ವಿವಿಧ ಸಮುದಾಯಗಳನ್ನು ಒಲಿಸಿಕೊಂಡು ಉಪಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಾರಿಕೆಯನ್ನು ಹೆಣೆಯುತ್ತಿರುವ ಬಿಜೆಪಿ ಸರ್ಕಾರ ಹೊಸದಾಗಿ ಇನ್ನೆರಡು ಸಮುದಾಯಗಳಿಗೆ ಅಭಿವೃದ್ಧಿ ಪ್ರಾಧಿಕಾರ/ನಿಗಮ ಸ್ಥಾಪಿಸುವುದಾಗಿ ಆದೇಶ ಹೊರಡಿಸಿ ಈಗ ಇಕ್ಕಟ್ಟಿಗೆ ಸಿಲುಕಿದೆ.
ಕೆಲವು ದಿನಗಳ ಹಿಂದೆ ಮರಾಠ ಸಮುದಾಯಕ್ಕಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯನ್ನು ಘೋಷಿಸಿದ್ದ ಮುಖ್ಯಮಂತ್ರಿಯವರ ನಡೆಗೆ ರಾಜ್ಯದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ವೀರಶೈವ–ಲಿಂಗಾಯತರನ್ನು ಒಲಿಸಿಕೊಳ್ಳಲು ಮಂಗಳವಾರ ವೀರಶೈವ–ಲಿಂಗಾಯತ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆ ಯನ್ನೂ ಮಾಡಿದ್ದಾರೆ.
ಡಿ 5 ಕ್ಕೆ ಕರ್ನಾಟಕ ಬಂದ್ ?
ಮರಾಠಾ ಪ್ರಾಧಿಕಾರ ಸ್ಥಾಪನೆಗೆ ಸಾಹಿತಿಗಳು, ಕನ್ನಡಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರ್ಧಾರ ಕೈಬಿಡುವಂತೆ ಒತ್ತಡ ಹೆಚ್ಚಲಾರಂಭಿಸಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯೂ ಸೇರಿ ವಿವಿಧ ಜಿಲ್ಲೆಗಳಲ್ಲಿ ಕನ್ನಡಿಗರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಅಲ್ಲದೆ ಡಿ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲು ಕನ್ನಡ ಪರ ಸಂಘಟನೆ ಗಳು ತಯಾರಿ ನಡೆಸಿವೆ
ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ನವೆಂಬರ್ 13 ರಂದು ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ, ₹50 ಕೋಟಿ ಅನುದಾನ ಘೋಷಿಸಿದ್ದರು. ಆ ಬಳಿಕ ವೀರಶೈವ– ಲಿಂಗಾಯತರ ಅಭಿವೃದ್ಧಿಗೂ ಪ್ರತ್ಯೇಕ ನಿಗಮ ಸ್ಥಾಪಿಸಲು ಬಿಜೆಪಿಯ ಹಲವು ಮುಖಂಡರು, ಮಠಾಧೀಶರು ಒತ್ತಾಯಿಸಿದ್ದರು. ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿರುವ ಮುಖ್ಯಮಂತ್ರಿ, ತಕ್ಷಣದಿಂದ ಜಾರಿಗೆ ಬರುವಂತೆ ನಿಗಮ ಸ್ಥಾಪಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿ ಮುಂದಿನ ಉಪ ಚುನಾವಣೆಗೆ ಮತದಾರರನ್ನು ಓಲೈಕೆ ಮಾಡುವ ಹುನ್ನಾರದಲ್ಲಿ ತೊಡಗಿದ್ದಾರೆ.
ಶಿರಾ, ಆರ್ ಆರ್ ನಗರಕ್ಕೂ ಇದೇ ತಂತ್ರ:
ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೂ ಮೊದಲು ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರು. ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆಯ ಪ್ರಸ್ತಾವವನ್ನು ಬದಲಿಸಿ ‘ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಮೊದಲ ಆದೇಶ ಹೊರಬಿದ್ದಿತ್ತು. ಶಿರಾ ಕ್ಷೇತ್ರದಲ್ಲಿನ ಕಾಡುಗೊಲ್ಲ ಮುಖಂಡರಿಂದ ವಿರೋಧ
ವ್ಯಕ್ತವಾಗುತ್ತಿದ್ದಂತೆ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಎಂದು ಹೆಸರು ಬದಲಿಸಿ ಪರಿಷ್ಕೃತ ಆದೇಶ ಹೊರಡಿಸಿ ಮತದಾರರ ಮನ ಗೆಲ್ಲಲಾಯಿತು.
ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ಬಾಕಿ ಇದೆ. ಈ ಮೂರೂ ಕಡೆಗಳಲ್ಲಿ ಮರಾಠಾ ಸಮುದಾಯದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ವೀರಶೈವ– ಲಿಂಗಾಯತರ ಪ್ರಾಬಲ್ಯವೂ ಇದೆ. ಈ ಎರಡೂ ಸಮುದಾಯಗಳನ್ನು ಓಲೈಸಲು ಪ್ರಾಧಿಕಾರ, ನಿಗಮ ಸ್ಥಾಪನೆಗೆ ಆದೇಶ ಹೊರಡಿಸಲಾಗಿದೆ ಎಂದು ಕನ್ನಡಪರ ಸಂಘಟನೆಗಳು, ಪ್ರತಿಪಕ್ಷ ಕಾಂಗ್ರೆಸ್‌ನ ಮುಖಂಡರು ಆರೋಪಿಸಿದ್ದಾರೆ.
ನಿರ್ಧಾರ ಕೈಬಿಡಲು ಆಗ್ರಹ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹಿರಿಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ನಟ ‘ಮುಖ್ಯಮಂತ್ರಿ‘ ಚಂದ್ರು ಸೇರಿದಂತೆ ಹಲವರು ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪನೆಯನ್ನು ವಿರೋಧಿಸಿದ್ದಾರೆ. ಮಾಜಿ ಶಾಸಕ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರವೀಣ್ ಕುಮಾರ್ ಶೆಟ್ಡಿ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವರು ಪ್ರಾಧಿಕಾರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮರಾಠರನ್ನು ಸೆಳೆಯಲು ಕುತಂತ್ರ?
‘ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಪ್ರಾಧಿಕಾರ ರಚನೆಯ ನಿರ್ಧಾರ ಕೈಗೊಳ್ಳಲಾಗಿದೆ. ಇದು ಅನೈತಿಕ ನಡೆ. ಚುನಾವಣೆಯ ಹೊಸ್ತಿಲಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ತಪ್ಪು ಹೆಜ್ಜೆಯಾಗುತ್ತದೆ. ಈ ನಿರ್ಧಾರವನ್ನು ವಾಪಸ್ ಪಡೆಯಬೇಕು’ ಎಂದು ಬರಗೂರು ರಾಮಚಂದ್ರಪ್ಪ ಅವರುಆಗ್ರಹಿಸಿದ್ದಾರೆ.
ಮರಾಠಿಗರಿಗೇಕೆ ಮೃಷ್ಠಾನ್ನ ?
‘ಕನ್ನಡದ ಮಕ್ಕಳಿಗೆ ಖಾಲಿ ತಟ್ಟೆ ನೀಡಿರುವ ರಾಜ್ಯ ಸರ್ಕಾರ ಮರಾಠಿ ಭಾಷಿಕರಿಗೆ ಮೃಷ್ಟಾನ್ನ ಭೋಜನ ಬಡಿಸಲು ಹೊರಟಿದೆ. ಈವರೆಗೆ ಒಮ್ಮೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹50 ಕೋಟಿ ಅನುದಾನ ನೀಡಿದ ಉದಾಹರಣೆ ಇಲ್ಲ. ಈಗ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದು ವಿವೇಕಹೀನ ನಡೆ. ಇದರಿಂದ ಸೌಹಾರ್ದಕ್ಕೆ ದೊಡ್ಡ ಧಕ್ಕೆ ಉಂಟಾಗಲಿದೆ’ ಎಂದು ಎಸ್.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ಘೋಷಣೆಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸ್ವಾಗತಿಸಿದ್ದಾರೆ.
ರಾಜ್ಯ ಬಂದ್ ಎಚ್ಚರಿಕೆ
ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಿ
ದರು. ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ನಿರ್ಧಾರವನ್ನು ನವೆಂಬರ್ 27ರೊಳಗೆ ಕೈಬಿಡುವಂತೆ ಈ ಮುಖಂಡರು ಗಡುವು ನೀಡಿದ್ದಾರೆ. ತಪ್ಪಿದರೆ ಡಿಸೆಂಬರ್ 5ರಂದು ರಾಜ್ಯ ಬಂದ್‌ಗೆ ಕರೆ ಕೊಡುವುದಾಗಿ ತಿಳಿಸಿದ್ದಾರೆ. ಜಯ ಕರ್ನಾಟಕ ಸಂಘಟನೆ ಕೂಡ ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪನೆಯನ್ನು ವಿರೋಧಿಸಿದೆ.
ಓಲೈಕೆಗಾಗಿ ಪ್ರಾಧಿಕಾರ ರಚನೆ
‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 30,000 ದಷ್ಟು ಮರಾಠಾ ಸಮುದಾಯದ ಮತದಾರರಿದ್ದಾರೆ. ಅವರ ಓಲೈಕೆಗಾಗಿ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವ ನೈಜ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ಮರಾಠಿ ಭಾಷೆಗೂ, ಪ್ರಾಧಿಕಾರಕ್ಕೂ ಸಂಬಂಧವಿಲ್ಲ’
‘ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ರಾಜ್ಯದಲ್ಲಿರುವ ಮರಾಠಾ ಜನಾಂಗದ ಅಭಿವೃದ್ಧಿಗಾಗಿ ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಈ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದಾರೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು