December 22, 2024

Newsnap Kannada

The World at your finger tips!

dasara,mysuru,navaratri

ಜಂಬೂಸವಾರಿ ( Jambusavari )

Spread the love

ನಯನಾ ಹೆಬ್ಬಾರ್

ಕರ್ನಾಟಕದ ರಾಜ್ಯ ಹಬ್ಬವೇ ದಸರ. ಒಂದು ರಾಜ್ಯದ ರಾಜ್ಯ ಹಬ್ಬವನ್ನು ಗಮನಿಸಿದರೆ ಸಾಕು ಅಲ್ಲಿಯ ಸಂಪೂರ್ಣ ಸಂಸ್ಕೃತಿಯ ಪರಿಚಯವಾಗುತ್ತದೆ. ಅಲ್ಲಿನ ಪರಂಪರೆಯ ಬಗ್ಗೆ ಅರಿವು ಮೂಡುತ್ತದೆ. ದಸರೆಯೂ ಇದಕ್ಕೆ ಹೊರತಾಗಿಲ್ಲ. ಒಂಬತ್ತು ದಿನಗಳಲ್ಲಿ ದಿನಗಳಲ್ಲಿ ನಡೆಯುವ ದೇವಿಯ ಆರಾಧನೆಯೇ ನವರಾತ್ರಿ ಉತ್ಸವ ಅಥವಾ ದಸರೆಯಾಗಿ ಆಚರಿಸಲ್ಪಡುತ್ತದೆ. ನವರಾತ್ರಿ ಹಬ್ಬವು ರಾಜ್ಯದ ಎಲ್ಲೆಡೆ ಆಚರಿಸಲ್ಪಡುತ್ತಿದ್ದರು ಮೈಸೂರಿನಲ್ಲಿ ಮಹಾರಾಜರಿಂದ ತಾಯಿ ಚಾಮುಂಡೇಶ್ವರಿಯ ಆರಾಧನೆಗೆ ಮುಖ್ಯವಾದುದು. ಮೈಸೂರು ಮತ್ತು ದಸರಾ ಇವೆರಡು ಸಯಾಮಿ ಪದಗಳೇ ಅನ್ನುವಷ್ಟು ಬೆರೆತು ಹೋದ ಭಾವನಾತ್ಮಕ ಬಂಧವಿದು.

ಮೈಸೂರು ದಸರೆಯ ಪ್ರಮುಖ ಆಕರ್ಷಣೆಯೇ ಜಂಬೂ ಸವಾರಿ. ಜಂಬೂಸವಾರಿಯು 1940ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಯಿತು. ಜಂಬೂಸವಾರಿ ಎಂದರೆ ಆನೆಯ ಮೆರವಣಿಗೆ ಎಂದರ್ಥ.ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಉಳಿದ ಗಜ ಪಡೆಗಳೊಂದಿಗೆ ಪ್ರಧಾನ ಆನೆಯ ಬೆನ್ನ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿದ ಸುಮಾರು 750 ಕೆಜಿತೂಕದ ಚಿನ್ನದ ಅಂಬಾರಿಯನ್ನಿರಿಸಿ ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೆ ವೈಭವೋಪೇತವಾದ ಮೆರವಣಿಗೆಯಲ್ಲಿ ಸಾಗಲಾಗುತ್ತದೆ.

ಅರಮನೆಯಲ್ಲಿ ನಂದಿದ್ವಜಕ್ಕೆ ಪೂಜೆ ಸಲ್ಲಿಸಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಾಗಿರುವ ಸಾಲಂಕೃತಗೊಂಡ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆಗೈದು ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಈ ವೈಭವೋಪೇತ ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್ ನ ಆಕರ್ಷಕ ತಾಳವಾದ್ಯ ಕಂಸಾಳೆ ಕುಣಿತ, ಸ್ಥಬ್ದ ಚಿತ್ರಗಳು ಮನ ರಂಜಿಸುತ್ತವೆ. ಈ ಸಂದರ್ಭದಲ್ಲಿ ಇಡೀ ಮೈಸೂರು ನಗರವೇ ಶೃಂಗಾರಗೊಂಡು ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸುತ್ತದೆ.

ಜಂಬೂ ಸವಾರಿಗೆ ಅಗತ್ಯವಿರುವ ಆನೆಗಳನ್ನು ಒಂದೂವರೆ ತಿಂಗಳು ಮೊದಲೇ ಶಿಬಿರಗಳಿಂದ ಮೈಸೂರಿಗೆ ಕರೆತರಲಾಗುತ್ತದೆ. ಈ ಗಜಪಡೆಗಳಿಗೆ ಮೈಸೂರಿನ ಅರಮನೆಯ ಆವರಣದಲ್ಲಿ ದಿನನಿತ್ಯ ವಿಶೇಷ ಭೋಜನಗಳನ್ನು ನೀಡಲಾಗುತ್ತದೆ. ಅದರಲ್ಲಿಯೂ ದೇವಿಯ ಅಂಬಾರಿಯನ್ನು ಹೊರುವ ಆನೆಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ವಿಶೇಷ ಮಜ್ಜನಗಳನ್ನು ಮಾಡಿಸಲಾಗುತ್ತದೆ.

ಈ ಗಜಪಡೆಗಳಿಗೆ ಯಾವುದೇ ಪರಿಸ್ಥಿತಿಗಳಿಗೆ ಬೆದರದೆ ಮುನ್ನಡೆಯಲು ಕಠಿಣ ತಾಲೀಮುಗಳನ್ನು ನೀಡಲಾಗುತ್ತದೆ. ಅಂಬಾರಿಯನ್ನು ಹೊರುವ ಆನೆಗೆ ಪ್ರತಿದಿನ 750 ಕೆಜಿ ತೂಕದ ಮರದ ಅಂಬಾರಿಯನ್ನು ಬೆನ್ನಿಗೆ ಕಟ್ಟಿ ಬನ್ನಿಮಂಟಪದವರೆಗೆ ನಡೆಸಿ ನುರಿತ ಮಾವುತರ ನೇತೃತ್ವದಲ್ಲಿ ತರಬೇತಿ ಕೊಡಲಾಗುತ್ತದೆ. ಆನೆಗಳ ದೇಹ ಸ್ಥಿತಿಯನ್ನು ಪ್ರತಿಕ್ಷಣ ಗಮನಿಸಲು ಪಶು ವೈದ್ಯರಿರುತ್ತಾರೆ. ಹೀಗೆ ಸಿದ್ಧಗೊಂಡ ಆನೆಗಳನ್ನು ವಿಜಯದಶಮಿಯಂದು ಸಾಲಂಕೃತವಾಗಿ ಶೃಂಗರಿಸಿ ಅವುಗಳ ಬೆನ್ನ ಮೇಲೆ ದೇವಿ ಸಹಿತವಾದ ಚಿನ್ನದ ಅಂಬಾರಿಯನ್ನಿರಿಸಿ ವಿಶ್ವವಿಖ್ಯಾತವಾದ ದಸರಾದ ಜಂಬೂ ಸವಾರಿಯ ಮೆರವಣಿಗೆಯನ್ನು ಮಾಡಲಾಗುತ್ತದೆ. ಇದನ್ನು ವೀಕ್ಷಿಸಲೆಂದೇ ವಿದೇಶಿಯರೂ ಅಪಾರ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ.

ದಸರಾ ಎಂದರೆ ಅಸತ್ಯದ ವಿರುದ್ಧ ಸತ್ಯದ ಜಯ. ಒಂಭತ್ತು ದಿನಗಳ ಕಾಲ ತಾಯಿ ಚಾಮುಂಡೇಶ್ವರಿಯು ದುಷ್ಟ ಮಹಿಷಾಸುರನ ಜೊತೆ ಹೋರಾಡಿ ಹತ್ತನೆಯ ದಿನದಂದು ಆತನನ್ನು ವಧಿಸಿ ಧರ್ಮಕ್ಕೆ ಜಯವನ್ನಿತ್ತ ದಿನವೇ ವಿಜಯದಶಮಿ.

Copyright © All rights reserved Newsnap | Newsever by AF themes.
error: Content is protected !!