ಪುರಂದರದಾಸರು ಈ ಕೃತಿಯನ್ನು ರಚಿಸಿದ್ದು ದೊಡ್ಡಮಳೂರಿನ ಅಂಬೇಗಾಲ ಕೃಷ್ಣನ ಸನ್ನಿಧಿಯಲ್ಲಿ
ಆಗಸದಲ್ಲಿ ತಾರೆಗಳ ಕಂಡಾಗ ಆಹ್ಲಾದವಾಗುತ್ತದೆ. ಅಂತೆಯೇ, ಇಬ್ಬನಿಯ ಹನಿ ಇರುವ ಕುಸುಮವನ್ನು ನೋಡಿದಾಗಲೂ ಮನಸ್ಸು ಮೃದುವಾಗುತ್ತದೆ. ಹೃದಯ ಹಗುರಾಗುತ್ತದೆ. ನಿಶ್ಯಬ್ದ ವಾತಾವರಣದಲ್ಲಿ ಮನೆಯಲ್ಲಿ ಮೊಳಗುವ ಎಳೆಯ ಮಗುವಿನ ಕಿಲ ಕಿಲ ನಗೆ ರೋಮಾಂಚನ ಮೂಡಿಸುತ್ತದೆ.
ಹೌದು ! ಎಲ್ಲರಲ್ಲೂ ಆಹ್ಲಾದ ಮೂಡಿಸುವ, ಎಲ್ಲರ ಮನಸ್ಸನ್ನು ಮೃದುಗೊಳಿಸುವ ಹಾಗೂ ರೋಮಾಂಚನಗೊಳಿಸುವ ಮಾಂತ್ರಿಕ ಶಕ್ತಿ ಕೇವಲ ಸಂಗೀತಕ್ಕೆ ಮಾತ್ರವಿದೆ.
ದೇಶಗಳ ಗಡಿ ಇಲ್ಲ ! ಜಾತಿ-ಧರ್ಮಗಳ ಬಂಧನಗಳಿಲ್ಲ ! ಭಾಷೆಯ ಎಲ್ಲೆ ಇಲ್ಲ ! ದೇಶಾತೀತ, ಜಾತ್ಯಾತೀತ, ಭಾಷಾತೀತ ಸಂಗೀತ, ಕಾಲಾತೀತವೂ ಹೌದು !! ಸಂಗೀತಕ್ಕೆ ಸರಿಸಮನಾದ ವಿಷಯವೇ ಈ ಜಗದೊಳಿಲ್ಲ !!! ಸಂಗೀತಕ್ಕೆ ಪಾವಿತ್ರ್ಯತೆ ಇದೆ. ಸಂಗೀತಕ್ಕೆ ಭಾವನೆಗಳಿವೆ.
ರಾಗ-ತಾಳ-ಪಲ್ಲವಿಗಳಿಂದ ಸುಶ್ರಾವ್ಯ ಮತ್ತು ಸುಮಧುರತೆಯಿಂದ ಕೂಡಿರುವ ಕ್ರಮಬದ್ಧ ಲಯಬದ್ಧ ಮಾಧುರ್ಯ-ಭರಿತ ಸಂಗೀತ ಶ್ರೋತೃಗಳ ಮನ ಮುಟ್ಟುತ್ತದೆ ! ಹೃದಯ ತಟ್ಟುತ್ತದೆ.
ಸಂಗೀತವನ್ನು ಹಾಡುವ ಗಾಯಕರು, ಸಂಗೀತವನ್ನು ನುಡಿಸುವ ಕಲಾವಿದರು ಮಾತ್ರವಲ್ಲದೆ, ಸಂಗೀತಕ್ಕೆ ಸಾಹಿತ್ಯವನ್ನು ಪೂರೈಸುವ ಕೃತಿ ರಚನಾಕಾರರು ಅಥವಾ ಕೀರ್ತನಾಕಾರರೂ ಸಂಗೀತ ಲೋಕದಲ್ಲಿ ವಿಶೇಷ ಸ್ಥಾನ ಪಡೆಯುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ ತ್ರಿ-ಮೂರ್ತಿಗಳು ಎಂದೇ ಖ್ಯಾತರಾದ ಮುತ್ತುಸ್ವಾಮಿ ದೀಕ್ಷಿತರ್, ತ್ಯಾಗರಾಜರು ಹಾಗೂ ಶಾಮಶಾಸ್ತ್ರಿ ಅವರ ಜೊತೆಗೆ, ತಮ್ಮ ಅದ್ಭುತ ಹಾಗೂ ಅರ್ಥಪೂರ್ಣ ಕೀರ್ತನೆಗಳಿಂದ ಭಕ್ತಿ ಚಳುವಳಿಗೆ ಬಳುವಳಿ ನೀಡಿದ ಸಂತರ ಸಂತ ಪುರಂದರ ದಾಸರು ಹಾಗೂ ಸಂತ ಶ್ರೇಷ್ಠ ಕನಕದಾಸರು ಮಾತ್ರವಲ್ಲದೆ, ದಾಸ ಪರಂಪರೆಯ ಹಲವರ ಕೊಡುಗೆ ಅನನ್ಯ ಮತ್ತು ಅಗಾಧ.
ಇಂತಹ ಪ್ರತಿಭಾನ್ವಿತ ಕೀರ್ತನಾಕಾರರು ತಮ್ಮ ಶ್ರೇಷ್ಠ ಕೃತಿಗಳನ್ನು ರಚಿಸಲು ಕೆಲವು ಘಟನೆಗಳು, ಹಲವು ಸ್ಥಳಗಳು, ಕೆಲವೊಮ್ಮೆ ಕಂಡ ದೃಶ್ಯಗಳು ಹಾಗೂ ಹಲವೊಮ್ಮೆ ಎದುರಾದ ಪರಿಸ್ಥಿತಿಗಳು ಪ್ರೇರಣೆ ಮತ್ತು ಸ್ಪೂರ್ತಿ ನೀಡಿವೆ. ಸಂತರ ಸಂತ ಪುರಂದರ ದಾಸರ ಆಡಿಸಿದಳೆಶೋದಾ ಜಗದೋದ್ಧಾರನ ಎಂಬ ಉತ್ಕೃಷ್ಠ ಕೃತಿಯ ರಚನೆಗೆ ಪ್ರೇರಣೆ ನೀಡಿದ ತಾಣ ಹಾಗೂ ಸ್ಪೂರ್ತಿಯನ್ನು ಕೊಟ್ಟ ದೃಶ್ಯದ ಪರಿಚಯ ಇಲ್ಲಿದೆ :
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಶ್ರೀ ಅಪ್ರಮೇಯ ಸ್ವಾಮಿ ದೇವಾಲಯವಿದೆ. ಬೆಂಗಳೂರಿನಿಂದ ಚನ್ನಪಟ್ಟಣ ದಾಟಿ ಮೈಸೂರಿನತ್ತ ಪ್ರಯಾಣಿಸುವಾಗ ರಸ್ತೆಯ ಎಡ ಭಾಗದಲ್ಲಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಚನ್ನಪಟ್ಟಣಕ್ಕೆ ಮೂರು ಕಿಲೋ ಮೀಟರ್ ಮುನ್ನವೇ ಬಲ ಭಾಗದಲ್ಲಿ ಈ ದೇವಾಲಯವು ಕಾಣುತ್ತದೆ.
ಕೆಲ ಕಾಲ ಈ ಪ್ರದೇಶದಲ್ಲಿ ನೆಲೆಸಿದ್ದ ಶ್ರೀ ರಾಮಚಂದ್ರ ಸ್ವಾಮಿಯು ಕಣ್ವ ನದಿಯ ತಟದಲ್ಲಿರುವ ಈ ದೇಗುಲಕ್ಕೆ ಭೇಟಿ ನೀಡಿ ಲೋಕ ಕಲ್ಯಾಣಕ್ಕಾಗಿ ಯಜ್ಞ-ಯಾಗಾದಿಗಳನ್ನು ನಡೆಸಿದರೆಂದೂ ಹಾಗೂ ಹೋಮ-ಹವನಗಳನ್ನೂ ಮಾಡಿದರೆಂದೂ ಪ್ರತೀತಿ ಇದೆ. ಆದಕಾರಣ, ಈ ದೇವಾಲಯವನ್ನು ಶ್ರೀ ರಾಮಾಪ್ರಮೇಯ ಸ್ವಾಮಿ ದೇವಾಲಯ ಎಂದೂ ಜನಜನಿತವಾಗಿದೆ.
ಅಲ್ಲದೆ, ಈ ದೇವಾಲಯವನ್ನು ದಕ್ಷಿಣ ಅಯೋಧ್ಯಾ ಎಂದೂ ಬಣ್ಣಿಸುತ್ತಾರೆ. ಅಂತೆಯೇ, ದೇವಾಲಯ ಇರುವ ಪ್ರದೇಶವನ್ನು ಮಂಗಳಾಪುರಿ ಎಂದೂ ಕರೆಯುತ್ತಾರೆ.
ಒಂದೆಡೆ, ಶ್ರೀ ಅಪ್ರಮೇಯ ಸ್ವಾಮಿಯ ನಿಂತಿರುವ ಮೂರ್ತಿಯು ಈ ದೇವಾಲಯದ ಕೇಂದ್ರ ಬಿಂದು ಎನಿಸಿದೆ. ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿಸಿರುವ ಈ ಚತುರ್ಭುಜದ ಮೂರ್ತಿಯ ಮೇಲಿನ ಒಂದು ಕೈಯ್ಯಲ್ಲಿ ಪಾಂಚಜನ್ಯ ( ಶಂಖು ) ಹಾಗೂ ಮತ್ತೊಂದು ಕೈಯ್ಯಲ್ಲಿ ಸುದರ್ಶನ ಚಕ್ರ ಹಾಗೂ ಕೆಳಗಿನ ಒಂದು ಕೈಯ್ಯಲ್ಲಿ ಕಮಲ ಮತ್ತೊಂದು ಕೈಯ್ಯಲ್ಲಿ ಗದೆ ಹಿಡಿದಿರುವ ಶ್ರೀ ಅಪ್ರಮೇಯ ಸ್ವಾಮಿಯ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ಮತ್ತೊಂದೆಡೆ, ಅಂಬೆಗಾಲು ಇಡುತ್ತಿರುವ ಬಾಲ ಕೃಷ್ಣನ ಪುಟ್ಟ ವಿಗ್ರಹ ಈ ದೇವಾಲಯದಲ್ಲಿನ ಮತ್ತೊಂದು ಆಕರ್ಷಣೆ. ಒಂದು ಬಲಗೈಯ್ಯಲ್ಲಿ ಬೆಣ್ಣೆ ಇಟ್ಟುಕೊಂಡಿರುವ ಹಾಗೂ ಎಡಗೈಯ್ಯಲ್ಲಿ ನೆಲವನ್ನು ಊರಿ ಮುನ್ನಡೆಯುತ್ತಿರುವ ಈ ಪುಟ್ಟ ಬಾಲಕೃಷ್ಣನ ಸೌಂದರ್ಯ ನೋಡುಗರ ಮನಸೂರೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಈ ದೇವಾಲಯವನ್ನು ಶ್ರೀ ಅಂಬೆಗಾಲು ಕೃಷ್ಣ ದೇವಾಲಯ ಹಾಗೂ ಶ್ರೀ ನವನೀತ ಕೃಷ್ಣ ದೇವಾಲಯ ಎಂದೂ ಕರೆಯುತ್ತಾರೆ.
ದೇವಾಲಯದ ವಿಶೇಷತೆ !
ಕಣ್ವ ನದಿಯ ದಡದಲ್ಲಿ ಮರಳು ಹೆಚ್ಚಾಗಿ ಇದ್ದುದರಿಂದ ದೇವಾಲಯವಿರುವ ಈ ಊರನ್ನು ಮೊದಲು ಮರಳೂರು ಎಂದು ಕರೆಯುತ್ತಿದ್ದರಂತೆ. ನಂತರ, ಕಾಲಾನುಕ್ರಮದಲ್ಲಿ ಮರಳೂರು ಎಂಬುದು ಮಳ್ಳೂರು ಆಯಿತಂತೆ !
ನದಿಯ ತಟದಲ್ಲಿ ನಿರ್ಮಿಸಿರುವ ಈ ದೇವಸ್ಥಾನಕ್ಕೆ ಯಾವುದೇ ಅಡಿಪಾಯ ಅಥವಾ ತಳಪಾಯವೂ ಇಲ್ಲವಂತೆ !
ಶೈಶಾವಸ್ಥೆಯಲ್ಲಿರುವ ಶ್ರೀ ಕೃಷ್ಣನ ವಿಗ್ರಹವಿರುವ ವಿರಳಾತಿ ವಿರಳ ದೇಗುಲ ಇದಾಗಿದೆ. ಇಂತಹ ಮತ್ತೊಂದು ದೇವಾಲಯ ಇಡೀ ಜಗತ್ತಿನಲ್ಲೇ ಇಲ್ಲ ! ಎಂಬುದು ಸ್ಥಳೀಯರ ಮಾಹಿತಿ.
ದ್ರಾವಿಡ ಶೈಲಿಯ ವಾಸ್ತುಶಿಲ್ಪ ಈ ದೇಗುಲದ ವಿಶೇಷತೆಗಳಲ್ಲೊಂದು. ಐದು ಹಂತದ ರಾಜಗೋಪುರ ಕೂಡಾ ಈ ದೇವಾಲಯದ ಮತ್ತೊಂದು ಗಮನಾರ್ಹ ಅಂಶ.. ದಶಾವತಾರ ಮಹಾದ್ವಾರದಷ್ಟೇ ಎತ್ತರದ ಕಲ್ಲಿನ ದೀಪ ಸ್ಥಂಭವೂ ಈ ದೇಗುಲದಲ್ಲಿ ಕಾಣಬಹುದಾದ ವಿಶಿಷ್ಠತೆ. ನಾಲ್ಕು ಕಂಬಗಳ ಹೊತ್ತ ಪುರಂದರ ಮಂಟಪ ಈ ದೇವಾಲಯದಲ್ಲಿನ ವಿಶೇಷತೆಗಳಲ್ಲಿ ಅತ್ಯಂತ ವಿಶೇಷತೆಯ ಸ್ಥಾನ ಪಡೆದಿದೆ.
ಹನ್ನೊಂದನೇ ಶತಮಾನದಲ್ಲಿ ಚೋಳರ ವಂಶದ ರಾಜಾ ರಾಜೇಂದ್ರ ಸಿಂಹ ಈ ದೇವಾಲಯವನ್ನು ನಿರ್ಮಿಸಿದನೆಂದೂ ಅಲ್ಲಿನ ಶಿಲಾ ಶಾಸನ ಹೇಳುತ್ತದೆ. ಅಲ್ಲಿನ ಅತ್ಯಾಕರ್ಷಕ ಅಂಬೆಗಾಲು ಕೃಷ್ಣನ ವಿಗ್ರಹವನ್ನು ವ್ಯಾಸ ತೀರ್ಥರು ಪ್ರತಿಷ್ಠಾಪಿಸಿದರೆಂದೂ ಹಾಗೂ ದೇವಾಲಯದ ಪ್ರಾಕಾರವನ್ನು ವಿಜಯನಗರದ ಅರಸರು ನಿರ್ಮಿಸಿದರೆಂದೂ ಸ್ಥಳೀಯರು ಹೇಳುತ್ತಾರೆ.
ಸ್ಥಳೀಯರ ಮಾತುಗಳ ಪ್ರಕಾರ, ಶ್ರೀರಾಮಚಂದ್ರ ಪ್ರಭುವಿನಿಂದ ವ್ಯಾಸ ತೀರ್ಥರು, ಪುರಂದರದಾಸರವರೆಗೆ ಮಹಾಮಹಿಮರು ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂಬುದು ಒಂದೆಡೆಯಾದರೆ, ಚೋಳರ ದೊರೆ ರಾಜಾ ರಾಜೇಂದ್ರ ಸಿಂಹನಿಂದ ವಿಜಯನಗರದ ಅರಸರವರೆಗೆ ಈ ದೇವಾಲಯದ ಅಭ್ಯುದಯಕ್ಕೆ ಶ್ರಮಿಸಿದ್ದಾರೆ ಎಂಬುದು ಮತ್ತೊಂದೆಡೆ ಗಮನಕ್ಕೆ ಬರುತ್ತದೆ.
ಅಪ್ರಮೇಯ-ಅರವಿಂದವಲ್ಲಿ
ಅಪ್ರಮೇಯ ಎಂದರೆ ಅಳೆಯಲಾರದ್ದು ಎಂದರ್ಥ. ದೇವರನ್ನು ಅಥವಾ ದೇವರ ಮಹಿಮೆಯನ್ನು ಅಳೆದು ತೂಗಲು ಸಾಧ್ಯವೇ ? ಎಂಬುದು ಆಸ್ತಿಕರ ಪ್ರಶ್ನೆ. ಶ್ರೀ ಅಪ್ರಮೇಯ ಶ್ರೀಮನ್ನಾರಣನ ಅಪರಾವತಾರ. ಶ್ರೀ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ಸನ್ನಿಧಿಯ ಸಮೀಪದಲ್ಲಿಯೇ, ಶ್ರೀಗಂಧದ ಮರದಲ್ಲಿ ನಿರ್ಮಿಸಿರುವ ಶ್ರೀ ಅಪ್ರಮೇಯ ಸ್ವಾಮಿಯ ಉತ್ಸವ ಮೂರ್ತಿಯೂ ಇದೆ. ಅದೇ ಪ್ರಾಂಗಣದ ಪಕ್ಕದಲ್ಲಿಯೇ ಶ್ರೀ ಮಹಾಲಕ್ಷ್ಮೀ ಸ್ವರೂಪಳಾಗಿರುವ ಶ್ರೀ ಅರವಿಂದವಲ್ಲಿಯ ಸನ್ನಿಧಿಯೂ ಇದೆ.
ಸ್ಪುರದ್ರೂಪಿ ಅಂಬೆಗಾಲು ಕೃಷ್ಣ !
ಶ್ರೀ ಅಪ್ರಮೇಯ ಸ್ವಾಮಿ ದೇವಾಲಯದ ಪ್ರಮುಖ ಆಕರ್ಷಣೆ ಅಂಬೆಗಾಲು ಕೃಷ್ಣ ಅಥವಾ ನವನೀತ ಕೃಷ್ಣನ ಸನ್ನಿಧಿ. ಕೃಷ್ಣ ವರ್ಣದಲ್ಲಿಯೇ ಇರುವ ಅಂಬೆಗಾಲು ಕೃಷ್ಣನ ಮೂರ್ತಿಯ ಮುಖ ಪೂರ್ಣ ಚಂದ್ರನಂತೆ ಕಂಗೊಳಿಸುತ್ತದೆ. ವಿಗ್ರಹದಲ್ಲಿನ ಪಳಪಳ ಹೊಳೆಯುವ ವಿಶಾಲ ಕಣ್ಣುಗಳು ಆಯಸ್ಕಾಂತಿಕದಂತೆ ಆಕರ್ಷಿಸುತ್ತದೆ. ಅಂಬೆಗಾಲು ಕೃಷ್ಣನ ವಿಗ್ರಹದಲ್ಲಿ ಕಾಣಬರುವ ಗುಂಗುರು ಕೂದಲು ರೋಚಕ. ಕುತ್ತಿಗೆಯಲ್ಲಿ ವಜ್ರಾಭರಣದ ಮಾಲೆ, ತೋಳಿನಲ್ಲಿ ತೋಳು ಬಂಧಿ, ಸೊಂಟಕ್ಕೆ ವಡ್ಯಾಣ, ಕಾಲಿಗೆ ಅಂದುಗೆ ಎಲ್ಲವೂ ಅಂಬೆಗಾಲು ಕೃಷ್ಣನ ಸೌಂದರ್ಯವನ್ನು ವೃದ್ಧಿಸುತ್ತದೆ. ಪುಟ್ಟ ಕೃಷ್ಣನ ಸೌಂದರ್ಯಕ್ಕೆ ವಕ್ರ ದೃಷ್ಠಿ ಬೀಳದಿರಲಿ ಎಂಬ ಸದುದ್ದೇಶದಿಂದ ವಿಗ್ರಹಕ್ಕೆ ಹುಲಿ ಉಗುರು ಕಟ್ಟಲಾಗಿದೆ. ಆದರೂ, ಬಲಗೈಯ್ಯಲ್ಲಿ ಬೆಣ್ಣೆ ಹಿಡಿದಿರುವ ಭಂಗಿಯಲ್ಲಿರುವ ಹಾಗೂ ಎಡಗೈಯ್ಯಲ್ಲಿ ನೆಲವೂರಿ ಮುಂದಕ್ಕೆ ಸಾಗುತ್ತಿರುವ ಭಂಗಿಯ ನವನೀತ ಕೃಷ್ಣನ ವಿಗ್ರಹ ಎಂತಹವರ ಗಮನವನ್ನಾದರೂ ಸೆಳೆಯುವ ಸಾಮರ್ಥ್ಯ ಹೊಂದಿದೆ. ಹೀಗಿರುವಾಗ, ತನ್ನ ಪರಮಭಕ್ತ ಪುರಂದರದಾಸರ ಗಮನಸೆಳೆಯಲು ಆತನಿಗೆ ಕಷ್ಟವೇ ?
ಪುರಂದರ ದಾಸರು ಈ ದೇವಾಲಯಕ್ಕೆ ಬಂದಾಗ ಶ್ರೀ ಅಪ್ರಮೇಯ ಸ್ವಾಮಿ ಹಾಊ ಶ್ರೀ ಅಂಬೆಗಾಲು ಕೃಷ್ಣನ ವಿಗ್ರಹಗಳನ್ನು ನೋಡುತ್ತಾರೆ. ಭಕ್ತಿ ಪರವಶರಾಗುತ್ತಾರೆ. ಶ್ರೀ ಅಂಬೆಗಾಲು ಕೃಷ್ಣನ ಕಂಡು ಆತನ ಬಾಲ ಲೀಲೆಗಳ ವರ್ಣಿಸಿ ಕೀರ್ತನೆಯನ್ನು ರಚಿಸುತ್ತಾರೆ. ಅದೇ ಪುರಂದರದಾಸರ ಸರ್ವಶ್ರೇಷ್ಠ ರಚನೆಗಳಲ್ಲೊಂದಾದ ಆಡಿಸಿದಳೆಶೋದಾ ಜಗದೋದ್ದಾರನ ಕೃತಿ ! ಈ ಕೃತಿಯನ್ನು ರಚಿಸಿದ್ದು ಮಾತ್ರವಲ್ಲ, ಇದೇ ಸ್ಥಳದಲ್ಲಿ ಕುಳಿತು ಹಾಡುತ್ತಾರೆ. ದೇವಾಲಯದ ಪ್ರಾಂಗಣದಲ್ಲಿ ಪುರಂದರದಾಸರು ಕುಳಿತು, ತಾವು ರಚಿಸಿದ ಆಡಿಸಿದಳೆಶೋದಾ ಜಗದೋದ್ದಾರನ ಕೃತಿಯನ್ನು ಹಾಡಿದ ಸ್ಥಳ ಇದೀಗ ಪುರಂದರ ಮಂಟಪ ಎಂದೇ ಪ್ರಸಿದ್ಧಿ ಪಡೆದಿದೆ.
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ರಾಜ್ಯಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರು, ಸಂಗೀತ ಶಿಕ್ಷಕರು, ಸಂಗೀತದ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ಸಂಗೀತ ರಸಿಕರು ಶ್ರೀ ಅಪ್ರಮೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪುರಂದರ ಮಂಟಪವನ್ನು ಕಂಡು ಮಹಾನ್ ಕೀರ್ತನಾಕಾರ ಹಾಗೂ ಸಂತರ ಸಂತ ಪುರಂದರದಾಸರನ್ನು ಸ್ಮರಿಸಿ, ಗೌರವ ಸಲ್ಲಿಸುತ್ತಾರೆ.
ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದಿಂದ ೬೩ ಕಿಲೋ ಮೀಟರ್ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ ೯೩ ಕಿಲೋ ಮೀಟರ್ ದೂರದಲ್ಲಿರುವ ಈ ದೇವಾಲಯಕ್ಕೆ ಇದೀಗ ದೇಶಾದ್ಯಂತ ಭಕ್ತರು ಹಾಗೂ ಪ್ರವಾಸಿಗರು ಬರುತ್ತಿದ್ದಾರೆ.
ಮದುವೆಯಾಗಿ ವರ್ಷಗಳೇ ಕಳೆದರೂ ಮಕ್ಕಳಾಗದ ದಂಪತಿಗಳೂ ಶ್ರೀ ಅಂಬೆಗಾಲು ಕೃಷ್ಣನ ಸನ್ನಿಧಿಗೆ ಆಗಮಿಸಿ, ಮಕ್ಕಳನ್ನು ಕರುಣಿಸುವಂತೆ ಹರಕೆ ಹೊರುತ್ತಾರೆ. ತಮ್ಮ ಪ್ರಾರ್ಥನೆ ಫಲಿಸಿದಾಗ, ಮತ್ತೆ ದೇವರ ಸನ್ನಿಧಿಗೆ ಆಗಮಿಸಿ, ಬೆಳ್ಳಿ ಅಥವಾ ಮರದ ಪುಟ್ಟ ಗಾತ್ರದ ತೊಟ್ಟಿಲು ಅಥವಾ ಉಯ್ಯಾಲೆಯನ್ನು ದೇವರ ಸನ್ನಿಧಿಯಲ್ಲಿ ಕಟ್ಟಿ ಕೃತಜ್ಞತೆ ಸಲ್ಲಿಸುತ್ತಾರೆ.
ಶ್ರೀ ಅಪ್ರಮೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಶ್ರೀ ಅಂಬೆಗಾಲು ಕೃಷ್ಣನ ಕಣ್ತುಂಬಿಕೊಳ್ಳುತ್ತಾ, ಪುರಂದರ ಮಂಟಪವನ್ನು ನೋಡುತ್ತಾ, ಆಡಿಸಿದಳೆಶೋದಾ ಜಗದೋದ್ಧಾರನ ಈ ಕೃತಿಯನ್ನು ಪುರಂದರದಾಸರು ರಚಿಸಿದ್ದು ಇಲ್ಲೇ ಎಂಬುದು ಮನದೊಳಗೆ ಹೊಕ್ಕಾಗ ಮೈ ರೋಮಾಂಚನವಾಗುತ್ತದೆ. ಭಕ್ತಿ ಚಳುವಳಿಯ ಬಳುವಳಿಯಾಗಿ ಸರಳ ಸಾಹಿತ್ಯದ ಮೂಲಕ ಸರ್ವಶ್ರೇಷ್ಠ ಕೀರ್ತನೆಯನ್ನು ಸಂಗೀತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಸಂತರ ಸಂತ ಪುರಂದರದಾಸರ ಅರ್ಥಗರ್ಭಿತ ತತ್ವ-ಸಿದ್ದಾಂತದ ಅನಾವರಣವೂ ಆಗುತ್ತದೆ.
ಡಿ.ಪಿ.ಮುರಳೀಧರ್
ಕೃಪೆ : ವಾರ್ತಾ ಜನಪದ