ನಟಿ ವಿಜಯಶಾಂತಿ ಬಿಜೆಪಿಗೆ…?

Team Newsnap
1 Min Read

ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷೆ ಜನಪ್ರಿಯ ಸಿನಿಮಾ ನಟಿ ವಿಜಯಶಾಂತಿ “ಕೈ” ಪಕ್ಷಕ್ಕೆ ಗುಡ್ ಬೈ ಹೇಳುವ ಸಾಧ್ಯತೆಗಳು ಕಂಡು ಬರುತ್ತಿವೆ.

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಕಾರ್ಯಕ್ರಮಗಳಿಂದ ಆಕೆ ದೂರ ಉಳಿದಿದ್ದಾರೆ. ದುಬ್ಬಾಕದಲ್ಲಿ ವಿಧಾನಸಭಾ ಉಪ ಚುನಾವಣೆಗೆ ತೀವ್ರ ಭರಾಟೆಯ ಪ್ರಚಾರ ನಡೆಯುತ್ತಿದ್ದರೂ, ಪ್ರಚಾರ ಸಮಿತಿ ಅಧ್ಯಕ್ಷೆಯಾಗಿ ವಿಜಯ ಶಾಂತಿ ಅತ್ತ ಕಡೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಕನಿಷ್ಟ ಸೋಷಿಯಲ್ ಮೀಡಿಯಾದಲ್ಲೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಕರೆ ನೀಡಿಲ್ಲ. ಇದರಿಂದ ವಿಜಯ ಶಾಂತಿ ಕಾಂಗ್ರೆಸ್ ನಿಂದ ದೂರಸರಿದಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.

ಈ ನಡುವೆ ಜ್ಯೂಬಿಲಿ ಹಿಲ್ಸ್ ನಲ್ಲಿರುವ ವಿಜಯ ಶಾಂತಿ ನಿವಾಸಕ್ಕೆ ತೆರಳಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕೂಡ ಕೆಲವು ದಿನಗಳ ಹಿಂದೆ ವಿಜಯಶಾಂತಿ ಅವರನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ. ವಿಜಯಶಾಂತಿ ನವೆಂಬರ್ 20 ರೊಳಗೆ ಬಿಜೆಪಿಗೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿ ಹಿರಿಯರ ಸಮ್ಮುಖದಲ್ಲಿ ವಿಜಯಶಾಂತಿ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾನುವಾರದಂದು ಟ್ವೀಟ್‌ ಮಾಡಿದ್ದ ವಿಜಯಶಾಂತಿ, ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್‌ ಪಕ್ಷವು ಕಾಂಗ್ರೆಸ್‌ ಅನ್ನು ದುರ್ಬಲಗೊಳಿಸಿದ್ದು, ಬಿಜೆಪಿಯ ಬೆಳವಣಿಗೆಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದರು. ಆದರೆ, ಪಕ್ಷದಲ್ಲಿ ವಿಜಯಶಾಂತಿ ಅವರನ್ನು ಕಡೆಗಣಿಸಲಾಗಿದ್ದು, ಇದರಿಂದ ಬೇಸರಗೊಂಡು ಪಕ್ಷ ತ್ಯಜಿಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಹೇಳಿದ್ದಾರೆ.

ಆರಂಭದಲ್ಲಿ ಬಿಜೆಪಿಯಿಂದಲೇ ರಾಜಕೀಯ ಆರಂಭಿಸಿದ್ದ ವಿಜಯಶಾಂತಿ ಮೇದಕ್‌ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು.

Share This Article
Leave a comment