ನಿರೂಪಕರಾಗಿ ಬದಲಾದ ಪತ್ರಕರ್ತರು……
ವಿದೂಷಕರಾಗಿ ವರ್ತಿಸುವ ಪತ್ರಕರ್ತರು……
ಹೊಗಳು ಭಟ್ಟರು ಅಥವಾ ತೆಗಳು ಭಟ್ಟರ ಪಾತ್ರದಾರಿಗಳಾಗಿ ಬದಲಾದ ಪತ್ರಕರ್ತರು……
ವಿವೇಚನೆಯಿಂದ ವಿಧ್ವಂಸಕ ಮನೋಭಾವಕ್ಕೆ ಬಲಿಯಾದ ಪತ್ರಕರ್ತರು….
ವಿಷಯಕ್ಕಿಂತ ವೇಗಕ್ಕೆ ಸಿಲುಕಿ ನಾಶವಾದ ಪತ್ರಕರ್ತರು……
ಶುದ್ದತೆಯಿಂದ ಮಾಲಿನ್ಯಕ್ಕೆ,
ಬುದ್ಧಿವಂತಿಕೆಯಿಂದ ಮೂರ್ಖತನಕ್ಕೆ ಜಾರಿದ ಪತ್ರಕರ್ತರು…..
ಜನಪ್ರಿಯತೆಯ ಹಿಂದೆ ಬಿದ್ದು ಸತ್ಯವನ್ನು ಸಮಾಧಿ ಮಾಡಿದ ಪತ್ರಕರ್ತರು…..
ಸೂಕ್ಷ್ಮತೆಯಿಂದ ಭಂಡತನಕ್ಕೆ ಜಿಗಿದ ಪತ್ರಕರ್ತರು……
ವೈಚಾರಿಕತೆಯಿಂದ ಮೌಢ್ಯಕ್ಕೆ, ವಾಸ್ತವತೆಯಿಂದ ಭ್ರಮೆಗೆ ಜನರನ್ನು ದೂಡಿದ ಪತ್ರಕರ್ತರು…..
ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಚಿನ್ನದ ಸೂಜಿಯಿಂದ ಕಣ್ಣಿಗೆ ಚುಚ್ಚಿಕೊಂಡು ಕುರುಡಾದ ಪತ್ರಕರ್ತರು…..
ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಹೊಸ ವರ್ಷದ ಸಂದರ್ಭದಲ್ಲಿ ಅದನ್ನು ಅತ್ಯಂತ ಮಹೋನ್ನತ ಸಂಭ್ರಮ ಎಂದು ವಿಜೃಂಭಿಸುವವರು ಇವರೇ, ಮತ್ತೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳುವವರೂ ಇವರೇ, ಜನರ ಮನರಂಜನೆಯ ಅಭಿವ್ಯಕ್ತಿಗೆ ಯಾವುದೇ ನಿರ್ಭಂದ ಇರಬಾರದು ಎನ್ನುವವರು ಇವರೇ,
ಅಲ್ಲಿ ನಡೆದ ಕೆಲವು ಸಣ್ಣ ಪುಟ್ಟ ಘಟನೆಗಳನ್ನೇ ಮತ್ತೆ ಮತ್ತೆ ಪ್ರದರ್ಶಿಸಿ ಇಡೀ ವಿಶ್ವದಲ್ಲೇ ರಾಜ್ಯಕ್ಕೆ ಆದ ಅವಮಾನ ಎಂದು ಹೇಳುವವರೂ ಇವರೇ…..
ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು, ಆ ವಿಷಯದ ಒಳಗಿನ ಸಂದೇಶ ಏನಾಗಿರಬೇಕು,
ಮೇಲ್ನೋಟದ ಸತ್ಯಕ್ಕಿಂತ ಆಂತರ್ಯದ ಮರ್ಮವೇನು, ಈ ಆಧುನಿಕ ಸಮಾಜದ ಹೆಣ್ಣು ಗಂಡು ಇಬ್ಬರ ಮಾನಸಿಕತೆ ಏನು ಎಂಬುದನ್ನು ಸಂಯಮದಿಂದ ಜವಾಬ್ದಾರಿಯಿಂದ ವಿಮರ್ಶಿಸದೆ ಇವರೂ ಅವರ ತರಹವೇ ಸ್ಟುಡಿಯೋಗಳಲ್ಲಿ ಕುಳಿತು ಆಡುತ್ತಾರೆ.
ಇನ್ನು ಕೆಲವು ಸಿನೆಮಾ ಸ್ಟಾರ್ ಗಳನ್ನು ಸಂದರ್ಶನ ಮಾಡುವಾಗ ಇವರು ಅವರಿಗೆ ಕೊಡುವ ಬಿಲ್ಡಪ್ ಗಳು ನಟನಟಿಯರು ಅತಿಮಾನವರೇ ಇರಬೇಕು ಎನಿಸುತ್ತದೆ.
ಸಿನಿಮಾ ಒಂದು ಮನರಂಜನಾ ಉದ್ಯಮ. ಅದರಲ್ಲಿ ನಟನೆ ಒಂದು ಕಲಾ ಮಾಧ್ಯಮ. ಅದರಲ್ಲಿ ಒಂದಷ್ಟು ಸೌಂದರ್ಯ, ಪ್ರತಿಭೆ, ಶ್ರಮ, ಗಿಮಿಕ್ , ಅದೃಷ್ಟ ಎಲ್ಲವೂ ಸೇರಿ ಜನಪ್ರಿಯತೆ ಗಳಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಯಾವುದೇ ಅತಿ ಅಮಾನುಷ ಶಕ್ತಿ ಅವರಿಗೆ ಇರುವುದಿಲ್ಲ. ಸಹಜವಾಗಿ ಎಲ್ಲಾ ಮನುಷ್ಯ ಪ್ರಾಣಿಗಳಂತೆ ಅವರಿಗೂ ಸಹಜ ಏರಿಳಿತಗಳ ಬದುಕು ಇರುತ್ತದೆ.
ಆದರೆ ಅವರನ್ನು ಮೆಚ್ವಿಸುವ ಭರದಲ್ಲಿ ಕಟ್ಟಾ ಅಭಿಮಾನಿಗಳಿಗಿಂತ ಹೆಚ್ಚಾಗಿ ದೈವಾಂಶ ಸಂಭೂತರಂತೆ ಅವರನ್ನು ವರ್ಣಿಸಿದರೆ ಸಮಾಜಕ್ಕೆ ತಲುಪುವ ಸಂದೇಶವಾದರೂ ಏನು ? ಆ ನಟಿಯ ಅಭಿನಯ, ಸಾಮಾಜಿಕ ಜವಾಬ್ದಾರಿ, ವೈಯಕ್ತಿಕ ಹೊಣೆಗಾರಿಕೆ, ಅವರ ನಟನೆಯ ದೋಷಗಳು ಎಲ್ಲವನ್ನೂ ಹೇಳುವವರು ಯಾರು. ಜನಪ್ರಿಯತೆಯ ಹಿಂದೆ ಬಿದ್ದು ಪತ್ರಕರ್ತರೇ ಹೊಗಳು ಭಟರಾದರೆ ವಾಸ್ತವಿದ ವಿವರಣೆ ಕೊಡುವವರಾರು….
ರಾಜಕೀಯ ವಿಷಯದಲ್ಲೋ ಸೂಕ್ಷ್ಮತೆ ಕಳೆದುಕೊಂಡು ಬಹಳ ದಿನಗಳಾಗಿವೆ. ತಮ್ಮ ನಿರೂಪಣೆಯಿಂದ, ಬಾಯಿ ಬುಡುಕತನದಿಂದ, ಅಜ್ಞಾನದಿಂದ, ಮಾತುಕತೆಯಿಂದ ಎಲ್ಲರ ನಡುವೆ ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯಾರೋ ಏನೋ ಲೋಕಾಭಿರಾಮವಾಗಿ ಹೇಳಿದ ಮಾತುಗಳನ್ನು, ಅದರ ಹಿನ್ನಲೆಯನ್ನು ಗಮನಿಸದೆ ಹಸಿಹಸಿಯಾಗಿ ಪ್ರಸಾರ ಮಾಡಿ ಇಡೀ ಘಟನೆಗಳ ದಿಕ್ಕನ್ನೇ ತಪ್ಪಿಸುತ್ತಾರೆ. ಸಿನಿಮಾ ಹಾಡುಗಳನ್ನು ರಾಜಕಾರಣಿಗಳ ವ್ಯಕ್ತಿತ್ವ ಅಳೆಯಲು ಉಪಯೋಗಿಸಿ ನಟೆಪಾಟಲು ಮಾಡುತ್ತಾರೆ. ಸಕಾರಾತ್ಮಕ ವಿಮರ್ಶೆಗಳನ್ನು ತುಳಿದು ನಕಾರಾತ್ಮಕ ವಿಷಯಗಳಿಗೆ ಸಂಪೂರ್ಣ ಸಮಯ ಮೀಸಲಿಡುತ್ತಾರೆ.
ಇನ್ನು ಮೌಢ್ಯಗಳ ವಿಷಯದಲ್ಲಿ ಟಿವಿ ನ್ಯೂಸ್ ಮಾಧ್ಯಮಗಳನ್ನು ಸಾಮಾಜಿಕ ಭಯೋತ್ಪಾದಕರೆಂದು ನಿಸ್ಸಂಶಯವಾಗಿ ಕರೆಯಬಹುದು. ಯಾವುದೇ ವೈಚಾರಿಕ ಪ್ರಜ್ಞೆ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಠ ಪ್ರಮಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುವವರು ಪತ್ರಕರ್ತರೆಂಬ ಭ್ರಮೆಗೆ ಒಳಗಾದ ನಿರೂಪಕರು……
ಮೌಢ್ಯಗಳನ್ನು ಬಿತ್ತುವವರು ಇವರೇ, ಮತ್ತೆ ಅದನ್ನು ಮೌಢ್ಯ ಎಂದು ಜರಿಯುವವರು ಇವರೇ, ಒಟ್ಟಿನಲ್ಲಿ ಬೇಜವಾಬ್ದಾರಿಯಿಂದ ಎಲ್ಲವನ್ನೂ ಸುದ್ದಿ ಮಾಡುವವರೂ ಇವರೇ…..
ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತ, ತಿಳಿವಳಿಕೆಯ, ಸೂಕ್ಷ್ಮ ಸಂವೇದನೆಯ ಜನರನ್ನು ಒಳಗೊಂಡಿರಬೇಕು. ಅವರನ್ನು ಪತ್ರಕರ್ತರು ಎಂದು ಕರೆಯಲಾಗುತ್ತದೆ. ಅವರ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ. ಆದರೆ ಈಗ ಟಿವಿ ವಾಹಿನಿಗಳನ್ನು ವೀಕ್ಷಿಸಿದರೆ ಪತ್ರಕರ್ತರೆಂಬ ಪರಿಕಲ್ಪನೆಯೇ ಬದಲಾದಂತೆ ಭಾಸವಾಗುತ್ತಿದೆ.
ಈಗ ಜನರು ಎಚ್ಚೆತ್ತುಕೊಳ್ಳುವ ಮೊದಲು ಮಾಧ್ಯಮಗಳೇ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆದಷ್ಟು ಶೀಘ್ರ ಆ ಬದಲಾವಣೆಯ ನಿರೀಕ್ಷೆಯಲ್ಲಿ
- ವಿವೇಕಾನಂದ. ಹೆಚ್.ಕೆ.
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!