December 26, 2024

Newsnap Kannada

The World at your finger tips!

druvatare1

ಸಾಹಿತಿ ಜೆ.ಎನ್.ಜಗನ್ನಾಥ್ ರ ‘ಧ್ರುವತಾರೆಯರು’ ಪುಸ್ತಕದ ಕಿರು ಪರಿಚಯ

Spread the love

“ಅಂಕಲ್, ನಾಳೆ ಸ್ಕೂಲ್ ನಲ್ಲಿ ರಾಜ್ಯೋತ್ಸವದ ಪ್ರಯುಕ್ತ ಪ್ರಬಂಧ ಸ್ಪರ್ಧೆ ಇದೆ.   ಅಂಕಲ್ ಗೆ  ಕೇಳು ಅವರು ಫೇಸ್ ಬುಕ್ ನಲ್ಲಿ  ಎನೇನೊ ಬರೆಯುತ್ತಿರುತ್ತಾರೆ, ಹೊಸ ವಿಷಯ ಹೇಳುತ್ತಾರೆ ಎಂದು ಅಮ್ಮ ಅಂದರು. 

ಹೇಳ್ ಕೊಡಿ,  ಪ್ಲೀಸ್ ಅಂಕಲ್ ” ಎಂದು ಪಕ್ಕದ ಮನೆ ಆದಿ ಬಂದು ಕೇಳಿದಾಗ   ಆಶ್ಚರ್ಯ ಆಯಿತು ಮತ್ತು ನನ್ನ ಫೇಸ್ಬುಕ್ ಖಾತೆ ನೋಡುವವರು ಇದ್ದಾರೆ ಎಂದು ಖುಷಿ ಆಯಿತು. ಹೌದು  ಆದಿಗೆ ನೆಟ್ ಪಾಠ ಮುಗಿದು ಶಾಲೆ ಪ್ರಾರಂಭವಾಗಿತ್ತು.  ಈಗಲೇ  ರಾಜ್ಯೋತ್ಸವ ಕೂಡ ಬಂದಿದೆ. 

ಶಾಲೆಯಲ್ಲಿ  ಭಾಷಣ,  ಪ್ರಬಂಧ ಸ್ಪರ್ಧೆ, ಇತ್ಯಾದಿ ಎರ್ಪಡಿಸಿದ್ದಾರೆ.  ಪಕ್ಕದ ಫ್ಲಾಟ್ ನಲ್ಲಿ ಇರುವ ಆದಿ ಈಗ ಒಂಬತ್ತನೇಯ ತರಗತಿ.   ಇದೇ ಬಹುಮಹಡಿ ಕಟ್ಟಡದ ಸಮುಯ್ಚಯದಿಂದ ಇನ್ನೂ ನಾಲ್ಕೈದು ಹುಡುಗರೂ ಆದಿಯ ಜೊತೆ ಹೋಗುತ್ತಾರೆ.  ಆದಿ  ಕಳೆದ ಒಂದು ವರ್ಷದಿಂದ  ನನಗೆ ಸ್ನೇಹಿತನಾಗಿದ್ದೇನೆ.  ನನಗೆ ಹೊಸ ಚತುರವಾಣಿ ಹೇಗೆ ಬಳಸುವುದು ಎಂದು ಹೇಳಿಕೊಡುವವನು ಅವನೇ. ನಾನು ಅವನಿಗೆ ಆಗಾಗ ಕಥೆ ಹೇಳಿರುವುದು ಉಂಟು.   ಈಗ ಆದಿಗೆ ಕೂರಿಸಿ ಚತುರವಾಣಿಯಲ್ಲಿ ವಿಕಿಪೀಡಿಯ ತೆಗೆಯಲು ಪ್ರಾರಂಭ ಮಾಡಿದೆ.  ‘ಅಂಕಲ್,  ಇಂಟರ್ ನೆಟ್ ನಲ್ಲಿ ಇರುವುದು ಬರೆದರೆ ಬಹುಮಾನ ಬರಲ್ಲ. 

ಎಲ್ಲರೂ ‘ಈಸು’, ‘ವಾಸು’ ಕೂಡ ಚೆಂಜ್ ಮಾಡದೇ ಅದನ್ನೇ ಬರೆದಿರುತ್ತಾರೆ.  ಬೇರೆ ಏನಾದ್ರು ಹೇಳಿ ಅಂಕಲ್ ‘ ಎನ್ನ ಬೇಕೆ?  ನನಗೆ ಆ ಮಾತನ್ನು ಕೇಳಿ ಸಂತೋಷವಾಯಿತು. ಅದರ ಜೊತೆಗೆ ಇವನಿಗೆ ಏನಪ್ಪ ಹೇಳಿಕೊಡೋದು ಎಂದು ಯೋಚನೆ ಕೂಡ ಅಯಿತು.   ನನ್ನ ಹತ್ತಿರ  ಇರುವ ಹಳೇ ಪುಸ್ತಕಗಳನ್ನು ಜೋಡಿಸಿ ಇಟ್ಟಿರುವ ಕಪಾಟಿನ ಹತ್ತಿರ ಹೋದೆ,  ಆಗ ನೆನಪಾಯಿತು  ನಿನ್ನೆ  ಓದಿದ ಹೊಸ ಪುಸ್ತಕ.  ತಕ್ಷಣ ನಿಧಿ ಸಿಕ್ಕಷ್ಟೇ  ಖುಷಿ ಆಯಿತು.  ‘ಬಾ ಆದಿ ನಿನಗೆ ಒಂದೇಕೆ ಐದಾರು ವಿಷಯ ಹೇಳಿಕೊಡುತ್ತೇನೆ’ ಎಂದಾಗ  ಅವನಿಗೆ ಬಹಳ ಸಂತೋಷವಾಯಿತು. . ತನ್ನ ಸ್ನೇಹಿತರನ್ನು ಕರೆದ. ಎಲ್ಲರೂ ಸುತ್ತಲೂ ಡೈನಿಂಗ್ ಟೇಬಲ್ ನಲ್ಲಿ ಕುಳಿತುಕೊಂಡರು. ನಾನು ಅವರಿಗೆ  ಪುಸ್ತಕದಿಂದ ಓದಿ ಹೇಳಲು ಪ್ರಾರಂಭ ಮಾಡಿದೆ.  ತನ್ಮಯತೆಯಿಂದ ಕೇಳಿಸಿಕೊಂಡರು.  ಮಧ್ಯೆ ನನ್ನ ಮನದನ್ನೆ ಒಂದಿಷ್ಟು ಬಿಸ್ಕತ್, ಆರೆಂಜ್ ಜ್ಯೂಸ್ ತಂದುಕೊಟ್ಟಳು.  ಮಕ್ಕಳಿಗೂ ಖುಷಿ ಆಯಿತು.   ಮುಗಿದ ಮೇಲೆ  “ಥ್ಯಾಂಕ್ಯು ಅಂಕಲ್” ಎಂದು ಕೋರಸ್ ನಲ್ಲಿ  ಹೇಳುತ್ತಾ   ಹೊರಟರು.   ಎರಡು ದಿನ ಬಿಟ್ಟು  ಆದಿ ಕೈಯಲ್ಲಿ ಬಹುಮಾನದ ಕಪ್, ಸರ್ಟಿಫಿಕೇಟ್ ಹಿಡಿದುಕೊಂಡು  ಸಂತೋಷದಿಂದ ಬಂದು ‘ಥ್ಯಾಂಕ್ಸ್ ಅಂಕಲ್,  ನಂಗೆ ಪ್ರೈಜ್ ಬಂದಿದೆ,  ನನ್ನ ಫ್ರೆಂಡ್ಸಗೂ ಬಂದಿದೆ” ಎಂದು ಹೇಳಿದಾಗ ಸಂತೋಷವಾಯಿತು.   ‘ಹಾಗಾದರೆ ಕೊನೆಗೆ ಬಂದು ಏನೇನು ಬರೆದಿದ್ದೆ ಹೇಳು, ಆಯಿತಾ?’ ಎಂದೆ.  ಅದರಂತೆ ಅವನೂ ಬಂದ, ಅವನ ಸ್ನೇಹಿತರನ್ನು  ಕರೆದುಕೊಂಡು ಬಂದ.  ಒಬ್ಬೊಬ್ಬರೂ ಅವರು ಬರೆದಿದ್ದನ್ನು  ಓದಿ ಹೇಳಲು ಪ್ರಾರಂಭ ಮಾಡಿದರು. 

ಆದಿಯೇ ಮೊದಲು ಪ್ರಾರಂಭ ಮಾಡಿದ.

“ನಾನು ಪರಿಚಯ ಮಾಡಲು ಹೊರಟಿರುವುದು ಕನ್ನಡದ ಪ್ರಥಮ ರಾಷ್ಟ್ರ ಕವಿ  ಶ್ರೀಯುತ ಎಂ.ಗೋವಿಂದ ಪೈಯವರ ಬಗ್ಗೆ  ಬರೆದಿರುವ ಲೇಖನದ  ಬಗ್ಗೆ. ರಾಷ್ಟ್ರ ಕವಿಗಳು ಬಹುಬಾಷಾ ವಿಶಾರದರಾಗಿದ್ದರೂ ಅವರ  ಬಗ್ಗೆ  ಪರಿಚಯ ಪ್ರಾರಂಭ ಆಗುವುದೇ  ‘ತನು ಕನ್ನಡ ಮನ ಕನ್ನಡ..’  ಕವಿತೆಯ ಸಾಲುಗಳಿಂದ.  23 ಭಾಷೆಗಳಲ್ಲಿ ಪರಿಣಿತರಾಗಿದ್ದರೂ ಕೂಡ ತನು, ಮನವೆಲ್ಲಾ ಕನ್ನಡವಾಗಿದ್ದ  ಗೋವಿಂದ ಪೈ ರವರ ಪರಿಚಯ ಪ್ರಾರಂಭ ಮಾಡಲು ಇನ್ನು ಹೇಗೆ ತಾನೆ ಸಾಧ್ಯ?  ಅದರ ಜೊತೆಗೆ ಭಾರತದ ಸ್ವಾತಂತ್ರ್ಯೋತ್ಸವದ ಕವನದ ಮೂಲಕ ಅವರ ದೇಶಭಕ್ತಿಯ ಪರಿಚಯ ಮಾಡಿಕೊಡುತ್ತಾ,  ನಂತರ ನಡೆದ ಘಟನೆಗಳ ಬೇಸರ  ‘ರಾಹು ಹೋಗಿ  ಕೇತು ಬಂದಂತ್ತೆ ಇದೆ’ ಎನ್ನುವ ಉದ್ಗಾರದ ಮೂಲಕ ಅವರ ಮನದ ಅಳಲನು ಲೇಖಕರು ತೆಗೆದಿಟ್ಟಿದ್ದಾರೆ.  ಜೊತೆಗೆ  ಗಾಂಧಿಯ ಸ್ಮರಣೆ ಮಾಡುತ್ತಾ ವಿದೇಶಿಯರ ಆಕ್ರಮಣ ಎಲ್ಲೇ ಆದರೂ ಖಂಡಿಸುವ ಅವರ ಮನ ಸ್ವಾತಂತ್ರ್ಯದ ಮಹತ್ವಕ್ಕೆ  ಅವರು ಕೊಡುತ್ತಿದ್ದ ಸ್ಥಾನದ ಬಗ್ಗೆ ತಿಳಿಸಿಕೊಡುತ್ತಾರೆ.

ಕವಿಯ ಹುಟ್ಟು, ಮನೆತನ, ವಂಶದ ಬಗ್ಗೆ ವಿವರಕೊಡುತ್ತಾ  ಎಲ್ಲವನ್ನು ಮೂಲದಿಂದ ಹುಡುಕುವ ಕವಿಯ ಸ್ವಭಾವವನ್ನು ಎಳೆ,  ಎಳೆಯಾಗಿ ಬಿಚ್ಚಿಡುತ್ತಾ ಹೋಗುವ ರೀತಿ  ಒದುಗರನ್ನು  ಆ ಎಳೆಗಳಲ್ಲಿ ಬಂದಿಯನ್ನಾಗಿಸುತ್ತಾ ಹೋಗುತ್ತದೆ.  ಆ ಹುಡುಕಾಟ ಕುಲದ ಮೂಲ ಸ್ಥಾನವಾದ ಗೋವಾದಿಂದ ಪ್ರಾರಂಭವಾಗುತ್ತದೆ.  ಲೇಖಕರು ಆ ಹುಡುಕಾಟದ  ಹೆಜ್ಜೆಯ ಜಾಡನ್ನು ಹಿಡಿದುಕೊಂಡು ಹೋಗಿ, ರಾಷ್ಟ್ರ ಕವಿಗಳು  ಮಾಡಿದ ಕೆಲವು ಸಂಶೋಧನೆಯ  ವಿವರಗಳನ್ನು ಬಿಚ್ಚಿಡುತ್ತಾರೆ.  ಪೋರ್ಚುಗೀಸ್ ಭಾಷೆಯಿಂದ  ಹಿಡಿದು ಭೌಧ್ದ ಸನ್ಯಾಸಿಯಿಂದ ಪಾಲಿ ಭಾಷೆ ಕಲಿತಿರುವ ಬಗ್ಗೆ ತೆರೆದಿಡುವ ರೀತಿ  ಅನನ್ಯ.  ಕ್ರಿಯಾಶೀಲ ಮನಸ್ಸು ಹೊಸದನ್ನು  ಪ್ರಯೋಗಮಾಡಿ  ಅಪ್ಪಿಕೊಳ್ಳುವ ಮನೋಧರ್ಮವನ್ನು  ಪ್ರಾಸರಹಿತ ಹೊಸ ಬಗೆಯ ಕಾವ್ಯ ಬರೆಯುವ ಮಾರ್ಗ ಪ್ರಾರಂಭ ಮಾಡಿರುವ ಬಗ್ಗೆ ಹೇಳಿದರೆ, ನಾಟಕದಲ್ಲಿ ಗೊಂದಳದವರ ಅಳವಡಿಕೆ, ಸರಳ ರಗಳೆಯಲ್ಲಿ  ಮಹಾಕಾವ್ಯ ರಚನೆಯ ವಿಷಯ ಬಿಚ್ಚಿಡುತ್ತಾರೆ.   ಓದಿನ  ಉದ್ದಗಲ ತಿಳಿಯ ಬೇಕಾದರೆ ಅವರು ಬರೆದಿರುವ ಕೃತಿಗಳ ಹೆಸರನ್ನು  ತಿಳಿದರೆ ಸಾಕು.  ಅವರ ಕೃತಿಗಳ ಹೆಸರನ್ನು  ತಿಳಿಸುತ್ತಾ,   ಅವರ  ಮಧ್ಯದಲ್ಲಿ ನಿಂತ ವಿದ್ಯಾಭ್ಯಾಸ,  ಸಂಸಾರದ ಜೀವನ, ಅನುಭವಿಸಿದ ನೋವು,  ಸೋದರರ  ಸಹಕಾರ  ಮತ್ತು  ಎಲ್ಲದರ ನಡುವೆಯೂ ಇಂಗದ ಸಂಶೋದನೆಯ ದಾಹ  ಅನಾವರಣ ಮಾಡುವುದರಲ್ಲಿ  ಲೇಖಕರು ಸಫಲರಾಗಿದ್ದಾರೆ. ಒಂದುಕಡೆ  ಪ್ರಶಸ್ತಿ,  ಗೌರವದಿಂದ ದೂರ ಸರಿದರೂ ರಾಷ್ಟ್ರ ಕವಿ ಪ್ರಶಸ್ತಿಯ ಗರಿ ಈ ಸಾಧಕರನ್ನು ಹುಡುಕಿಕೊಂಡು ಬಂದಿರುವ ಪರಿ,  ಯುದ್ಧಗಳಲ್ಲಿ ನಡೆಯುವ ಸಾವು-ನೋವು ತಲ್ಲಣಗೊಂಡಿರುವ ಮನಸ್ಸನ್ನು “…..ಜಗವೆಲ್ಲ ತನಗೆ ತನಗೆಂಬ ಮನುಜಾ, ಸಾಯೋ ಸಾಯಿ”  ಸಾಲುಗಳಲ್ಲಿ ತೆರೆದಿಟ್ಟಿದ್ದಾರೆ. ಈ ಬರಹ ನನಗೆ  ‘ಬೆಳ್ಳಿ ಮೀಸೆ ತಾತನ’ ಬಗ್ಗೆ ತಿಳಿಸಿರುವ ಬಗೆ ಸಂತೋಷವಾಗಿದೆ………..” ಹೀಗೆ ಬರೆದೆ ಅಂಕಲ್ ಎಂದು ಹೇಳಿದ. 

ತನ್ನ ಸರಧಿಗಾಗಿ ಕಾದಿದ್ದ ಶ್ರವಂತಿ ಈಗ ಪ್ರಾರಂಭ ಮಾಡಿದಳು.
“ಕವಿ ತನ್ನ ಅಃತರಂಗದ ಭಾವನೆಗಳಿಗೆ ಒಂದು ರೂಪ ಕೊಡುವ ಕವನವೇ  ಭಾವಗೀತೆ ಎಂಬ ಮಾತೊಂದು ಇದೆ.  ಬಹುಶಃ ಅದರಂತೆ ಲೇಖಕರು ಇಲ್ಲಿ  ರಾಷ್ಟ್ರಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರ ಅನೇಕ ಗೀತೆಗಳ ಮೂಲಕ ಅವರ ವಿವಿಧ ವ್ಯಕ್ತಿತ್ವದ ಪರಿಚಯ ಮಾಡಿಕೊಡಲು ಪ್ರಯತ್ನಿಸಿದ್ದಾರೆ. 

‘ಮುಂಬೈ ಜಾತಕ’ದ ನೆನಪಿನಲ್ಲಿ  ಯಾಂತ್ರಿಕ ಜೀವನದ ಪ್ರಸ್ತಾವನೆ ಮಾಡುವ ಮೂಲಕ ಪ್ರಾರಂಭವಾಗುವ ಪರಿಚಯ, ವೇದಾಂತದವರೆಗೂ ಸಾಗುತ್ತದೆ.  

‘ನಾನೇಕೆ ಬರೆಯುತ್ತೇನೆ’ ಕವಿತೆಯ ಮೂಲಕ  ಕವಿಯ ಬರವಣಿಗೆಯ ಮೂಲ ಉದ್ದೇಶದ ಬಗ್ಗೆ ತಿಳಿಸುತ್ತಾ,  ಅವರ ಕವನಗಳ ಸಾಲುಗಳ ಮೂಲಕ ಕವಿಯ ಆತ್ಮಾವಲೋಕನ  ಮತ್ತು ಸಂವಾದ ಮಾಡುವ ಪರಿ,  ಜೀವನದಲ್ಲಿ ಪ್ರೇಮ ಮತ್ತು ಶ್ರದ್ಧೆಯ ಮಹತ್ವ,  ಪ್ರೀತಿಯ ಅಭಾವ, ವೈಚಾರಿಕತೆ,…..ಹೀಗೆ ಒಂದೊಂದೇ  ಕವಿಯ  ಬಾವನೆಗಳನ್ನು  ತೆರೆದಿಡುತ್ತಾರೆ. 

ಒಂದುಕಡೆ ಜೀವನದ ಪರಿಚಯ,  ಉನ್ನತ ವಿದ್ಯಾಭ್ಯಾಸ,  ಪ್ರಾರಂಭದ ವೃತ್ತಿ ಜೀವನ, ಕೊನೆಗೆ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರ ಸ್ಥಾನ ತಲಪುವುದನ್ನು ಗುರುತಿಸುತ್ತಾ  ಆ ಸ್ಥಾನಗಳು ಇವರ ಕಾಲದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ವಿಷಯ ತಿಳಿಸುತ್ತಾರೆ.  ಇನ್ನೊಂದೆಡೆ  ಚಿಂತನೆ, ವಿಮರ್ಶೆಯ ಲೋಕವನ್ನು ತೆರೆದಿಡುತ್ತಾ, ಉನ್ನತ ವಿದ್ಯಾಭ್ಯಾಸದಲ್ಲಿ ತಂದಿರುವ  ಬದಲಾವಣೆಗಳತ್ತ ಗಮನ ಸೆಳೆಯುತ್ತಾ ಸೃಜನಶೀಲತೆಗೆ ಕೊಟ್ಟಿರುವ ಫ್ರೋತ್ಸಾಹ ಗುರುತಿಸಿದ್ದಾರೆ.   ‘ಎಲ್ಲಿ ಹೋಗುವಿರಿ ನಿಲ್ಲಿ  ಮೋಡಗಳೇ ನಾಲ್ಕು ಹನಿಯಚೆಲ್ಲಿ….’ ಹಾಡು  ಭಾವಗೀತೆಯಾಗಿ ಉಳಿಯದೆ, ಎಲ್ಲರ ಬಾಯಲ್ಲಿ ಗುನುಗುವ  ಹಾಡಾಗಿರುವುದು, ಅದರ ಸಾಹಿತಿ  ‘ರಾಷ್ಟ್ರ ಕವಿ ಯಾಗಿ ಮನ್ನಣೆ ಪಡೆದಿರುವ  ಬಗ್ಗೆ ತಿಳಿಸುತ್ತಾರೆ.  ಲೇಖಕರು ಇಲ್ಲಿ ವಿಷಯ ತಿಳಿಸುತ್ತಾ ಹೋಗುವ ರೀತಿ ಜೆ.ಎಸ್.ಎಸ್.ರವರ ಕವನಗಳಲ್ಲಿ ಇರುವ ಹಾಡಿಸಿಕೊಳ್ಳುವ ಗುಣ  ಒಂದೇ ಎಂದರೆ ಬಹುಶಃ ಅತಿಶಯೋಕ್ತಿ ಆಗಲ್ಲ………..”  ಹೇಗಿತ್ತು ಅಂಕಲ್? ಎಂದು ಕೇಳಿದಳು ಶ್ರವಂತಿ. ಅಷ್ಟರಲ್ಲಿ  ನನ್ನ ಮನದನ್ನೆ ತಂದಿಟ್ಟ   ಬಾದಾಮಿ ಹಾಲು  ಎಲ್ಲರೂ  ಕುಡಿದರು.  ತುಷಾರ್ ಪ್ರಾರಂಭ ಮಾಡಿದ.

‘ಕಟ್ಟುವೆವು ನಾವು ಹೊಸ ನಾಡೊಂದನು…..’  ಅತ್ಯಂತ ಜನಪ್ರಿಯ ಗೀತೆ. ಅದನ್ನು ಬರೆದ ಕವಿ ಶ್ರೀಯುತ ಗೋಪಾಲಕೃಷ್ಣ ಅಡಿಗರ ಪರಿಚಯ ಮಾಡಿಸುವಾಗ  ಆ ಹಾಡಿನಿಂದ ಪ್ರಾರಂಭ ಮಾಡಿದರೆ ತಕ್ಷಣ ಆ ಲೇಖನ ಆಪ್ತವಾಗುತ್ತದೆ.  ಕಾವ್ಯರಚನೆಯ ದಾರಿಯಲ್ಲಿ  ನವ್ಯಮಾರ್ಗದ ಸ್ಥಾಪನೆಯ ಪ್ರವರ್ತಕರ ವಿಷಯ ಪ್ರಸ್ಥಾಪಿಸುತ್ತಾ  ಅವರ ಬಹುಮುಖ ವ್ಯಕ್ತಿತ್ವದ  ಪರಿಚಯ ಮಾಡುತ್ತಾ  ಲೇಖಕರು  ಸಾಗಿದ್ದಾರೆ.  ಕವಿಗಳ  ಬಾಲ್ಯ, ವಿದ್ಯಾಭ್ಯಾಸ,  ವೃತ್ತಿ ಜೀವನ, ವಿದೇಶ ಪ್ರವಾಸದ ಜೊತೆಗೆ  ಅವರು ಚುನಾವಣೆಗೆ ನಿಂತಿರುವ ವಿಷಯ ತಿಳಿಸುತ್ತಾ  ಅವರಿಗೆ ಪ್ರಜಾಪ್ರಭುತ್ವದಲ್ಲಿರುವ ನಂಬಿಕೆಯ ಬಗ್ಗೆ ತಿಳಿಸುತ್ತಾರೆ. 

ಕವಿತೆಯ ಗುಣಲಕ್ಷಣಗಳ ಬಗ್ಗೆ ವಿವರಿಸುತ್ತಾ  ಕವಿಗಳ ಭಾವತೀವ್ರತೆ, ಅತ್ಯುತ್ಸಾಹ,  ತಲ್ಲಣಗಳ ಬಗ್ಗೆ ತಿಳಿಸುತ್ತಾ ‘ಕಲ್ಲಾಗು…’ ಕವನದ ಮೂಲಕ ಕಷ್ಟಗಳು ಎದುರಾದಾಗ ಎದುರಿಸುವ ಬಗೆಗೆ ಕವಿಯ ಮನ  ತೆರೆದಿಡುತ್ತಾರೆ.

ಕಾದಂಬರಿಗಳು ಆ ಕಾಲದ ಸಾಮಾಜಿಕ ಜೀವನದ ಪ್ರತಿಬಿಂಬವೇ ಆಗಿದೆ ಎಂದು ಹೇಳುತ್ತಾ ಅವರ ‘ಆಕಾಶದೀಪ’ ಮತ್ತು ‘ಅನಾಥೆ’ ಕಾದಂಬರಿ ಬಗ್ಗೆ ದೃಷ್ಟಿಕೋನವೊಂದನ್ನು ತೋರಿಸಿ, ಅದರ ಬಗ್ಗೆ ಒದುಗರ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.  ‘ಯಾವ ಮೋಹನ ಮುರಳಿ ಕರೆಯಿತು…..’ ಜನಪ್ರಿಯ ಗೀತೆಯ  ಮೂಲಕ ಕವಿಯ  ಅನುಭವ ಮತ್ತು ಹುಡುಕಾಟದ ಕ್ರಮವನ್ನು ತಿಳಿಸುತ್ತಾರೆ.   “ಇರುವುದೆಲ್ಲವ ಬಿಟ್ಟು….” ಸಾಲುಗಳ ಮೂಲಕ  ಎಲ್ಲ ಕಾಲಕ್ಕೂ ಸಲ್ಲುವ ಮಾನವ ಸಹಜ ಸ್ವಭಾವವನ್ನು ತೆಗೆದಿಡುತ್ತಾ ‘ನಾವೆಲ್ಲರೂ ಒಂದೇ ಜಾತಿ ಒಂದೇ ಗುಣ….’ ಕವಿತೆಯ ಮೂಲಕ ಕವಿಯ  ಸಮಾನತೆಯ ಗುಣ ತೋರಿಸುತ್ತಾರೆ…….”. 

ತುಷಾರ್ ಕಡೆ ಥಂಬ್ಸ್ಅಪ್ ಚಿಹ್ನೆ ತೋರಿಸುವ ಹೊತ್ತಿಗೆ  ಆತ ಮುಗಿಸಲು ಕಾಯುತ್ತಿದ್ದ ನವ್ಯಶ್ರೀ  ತಕ್ಷಣ ತಾನು ಬರೆದಿದ್ದನ್ನು  ಓದಲು ಪ್ರಾರಂಭ ಮಾಡಿದಳು.            

“ಓಬ್ಬ ಶ್ರೇಷ್ಠ ವಿದ್ವಾಂಸರು ಇನ್ನೊಬ್ಬ ಶೇಷ್ಠ ವ್ಯಕ್ತಿಯ ಬಗ್ಗೆ  ತಿಳಿಸುವುದನ್ನು ಸ್ವತಃ ಕೇಳುವ ಸುಯೋಗ ಒದಗಿ ಬಂದ ಸಂದರ್ಭವನ್ನು ವಿವರಿಸುತ್ತಾ  ಆ  ವಿದ್ವಾಂಸರ  ಭಾಷಾ ಪ್ರೌಡಿಮೆ, ಏರಿಳಿತ, ಶಬ್ದ ಪ್ರಯೋಗ,  ಚಾತುರ್ಯದ  ಗುಣಗಳನ್ನು ತೆರೆದಿಡುತ್ತಾ ಪ್ರಾರಂಭ ಮಾಡುವ ಲೇಖಕರು,  ಡಾ.ಟಿವಿ.ಗೋಪಾಲಕೃಷ್ಣ ಶಾಸ್ತ್ರಿರವರ ಬಹುಮುಖ ವ್ಯಕ್ತಿತ್ವದ ಪರಿಚಯ ಮಾಡುತ್ತಾ ಸಾಗುತ್ತಾರೆ.    “ಉದಾರ ಚರಿತರು ಉದಾತ್ತ ಪ್ರಸಂಗಗಳು”, “ಮಾರ್ಗದರ್ಶಕ ಮಹನೀಯರು” ಈ ಕೃತಿಗಳ ಹೆಸರೇ ಹೇಳುವಂತೆ ಅನೇಕ ಶ್ರೇಷ್ಠರ ವಿಚಾರ ಧಾರೆಯನ್ನು ತೆಗೆದಿಟ್ಟಿರುವ ವಿಷಯ ತಿಳಿಸುತ್ತಾ,  ಅವರ ವಿದ್ಯಾರ್ಥಿ ಜೀವನ, ವೃತ್ತಿ ಜೀವನದ ಪರಿಚಯ ಮಾಡಿಸುತ್ತಾರೆ.  ‘ಕನ್ನಡ ಚಿತ್ರ ಕಾವ್ಯ’, ‘ಮಹಾಕಾವ್ಯ ಲಕ್ಷಣ’,  ‘ಕನ್ನಡ ಛಂದಃ ಸ್ವರೂಪ’ ಕೃತಿಗಳ  ಸ್ವರೂಪಗಳ ಪರಿಚಯ ಮಾಡುತ್ತಾ ಸಾಗುವಾಗ ‘ದರ್ಪಣ ವಿವರಣೆ’ ಕೃತಿ  ಈಗೀನ ಕಾಲದ ವಿದ್ಯಾರ್ಥಿಗಳಿಗೆ ಸೂಕ್ತವಾದ ವಿಚಾರ ತಿಳಿಸುತ್ತಾರೆ.  ಲೇಖಕರು ಗಮನ ಸೆಳೆದಿರುವ  ಇನ್ನೊಂದು ಅಂಶ ‘ಗಜಶಾಸ್ತ್ರ ಶಬ್ದಕೋಶ’ದ ವಿಷಯ. ಇದು ಕವಿಗಳು ರಚನೆ ಮಾಡಿರುವ  ನಿಘಂಟುಗಳ ಬಗ್ಗೆ ಕುತೂಹಲ ಮಾಡಿಸುವುದು ಸಹಜವೇ ಆಗಿದೆ.   ನಾಲ್ಕು ದಶಕಗಳು ಕನ್ನಡ ಸಾಹಿತ್ಯ ಬೋಧನೆ ಮಾಡಿ, ಸುಮಾರು ನೂರು ಕೃತಿಗಳನ್ನು ನೀಡಿರುವ ಕವಿಗಳಿಗೆ ಕೊಟ್ಟಿರುವ ಬಿರುದುಗಳು ಪಾಂಡಿತ್ಯರತ್ನ,  ನಿಘಂಟುತಜ್ಞ, ವಿದ್ವಾಂಸರತ್ನ,  ಶಬ್ದಶಾಸ್ರ್ತಜ್ಞ.   ಈ ಬಿರುದುಗಳೇ ಅವರ ಕಾವ್ಯ ಪ್ರಕಾರಗಳನ್ನು  ತಿಳಿಸುತ್ತವೆ.  ಇದನ್ನು ಲೇಖಕರು ಇಲ್ಲಿ ಸೆರೆ ಹಿಡಿದು  ಅವರ ಕೃತಿಗಳ ಕಿರು ಪರಿಚಯ ಮಾಡಿದ್ದಾರೆ……….”.  ಒಂದೇ ಉಸಿರಿಗೆ  ಓದಿ ಮುಗಿಸಿದಳು  ನವ್ಯಶ್ರೀ.

ಅದನ್ನೇ  ಕಾಯುತ್ತಿದ್ದ  ಹರ್ಷಿತ ಪ್ರಾರಂಭ ಮಾಡಿದಳು. “ಅಂಬಿಕಾತನಯ ದತ್ತರ  ಜನಪ್ರಿಯ ಗೀತೆಗಳ ಮೂಲಕ  ಅವರ ಪರಿಚಯ ಮಾಡಿಕೊಡುವ ಕವನವೊಂದು ಕಣ್ಣಿಗೆ ಬಿದ್ದರೆ ಅದು ಸುಲಲಿತವಾಗಿ ಓದಿಸಿಕೊಂಡು ಹೋಗಿ ಆ ಕವನ ಆಪ್ತ ಆಗುವ ಜೊತೆಗೆ ಅದನ್ನು ಬರೆದ ಕವಿಯ ಬಗ್ಗೆ ತಿಳಿಯುವ ಮನಸ್ಸು ಬರುತ್ತದೆ.  ಈ ರೀತಿ ಪ್ರಾರಂಭ ಮಾಡಿರುವ  ಲೇಖಕರು ಕವಿಯ ಪರಿಚಯವನ್ನು  ಮಾಡಿಸಲು ಹುಡುಕಿಕೊಂಡಿರುವುದು ಕವಿಯ ಸ್ನೇಹಿತರ ಕವನವೊಂದರ ಮೂಲಕ. ಆ ಕವನದ ಮೂಲಕ ಕವಿಗಳ    ವ್ಯಾಕರಣ ಜ್ಞಾನ,  ಎಲ್ಲಾ ಕಾಲದ ಕವಿಗಳ ಸಾಹಿತ್ಯ ಜ್ಞಾನ,  ಛಂದಸ್ಸಿನ ಜ್ಞಾನ ಹೀಗೆ ಒಂದೊಂದಾಗಿ  ತೆರೆದಿಡುತ್ತಾ ಅವರ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸುತ್ತಾರೆ.  ಆಮೇಲೆ ಲೇಖಕರು ಒಂದೊಂದಾಗಿ ಅವರ ಕವನದಿಂದ  ‘ತನಾಶಿ’ ಎಂಬ ಕಾವ್ಯ ನಾಮದಿಂದ  ಪರಿಚಿತರಾಗಿರುವ ಶ್ರೀಯುತ ಟಿ.ಎನ್ ಶಿವಕುಮಾರರ ಮನ ಬಿಚ್ಚಿಡುತ್ತಾ ಸಾಗುತ್ತಾರೆ.   ನಿರ್ಮಲ ಪ್ರೀತಿ ತರುವ ಖುಷಿಯನ್ನು  ಕವಿ ಬರೆದಿರುವ ರೀತಿ ತಿಳಿಸುತ್ತಾ  ಕವಿಯ ಮುಕ್ತಕದ ಲೋಕಕ್ಕೆ ಪ್ರವೇಶ ಮಾಡುತ್ತಾರೆ.  

ತನಾಶಿಯವರು ಬಾಲ್ಯದಲ್ಲಿ ಎದುರಿಸಿದ ಕಷ್ಟ, ವಿದ್ಯಾರ್ಥಿ ಜೀವನ,  ವೃತ್ತಿ ಜೀವನ,  ಉಪನ್ಯಾಸಗಳು,  ಶ್ರೇಷ್ಠ ಸಾಹಿತಿಗಳ ಒಡನಾಟದ ಬಗ್ಗೆ ತಿಳಿಸುತ್ತಾ,   ಅನೇಕ ಗ್ರಂಥಗಳ ಅರ್ಥ ಮತ್ತು ವ್ಯಾಖ್ಯಾನ ಬರೆದಿರುವ ರೀತಿಯನ್ನು  “….. ಕಬ್ಬಿನ ಜಲ್ಲೆಯ ಹಿಂಡಿ,….” ಕವನದ ಮೂಲಕ ಸಿಹಿ ರಸಧಾರೆಯ ಉಣಿಸಿರುವ  ಗುರುವಿನ ಬಗ್ಗೆ ತಿಳಿಸುತ್ತಾರೆ.   ಭಾಮಿನಿ ಷಟ್ಪದಿಯ ವೈಭವದಲ್ಲಿ  ಗೌರಿ ಗಣೇಶನ ಪ್ರೀತಿ,   ರಾಜರತ್ನಂ ನೆನಪಿಸುವ ‘ಮಂಜ್ಬಿದ್ದಾಗ’ ಕವನದಿಂದ  ಅವರ ಬಗ್ಗೆ ಕುತೂಹಲ ಮೂಡಿಸುತ್ತಾರೆ.   ಸಾವಿರಾರು ಉಪನ್ಯಾಸ ಮಾಡಿರುವ, ನೂರಾರು ಮುಕ್ತಕ, ಕವನ, ವ್ಯಾಖ್ಯಾನಗಳಲ್ಲಿ  ಇವರು ಕಂಡಿರುವುದು  ಕವಿಯ ಸಮಯ ಸ್ಪೂರ್ತಿಯ ಜೊತೆಗೆ ಸಾಂಪ್ರದಾಯಿಕ ಮತ್ತು ಅಧುನಿಕ ಚಿಂತನೆಗಳ  ಜೊತೆ ಸಾಧಿಸಿರುವ ಸಮನ್ವಯವನ್ನು…………” ಎಂದು ಹೇಳಿ ಹರ್ಷಿತ  ನನ್ನ ಮುಖ ನೋಡಿದಳು.

ಎಲ್ಲರ ಬಗ್ಗೆ ಆಯಿತಲ್ಲ. ಈ ರೇಷ್ಮಾ  ಯಾರ ಬಗ್ಗೆ  ಇನ್ನೊಮ್ಮೆ ಬರೆದಿದ್ದಾಳೆ ಅನಿಸಿತು.  ಅದನ್ನು ಕೇಳಿಯೇ ಬಿಟ್ಟೆ.  ನಗುತ್ತಲೇ ರೇಷ್ಮಾ “ನಾನು ಲೇಖಕರ ಬಗ್ಗೆಯೇ ಬರೆದಿದ್ದೇನೆ” ಎಂದು ಹೇಳಿದಾಗ ಕುತೂಹಲ ಜಾಸ್ತಿಯಾಯಿತು.  ಹೇಳು ಎಂದೆ. ಅವಳು ನಸುನಗುತ್ತಾ ಪ್ರಾರಂಭ ಮಾಡಿದಳು.

“ತಾವೊಂದು ಬಾರಿ ಕಾರ್ಯಕ್ರಮದ ನಿರೂಪಣೆ ಮಾಡುವಾಗ ಮೈಸೂರ್ ಅನಂತಸ್ವಾಮಿಯವರ ಆಶಯದಂತೆ ಕವಿಗಳ ಪರಿಚಯದ  ಈ ಗ್ರಂಥ ಹೊರಬಂದಿದೆ ಎಂದು ಲೇಖಕರು ಪ್ರಾರಂಭದಲ್ಲಿ ಹೇಳಿದ್ದಾರೆ.  ತಮ್ಮ ಮೇಲೆ ಪ್ರಭಾವ ಬೀರಿರುವ ಐವರು ಕವಿಗಳನ್ನು  ಅಯ್ದುಕೊಂಡು ಅವರ  ಪರಿಚಯ ಮಾಡಿಕೊಡಲು ಹೊರಟಿದ್ದಾರೆ.   ಪರಿಚಯ ಎಂದರೆ  ಬಾಲ್ಯ,  ವೃತ್ತಿ ಜೀವನ,  ಬರೆದ ಪುಸ್ತಕಗಳ ಹೆಸರು, ಪಡೆದ ಪ್ರಶಸ್ತಿ  ಇವುಗಳ ಸುತ್ತಲೇ ಸುತ್ತುತ್ತದೆ.   ಆದರೆ ಇಲ್ಲಿ ಲೇಖಕರು ಅದನ್ನು ಮೀರಿ ಕವಿಗಳ ಚಿಂತನೆ, ವ್ಯಕ್ತಿತ್ವ, ಸಮಕಾಲೀನ ಸಮಾಜದ ಪರಿಸ್ಥಿತಿಯ  ಅನಾವರಣ  ಮಾಡಿದ್ದಾರೆ.   ಇವರು  ಪರಿಚಯ ಮಾಡಿಕೊಡಲು ಆಯ್ದು ಕೊಂಡಿರುವ  ಸಾಹಿತಿಗಳು ತಮ್ಮ ಕ್ಷೇತ್ರದಲ್ಲಿ ದಿಗ್ಗಜರು.  ಈ ಪ್ರತಿಯೊಬ್ಬರೂ ಬರೆದಿರುವುದು ಒಂದೊಂದು ಹಿಮಾಲಯದಷ್ಟು ಇದೆ.   ಅದನ್ನು  ಓದಿ, ಅದರಲ್ಲಿರುವ ಕವಿಗಳ ಭಾವನೆಗಳ ಸೆರೆ ಹಿಡಿದು  ಅದನ್ನು  ಸಂಕ್ಷಿಪ್ತವಾಗಿ  ಒದುಗರ ಮುಂದೆ ತೆರೆದಿಟ್ಟಿದ್ದಾರೆ. ಇದರ ಜೊತೆಗೆ  ಆ ಕವಿಗಳ ಬಗ್ಗೆ ಈಗಾಗಲೇ ಬಂದಿರುವ ಬೇರೆ ಸಾಹಿತಿಗಳ ಅನಿಸಿಕೆ, ವ್ಯಾಖ್ಯಾನ ಕೂಡ ಓದಿಕೊಂಡು ಅವರ ದೃಷ್ಟಿಕೋನವನ್ನು  ತೆರೆದಿಟ್ಟಿದ್ದಾರೆ. ಪ್ರತಿಯೊಬ್ಬರು  ನೂರಾರು ಹಾಡುಗಳು,  ಮುಕ್ತಕಗಳು,  ಷಟ್ಪದಿಗಳು,  ಕಥೆಗಳನ್ನು  ಬರೆದಿದ್ದಾರೆ. ಅದರಲ್ಲಿ  ಮಾಡಿದ ಹುಡುಕಾಟ ಮತ್ತು ಆಯ್ಕೆ  ಸಾಹಿತಿಗಳ ಬಹುಮುಖ ವ್ಯಕ್ತಿತ್ವದ ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದೆ.  ಗೋವಿಂದ ಪೈರವರ ಬಗ್ಗೆ ಬರೆಯುವಾಗ  ಸಂಶೋಧನೆಯ ಧಾಟಿಯಲ್ಲಿ ಬರಹವಿದ್ದರೆ,  ಜಿ.ಎಸ್.ಎಸ್.ರವರ ಬಗ್ಗೆ ಬರೆಯುವಾಗ  ಇವರ ಬರಹಕ್ಕೆ  ಭಾವಗೀತೆಯ ಸ್ಪರ್ಷವಾಗಿದೆ.   ಅಡಿಗರ ಬಗ್ಗೆ ಬರೆಯುವಾಗ  ಹೊಸತನದ ಉಲ್ಲಾಸವಿದೆ.   ಜನಪ್ರಿಯ ಸಾಹಿತಿಗಳ ಪರಿಚಯ ಮಾಡುವುದು ಒಂದು ರೀತಿಯ ಕಷ್ಟದ ಕೆಲಸವಾದರೆ  ವ್ಯಾಕರಣ, ಛಂದಃ ಶಾಸ್ತ್ರ,  ನಿಘಂಟು  ಮುಂತಾದ  ವಿಷಯಗಳಲ್ಲಿ  ಕೆಲಸ ಮಾಡಿದ ಸಾಧಕರ ಪರಿಚಯ  ಮಾಡಿಸುವುದು ಇನ್ನೊಂದು ರೀತಿಯ ಕಷ್ಟದ ಕೆಲಸವೇ ಸರಿ.  ವೆಂಕಟಾಚಲ ಶಾಸ್ತ್ರಿರವರ  ಬಗ್ಗೆ  ಲೇಖನ ಬರೆಯುವಾಗ  ಭಾಷೆಯಲ್ಲಿ  ವಿಶಿಷ್ಟ ಏರಿಳಿತವಿದೆ. ತನಾಶಿಯವರ ಬಗ್ಗೆ ಬರೆಯುವಾಗ  ಸಮಯ ಸ್ಪೂರ್ತಿ ಇದೆ.   ಬರಹಗಳ ಈ ಗುಣಗಳು  ಬಹುಶಃ  ಆ ಸಾಹಿತಿಗಳ  ಸಾಹಿತ್ಯದ ಒಂದು ಭಾಗವೇ ಆಗಿರುವುದರಿಂದ,  ಬರಹಗಳಲ್ಲಿ ಆಪ್ತತೆ ಮೂಡುತ್ತದೆ.

ಇದೆಲ್ಲಾ ಲೆಕ್ಕಾಚಾರ ಹಾಕಿ ಮಾಡಿರುವಂತೆ ಎಲ್ಲೂ ಕಂಡಿಲ್ಲ.  ಆದರೆ ಈ ಲೆಕ್ಕಾಚಾರ ಎಲ್ಲಾ ಸರಿಯಾಗಿ ಆಗಲು  ಬಹುಶಃ ಅವರ ಬ್ಯಾಂಕಿಂಗ್,  ಹಣಕಾಸು  ಕ್ಷೇತ್ರದಲ್ಲಿ ಮಾಡಿರುವ  ಕೆಲಸ ಸಹಾಯ ಮಾಡಿದೆ, ಏಕೆಂದರೆ  ಆಲ್ಲಿ ಎಲ್ಲೂ ಲೆಕ್ಕಾಚಾರ ತಪ್ಪುವ ಹಾಗಿಲ್ಲವಲ್ಲ!  ವೃತ್ತಿಯಲ್ಲಿ   ಹಣಕಾಸಿನ ಲೆಕ್ಕಾಚಾರದಲ್ಲಿ ಕೆಲಸ ಮಾಡಿದ್ದರೂ ಪ್ರವೃತ್ತಿಯಲ್ಲಿ  ಸಾಹಿತ್ಯದ ಬಗ್ಗೆ ಒಲವು ಇದೆ. ಈ ಒಲವು ಅವರ ಮೇಲೆ ಪ್ರಭಾವ ಬೀರಿರುವ ಸಾಹಿತಿಗಳ ಕೃತಿಗಳನ್ನು ಆಳಾವಾದ ಅಭ್ಯಾಸ ಮಾಡಿ,  ಆ ಸಾಹಿತಿಗಳ ಪರಿಚಯ ಎಲ್ಲರಿಗೂ ಮಾಡುವ  ಕಾರ್ಯದಲ್ಲಿ ನಿರತರಾಗಿದ್ದಾರೆ.   ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಕವಿ ಮತ್ತು ಕೃತಿಗಳ ಪರಿಚಯ  ಬೇರೆ ಬೇರೆ ವೇದಿಕೆಗಳಲ್ಲಿ ಮಾಡಿಕೊಟ್ಟಿದ್ದಾರೆ.   ಆ ಪ್ರತಿಭೆ ಈ ಬಾರಿ ಅಕ್ಷರದ ರೂಪ ಪಡೆದು ತಮ್ಮ ಮುಂದೆ ‘ಧ್ರುವತಾರೆಯರು’ ಎಂಬ ಹೆಸರಿನಿಂದ ಗ್ರಂಥದ ರೂಪದಲ್ಲಿ ಹೊರಬಂದಿದೆ.  ಇವರು ಆಯ್ಕೆ ಮಾಡಿಕೊಂಡ ಕವಿ ಕೃತಿಗಳ  ಪರಿಚಯದ ಗ್ರಂಥಕ್ಕೆ ಈ ಶೀರ್ಷಿಕೆ ಬಿಟ್ಟು ಇನ್ನೊಂದು ಶೀರ್ಷಿಕೆ ಬಹುಶಃ ಸಾಧ್ಯವಿಲ್ಲ………ಶ್ರೀ ಜೆ.ಎನ್. ಜಗನ್ನಾಥ್ ರವರೇ ಈ ಗ್ರಂಥ ಬರೆದ  ಸಾಹಿತಿಗಳು.”

ಹೇಗಿದೆ ಅಂಕಲ್ ಎಂದು ರೇಷ್ಮಾ  ಕೇಳಿದಾಗ  ನನಗೆ ಬಹಳವೇ ಸಂತೋಷವಾಯಿತು. ಎಲ್ಲರಿಗೂ ಪುರಿ ಉಂಡೆ ಬಂತು.  “ಥ್ಯಾಂಕ್ಯು ಅಂಕಲ್”  ಎಂದು  ಇನ್ನೊಮ್ಮೆ ಕೋರಸ್ನಲ್ಲಿ ಕೂಗುತ್ತಾ ಹೊರಟರು ಮಕ್ಕಳು.
         
ಶ್ರೀ ಜೆ.ಎನ್.ಜಗನ್ನಾಥ ಬರೆದ ‘ಧ್ರುವತಾರೆಯರು’ ಪುಸ್ತಕ ನಾನು ಓದಿದಾಗ  ಅದರ  ಮುನ್ನುಡಿಯಲ್ಲಿ ಶ್ರೀ ಸತ್ಯೇಶ್ ಬೆಳ್ಳೂರ್  ಬರೆದ ಒಂದು ಸಾಲು “… ಇದನ್ನು ಗಟ್ಟಿಯಾಗಿ ಓದಿ…. ಖಂಡಿತ ಖುಷಿಪಡುತ್ತೀರಿ” ನನ್ನನ್ನು  ಆಕರ್ಷಿಸಿತು.   ಈ ತಿಂಗಳು ರಾಜ್ಯೋತ್ಸವ, ಮಕ್ಕಳ ದಿನಾಚರಣೆ  ಎರಡೂ ಬಂದಿದೆ.  ಅದರಂತೆ ಈ ಪುಸ್ತಕದ ಪರಿಚಯ ಮಕ್ಕಳ ಮೂಲಕ ಈ ರೀತಿಯಲ್ಲಿ ಮಾಡಿಸಲು ಪ್ರಯತ್ನ ಮಾಡಿದ್ದೇನೆ.  ಆದರೆ ಇದು ಬರೀ ಮಕ್ಕಳ ಪುಸ್ತಕವಲ್ಲ.  ಎಷ್ಟೋ ವಿಷಯ ನಮಗೆ ಗೊತ್ತಿದೆ ಅಂದುಕೊಂಡರು ಅದು ಪೂರ್ತಿಯಾಗಿ ಗೊತ್ತಿರುವುದಿಲ್ಲ ಅಥವ  ಬೇಕಾದಾಗ ಸಿಗುವುದಿಲ್ಲ.  ಹಾಗಾಗಿ ಇದು ಎಲ್ಲರ ಓದಿಗಾಗಿ ಮಾತ್ರವಲ್ಲದೇ  ಸಂಗ್ರಹ ಯೋಗ್ಯವಾದ ಪುಸ್ತಕ. 

‘ಧ್ರುವತಾರೆಯರು’ ಪುಸ್ತಕ 22.11.21ರಂದು ಲೋಕಾರ್ಪಣೆ  ಆಗಿದೆ. ಶ್ರೀಜೆ.ಎನ್.ಜಗನ್ನಾಥ್ ರವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ಇನ್ನಷ್ಟು ಕೃತಿಗಳು ಇವರ ಲೇಖನಿಯಿಂದ ಹರಿದು ಬರಲಿ ಎಂದು ಆಶಿಸುತ್ತೇನೆ.

ಪುಸ್ತಕ: ಧ್ರುವತಾರೆಯರು
ಕದಂಬ ಪ್ರಕಾಶನ.
ಬೆಲೆ: ರೂ.100/-
ಧನ್ಯವಾದಗಳು.
ಎನ್.ವಿ.ರಘುರಾಂ.

Copyright © All rights reserved Newsnap | Newsever by AF themes.
error: Content is protected !!