November 19, 2024

Newsnap Kannada

The World at your finger tips!

bjp

ರಾಜ್ಯಸಭಾ ಚುನಾವಣೆ: ಡಾ. ಕೆ ನಾರಾಯಣ್​ಗೆ ಬಿಜೆಪಿ ಟಿಕೆಟ್

Spread the love

ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ಒಂದು ರಾಜ್ಯಸಭಾ ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದೆ.

ಮುದ್ರಣ ಕ್ಷೇತ್ರದಲ್ಲಿರುವ ಆರೆಸ್ಸೆಸ್ ಮೂಲದ ಡಾ. ಕೆ ನಾರಾಯಣ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿದೆ. ರಾಜ್ಯ ಬಿಜೆಪಿಯಿಂದ ಕಳುಹಿಸಲಾಗಿದ್ದ ಮೂರೂ ಹೆಸರನ್ನು ಹೈಕಮಾಂಡ್ ಕೈಬಿಟ್ಟು ಹೊಸಬರಿಗೆ ಮಣೆ ಹಾಕಿದೆ.

ಕಳೆದ ಬಾರಿಯ ಎರಡು ಸ್ಥಾನಗಳ ರಾಜ್ಯಸಭಾ ಚುನಾವಣೆ ವೇಳೆಯಲ್ಲಿ ಮೂಡಿಸಿದಂತೆ ಈ ಬಾರಿಯೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ವರಿಷ್ಠರು ಅಚ್ಚರಿ ಮೂಡಿಸಿದ್ದಾರೆ.

ಮೃತ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಪತ್ನಿ ಸುಮಾ ಗಸ್ತಿ, ವಿಧಾನಪರಿಷತ್ ಮಾಜಿ ಸದಸ್ಯ ಶಂಕರಪ್ಪ ಹಾಗೂ ಮಾಜಿ ಶಾಸಕ ನಿರ್ಮಲ್ ಸುರಾನಾ ಹೆಸರಿರುವ ಪಟ್ಟಿಯನ್ನು ರಾಜ್ಯ ಬಿಜೆಪಿಯಿಂದ ಹೈಕಮಾಂಡ್​ಗೆ ಕಳುಹಿಸಲಾಗಿತ್ತು. ಆದರೆ, ಈ ಮೂರೂ ಹೆಸರನ್ನು ಹೈಕಮಾಂಡ್ ಕೈಬಿಟ್ಟು, ಮಂಗಳೂರು ಮೂಲದ ಡಾ. ಕೆ ನಾರಾಯಣ್ ಅವರಿಗೆ ಅಂತಿಮವಾಗಿ ಟಿಕೆಟ್ ನೀಡಿದೆ.

ಡಾ. ಕೆ ನಾರಾಯಣ್ ಯಾರು?

ಮಂಗಳೂರು ಮೂಲದ ಡಾ. ಕೆ ನಾರಾಯಣ್ ಬೆಂಗಳೂರಿನಲ್ಲಿ ಸ್ಪಾನ್ ಪ್ರಿಂಟ್ ಎಂಬ ಪ್ರಕಾಶನಾಲಯ ಹೊಂದಿದ್ದಾರೆ. 68 ವರ್ಷದ ನಾರಾಯಣ್ ದೇವಾಂಗ ಜನಾಂಗದವರು. ಆರೆಸ್ಸೆಸ್ ಮೂಲದವರೂ ಹೌದು. ಮುದ್ರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು 1981ರಲ್ಲಿ ಜಪಾನ್​ನಿಂದ ಮಲ್ಟಿ ಕಲರ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಮೊದಲಿಗೆ ಪರಿಚಯ ಮಾಡಿದವರು. ಇವರ ಸಂಸ್ಥೆ ಈ ಮುದ್ರಣ ಕ್ಷೇತ್ರದಲ್ಲಿ ಈಗ ಮುಂಚೂಣಿಯಲ್ಲಿದೆ. ಸಂಸ್ಕೃತ ಭಾಷೆಯ ಏಕೈಕ ಮಾಸಿಕ ಸಂಭಾಷಣಾ ಸಂದೇಶ ಪತ್ರಿಕೆಯನ್ನು ಮುದ್ರಿಸುತ್ತಿರುವುದು ಇವರ ಸಂಸ್ಥೆಯೇ.

ಹಿಂದೂ ಸೇವಾ ಪ್ರತಿಷ್ಠಾನ ಸೇರಿದಂತೆ ಸಂಘ ಪರಿವಾರದ ಅನೇಕ ಚಟುವಟಿಕೆಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತುಳು ಪತ್ರಿಕೆಯೊಂದಕ್ಕೆ ಸಂಪಾದಕರಾಗಿಯೂ ಇವರು ಕೆಲಸ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!