November 24, 2024

Newsnap Kannada

The World at your finger tips!

Suresh Kumar

ಪರಿಷ್ಕೃತ ರೂಪದಲ್ಲಿ ವಿದ್ಯಾಗಮ – ಸುರೇಶ್ ಕುಮಾರ್

Spread the love

ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು  ಸುರಕ್ಷತಾ ಕ್ರಮಗಳೊಂದಿಗೆ ಹೊಸ  ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕಳೆದ ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮವನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮ ಆರಂಭಿಸಿದ್ದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯುವುದು, ಗ್ರಾಮೀಣ ಪ್ರದೇಶದಲ್ಲಿ ಪೋಷಕರೊಂದಿಗೆ ಶಾಲಾ ಸಮಯದಲ್ಲಿ ಕೆಲಸಗಳಿಗೆ  ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂತಹ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅನುವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮವನ್ನು ಉಚ್ಚ ನ್ಯಾಯಾಲಯದ ಅಪೇಕ್ಷೆಯನುಸಾರ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದ್ದು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮವು ನಡೆಯಲು ಅನುವು ಮಾಡಿಕೊಡಲಾಗಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನಾ ವಾಹಿನಿಯ ಪಾಠಗಳು ಎಂದಿನಂತೆ ಮುಂದುವರೆಯಲಿವೆ. ಅರ್ಧ ದಿನ ಮಕ್ಕಳು ಮಾಸ್ಕ್ ಧರಿಸಿ ಶಾಲಾವರಣಕ್ಕೆ ಬಂದು ಸಾಮಾಜಿಕ ಅಂತರದೊಂದಿಗೆ ಕುಳಿತು ಪಾಠ ಕಲಿಯಬಹುದಾಗಿದೆ. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಮತ್ತು ಕೋವಿಡ್-19ರ ಲಕ್ಷಣಗಳಿರುವ ವಿದ್ಯಾರ್ಥಿಗಳು ಬರುವಂತಿಲ್ಲ. ಸ್ಯಾನಿಟೈಸರ್, ಸೋಪ್ ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಿಕೊಳ್ಳುವುದು.

ಮಕ್ಕಳನ್ನು ಲಭ್ಯ ಶಿಕ್ಷಕರ ಸಂಖ್ಯೆ, ಲಭ್ಯ ಕೊಠಡಿಗಳ ಅನುಸಾರವಾಗಿ 15-20 ವಿದ್ಯಾರ್ಥಿಗಳ ತಂಡ ರಚಿಸುವುದು. ಆಯಾ ಸ್ತರದ  ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸೇಷನ್ ಜವಾಬ್ದಾರಿ ತೆಗೆದುಕೊಳ್ಳಲಿದ್ದು, ಮಕ್ಕಳು ಕುಡಿಯಲು ನೀರನ್ನು ತಮ್ಮೊಂದಿಗೆ ಮನೆಯಿಂದಲೇ ತರಲು ಸಲಹೆ ನೀಡಬಹುದು. ಅಗತ್ಯ ಬಿದ್ದಾಗ ಸ್ಥಳೀಯ ಆರೋಗ್ಯ ಇಲಾಖೆಯ ಸಹಕಾರ ಪಡೆಯಲು ಅವಕಾಶವಿದೆ. ಇದೇ ರೀತಿಯ ಹತ್ತು ಹಲವು ಕಟ್ಟುನಿಟ್ಟಿನ  ಕ್ರಮಗಳೊಂದಿಗೆ ವಿದ್ಯಾಗಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ  ಎಂದು ಸಚಿವರು ತಿಳಿಸಿದ್ದಾರೆ.

ಇದು ಶಾಲಾರಂಭವಲ್ಲ:

ವಿದ್ಯಾಗಮವು ಶಾಲೆಯ ಆರಂಭವಲ್ಲ. ಒಮ್ಮೆಗೆ ಅತಿ ಕಡಿಮೆ ಸಂಖ್ಯೆಯ ಮಕ್ಕಳ ತಂಡದೊಂದಿಗೆ ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಅನುಕೂಲಕ್ಕೆ ತಕ್ಕಂತೆ ಪಾಠಗಳು ನಡೆಯುತ್ತವೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ವೈಜ್ಞಾನಿಕವಾಗಿ ತರಗತಿಗಳು ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು-ಎಸ್ಒಪಿ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಮಕ್ಕಳು ತರಗತಿ ಪಾಠಗಳಿಗೆ ಹಾಜರಾದಂತೆ ಎಲ್ಲರೂ ಒಂದೇ ಬಾರಿಗೆ ಬರುತ್ತಿಲ್ಲ. ಆಯಾ ಪ್ರದೇಶದ ಮಾರ್ಗದರ್ಶಿ ಶಿಕ್ಷಕರು ತಮಗೆ ಸನಿಹದ ನೆರೆಹೊರೆಯ ಕೆಲವೇ ಮಕ್ಕಳನ್ನು ತಂಡದಲ್ಲಿ ಪಟ್ಟಿ ಮಾಡುತ್ತಾರೆ. ಇದು ಶಾಲಾರಂಭವಲ್ಲ ಎಂಬುದನ್ನು ಪೋಷಕರು ಮನಗಾಣಬೇಕು ಎಂದು ಸಚಿವರು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!