ಮಂಡ್ಯ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಅಭ್ಯರ್ಥಿ ಎಂದು ತಾವೇ ಹೇಳಿ ಇದೀಗ ಅವರೇ ಅಭ್ಯರ್ಥಿಯಾಗುತ್ತಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ ಜೆಡಿಎಸ್ ಪರಿಸ್ಥಿತಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದರು.
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು, ಪುಟ್ಟರಾಜು ಅವರನ್ನು ಅಭ್ಯರ್ಥಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಒಳ್ಳೆ ಹುಡುಗಿ ಇದ್ದಾಳೆ, ಈ ಬಾರಿ ನಾನೇ ಮದ್ವೆ ಆಗ್ತೀನಿ, ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಎಂದಿದ್ದಾರೆ ಎಂದು ಟೀಕಿಸಿದರು.
ಒಂದು ತಿಂಗಳಿನಿಂದ ಅಳೆದು ತೂಗಿ ಹೆಸರು ಘೋಷಣೆ ಮಾಡುತ್ತಿದ್ದಾರೆ. ಹೋದ ಕಡೆಯಲೆಲ್ಲ ನನ್ನ ಕರ್ಮ ಭೂಮಿ ಅಂತಾರೆ. ಮಂಡ್ಯ, ಹಾಸನ, ಕೋಲಾ ಮೂರು ಆದರೆ ಪರವಾಗಿಲ್ಲ. ಆದರೆ ಚಿಕ್ಕಬಳ್ಳಾಪುರಕ್ಕೂ, ತುಮಕೂರಿಗೂ ಹೋಗಿ ಬಂದಿದ್ದಾರೆ. ಪಾಪ ಆ ಪುಟ್ಟರಾಜು ಕೈಯಲ್ಲಿ ಸಭೆ ಮಾಡಿಸಿದರು. ಆತ ಎಲ್ಲಾ ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಹುಡುಗಿ ಚೆನ್ನಾಗಿದ್ದಾಳೆ ಎಂದು ನಾನೇ ಮದ್ವೆ ಆಗ್ತೀನಿ ಎನ್ನುತ್ತಿದ್ದಾರೆ ಎಂದು ಛೇಡಿಸಿದರು.
ಕಳೆದ ಚುನಾವಣೆ ಸಂಸದೆ ಸುಮಲತಾ ಅವರನ್ನು ನಿಂದಿಸಿದರು. ಈ ಸಹೋದರಿ, ಅಕ್ಕ ಎನ್ನುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೇ ಈ ಮಾತು ಆಡಿದ್ದರೆ ಅಂಬರೀಷ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ಸಹೋದರಿ ಅಲ್ಲವೇ?, ಅವರೇ ಗೆಲ್ಲಲಿ, ನನ್ನ ಮಗ ಗೆದ್ದರೂ ಒಂದೇ, ಅಕ್ಕ ಗೆದ್ದರೂ ಒಂದೇ ಎನ್ನಬಹುದಿತ್ತು ಎಂದು ಮೂದಲಿಸಿದರು.
ನಾನು ಕಾಂಗ್ರೆಸ್ ಸೇರಿ ಹೇಗೋ ಬಚಾವ್ ಆದೆ. ಆದರೆ ಪುಟ್ಟರಾಜು ಪಾಪ ಅವನ ಕಥೆ ಈಗ ಏನಾಗಬೇಕು. ನಮ್ಮ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ. ನಾವು, ನಮ್ಮ ಜನ ಏನೋ ಮಾಡಿಕೊಳ್ಳುತ್ತೇವೆ. ನೀವು ಇನ್ನೊಮ್ಮೆ ಮುಖ್ಯಮಂತ್ರಿ, ಪ್ರಧಾನಿ ಆಗಿ, ನಿಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಲ್ಲ. ಆದರೆ ನಮ್ಮ ಜಿಲ್ಲೆಗೆ ನೀವು ಬರಬೇಡಿ. ನಮ್ಮ ಜಿಲ್ಲೆಯನ್ನು ನಾವು ಹೇಗೋ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು.
ಮೈತ್ರಿ ಮಾಡಿಕೊಳ್ಳುವುದನ್ನು ಜನ ಒಪ್ಪುವುದಿಲ್ಲ. ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಲೋಕಸಭಾ ಚುನಾವಣಾ ದಿಕ್ಸೂಚಿ ಎಂದು, ಬೆಂಗಳೂರಲ್ಲಿ ಬಿಜೆಪಿ, ರಾಮನಗರದಲ್ಲಿ ಜೆಡಿಎಸ್ ಸ್ಟಾಂಗ್ ಎಂದು ವಕೀಲರನ್ನು ಕಣಕ್ಕಿಳಿಸಿದರು. ಆದರೆ ಗೆದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಎಂದರು.
ನಾನು ಯಾವತ್ತು ಅವರನ್ನು ವೈರಿಗಳು ಅಂತ ಕರೆಯಲ್ಲ. ಅವರು ಬೇಕಾದರೂ ಕರೆಯಲಿ. ನನಗೆ ಕುಮಾರಣ್ಣನ ಬಗ್ಗೆ ಪ್ರೀತಿ ಇದೆ. ದೇವೇಗೌಡರ ಮೇಲೆ ಗೌರವವಿದೆ. ಆದರೆ ದುರಂತ ಅಂದರೆ ಹೋದ ಕಡೆಯಲ್ಲೆಲ್ಲ ಇದು ನನ್ನ ಕರ್ಮಭೂಮಿ ಅನ್ನೋದು. ಇದು ಒಳ್ಳೆಯದಲ್ಲ ಎಂದು ಹೇಳಿದರು.ಮಂಡ್ಯಕ್ಕೆ ಮೈತ್ರಿ ಅಭ್ಯರ್ಥಿ ಎಚ್ ಡಿಕೆ ಘೋಷಣೆ : ಜೆಡಿಎಸ್ ನ ಉಳಿದ ಎರಡು ಸ್ಥಾನಗಳೂ ಪ್ರಕಟ
ಅಧಿಕಾರದಲ್ಲಿದ್ದಾಗ ಒಕ್ಕಲಿಗರಿಗೆ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯ ಅವರು ಒಕ್ಕಲಿಗರಿಗೆ ಮಂತ್ರಿಗಿರಿ, ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಿದ್ದಾರೆ. ಈಗ ಹೇಳಿ ಒಕ್ಕಲಿಗರ ವಿರೋಧಿ ಯಾರು ಎಂದು ಪ್ರಶ್ನಿಸಿದ ಅವರು, ನೀವು ಅವರಿಗೆ ಬುದ್ಧಿ ಕಲಿಸಲಿಲ್ಲ. ನಾವು ಬುದ್ಧಿ ಕಲಿಸ್ತಿವಿ ಅಂತ ಬಿಜೆಪಿ ಅವರು ಹೇಳುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ರೈತರ ಪ್ರಗತಿಗಾಗಿ ರೈತ ಕುಟುಂಬದಿAದ ಬಂದವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ. ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
More Stories
ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ