ಒಂದು ಹೂವು ಬಣ್ಣದಿಂದ ಕೂಡಿದರೆ ಸಾಕೆ? ಸುಗಂಧ ಸೇರಿದರೆ ಇನ್ನೂ ಅಂದ. ಸುವಾಸಿತ ಹೂವೊಂದು ದೇವರ ಮುಡಿ ಸೇರಿದರೆ ಭಕ್ತಿ, ಹೆಣ್ಣಿನ ಮುಡಿ ಸೇರಿದರೆ ಸೌಂದರ್ಯ. ಕವಿಯ ಕಣ್ಣಿಗೆ ಬಿದ್ದರೆ ಕಾವ್ಯ. ಹೀಗೆ ಹೂವೊಂದು ಆದರೆ ಅದರ ಆಯಾಮಗಳು ಹಲವು. ಹಾಗೆಯೇ ವ್ಯಕ್ತಿಯೂ ತನ್ನ ವ್ಯಕ್ತಿತ್ವವನ್ನು ವಿವಿಧ ಆಯಾಮಗಳಿಂದ ಬಿಂಬಿಸಿಕೊಳ್ಳುತ್ತಾನೆ.
ಈ ರೀತಿಯಲ್ಲಿ ಅಂದಿನ ಕೋಲಾರದ ಮುದ್ದೇನಹಳ್ಳಿಯಲ್ಲಿ ಕಡು ಬಡತನದಲ್ಲಿ 1860 ಸೆಪ್ಟೆಂಬರ್ 15 ರಂದು ಜನಿಸಿದ ಬಾಲಕನೊಬ್ಬ ತನ್ನ ಶ್ರಮ, ಪ್ರಾಮಾಣಿಕತೆ, ಪರಿಶುದ್ಧತೆ, ಕಾಯಕ ನಿಷ್ಠೆ, ಎಲ್ಲವನ್ನೂ ಮೈಗೂಡಿಸಿಕೊಂಡು ಸಂಪೂರ್ಣ ವ್ಯಕ್ತಿತ್ವವಾಗಿ ‘ಭಾರತ ರತ್ನ’ ವಾಗಿದ್ದು ಮತ್ತು ಬ್ರಿಟಿಷರಿಂದ ‘ಸರ್’ ಎನಿಸಿಕೊಂಡು ಇವತ್ತಿನ ನಮ್ಮ ನವ ತಂತ್ರಜ್ಞಾನದಡಿಯ ಹೊಸ ನಾಡಿನ ತಳಪಾಯವನ್ನು ಅಂದೇ ಆರ್ಥಿಕ ನೆಲೆಯಲ್ಲಿ, ಶಿಕ್ಷಣದ ನೆಲೆಯಲ್ಲಿ, ಹೊಸ ಯೋಜನೆಗಳ ನೆಲೆಯಲ್ಲಿ, ಕೈಗಾರಿಕೆಗಳ ನೆಲೆಯಲ್ಲಿ, ಸಾಹಿತ್ಯಕ ನೆಲೆಯಲ್ಲಿ ಹೀಗೆ ವಿವಿಧ ಆಯಾಮಗಳಲ್ಲಿ ದೂರ ದೃಷ್ಟಿ ಹೊಂದಿ, ಕನಸು ಕಂಡು ಅದನ್ನು ನನಸಾಗಿಸಿದ ಅಪರೂಪದಲ್ಲಿ ಅಪರೂಪದ ಕನ್ನಡ ನಾಡಿನ ಅಭಿಯಂತರ ರತ್ನ ನಮ್ಮ ನಿಮ್ಮೆಲ್ಲರ ಸರ್ ವಿಶ್ವೇಶ್ವರಯ್ಯ ನವರು.
ಭಾರತ ರತ್ನ ಎನಿಸಿಕೊಳ್ಳುವುದು ಸುಲಭವೇ!
ಸೃಜನಶೀಲ ಮನಸು:
ಭೋರ್ಗರೆವ ಜೋಗದ ಜಲಪಾತದ ಮುಂದೆ ನಿಂತು ಆ ಸೌಂದರ್ಯದ ಸೊಬಗನ್ನು ನೋಡಿ Wow.. What a beautiful falls ಎಂದು ನಾವು ನೀವೆಲ್ಲ ಉದ್ಘರಿಸುತ್ತೇವೆ.ಸೃಜನಶೀಲ ಮನಸ್ಸು ಅದೇ ಭೋರ್ಗರೆವ ಜಲಪಾತವನ್ನು ನೋಡಿದಾಗ What a waste ಎಂದಿತ್ತು. ಸಾಮಾನ್ಯ ಮನಸ್ಸು ಸೌಂದರ್ಯವನ್ನು ಮಾತ್ರ ನೋಡಿದರೆ, ಸೃಜನಶೀಲ ಮನಸ್ಸು ಪೋಲಾಗುತ್ತಿರುವ ಜಲ ವಿದ್ಯುತ್ತಿನ ಆಗರವನ್ನೇ ನೋಡಿತ್ತು. ಆ ಜಲಧಾರೆಯಿಂದ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಹೇಳಿತು. ಆ ಮನಸೇ ಸರ್ ಎಂ ವಿಶ್ವೇಶ್ವರಯ್ಯನವರು.
ನಿಖರವಾದ ವೀಕ್ಷಣೆ:
ರೈಲಿನಲ್ಲಿ ವಿಶ್ವೇಶ್ವರಯ್ಯನವರು ಪ್ರಯಾಣ ಮಾಡುತ್ತಿದ್ದಾಗ ಮಧ್ಯರಾತ್ರಿ ಏಕಾಏಕಿ ಆ ರೈಲಿನ ಭೋಗಿಯ ಒಳಗಿನ ಚೈನನ್ನು ಎಳೆದು ರೈಲನ್ನು ನಿಲ್ಲಿಸಿದರು. ಎಲ್ಲಾ ಸಹ ಪ್ರಯಾಣಿಕರು ಈ ನಡೆಗೆ ಇವರನ್ನು ವಿರೋಧಿಸಿದರು. ಕಾರಣ ಕೇಳಿದಾಗ ಮುಂದೆ ರೈಲ್ವೆ ಹಳ್ಳಿಗಳು ಮುರಿದು ಹೋಗಿವೆ. ರೈಲು ದುರಂತ ಸಂಭವಿಸಬಾರದೆಂದು ನಾನು ರೈಲನ್ನು ನಿಲ್ಲಿಸಿದ್ದೇನೆ ಎಂದು ಹೇಳಿದರು. ಮುಂದೆ ಅಧಿಕಾರಿಗಳು ಸಹ ಪ್ರಯಾಣಿಕರು ಇಳಿದು ರೈಲಿನ ಹಳ್ಳಿಯನ್ನು ಅವಲೋಕಿಸಿದಾಗ ವಿಶ್ವೇಶ್ವರಯ್ಯನವರು ಹೇಳಿದಂತೆ ರೈಲು ಹಳಿಗಳು ತುಂಡಾಗಿದ್ದವು. ಈ ನಿಖರವಾದ ವೀಕ್ಷಣೆ ವಿಶ್ವೇಶ್ವರಯ್ಯನವರ ನಿಖರತೆಯನ್ನು ತೋರಿಸುತ್ತದೆ. ಭಾರತ ರತ್ನ ಎನಿಸಿಕೊಳ್ಳುವುದು ತಮಾಷೆಯೇ!
ಸ್ವಾಭಿಮಾನಿ:
ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೊರಡುವಾಗ ಪಯಣಿಸಲು ಹಣವಿಲ್ಲವೆಂದು 35km ನಡೆದೇ ಪರೀಕ್ಷೆ ಕೇಂದ್ರವನ್ನು ತಲುಪಿದ ಸ್ವಾಭಿಮಾನಿ ಇವರು.
ಪ್ರಾಮಾಣಿಕತೆ:
ಮೈಸೂರಿನ ದಿವಾನರಾಗಿ ಕೆಲಸ ಮಾಡುತ್ತಿರುವಾಗ ಸರ್ಕಾರಿ ಕೆಲಸ ಮಾಡುತ್ತಿರುವಾಗ ಸರ್ಕಾರವು ಕೊಟ್ಟ ಮೊಂಬತ್ತಿಯನ್ನು ಉರಿಸುತ್ತಿದ್ದರು. ಆ ಕೆಲಸ ಮುಗಿದ ತಕ್ಷಣವೇ ಸರ್ಕಾರದ ಮೊಂಬತ್ತಿಯನ್ನು ಆರಿಸಿ ತಮ್ಮ ಸ್ವಂತದ ಮೊಂಬತ್ತಿಯನ್ನು ಹಚ್ಚುತ್ತಿದ್ದರು.
ಪರಿಶ್ರಮಿ:
ಬಡತನದ ನೆಪ ಹೇಳಿ ಸುಮ್ಮನೆ ಕುಳಿತುಕೊಳ್ಳದೆ ತಮ್ಮ ಪದವಿಯನ್ನು ಓದುವಾಗ ಮಕ್ಕಳಿಗೆ ಮನೆ ಪಾಠ ಮಾಡಿ ತಮ್ಮ ಖರ್ಚನ್ನು ನಿಭಾಯಿಸಿಕೊಳ್ಳುತ್ತಿದ್ದ ಪರಿಶ್ರಮಯವರು.
ಮೇಲಿನ ಇಷ್ಟೆಲ್ಲ ಗುಣಗಳು ಒಬ್ಬ ವ್ಯಕ್ತಿಯ ಹತ್ತಿರ ಇದ್ದಾಗ ಆ ವ್ಯಕ್ತಿ ಮೇಲೆ ಏರದೇ ಇರಲು ಸಾಧ್ಯವೇ!
ಮೈಸೂರು ಮತ್ತು ವಿಶ್ವೇಶ್ವರಯ್ಯನವರ ನಂಟು:
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರವರು ವಿಶ್ವೇಶ್ವರಯ್ಯನವರ ಖ್ಯಾತಿ, ಕಾರ್ಯವೈಖರಿಯನ್ನು ಕಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿ 1909ರ ನವೆಂಬರ್ನಲ್ಲಿ ಮೈಸೂರು ರಾಜ್ಯದ ಪ್ರಮುಖ ಅಭಿಯಂತರರ ಹುದ್ದೆಗೆ ನೇಮಿಸಿಕೊಂಡರು. ಆದರೇ ಅವರಿಗೆ ಮಾಮೂಲಿ ನೀರಿನ ಕೆಲಸ ಮಾಡಲು ಇಷ್ಟವಿರಲಿಲ್ಲ ಬದಲಿಗೆ ರಾಜರ ಸಮ್ಮತಿ ಪಡೆದು ಕೈಗಾರಿಕೆ ಹಾಗೂ ತಾಂತ್ರಿಕ ಶಿಕ್ಷಣ ಅಭಿವೃದ್ದಿ ಪಡಿಸಲು ಮುಂದಾದರು. ನಂತರ 1912ರಲ್ಲಿ ದಿವಾನರಾಗಿ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು.
ಇವರ ಏಳು ವರ್ಷಗಳ ದಿವಾನ್ ಅವಧಿಯಲ್ಲಿ ಇವರ ಕೊಡುಗೆಗಳು ಮುಂದಿನ ಪೀಳಿಗೆಗೂ ಉಪಯುಕ್ತ.
ಕೃಷ್ಣರಾಜ ಸಾಗರ ಅಣೆಕಟ್ಟು (ಕನಂಬಾಡಿ ಕಟ್ಟೆ): ನಾಲ್ವಡಿ ಕೃಷ್ಣರಾಜ ಒಡೆಯರು ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಸರ್.ಎಂ.ವಿ ಯವರ ಬಳಿ ಪ್ರಸ್ತಾಪ ಮಾಡಿದರು. ಇದಕ್ಕೂ ಮೊದಲು ಸರ್.ಎಂ.ವಿ ಯವರು ಪುಣೆಯ ಖಡಕ್ ವಾಸ್ಲಾ ಜಲಾಶಯದ ಎತ್ತರ ಹೆಚ್ಚಿಸುವ ಕಾರ್ಯ ಮಾಡಿದ್ದರು. ಈ ವಾಸ್ಲಾ ಅಣೆಕಟ್ಟು ಪ್ರತಿ ಮುಂಗಾರಿನಲ್ಲಿ ತುಂಬಿ ಹೊರ ಹರಿಯುತ್ತಿತ್ತು ಮತ್ತು ಶೇಖರಿಸಿದ್ದ ನೀರು ಬೇಸಿಗೆಯಲ್ಲಿ ಸಾಲುತ್ತಿರಲಿಲ್ಲ. ಆಗ ವಿಶ್ವೇಶ್ವರಯ್ಯನವರು ಜಲಾಶಯದ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಸ್ವಯಂಚಾಲಿತ ನೀರು ನಿಯಂತ್ರಕ ದ್ವಾರಗಳನ್ನು (ಫ್ಲಡ್ ಗೇಟ್ಸ್) ಅಳವಡಿಸಿ “ಪೇಟೆಂಟ್” (ಹೊಸ ಆವಿಷ್ಕಾರದ ಸ್ವಾಮ್ಯತೆ) ಕೂಡ ಪಡೆದಿದ್ದರು, ಹಾಗೂ ಈ ಮೊದಲು ಅವರು ಈಜಿಪ್ಟ್ ದೇಶದ ಆಸ್ವಾನ್ ಮತ್ತು ಇತರೆ ದೊಡ್ಡ ದೊಡ್ಡ ಜಲಾಶಯಗಳ ಅಧ್ಯಯನ ಮಾಡಿ ಬಂದಿದ್ದರು. ಇದೆಲ್ಲದರ ಜ್ಞಾನದ ಪರಿಣಾಮ ಕೃಷರಾಜ ಅಣೆಕಟ್ಟಿನ ವಿನ್ಯಾಸ ರಚಿಸಿದರು. ಪ್ರಜೆಗಳ ಹಿತಕ್ಕಾಗಿ ಕೃಷ್ಣರಾಜ ಒಡೆಯರು ತಮ್ಮ ಬಂಗಾರವನ್ನ ಮಾರಾಟ ಮಾಡಿ ಅಣೆಕಟ್ಟನ್ನು ಪೂರ್ಣಮಾಡಲಾಯಿತು.
ಮೈಸೂರು ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ: 1916 ರಲ್ಲಿ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಗೆ ಮೈಸೂರು ಮಹಾರಾಜರು ಭೇಟಿ ನೀಡಿ ಅಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳ ರಾಶಿಯನ್ನು ಕಂಡು ಆ ಮರಗಳಿಂದ ಗಂಧದ ಎಣ್ಣೆ ತೆಗೆಯುವ ಆಲೋಚನೆ ಮಾಡಿ ದಿವಾನರಾಗಿದ್ದ ಸರ್.ಎಂ. ವಿ ಹಾಗೂ ಸರ್ ಆಲ್‌ಫ್ರೆಡ್ ಚಾಟರ್‌ಟನ್ ಜತೆಗೆ ಚರ್ಚಿಸಿದ ಮಹಾರಾಜರು, ಶ್ರೀಗಂಧದ ಎಣ್ಣೆ ತೆಗೆಯುವುವ ಯೋಜನೆ ಸಿದ್ಧಪಡಿಸಲು ಸೂಚಿಸಿದರು. ರಾಜರ ಸೂಚನೆ ಮೇರೆಗೆ ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ನ (ಐಐಎಸ್‌ಸಿ) ವಿಜ್ಞಾನಿಗಳು ಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿ ಶ್ರೀಗಂಧದ ಮರದಿಂದ ಸುಗಂಧ ತೈಲ ತೆಗೆಯುವ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಗಂಧದ ಎಣ್ಣೆಯ ತಯಾರಿಕೆಯು ಯಶಸ್ವಿಯಾದ ನಂತರ ಸರ್. ಎಮ್. ವಿ ಯವರು 1916 ರಲ್ಲಿ ಬೆಂಗಳೂರಿನಲ್ಲಿ ಮರದ ತೊಗಟೆ ತೆಗೆದು ಚಿಕ್ಕ ಗಾತ್ರಕ್ಕೆ ಶ್ರೀಗಂಧದ ತುಂಡುಗಳನ್ನು ಸಿದ್ಧಪಡಿಸುವ ಘಟಕ ಆರಂಭಿಸಿದರು. ಮರುವರ್ಷ 1917 ರಲ್ಲಿ ಮೈಸೂರಿನ ಅರದನಹಳ್ಳಿಯಲ್ಲಿ (ಈಗಿನ ಅಶೋಕಪುರಂ) ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದರು, 36 ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀಗಂಧದ ಎಣ್ಣೆ ಕಾರ್ಖಾನೆಯಲ್ಲಿ ಈಗಲೂ ಶ್ರೀಗಂಧದ ಎಣ್ಣೆ, ಅಗರಬತ್ತಿ ಹಾಗೂ ಧೂಪಗಳನ್ನ ತಯಾರಿಸಲಾಗುತ್ತದೆ.
ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ: 1923ರಂದು ಮೈಸೂರು ಐರನ್ ವರ್ಕ್ಸ್ ಅನ್ನು ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಯಿತು. ಇದರ ಮುಖ್ಯ ಉದ್ದೇಶ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇದ್ದ ಶ್ರೀಮಂತ ಕಬ್ಬಿಣದ ಅದಿರು ನಿಕ್ಷೇಪಗಳನ್ನು ಉಪಯೋಗಿಸಿ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಆಗಿತ್ತು. 1989 ರಲ್ಲಿ ಭಾರತ ಉಕ್ಕು ಪ್ರಾಧಿಕಾರವು ಇದನ್ನು ತನ್ನತೆಕ್ಕೆಗೆ ತಗೆದುಕೊಂಡಿತು. ಈಗ ಇದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (Steel Authority of India Limited -) ವ್ಯಾಪ್ತಿಯಲ್ಲಿದೆ. ಸಂಸ್ಥಾಪಕರನ್ನು ಗೌರವಿಸುವ ಸಲುವಾಗಿ 1975 ರಲ್ಲಿ ಕಂಪನಿಯನ್ನು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ ಎಂದು ಮರುನಾಮಕರಣ ಮಾಡಲಾಗಿದೆ.
ವಿಶ್ವೇಶ್ವರಯ್ಯ ಅವರ ಕೃತಿಗಳ ಪರಿಚಯ:
Memoirs of my working life (ನನ್ನ ವೃತ್ತಿ ಜೀವನದ ನೆನಪುಗಳು ), Reconstructing India ಹಾಗೂ 1902 ರಲ್ಲಿ ವಿಶ್ವೇಶ್ವರಯ್ಯ ನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Present State of Education in Mysore” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು.
ವಿಶ್ವೇಶ್ವರಯ್ಯ ಮತ್ತು ಕನ್ನಡ:
ವಿಶ್ವೇಶ್ವರಯ್ಯನವರು ನಾನಾ ಆಡುಭಾಷೆಗಳನ್ನಾಡುವ ಕನ್ನಡಿಗರನ್ನು ಒಂದೇ ಸೂರಿನಡಿ ಸೇರಿಸಬೇಕೆಂದು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದು ಈಗ ಕನ್ನಡ ಸಾಹಿತ್ಯ ಪರಿಷತ್ತು ಎಂದು ಕರೆಯಲಾಗುತ್ತದೆ.
ವಿಶ್ವೇಶ್ವರಯ್ಯನವರ ಪ್ರಮುಖ ಕೊಡುಗೆಗಳು:
- ಅವರು 1903 ರಲ್ಲಿ ಸ್ವಯಂಚಾಲಿತ ವೇರ್ ಫ್ಲಡ್‌ಗೇಟ್‌ಗಳ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಮತ್ತು ಪೇಟೆಂಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
- ಸರ್ ಎಂ ವಿ ಮೈಸೂರಿನ ಮಹಾ ಕೃಷ್ಣ ರಾಜ ಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ. ಇದು ವಿಶ್ವೇಶ್ವರಯ್ಯನವರು ಕರ್ನಾಟಕಕ್ಕೆ ಮತ್ತು ಹತ್ತಿರದ ರಾಜ್ಯಗಳಿಗೆ ನೀಡಿದ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ.
- ಅವರು ಹೈದರಾಬಾದ್ ನಗರಕ್ಕೆ ಮುಸ್ಸಿ ನದಿಯಿಂದ ಪ್ರವಾಹ ರಕ್ಷಣೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು.
- ತಿರುಮಲ ಮತ್ತು ತಿರುಪತಿ ನಡುವೆ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದವರು ಇವರೇ
- ವಿಶಾಖ ಪಟ್ಟಣಂ ಬಂದರನ್ನು ಸಮುದ್ರ ಕೊರೆತದಿಂದ ರಕ್ಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸರ್ ಎಂವಿ ಪ್ರಮುಖ ಪಾತ್ರ ವಹಿಸಿದೆ.
- ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕೆಲಸಗಳು (ಭದ್ರಾವತಿ), ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸಂಸ್ಥೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಗೆ ಅವರು ಜವಾಬ್ದಾರರಾಗಿದ್ದರು.
- ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ್ದಾರೆ.
- ಸರ್ ಎಂವಿ ಅವರು 1909 ರಲ್ಲಿ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ ಮತ್ತು 1912 ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ ಏಳು ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ದಿವಾನರಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.
- ಅವರು ಮೈಸೂರು ರಾಜ್ಯದಲ್ಲಿ ಹಲವಾರು ಹೊಸ ರೈಲು ಮಾರ್ಗಗಳನ್ನು ನಿಯೋಜಿಸಿದರು.
- ಸರ್ ವಿಶೇಶ್ವರಯ್ಯ ಅವರು 1895 ರಲ್ಲಿ ಸುಕ್ಕೂರಿನ ಪುರಸಭೆಗೆ ಜಲಮಂಡಳಿಯನ್ನು ವಿನ್ಯಾಸಗೊಳಿಸಿದರು ಮತ್ತು ನಿರ್ವಹಿಸಿದರು. ಅಣೆಕಟ್ಟುಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯುವ ಬ್ಲಾಕ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
- ಅವರ ಕೆಲಸವು ಎಷ್ಟು ಜನಪ್ರಿಯವಾಯಿತು ಎಂದರೆ ಭಾರತ ಸರ್ಕಾರವು 1906-07 ರಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಅಡೆನ್‌ಗೆ ಕಳುಹಿಸಿತು. ಅವರ ಅಧ್ಯಯನದ ಆಧಾರದ ಮೇಲೆ ಯೋಜನೆಯನ್ನು ವಿನ್ಯಾಸಗೊಳಿಸಿದರು ಅದನ್ನು ಏಡನ್‌ನಲ್ಲಿ ಅಳವಡಿಸಲಾಯಿತು.
- ಸರ್ ಎಂವಿ ಅವರಿಗೆ ಲಂಡನ್ ಇನ್‌ಸ್ಟಿಟ್ಯೂಷನ್ ಆಫ್ ಸಿವಿಲ್ ಇಂಜಿನಿಯರ್ಸ್‌ನ ಗೌರವ ಸದಸ್ಯತ್ವವನ್ನು 50 ವರ್ಷಗಳ ಕಾಲ ನೀಡಲಾಯಿತು.
- ಅವರು 1934 ರಲ್ಲಿ ಭಾರತೀಯ ಆರ್ಥಿಕತೆಯನ್ನು ಯೋಜಿಸಿದ ಎಂಜಿನಿಯರ್ ಆಗಿದ್ದರು.
- ಇಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಕೆಲಸಕ್ಕಾಗಿ 1955 ರಲ್ಲಿ ಅವರಿಗೆ ಸ್ವತಂತ್ರ ಭಾರತದ ಶ್ರೇಷ್ಠ ಗೌರವ, ಭಾರತ ರತ್ನ ನೀಡಲಾಯಿತು. ಇಷ್ಟು ವಿವಿಧತೆಯಿಂದ ಕೂಡಿದ ವ್ಯಕ್ತಿತ್ವವನ್ನು ಹೊಂದಿ ನೂರು ವರ್ಷದ ಸಂಪೂರ್ಣ ಬದುಕನ್ನು ಬದುಕಿ ಕನ್ನಡ ನಾಡಿನ ಮರೆಯದ ಮಾಣಿಕ್ಯವಾಗಿ ಭಾರತ ರತ್ನವಾಗಿ ಅಜರಾಮರವಾಗಿ ಉಳಿದ ಶ್ರೀ ಮೋಕ್ಷಗೊಂಡಮ್ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಗೌರವಾರ್ಥವಾಗಿ ಭಾರತದ ಮೊದಲ ಇಂಜಿನಿಯರ್ ಎನ್ನುವ ಖ್ಯಾತಿಗಾಗಿ ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತಿರುವುದು ಅದೆಷ್ಟು ಸೂಕ್ತ ಅಲ್ಲವೇ! ಇಂದಿನ ಭ್ರಷ್ಟಾಚಾರದ ದಿನಮಾನಗಳಲ್ಲಿ ಸಮಾಜದಲ್ಲಿ ಇಂತಹ ಇನ್ನೊಬ್ಬ ವಿಶ್ವೇಶ್ವರಯ್ಯನವರ ಅಗತ್ಯತೆ ತುಂಬಾ ಇದೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
ನಂಬುಗೆಯೇ ಇಂಬು
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ