November 16, 2024

Newsnap Kannada

The World at your finger tips!

ksrtc

ಮೈಸೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಸಚಿವ ಎಸ್ ಟಿ ಎಸ್ ದಿಢೀರ್ ಭೇಟಿ

Spread the love
  • ಕೋಡಿಹಳ್ಳಿ ರಾಜಕೀಯಕ್ಕೆ ಸಚಿವರ ಕಿಡಿ
  • ಎಪಿಎಂಸಿ ನೀತಿಯಲ್ಲಿ ಬದಲಿಲ್ಲ, ಕನಿಷ್ಠ ಬೆಂಬಲ ಬೆಲೆ ತೆಗೆಯಲ್ಲ

ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಮೈಸೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.

ಮುಷ್ಕರ ಮುಂದುವರಿದಿದ್ದರೂ ಬಸ್ ಸಂಚಾರ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಖುದ್ದು ಬಸ್ ಗಳ ಬಳಿ ತೆರಳಿದ ಸಚಿವರು, ಮಾಹಿತಿಯನ್ನು ಪಡೆದುಕೊಂಡರು.

ಜೊತೆಗೆ ಪ್ರಯಾಣಿಕರನ್ನು ಮಾತನಾಡಿಸಿ, ಅಭಿಪ್ರಾಯ ಸಂಗ್ರಹಿಸಿದರು. ಕಳೆದ ಎರಡು-ಮೂರು ದಿನಗಳಿಂದ ಆದ ತೊಂದರೆಗೆ ಬೇಸರ ವ್ಯಕ್ತಪಡಿಸಿದರು.

ಪಟ್ಟು ಸಾಧಿಸುವುದು ಸರಿಯಲ್ಲ

ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಮಾತನಾಡಲು ಸಿದ್ಧರಿದ್ದರೂ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಈಗಾಗಲೇ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಯಾರದ್ದೋ ಮಾತು ಕೇಳಿಕೊಂಡು ಪಟ್ಟು ಸಾಧಿಸುತ್ತಿರುವುದು ಸರಿಯಲ್ಲ ಎಂದು ಪರ್ತಕರ್ತರ ಪ್ರಶ್ನೆಗೆ ಸಚಿವರಾದ ಸೋಮಶೇಖರ್ ಉತ್ತರಿಸಿದರು.

ಕೋಡಿಹಳ್ಳಿ ರಾಜಕೀಯಕ್ಕೆ ಕಿಡಿ

ಕೋಡಿಹಳ್ಳಿ ಚಂದ್ರಶೇಖರ್ ರೈತಪರ ಹೋರಾಟವನ್ನು ಮಾಡಿಕೊಂಡಿರಲಿ. ಅದು ಬಿಟ್ಟು ಎಲ್ಲ ಕಡೆ ಮೂಗುತೂರಿಸಬಾರದು. ಅವರು ಯಾವ ನಾಟಕವಾಡಿದರೂ ಜನಕ್ಕೆ ಅರ್ಥವಾಗುತ್ತದೆ. ತಮ್ಮ ಡ್ರಾಮಾಗಳನ್ನು ಬಿಟ್ಟು 9 ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿರುವುದಕ್ಕೆ ಅಭಿನಂದನೆ ಸೂಚಿಸಬೇಕಿತ್ತು. ಅದು ಬಿಟ್ಟು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಹೋರಾಟ ಮಾಡುವಂತೆ ಮಾಡುವುದು ಸರಿಯೇ? ಎಲ್ಲ ಕಡೆಯೂ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದಾರೆಯೇ? ಅವರು ರೈತರ ಪರ ಹೋರಾಟ ಮಾಡಲಿ, ಇಂತಹ ರಾಜಕೀಯ ಬೇಡ ಎಂದು ಕಟುವಾಗಿ ನುಡಿದರು.

ಎಪಿಎಂಸಿ ನೀತಿಯಲ್ಲಿ ಬದಲಿಲ್ಲ, ಕನಿಷ್ಠ ಬೆಂಬಲ ಬೆಲೆ ತೆಗೆಯಲ್ಲ:

ಎಪಿಎಂಸಿ ಕಾಯ್ದೆಯ ತಿದ್ದುಪಡಿ ನೀತಿಯನ್ನು ಬದಲಾಯಿಸುವುದಿಲ್ಲ. ರೈತರಿಗೆ ಅನುಕೂಲವನ್ನುಂಟು ಮಾಡುವ ಈ ಕಾಯ್ದೆಯಿಂದ ಲಾಭವೇ ವಿನಹ ಹಾನಿಯಿಲ್ಲ. ರೈತ ತಾನು ಬೆಳೆದ ಬೆಳೆಯನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು, ತನ್ನ ಬೆಳೆಗೆ ರೈತನೇ ದರ ನಿಗದಿ ಮಾಡಿಕೊಳ್ಳಬಹುದು, ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ಈಗಲೂ ಇದೆ, ಮುಂದೂ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂತಹ ಒಂದು ಸತ್ವಯುತ ಕಾಯ್ದೆಯನ್ನು ಏಕೆ ಬದಲಿಸಬೇಕು? ಎಂದು ಸಚಿವರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಲ್.ನಾಗೇಂದ್ರ , ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಇದ್ದರು.

Copyright © All rights reserved Newsnap | Newsever by AF themes.
error: Content is protected !!