‘ರಾಮಮಂದಿರ ಏಕೆ ಬೇಡ’ ಕೃತಿ ಗ್ರಂಥಾಲಯಗಳಿಗೆ ಖರೀದಿಸದಿರುವುದು ಖಂಡನೀಯ: ಪ್ರೊ.ಬಿ‌.ಪಿ.ಮಹೇಶ್ ಚಂದ್ರಗುರು

Team Newsnap
1 Min Read

ಪ್ರೊ.ಕೆ.ಎಸ್. ಭಗವಾನ್ ಅವರು ರಚಿಸಿರುವ ‘ರಾಮಂದಿರ ಏಕೆ ಬೇಡ’ ಕೃತಿಯನ್ನು ಗ್ರಂಥಾಲಯಗಳಿಗೆ ಖರೀದಿಸದಿರಲು ಸಾಹಿತಿ ದೊಡ್ಡರಂಗೇಗೌಡ ಅವರ ಸಮಿತಿ ನಿರ್ಧರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಕಿಡಿಕಾರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಕೆ.ಎಸ್.ಭಗವಾನ್ ಅವರು ಕೃತಿಯಲ್ಲಿ ತಮ್ಮ ಸ್ವಂತ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಪುರಾಣ ಗ್ರಂಥಗಳಲ್ಲಿ ರಾಮನ ಬಗ್ಗೆ ಇರುವುದನ್ನೇ ಉಲ್ಲೇಖಿಸಿ ಬರೆದಿದ್ದಾರೆ. ಕೇವಲ ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಟೀಕೆಗಳನ್ನು ಆಧರಿಸಿ ಈ ರೀತಿ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು, ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮತ್ತು ಡಾ.ಚಿದಾನಂದಮೂರ್ತಿ ಅವರಂತೆ ಸಂಘ- ಪರಿವಾರಕ್ಕೆ ನಿಷ್ಠರಾಗಿದ್ದಾರೆ. ಇದರಿಂದಾಗಿ ಈ ಕೃತಿಯನ್ನು ಹೊರಗಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ಇಂತಹ ವೈಚಾರಿಕತೆವುಳ್ಳ ಕೃತಿಗಳನ್ನು ಅನೇಕ ಪ್ರಗತಿ ಪರರು ರಚಿಸಿದ್ದಾರೆ. ಆದರೆ, ಈಗ ದೊಡ್ಡ ರಂಗೇಗೌಡರು ಕೈಗೊಂಡ ನಿರ್ಧಾರ ಅದಕ್ಕೆ ವ್ಯತಿರಿಕ್ತವಾಗಿದ್ದು, ಸರ್ಕಾರ ಕೂಡಲೇ ಸಮಿತಿ ನಿರ್ಧಾರವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು

Share This Article
Leave a comment