November 16, 2024

Newsnap Kannada

The World at your finger tips!

dr raj

ಮೇರು ನಟ ಡಾ ರಾಜ್ ಕುಮಾರ್ ಜನ್ಮದಿನ

Spread the love

ಕನ್ನಡಕ್ಕೆ ಒಬ್ಬರೇ ರಾಜ್ ಕುಮಾರ್ (Raj kumar) ಹೌದು, ಕನ್ನಡ ಎಂದ ಕೂಡಲೇ ಮೇರು ಧ್ವನಿಯಲ್ಲಿ ಪ್ರತಿಧ್ವನಿಸುವ ಅತ್ಯಂತ ಜನಪ್ರಿಯ ಹೆಸರು ಅಂದರೆ ಅದು ಡಾ. ರಾಜ್ ಕುಮಾರ್. ತೆರೆಯ ಮೇಲೆ ಮತ್ತು ತೆರೆಯ ಹಿಂದೆಯೂ, ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿದ ಮತ್ತು ಬೆಳೆಸಿದ ನಾಯಕ ಎಂದು ರಾಜ್ ರನ್ನು ಗುರುತಿಸಿದರೆ ಅದು ಬಹುಷಃ ತಪ್ಪಾಗಲಾರದು. ರಾಜ್ ಕುಮಾರ್ ಅವರು ಎಲ್ಲರ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ಹೋಗಿದ್ದಾರೆ.

raj f

ಡಾ. ರಾಜ್ ಕುಮಾರ್ ಜನನ

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ 1929 ರ ಏಪ್ರಿಲ್ 24 ರಂದು ಮುತ್ತುರಾಜು (ರಾಜ್ ಕುಮಾರ್) ಹುಟ್ಟಿದರು.

ಡಾ. ರಾಜ್ ಕುಮಾರ್ ಜೀವನ

dr raj 5

ಡಾ. ರಾಜ್ ಕುಮಾರ್ ಅವರಿಗೆ ವರದರಾಜ್ ಎಂಬ ಸಹೋದರ, ಶಾರದಮ್ಮ ಎಂಬ ತಂಗಿ ಇದ್ದರು. 1953 ಜೂನ್25 ರಂದು ಪಾರ್ವತಮ್ಮವರೊಡನೆ ಮದುವೆ. ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ 5 ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ . ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ.

ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕಗಳಲ್ಲಿ ಚಿತ್ರರಂಗದ ಬದುಕಿನಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿಯೂ ಸಹ ಹೆಸರು ಮಾಡಿದ್ದಾರೆ.

ಡಾ. ರಾಜ್ ಕುಮಾರ್ ಅವರಿಗೆ ಬಿರುದುಗಳು

ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದ ಡಾ. ರಾಜ್ ಕುಮಾರ್ ಅವರು ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿ ಹಾಗೂ ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.

rajv1

2000 ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, 108 ದಿನಗಳ ನಂತರ ಬಿಡುಗಡೆಯಾದರು.

ಬಣ್ಣದ ಬದುಕಿನ ನೋಟ

ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. 200 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು.

raj ja

1960 ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳು, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು.

1966 ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ.

raj rr

ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‌ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ ಬದುಕಿನಲ್ಲಿ ಎಲ್ಲಾ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.

1980 ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆ ಕಂಡವು.

ಡಾ. ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್ ನಾಗ್ ನಿರ್ದೇಶನದ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ. ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ. ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ.

1983 ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ. ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವ ತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ. ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ.

raj d

ಡಾ. ರಾಜ್ ಅವರ 200 ನೇ ಚಿತ್ರ 1988 ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿ ಸುಧಾರಾಣಿಯವರು ಡಾ. ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ. ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು.

ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದರು. ಡಾ. ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ 2000 ರಲ್ಲಿ ತೆರೆಕಂಡ ಶಬ್ದವೇದಿ.

ಬೆಳ್ಳಿತೆರೆಯ ಮೇಲೆ ಡಾ. ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ಶಿವರಾಜ್‌ಕುಮಾರ್ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ ಆಶೀರ್ವದಿಸುತ್ತಾರೆ.

raj j

ಡಾ. ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. ಎಂ.ವಿ.ರಾಜಮ್ಮ, ಪಂಡರೀಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ , ಕೃಷ್ಣಕುಮಾರಿ, ರಾಜಸುಲೋಚನ, ಬಿ.ಸರೋಜದೇವಿ, ಸಂಧ್ಯಾ,ಆದವಾನಿ ಲಕ್ಷ್ಮಿ ದೇವಿ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ.ವಿ.ರಾಧ, ಶೈಲಶ್ರೀ, ರಾಜಶ್ರೀ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದಾ, ಗಾಯತ್ರಿ, ಸರಿತಾ, ಜಯಚಿತ್ರಾ, ಕಾಂಚನಾ, ವಾಣಿಶ್ರೀ, ಜಿ.ವಿ.ಲತಾ, ಮಾಧವಿ, ಗೀತಾ, ಅಂಬಿಕಾ, ರೂಪಾದೇವಿ, ಊರ್ವಶಿ ಮುಂತಾದವರೊಂದಿಗೆ ನಟಿಸಿದ್ದಾರೆ.

ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ, ರಾಜ್-ಕಲ್ಪನಾ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು.

ಡಾ. ರಾಜ್ ಕುಮಾರ್ ಅವರು 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರೂ ಕೂಡ ಅವರ ಮೇಲೆ ಜನರು ಇಟ್ಟ ಅಭಿಮಾನ ಸ್ವಲ್ಪವೂ ಮಾಸಿಲ್ಲ. ಅಭಿಮಾನಿಗಳ ಮನದಲ್ಲಿ ಅವರು ಸದಾ ಜೀವಂತ.

raj s

ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ, ರಸಿಕರ ರಾಜ, ಗಾನ ಗಂಧರ್ವ, ಯೋಗ ರಾಜ, ಕನ್ನಡದ ಮಾಣಿಕ್ಯ ಹೀಗೆ ಸುಮಾರು ಹತ್ತಕ್ಕೂ ಹೆಚ್ಚು ಬಿರುದುಗಳನ್ನು ಹೊಂದಿರುವ ಡಾ. ರಾಜ್​​​​​​​​​ಕುಮಾರ್ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ.

1971 ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಚಿತ್ರ ಬದುಕಿನಲ್ಲಿ ಮರೆಯಲಾಗದ ಚಿತ್ರಗಳು ಎನ್ನಬಹುದು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಈಗಲೂ ಜನರ ಮನಸ್ಸಿನಲ್ಲಿ ಗುನು ಗುಟ್ಟುತ್ತಿರುತ್ತದೆ.

Copyright © All rights reserved Newsnap | Newsever by AF themes.
error: Content is protected !!