ಬದುಕಿನ‌ ಸಂಚಾರ ನಿಲ್ಲಿಸಿದ ನಟ‌ ಸಂಚಾರಿ ವಿಜಯ್‌ : ಮರಳಿ ಬಾರದ ಲೋಕಕ್ಕೆ ಪಯಣ…..

Team Newsnap
1 Min Read

ಬೈಕ್‌ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್‌ (38) ಮಂಗಳವಾರ ಬೆಳಗಿನ ಜಾವ 3.34ಕ್ಕೆ ನಿಧನರಾದರು.

ಈ ಕುರಿತಂತೆ ಅಪೋಲೊ ಆಸ್ಪತ್ರೆ ವೈದ್ಯ ಅರುಣ್‌ ಎಲ್.ನಾಯಕ್‌ ವೈದ್ಯಕೀಯ ಬುಲೆಟ್‌ನಲ್ಲಿ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದರು.

ಜೂನ್‌ 13 ರ 11. 45 ರಾತ್ರಿ ವಿಜಯ್‌ ಅವರು ರಸ್ತೆ ಅಪಘಾತದಲ್ಲಿ ಭೀಕರ ವಾಗಿ ಗಾಯಗೊಂಡ ನಂತರ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಿದುಳಿಗೆ ಬಲವಾದ ಪೆಟ್ಟುಬಿದ್ದಿದ್ದರಿಂದ ಮಿದುಳಿನೊಳಗೆ ರಕ್ತಸ್ರಾವ ಆಗಿತ್ತು. ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ನ್ಯೂರೊ ಐಸಿಯುವಿನಲ್ಲಿ, ಕೃತಕ ಆಮ್ಲಜನಕದಲ್ಲಿ ಉಸಿರಾಡುತ್ತಿದ್ದ ವಿಜಯ್‌ ಕೋಮಾದಲ್ಲಿದ್ದರು. ನಂತರ ವಿಜಯ್‌ ಅವರ ಮಿದುಳು ನಿಷ್ಕ್ರಿಯವಾಯಿತು.

ಮಂಗಳವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ್‌ ಪಾರ್ಥಿವ ಶರೀರದ ಅಂತಿಮ ದರ್ಶನದ ನಂತರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲು ಕೊಂಡೊಯ್ಯಲಾಯಿತು.

ಅಂಗಾಂಗ ದಾನ‌ ಮಾಡಿದ ಕುಟುಂಬ :

ಕುಟುಂಬದ ಅನುಮತಿ ಪಡೆದು ವಿಜಯ್ ಅವರ ಏಳು ಅಂಗಾಂಗಳನ್ನು ದಾನ ಮಾಡಲಾಗಿದೆ. ‘ಕಣ್ಣು, ಪಿತ್ತಕೋಶ, ಮೂತ್ರಪಿಂಡ, ಹೃದಯದ ಕವಾಟಗಳನ್ನು ದಾನ ಮಾಡಲಾಗಿದೆ. ಏಳು ಜನರಿಗೆ ಇದರಿಂದ ಹೊಸ ಜೀವನ ಬಂದಂತಾಗಿದೆ.

87505c49 086b 4f4f 8d2c 833ea7df6400
ಬಹುಮುಖ ಪ್ರತಿಭೆ – ಸಾಮಾಜಿಕ ‌ತುಡಿತ :

ವಿಜಯ್ 2011ರಲ್ಲಿ ‘ರಂಗಪ್ಪ ಹೋಗ್ಬಿಟ್ನಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ‘ಸಂಚಾರಿ’ ತಂಡದ ವಿಜಯ್‌ ‘ನಾನು ಅವನಲ್ಲ, ಅವಳು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ಒಗ್ಗರಣೆ’, ‘ಕಿಲ್ಲಿಂಗ್‌ ವೀರಪ್ಪನ್‌’, ‘ಸಿನಿಮಾ ಮೈ ಡಾರ್ಲಿಂಗ್‌’, ‘ರಿಕ್ತ’, ‘ನಾತಿಚರಾಮಿ’, ‘ಅವ್ಯಕ್ತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದರು. ರಂಗಭೂಮಿಯಲ್ಲಿ ಸಾಕಷ್ಟು ಕಲಿಯುವ ಆಸಕ್ತಿ ಹೊಂದಿದ್ದ ವಿಜಯ್ ಸರಳ‌, ಸಜ್ಜನಿಕೆ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು.

ಅಲ್ಲದೇ ಸಾಮಾಜಿಕ ಕಳಕಳಿ ಹೊಂದಿದ್ದ ವಿಜಯ್ ಬಡವರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು.

Share This Article
Leave a comment