December 25, 2024

Newsnap Kannada

The World at your finger tips!

sujatha

ಜೀವನ ಅನುಭವದ ಅಕ್ಷರ ರೂಪವೇ ಕವಿತೆಗಳು – ಡಾ. ಸುಜಾತ ಅಕ್ಕಿ

Spread the love

ಜೀವನಾನುಭವಗಳು ಕವಿತೆಗಳಾಗ ಬೇಕು ಜೊತೆಗೆ ಕವಿತೆಗಳು ಜೀವಂತಿಕೆಯ ರಸಾನುಭವ ಹೊಂದಿ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು ಎಂದು ಕವಿಯತ್ರಿ, ಚಿಂತಕಿ, ರಂಗತಜ್ಙೆ ಡಾ.ಸುಜಾತ ಅಕ್ಕಿ ಕವಿಗಳಿಗೆ ಕರೆ ನೀಡಿದರು.

ಕೆ.ಆರ್.ಪೇಟೆಯ ಶಿಕ್ಷಕರ ಭವನದ ಸಭಾಂಗಣದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ನೇತೃತ್ವದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸುಜಾತ ಅಕ್ಕಿ
ಕನ್ನಡ ಸಾಹಿತ್ಯ, ಕನ್ನಡ ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಚೆನ್ನಾಗಿ ಓದಿಕೊಂಡು ಸಾಹಿತ್ಯದ ಬಗ್ಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಂಡು ಯುವಜನರು ಕವಿತೆಗಳ ರಚನೆಗೆ ಮುಂದಾಗಬೇಕು ಎಂದರು.

ಕವಿತೆ ಬರೆಯುವುದಕ್ಕೂ ಮುನ್ನ ಹತ್ತಾರು ಬಾರಿ ಆಲೋಚಿಸಿ ನಮ್ಮ ಜೀವನದ ಅನುಭವಗಳು ಹಾಗೂ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಹೂರಣವನ್ನೇ ಪದಗಳನ್ನಾಗಿ ಜೋಡಿಸಿ ಅರ್ಥಪೂರ್ಣವಾಗಿ ಕವಿತೆಯನ್ನು ರಚಿಸಬೇಕು ಎಂದು ಕಿವಿಮಾತು ಹೇಳಿದರು

ಲೋಕದ ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡು, ರೈತಾಪಿ ವರ್ಗ ಹಾಗೂ ಜನಸಾಮಾನ್ಯರ ನೋವು ನಲಿವುಗಳನ್ನು ಅಕ್ಷರಗಳ ರೂಪದಲ್ಲಿ ಹೊರತಂದರೆ ಆ ಕವಿತೆಗೆ ಹೆಚ್ಚಿನ ಅರ್ಥ ಬರುತ್ತದೆ. ಕವಿತೆಯ ಮೂಲ ಸಂದೇಶವು ಶ್ರೀಸಾಮಾನ್ಯನ ಹೃದಯವನ್ನು ತಟ್ಟುತ್ತದೆ ಎಂದು ಸುಜಾತಾ ಅಕ್ಕಿ ಹೇಳಿದರು.

.ಇಂದಿನ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಯುವಜನರು, ಯುವತಿಯರು, ವಿದ್ಯಾರ್ಥಿಗಳು, ಸಾಹಿತಿಗಳು, ಶಿಕ್ಷಕರು, ರಂಗಕರ್ಮಿಗಳು ಸೇರಿದಂತೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ 27ಕ್ಕೂ ಹೆಚ್ಚಿನ ಕವಿಗಳು ಸಮಾಜದ ವಿವಿಧ ಸ್ತರಗಳ ಹೂರಣವನ್ನು ಅಭಿವ್ಯಕ್ತಪಡಿಸುವ ತಮ್ಮ ಸ್ವರಚಿತ ಕವನಗಳನ್ನು ಓದಿ ಎಲ್ಲರ ಮನ ಗೆದ್ದಿದ್ದಾರೆ ಎಂದು ಶ್ಲಾಘಿಸಿದರು..

ಕೃಷ್ಣರಾಜಪೇಟೆ ತಾಲ್ಲೂಕು ಕಸಾಪ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಕೆ.ಮಂಜುಳಾ ಚನ್ನಕೇಶವ ಜ್ಯೋತಿ ಬೆಳಗಿಸಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಎಳ್ಳು ಬೆಲ್ಲವನ್ನು ಅತಿಥಿಗಳಿಗೆ ಹಾಗೂ ಕವಿಗಳಿಗೆ ಹಂಚಿ ಕವಿಗೋಷ್ಠಿಗೆ ಶುಭ ಹಾರೈಸಿದರು.

ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಯುವ ಕವಿಯತ್ರಿ ಆರ್.ಎಂ.ಸಹನಾ, ತಾಲ್ಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಶಿಕ್ಷಣ ತಜ್ಞರಾದ ಶಿ.ಕುಮಾರಸ್ವಾಮಿ, ಕೆ.ಕಾಳೇಗೌಡ, ಆಚಾರ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಸ್.ನಾಗೇಶಬಾಬೂ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಕವಿಯತ್ರಿ ಸವಿತಾರಮೇಶ್, ಕಸಾಪ ಸಂಚಾಲಕ ಕೆ.ಪಿ.ಬೋರೇಗೌಡ, ರೈತಮುಖಂಡರಾದ ಆರ್.ಎಸ್.ಮುಕುಂದ, ಕಸಾಪ ಪದಾಧಿಕಾರಿಗಳಾದ ಶೀಳನೆರೆ ಶಿವಕುಮಾರ್, ಜಿ.ಎಸ್.ಮಂಜು, ಸಾಹಿತಿಗಳಾದ ಡಾ.ನರಸಿಂಹರಾಜು, ಬಲ್ಲೇನಹಳ್ಳಿ ಮಂಜುನಾಥ್, ಕಸಾಪ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಪತ್ರಕರ್ತ ಆರ್.ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!