January 1, 2025

Newsnap Kannada

The World at your finger tips!

ring road

ವರ್ಷವಿಡೀ ಮೈಸೂರು ಸ್ವಚ್ಛವಾಗಿರಬೇಕು; ಸಚಿವ ಎಸ್.ಟಿ.ಸೋಮಶೇಖರ್

Spread the love

ವರ್ಷದಲ್ಲಿ 365 ದಿನಗಳಲ್ಲೂ ಮೈಸೂರು ಸ್ವಚ್ಛವಾಗಿರಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ವಿಭಾಗವಾರು ತಂಡ ಮಾಡಿ ಜವಾಬ್ದಾರಿ ಕೊಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಭಾನುವಾರ ಮೈಸೂರು ಹೊರವರ್ತುಲ ರಸ್ತೆಯ ಸ್ವಚ್ಛತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಡಾ, ಕಾರ್ಪೋರೇಶನ್, ಲೋಕೋಪಯೋಗಿ, ಜಲಮಂಡಳಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಸಹ ಕಸ ಹಾಕಬಾರದು. ಇನ್ನು ರಸ್ತೆ ಹಾಗೂ ರಸ್ತೆ ಪಕ್ಕ ಎಲ್ಲೆಂದರಲ್ಲಿ ಕಸ ಹಾಕುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ಅಕ್ರಮವಾಗಿ ಕಸ ಸುರಿದರೆ ಲಾರಿ ಮಾಲೀಕರಿಗೆ ದಂಡ ಹಾಕಿ ಜೈಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಸ ವಿಲೇವಾರಿಗೆ ಜಾಗ ಗುರುತಿಸಲು ಸೂಚನೆ

ಕಸ ವಿಲೇವಾರಿಗೆ ಜಾಗ ನೋಡಲು ಕಾರ್ಪೋರೇಶನ್ ಆಯುಕ್ತರಿಗರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವು ಜಾಗಗಳನ್ನು ನಾವು ಗುರುತಿಸಿದ್ದೇವೆ. ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗ ಎಲ್ಲಾ ಇಲಾಖೆಯವರು ಸಹ ಸ್ವಚ್ಛತೆಯನ್ನು ತ್ವರಿತವಾಗಿ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ಮೈಸೂರಿನಲ್ಲಿ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಾಗಿ ರಸ್ತೆಗಳ ಹಾಗೂ ಸುತ್ತಮುತ್ತಲ ಸ್ವಚ್ಛತೆ ಬಹಳ ಮುಖ್ಯವಾಗಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಡಬ್ರೀಸ್ ಸುರಿಯುವುದಕ್ಕೂ ಕಡಿವಾಣ ಬೀಳಬೇಕಿದೆ. ಈ ತ್ಯಾಜ್ಯಗಳನ್ನು ಸುರಿಯಲು ಸರ್ಕಾರಿ ಜಾಗವನ್ನು ಗುರುತಿಸಲಾಗುತ್ತದೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ರಿಂಗ್ ರಸ್ತೆ ಸೇರಿ ಮೈಸೂರು ನಗರ ಹಸಿರಾಗಿ ಕಾಣಲಿ

ಮೈಸೂರಿನಲ್ಲಿ ಹಸಿರೀಕರಣಕ್ಕೆ ಒತ್ತು ಕೊಡಬೇಕು. ರಸ್ತೆ ಪಕ್ಕದಲ್ಲಿ ಒಣಗಿರುವ ಹಾಗೂ ಗಿಡವಿಲ್ಲದ ಜಾಗಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣ ಮಾಡಬೇಕು. ತಕ್ಷಣವೇ ರಿಂಗ್ ರಸ್ತೆಯ ಪೂರಾ 42 ಕಿ.ಮೀ. ವ್ತಾಪ್ತಿಯಲ್ಲಿಯೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ, ಮುಡಾ ಹಾಗೂ ಕಾರ್ಪೊರೇಷನ್ ಗೆ ಅಧಿಕಾರಿಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.

ಶಾಸಕರು, ಅಧಿಕಾರಿಗಳೊಂದಿಗೆ 42 ಕಿ.ಮೀ. ರಿಂಗ್ ರಸ್ತೆ ಪರಿಶೀಲಿಸಿದ ಸಚಿವ ಸೋಮಶೇಖರ್

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು
ಮೈಸೂರಿನ ಹೊರವರ್ತುಲ ರಸ್ತೆಯಲ್ಲಿರುವ ಘನತ್ಯಾಜ್ಯ ಸೇರಿದಂತೆ ಸ್ವಚ್ಛತೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಡಿಸಿಪಿ ಪ್ರಕಾಶ್ ಗೌಡ, ಕಾರ್ಪೋರೇಶನ್ ಆಯುಕ್ತರಾದ ಗುರುದತ್ತ ಹೆಗಡೆ, ಮುಡಾ ಆಯುಕ್ತರಾದ ನಟೇಶ್ ಸೇರಿದಂತೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಬಳಿಕ ವರ್ತುಲ ರಸ್ತೆಯ ದೇವೇಗೌಡ ಸರ್ಕಲ್, ವಿಟಿಯು ಕಾಲೇಜು ಬಳಿ, ಆಲನಹಳ್ಳಿ ಲೇಔಟ್ ಸರ್ಕಲ್, ಜೆಪಿ ನಗರ ರಿಂಗ್ ರೋಡ್, ಎಚ್.ಡಿ.ಕೋಟೆ ಮಾರ್ಗದ ರಿಂಗ್ ರಸ್ತೆ ಸೇರಿದಂತೆ ಎಲ್ಲ ಸಂಪೂರ್ಣ 42 ಕಿ.ಮೀ. ವ್ಯಾಪ್ತಿಯಲ್ಲಿಯೂ ಸಚಿವರು ತೆರಳಿ ಪರಿಶೀಲನೆ ನಡೆಸಿದರು.

Copyright © All rights reserved Newsnap | Newsever by AF themes.
error: Content is protected !!