ಬಾಲಕ ನಾಪತ್ತೆ ಪ್ರಕರಣ : ತಂಗಳಗೆರೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ, ವಾರ್ಡನ್ ಸಸ್ಪೆಂಡ್

Team Newsnap
1 Min Read

ತಂಗಳಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು ಅಮಾನತ್ತು ಮಾಡಲಾಗಿದೆ.

ತಂಗಳಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ದೇಸಾಯಿ ರವರ ಭೇಟಿ ನೀಡಿ ಕಾಣೆಯಾದ ಕಿಶೋರ್ ಬಗ್ಗೆ ಮಾಹಿತಿ ಪಡೆದುಕೊಂಡರು.

ಆಗಸ್ಟ್ 10 ರಂದು ಮಂಡ್ಯ ತಾಲೂಕಿನ ತಂಗಳಗೆರೆ ಮೊರಾರ್ಜಿ ದೇಸಾಯಿ ಶಾಲೆಯಿಂದ ಕಿಶೋರ್ ಎಂಬ 9ನೇ ತರಗತಿ ವಿದ್ಯಾರ್ಥಿ ಕಾಣೆಯಾಗಿದ್ದನು. ಈ ಸಂಬಂಧ ತನಿಖೆ ನಡೆಸಿ ವಿಚಾರಿಸಲು ಕ್ರೈಸ್ ಮುಖ್ಯಸ್ಥರಾದ ರಮೇಶ್ ದೇಸಾಯಿ ರವರು ಇಂದು ಶಾಲೆಗೆ ಭೇಟಿ ನೀಡಿದ್ದರು.

ಭೇಟಿ ಸಮಯದಲ್ಲಿ ಶಾಲೆಯ ಪ್ರಾಂಶುಪಾಲರು ಹಾಗೂ ವಾರ್ಡನ್ ರವರು ಕರ್ತವ್ಯ ಲೋಪ ಎಸಗಿರುತ್ತಾರೆಂದು, ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿರುತ್ತಾರೆ.

ಜೊತೆಗೆ ಸ್ಥಳ ಮಹಜರು ಮಾಡಿ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತಕ್ಷಣ ಮಗುವನ್ನು ಹುಡುಕಲು ತಿಳಿಸಿರುತ್ತಾರೆ. ಮಗು ತಪ್ಪಿಸಿಕೊಳ್ಳುವ ಮುಂಚೆ ಅವನ ವರ್ತನೆ ಹೇಗಿತ್ತು ಮಗುವಿನ ಕೌಟುಂಬಿಕ ಹಿನ್ನೆಲೆ ಏನು ಎಂಬುದರ ಬಗ್ಗೆ ಹಲವು ವಿಷಯಗಳನ್ನ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿರುತ್ತಾರೆ. ಇದನ್ನು ಓದಿ :ಬಿಬಿಎಂಪಿ ಪಶ್ಚಿಮ ವಲಯ ಕಚೇರಿ ಮೇಲೆ ಲೋಕಾಯುಕ್ತ ದಾಳಿ – 4 ಲಕ್ಷ ರು ವಶ

ಈ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಮಂಡ್ಯ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡರಿಗೆ ಸೂಚನೆ ನೀಡಿದರು, ಕ್ರೈಸ್ ಜಂಟಿ ನಿರ್ದೇಶಕ ನಾಗೇಶ್ ಹಾಗೂ ಕ್ರೈಸ್ ಕಾರ್ಯ ಪಾಲಕ ಅಭಿಯಂತರರು ಪರಿಶೀಲನೆ ನಡೆಸುವ ವೇಳೆ ಉಪಸ್ಥಿತರಿದ್ದರು.

Share This Article
Leave a comment