇಕಾದ ಶೇ.2 ರಷ್ಟು ತೆರಿಗೆಯನ್ನೂ ಕೂಡ ದಲ್ಲಾಳಿಗಳು,

ವ್ಯಾಪಾರಸ್ಥರು ರೈತರಿಂದಲೇ ವಸೂಲಿ ಮಾಡುತ್ತಾರೆ. ಅದು ರೈತರಿಗೆ ಒಮ್ಮೊಮ್ಮೆ ಗೊತ್ತಾಗುತ್ತದೆ. ಮತ್ತೊಮ್ಮೆ ಗಮನಕ್ಕೆ ಬರುವುದಿಲ್ಲ.

ರಾಜಕೀಯ ಹಸ್ತಕ್ಷೇಪ ಹೇಗೆ?

  1. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಎಪಿಎಂಸಿ ಆಡಳಿತ ಮಂಡಳಿ ರಾಜಕೀಯ ಹಸ್ತಕ್ಷೇಪದಲ್ಲೇ ನಡೆಯುತ್ತದೆ.
  2. ರೈತರ ಹಿತಾಸಕ್ತಿಗೆ ಆದ್ಯತೆ ನೀಡುವ ಭರವಸೆ ನೀಡಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ನಂತರ ಮಂಡಳಿಯ ನಿರ್ದೇಶಕರುಗಳು ಮಂಡಳಿಯನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಾರೆ.
  3. ಈಗ ಹೇಳಿ ಎಷ್ಟು ರೈತರಿಗೆ ಈ ಎಪಿಎಂಸಿಗಳಿಂದ ಲಾಭವಾಗಿದೆ? ಎಪಿಎಂಸಿ ವ್ಯಾಪ್ತಿಯಲ್ಲಿ ರಸ್ತೆಗಳಿವೆ. ಚರಂಡಿಗಳೂ ಇವೆ.ಅವುಗಳ ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ನಡೆಸುವುದು ಉಂಟು, ರೈತರಿಗಾಗಿ ಕಣ ಮಾಡಿಕೊಡಲು ಅವಕಾಶವೂ ಇದೆ. ಸರ್ಕಾರ ರೈತರ ಹಿತರಕ್ಷಣೆ ಮಾಡಲು ಹಲವಾರು ಯೋಜನೆಗಳನ್ನು ರೂಪಿಸಬೇಕು. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಆಡಳಿತ ಮಂಡಳಿಗಳು ಎಷ್ಟು ಆಸಕ್ತಿ ತೋರುತ್ತವೆ ?
  4. ವಿದೇಶ , ದೇಶ ಹಾಗೂ ರಾಜ್ಯದ ನಾನಾ ಭಾಗಗಳ ಎಪಿಎಂಸಿಗಳ ಅಧ್ಯಯನ ಮಾಡಲು ವರ್ಷಕ್ಕೆ ಒಂದು ಬಾರಿ ಆಡಳಿತ ಮಂಡಳಿ ಸದಸ್ಯರು ಅಧ್ಯಯನ ಪ್ರವಾಸ ಮಾಡುವುದೇ ಸಾರ್ಥಕ ಕೆಲಸ.
  5. ಅಧ್ಯಕ್ಷರು, ಸದಸ್ಯರಿಗಾಗಿ ಕಾರು ಖರೀದಿ, ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ, ರಸ್ತೆ, ಕಣಗಳ ಕಾಮಗಾರಿಗಳಲ್ಲಿ ನೇರವಾಗಿ ಅಲ್ಲದೇ ಹೋದರೂ ಕಣ್ಣಿಗೆ ಕಾಣದ ರೀತಿಯಲ್ಲಿ ನಡೆಯುವ ಹಸ್ತಕ್ಷೇಪ, ಲಾಭದ ನಿರೀಕ್ಷೆಗಳು ಇದ್ದೇ ಇವೆ.

ಎಪಿಎಂಸಿ ಇಲ್ಲದ ಕಡೆ ಪರಿಸ್ಥಿತಿ ಹೀಗಿದೆ

  • ಎಪಿಎಂಸಿ ಕಾಯ್ದೆಯನ್ನು 14 ವರ್ಷಗಳ ಹಿಂದೆಯೇ ತೆಗೆದು ಹಾಕಿರುವ ಬಿಹಾರದ ರೈತರ ಪರಿಸ್ಥಿತಿ ಒಂದು ಬಾರಿ ಅವಲೋಕನ ಮಾಡೋಣ. ಅಲ್ಲಿ ಸರ್ಕಾರಿ ಮಾರುಕಟ್ಟೆಗಳೂ ಇಲ್ಲ, ಖಾಸಗಿಯವರದ್ದೂ ಸುದ್ದಿ ಇಲ್ಲ.
  • ಕೆಲವು ಕಳ್ಳ ಮಧ್ಯವರ್ತಿಗಳು ಅರ್ಧ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿ ಪಂಜಾಬ್, ಹರಿಯಾಣ ಮುಂತಾದ ರಾಜ್ಯಗಳಿಗೆ ಮಾರುತ್ತಾರೆ.
  • ಮೊನ್ನೆ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಖಾಸಗೀ ದಲ್ಲಾಳಿಗಳು ಖರೀದಿಗೆ ಇಳಿಯಲೇ ಇಲ್ಲ. ಎಪಿಎಂಸಿ ಇದ್ದರೆ ಕನಿಷ್ಟ ಬೆಲೆಗಾದರೂ ಖರೀದಿಸಿ, ದಾಸ್ತಾನು ಮಾಡುತ್ತಿದ್ದರು.
  • ಒಂದು ಸಣ್ಣ ಕಲ್ಪನೆ ಮಾಡಿಕೊಳ್ಳಿ . ಲಾಕ್ಡೌನ್ ಸಮಯದಲ್ಲಿ ನಮ್ಮಲ್ಲಿ ಎಪಿಎಂಸಿ ಮಳಿಗೆಗಳು ಇಲ್ಲ ಎಂದಿದ್ದರೆ ಸಮಸ್ಯೆ ತುಂಬಾ ಜಟಿಲವಾಗುತ್ತಿತ್ತು.
  • ಎಪಿಎಂಸಿ ಮಳಿಗೆಗಳಲ್ಲಿ ಇದ್ದ ಕಡೆ ಉತ್ಪನ್ನಗಳನ್ನು ದಾಸ್ತಾನು ಮಾಡಿ ನಂತರ ವಿತರಣೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು. ಖಾಸಗಿಯವರ ಕೈಯಲ್ಲಿದ್ದರೆ, ದೇಶವೇ ಉಪವಾಸ ಬೀಳುತಿತ್ತು.
  • ರೈತರು ಮಾರಿದ ಉತ್ಪನ್ನಗಳಿಗೆ ಹಣದ ಗ್ಯಾರಂಟಿ ಇರುವುದಿಲ್ಲ. ಅಲ್ಲದೆ ದರಗಳೂ ಸ್ಪರ್ಧಾತ್ಮಕವಾಗಿ ಇರುವುದಿಲ್ಲ. ರೈತ ಮತ್ತೆ ಮತ್ತೆ ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ದಲ್ಲಾಳಿ ಮತ್ತು ವ್ಯಾಪಾರಸ್ಥರನ್ನು ನಿಯಂತ್ರಿಸುವ ಸರ್ಕಾರಿ ವ್ಯವಸ್ಥೆಯೇ ಇಲ್ಲದೇ ಹೋದರೆ ರೈತರು ಮತ್ತೆ ಬೀದಿಗೆ ಬಂದು ನಿಲ್ಲುತ್ತಾರೆ.
farm3

ಎಪಿಎಂಸಿಯ ವೈಫಲ್ಯಗಳು, ಸುಧಾರಣೆಯ ಮಾರ್ಗಗಳು

  1. ಮಧ್ಯವರ್ತಿಗಳ ಮಾಫಿಯಾ ಮುಕ್ತ ಮಾಡಬೇಕು ಅಂದರೆ ಎಪಿಎಂಸಿ ಕಾಯಿದೆಗೆ ಕತ್ತರಿ ಹಾಕಬೇಕು ಎಂದರ್ಥವಲ್ಲ.
  2. ರೈತರು ತಮ್ಮ ಬೆಳೆಗಳನ್ನು ತಮ್ಮ ಮನೆಯ ಐದು ಕಿ ಮಿ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಮಾರಬೇಕಾದರೆ, ದೇಶಕ್ಕೆ ಸುಮಾರು 42,000 ಕೃಷಿ ಮಳಿಗೆಗಳ ಅಗತ್ಯವಿದೆ. ಸದ್ಯಕ್ಕೆ ನಮ್ಮಲ್ಲಿರುವ ಸರ್ಕಾರಿ ನಿಯಂತ್ರಿತ ಮಳಿಗೆಗಳ ಸಂಖ್ಯೆಯು 7000 ಕ್ಕಿಂತಾ ಕಡಿಮೆ.
  3. ಅಧ್ಯಯನ ಹಾಗೂ ಅಂಕಿ-ಅಂಶಗಳ ಪ್ರಕಾರ ಎಂಪಿಎಂಸಿ ಹಾಗೂ ಕನಿಷ್ಟ ಬೆಂಬಲ ಬೆಲೆಯ ಲಾಭ ಸಂಪೂರ್ಣವಾಗಿ ಪಡೆಯುತ್ತಿರುವ ರೈತರ ಪ್ರಮಾಣ ಶೇ.10 ರಷ್ಟು ಮಾತ್ರ.
  4. ಶಾಂತ ಕುಮಾರ್ ಸಮಿತಿಯ ವರದಿ ಪ್ರಕಾರ ಕೇವಲ ಶೇ. 6 ರೈತರು ಮಾತ್ರ ಬೆಂಬಲ ಬೆಲೆಯ ಲಾಭ ಪಡೆಯುತ್ತಿದ್ದಾರೆ . ಉಳಿದ ಶೇ 94 ರಷ್ಟು ರೈತರು ಈಗಲೂ ಖಾಸಗಿಯವರ ಮೇಲೆಯೇ ಅವಲಂಬಿತರಾಗಿದ್ದಾರೆ.
  5. ಈ ಕಾರಣಕ್ಕಾಗಿ ಎಪಿಎಂಸಿ ಕಾಯ್ದೆಗೆ ಸುಧಾರಣೆ ತಂದು, ರೈತರ ಬೆಳೆಗೆ ಇನ್ನೂ ಹೆಚ್ಚಿನ ಬೆೆಂಬಲ ಬೆಲೆಗಳನ್ನು ಪ್ರಕಟಿಸಬೇಕು.
  6. ಎಪಿಎಂಸಿಗಳು ಇಲ್ಲದ ಪ್ರದೇಶದಲ್ಲಿ ಖಾಸಗಿ ಮಳಿಗೆಗಳನ್ನು ಸ್ಥಾಪಿಸಿ, ಮಧ್ಯವರ್ತಿಗಳ ಮಾಫಿಯಾವನ್ನು ಬುಡಮೇಲು ಮಾಡಬೇಕು.

ಎಪಿಎಂಸಿಗೆ ಈ ದಾರಿಯಲ್ಲೂ ಸುಧಾರಣೆ ತನ್ನಿ

  • ಸಧ್ಯಕ್ಕೆ ಸರ್ಕಾರ ಕೊಡುತ್ತಿರುವ ಬೆಂಬಲ ಬೆಲೆ ಹೆಚ್ಚಿನ ಉತ್ಪನ್ನಗಳ ಉತ್ಪಾದನಾ ಖರ್ಚನ್ನೂ ತಂದು ಕೊಡುತ್ತಿಲ್ಲ.
  • ಇವತ್ತಿನ ಪರಿಸ್ಥಿತಿಯಲ್ಲಿ ರೈತರಿಗೆ ತಮ್ಮ ಬೆಳೆಗೆ ತಕ್ಕಮಟ್ಟಿಗೆ ಬೆಲೆ ಹಾಗೂ ಮಾರುಕಟ್ಟೆಯನ್ನು ಒದಗಿಸಿಕೊಡುತ್ತಿರುವ ಸಂಸ್ಥೆಗಳು ಎಂದರೆ ಎಂಎಸ್ಪಿ ಹಾಗೂ ಎಪಿಎಂಸಿಗಳೇ.
  • ಈ ಸರಪಣಿಯನ್ನು ಮುರಿಯುವ ಪ್ರಯತ್ನ ರೈತಾಪಿ ವರ್ಗದವರ ಬಾಳನ್ನೇ ಕಿತ್ತುಕೊಳ್ಳಬಲ್ಲದು.
  • ಎಪಿಎಂಸಿ ದಲ್ಲಾಳಿಗಳ ಮಾಫಿಯಾವನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ರೈತರು ಎಪಿಎಂಸಿಗೆ ಹೋಗದಂತೆ ಮಾಡುವ ಕ್ರಮ ಸರಿ ಎನ್ನಿಸುವುದಿಲ್ಲ.
  • ಎಪಿಎಂಸಿ ಮಳಿಗೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಬೇಕಾದರೆ ಎಪಿಎಂಸಿ ಇಲ್ಲದೆಡೆ ಖಾಸಗಿ ಮಳಿಗೆಗಳನ್ನು ಸ್ಥಾಪಿಸಿ, ದಲ್ಲಾಳಿ ಮಾಫಿಯಾವನ್ನು ಭಂಗಮಾಡಬೇಕು. ರೈತರನ್ನು ಸಂಪೂರ್ಣವಾಗಿ ಖಾಸಗಿಯವರ ಕೈಗೆ ಕೊಡುವುದು ರೈತರ ಕಷ್ಟಗಳ ಪರಿಹಾರಕ್ಕಿಂತ ದೊಡ್ಡ ಸಮಸ್ಯೆ ತಲೆದೋರುತ್ತದೆ.

Share This Article
Leave a comment