January 12, 2025

Newsnap Kannada

The World at your finger tips!

deepa1

ವಕೀಲಿಕೆ – ಚರ್ಚೆ – ಮಂಥನ ಇತ್ಯಾದಿ…….

Spread the love

ರಾಷ್ಟ್ರದ ಸಂಸತ್ತಿನಿಂದ ಹಿಡಿದು ಬೀದಿ ಬದಿಯ ಟೀ ಅಂಗಡಿಯವರೆಗೆ ಒಂದಲ್ಲಾ ಒಂದು ವಿಷಯದ ಬಗೆಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ……………..

ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತನ್ನ ಅರಿವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಯಾವ ಪಕ್ಷವೋ, ಧರ್ಮವೋ, ಜಾತಿಯೋ, ಆಹಾರವೋ, ವ್ಯವಹಾರವೋ,ಇನ್ನಾವುದೋ ಅದಕ್ಕೆ ಮಿತಿಯೇ ಇರುವುದಿಲ್ಲ.

ಮಾಧ್ಯಮಗಳಂತೂ 24×7 ಏನೋ ಒಂದು ವಿಷಯವನ್ನು ಕುರಿತು ಚರ್ಚಿಸುತ್ತಲೇ ಇರುತ್ತವೆ.
FACEBOOK, TWITTER, WATSAPP, INSTAGRAM ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಯಂತು ಇದು ನಿಲ್ಲುವುದೇ ಇಲ್ಲ.

ಆದರೆ…‌…

ಫಲಿತಾಂಶ ಮಾತ್ರ ಇನ್ನಷ್ಟು, ಮತ್ತಷ್ಟು ಗೊಂದಲಕಾರಿಯೇ ಆಗುತ್ತದೆ. ಯಾವ ಚರ್ಚೆಗಳಿಗೂ ಸ್ಪಷ್ಟ ಉತ್ತರ ನೀಡಲಾಗುತ್ತಿಲ್ಲ .

ಅದಕ್ಕೆ ಬಹುಮುಖ್ಯ ಕಾರಣ ಚರ್ಚೆಗಳ ಮೂಲ ಉದ್ದೇಶ ಸತ್ಯದ ಹುಡುಕಾಟವಾಗಿರದೆ, ಬುದ್ದಿ ಪ್ರದರ್ಶನದ, ಮಿತಿಗಳ ಅರಿವಿಲ್ಲದ ಅಜ್ಞಾನವೇ ಇರಬೇಕು ಎಂದು ಭಾವಿಸಬಹುದಾಗಿದೆ.

ಒಬ್ಬ ಚಾಣಾಕ್ಷ ವ್ಯಕ್ತಿ ಯಾವ ವಿಷಯವನ್ನು ಬೇಕಾದರೂ ತನ್ನ ದೃಷ್ಟಿಕೋನಕ್ಕೆ ಒಗ್ಗಿಸಿಕೊಂಡು ಉದಾಹರಣೆಗಳ ಸಮೇತ ಅದನ್ನು ಸಮರ್ಥಿಸಬಹುದು. ಇಲ್ಲಿಯೂ ಬುದ್ದಿಯೇ ವಿಜೃಂಭಿಸುತ್ತದೆ ಸತ್ಯವಲ್ಲ.

ಇನ್ನು ಸತ್ಯ ಯಾವುದೆಂಬುದು ಕೂಡ ಗೊಂದಲಮಯವಾಗಿಯೇ ಇದೆ.
ಸತ್ಯಕ್ಕೂ ಹಲವಾರು ಮುಖಗಳಿರುತ್ತವೆ. ಸಾರ್ವತ್ರಿಕ ಸತ್ಯ, ಸಾಂಧರ್ಬಿಕ ಸತ್ಯ, ಘಟನೆಯ ಸತ್ಯ, ತತ್‌ಕ್ಷಣದ ಸತ್ಯ , ಕಾಲದ ಸತ್ಯ ಹೀಗೆ ಹಲವಾರು.

ಏಕೆಂದರೆ ಈ ಕ್ಣಣದಲ್ಲಿ ಸತ್ಯ ಎಂದು ಭಾವಿಸುವುದು ಕಾಲಾನಂತರದಲ್ಲಿ ಸುಳ್ಳಾಗಬಹುದು. ಇಂದಿನ ಕೆಲವು ಸರಿಗಳು ಮುಂದಿನ ತಪ್ಪುಗಳಾಗಬಹುದು.

ಸತ್ಯ ಕೆಲವೊಮ್ಮೆ ಪ್ರತ್ಯಕ್ಷವಾಗಿ, ಕೆಲವೊಮ್ಮೆ ಪರೋಕ್ಷವಾಗಿ, ಮಗದೊಮ್ಮೆ ಅಗೋಚರವಾಗಿಯೂ ಇರುತ್ತದೆ. ಅದರ ಹುಡುಕಾಟ ನಿರಂತರ.

ಆದರೆ ಕೆಲವರು ಇದನ್ನೇ ಉಪಯೋಗಿಸಿಕೊಂಡು ತಮ್ಮ ವಾಕ್ಚಾತುರ್ಯದಿಂದ ತಾವು ಹೇಳುವುದೇ ಸತ್ಯ ಎಂದು ನಂಬಿಸುತ್ತಾರೆ. ಅದಕ್ಕೆ ಬಹುದೊಡ್ಡ ಉದಾಹರಣೆ ರಾಜಕಾರಣಿಗಳು, ಧರ್ಮಾಧಿಕಾರಿಗಳು ಇತ್ತೀಚೆಗೆ ಮಾಧ್ಯಮದವರು ಇತ್ಯಾದಿಗಳು.

ಸತ್ಯಕ್ಕಿಂತ ಭ್ರಮೆ, ಭಯ, ಭಕ್ತಿ, ಅಜ್ಞಾನ ಮತ್ತು ಭಾವುಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.ಈ ಕಾರಣಕ್ಕಾಗಿಯೇ ಘರ್ಷಣೆಗಳು ನಿರಂತರವಾಗುತ್ತಿವೆ. ನಿಜವಾದ ಸತ್ಯ ಶೋಧಕರು ಇದನ್ನು ವಿರೋಧಿಸುತ್ತಾರೆ. ಆದರೆ ಬಹುಜನರ ನಂಬಿಕೆ ಭಾವನಾತ್ಮಕವಾಗಿಯೇ ಇರುತ್ತದೆ.

ಅದಕ್ಕೆ ದಾರಿಹೋಕರ ಮಾತಿಗಿಂತ ಆ ವಿಷಯಗಳ ನಿಜವಾದ ಪರಿಣಿತರು ನಿರಂತರ ಮತ್ತು ದೀರ್ಘ ಅಧ್ಯಯನದಿಂದ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಆ ಕ್ಷಣದ ಸತ್ಯಗಳೆಂದು ನಾವು ಒಪ್ಪಿಕೊಳ್ಳಬಹುದು.

ಅದು ವೈಧ್ಯಕೀಯ ಕ್ಷೇತ್ರವೇ ಇರಬಹುದು, ಧಾರ್ಮಿಕ ಅಥವಾ ಆಡಳಿತ ವಿಚಾರಗಳೇ ಇರಬಹುದು.
ತಜ್ಞರು ಸತ್ಯದ ಹಲವಾರು ಮುಖಗಳನ್ನು ಪರಿಶೀಲಿಸಿ ಹೇಳಿರುತ್ತಾರೆ.

ಆದರೂ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ, ಅರ್ಥ್ಯೆಸಿಕೊಳ್ಳುವ ಜಾಣ್ಮೆ, ನಮಗೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಈಗಿನಂತೆ ಗೊಂದಲಗಳಲ್ಲಿ, ಅಜ್ಞಾನದಲ್ಲಿಯೇ ಕಾಲ ಕಳೆಯುತ್ತಾ ಬುದ್ಧಿವಂತರೆಂಬ ಭ್ರಮೆಯಲ್ಲಿ, ಸತ್ಯವೋ ಸುಳ್ಳೋ ಒಟ್ಟಿನಲ್ಲಿ ಈ ಕ್ಷಣದ ವ್ಯಾವಹಾರಿಕ ಲಾಭವನ್ನು ಮುಖ್ಯವಾಗಿ ಇಟ್ಟುಕೊಂಡು ಬದುಕಬೇಕಾಗುತ್ತದೆ.

ಹಾಗಾಗುವುದು ಬೇಡ. ವಿಷಯಗಳನ್ನು ಸೃಷ್ಟಿಯ ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಿ, ನಮ್ಮಲ್ಲೇ ಪ್ರಶ್ನಿಸಿಕೊಂಡು ಪ್ರಬುದ್ಧತೆಯಿಂದ ವರ್ತಿಸೋಣ. ಅನವಶ್ಯಕವಾಗಿ ಘರ್ಷಣೆ ನಿಲ್ಲಿಸೋಣ.
ಯಾರೂ ಪರಿಪೂರ್ಣರಲ್ಲ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!