ವಿಶ್ವಮಾನವ ಸಂದೇಶ ಸಾರಿದ ಯುಗಪುರುಷ ರಾಷ್ಟ್ರಕವಿ ಕುವೆಂಪು
ವಿಶ್ವಮಾನವ ಸಂದೇಶ ನೀಡಿದ ರಸ ಋಷಿ,ಯುಗದ ಕವಿ,ಜಗದ ಕವಿ ಎಂದು ಜಗದ್ವಿಖ್ಯಾತಿಯಾದ ಕನ್ನಡ ಸಾಹಿತ್ಯ ಪರಂಪರೆಯ ಧೃವತಾರೆ ರಾಷ್ಟ್ರಕವಿ ಕುವೆಂಪು ರವರು ಕಾವ್ಯ,ಸಾಹಿತ್ಯ ವಿಮರ್ಶೆ,ಕಾವ್ಯ ಮೀಮಾಂಸೆ,ನಾಟಕ,ಕತೆ,ಕಾದಂಬರಿ ಹೀಗೆ ಹಲವು ಪ್ರಕಾರಗಳಲ್ಲಿ ಸೃಜನಾತ್ಮಕತೆಯನ್ನು ಹುಟ್ಟುಹಾಕಿ ಎಲ್ಲರ ಜನ ಮಾನಸದಲ್ಲಿ ಅಗ್ರಮಾನ್ಯರಾಗಿ ನೆಲೆಯೂರಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ ಕುವೆಂಪು ಹುಟ್ಟಿ ಬೆಳೆದ ಮಲೆನಾಡಿನ ಪರಿಸರ ಇಷ್ಟು ಎತ್ತರಕ್ಕೆ ಬೆಳೆಯಲು ಸಾದ್ಯವಾಯಿತು.ಪ್ರಕೃತಿಯ ಮಡಿಲಲಿ ಪುಟ್ಟಿದ ಕುವೆಂಪುರವರು ಪ್ರಕೃತಿಯೇ ಸುಂದರ,ಅದೇ ಸತ್ಯ ಅದರಲ್ಲಿ ದೇವರನ್ನು ಕಂಡು ಎಲ್ಲರಿಗೂ ಸತ್ಯಂ ಶಿವ ಸುಂದರಂ ದರ್ಶನ ಮಾಡಿಸಿದ ದಾರ್ಶನಿಕರು.
ಜೀವನ:
ಮಲೆನಾಡು ತಪ್ಪಲಿನ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಹಿರೇಕೂಡಿಗೆಯಲ್ಲಿ 1904 ಡಿಸೆಂಬರ್ 29 ರಂದು ವೆಂಕಪ್ಪಗೌಡ ಹಾಗೂ ಸೀತಮ್ಮ ಮಗನಾಗಿ ಜನಿಸಿದರು.ತಂದೆ ಊರಾದ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಬಾಲ್ಯದ ಜೀವನ ಪ್ರಕೃತಿ ಮಡಿಲಿನಲ್ಲಿ ಬೆಳೆದು ಕಾವ್ಯ ಪರಂಪರೆಗೆ ಉತ್ತಮ ಬುನಾದಿ ದೊರೆಯಿತು.
ಕೂಲಿ ಮಠದಲ್ಲಿ ಶಿಕ್ಷಣ ಆರಂಭವಾಗಿ ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಮೈಸೂರಿನ ವೆಸ್ಲಿಯನ್ ಮಾಧ್ಯಮಿಕ ಶಿಕ್ಷಣ ಮುಗಿಸಿ ಮಹರಾಜ ಕಾಲೇಜಿನಲ್ಲಿ ಬಿ ಎ ಪದವಿ ಪಡೆದು ಕನ್ನಡದಲ್ಲಿ ಎಂ ಎ ಸ್ನಾತಕೋತ್ತರ ಪದವಿ ಪಡೆದರು. ಹೇಮಾವತಿಯನ್ನು ಪತ್ನಿಯಾಗಿ ಸ್ವೀಕರಿಸಿದರು.ಇವರಿಗೆ ಪುತ್ರ ಪೂರ್ಣಚಂದ್ರ ತೇಜಸ್ವಿ ಹಾಗೂ ನಾಲ್ವರು ಪುತ್ರಿಯರು.
ವೃತ್ತಿ ಜೀವನ:
ಕುವೆಂಪು ರವರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ನಂತರ ಉಪಕುಲಪತಿಗಳಾಗಿ ಮಾನಸ ಗಂಗೋತ್ರಿಯನ್ನು ಕಟ್ಟಿಬೆಳಸಿದರು .ಅಧ್ಯಯನ,ಸಂಶೋಧನೆ ಹಾಗೂ ಪ್ರಸಾರಂಗ ಎಂದು ಮೂರು ವಿಭಾಗಗಳನ್ನು ವಿಂಗಡಿಸಿ ಕನ್ನಡ ಸಾಹಿತ್ಯ ಕೃತಿಗಳು ಎಲ್ಲರಿಗೆ ಸಿಗುವಂತೆ ಯೋಜನೆ ತಯಾರಿಸಿದರು.
ಸಾಹಿತ್ಯ ಕೃಷಿ:
ಸಾಹಿತ್ಯ ಎಂದರೆ ಜೀವನ ಜೀವನ ಎಂದರೆ ಸಾಹಿತ್ಯ ಎಂಬ ಅವಿನಾಭಾವ ಸಂಬಂಧದೊಂದಿದೆ ಪ್ರಕೃತಿ ಹಾಗೂ ಅನುಭವದ ಸಾರವನ್ನು ಸಾಹಿತ್ಯದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟರು.
20 ನೇ ಶತಮಾನದ ದೈತ್ಯ ಪ್ರತಿಭೆ ಕುವೆಂಪು ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ (1949)ರಚನೆ ಮಾಡುವ ಮುನ್ನ ಸಾಕಷ್ಟು ಹೆಸರು ಮಾಡಿದ ಕಾನೂರು ಹೆಗ್ಗಡತಿ(1936) ನಂತರ ಮಲೆಗಳಲ್ಲಿ ಮದುಮಗಳು(1967) ಸಾಹಿತ್ಯ ರಚನೆ ಇಡೀ ಭಾರತ ಅಕ್ಷರ ಲೋಕ ನೋಡಿ ನಿಬ್ಬರಗಾಯಿತು.
ಕೊಳಲು,ಪಾಂಚ್ಯಜನ್ಯ,ನವಿಲು,ಕಲಾಸುಂದರಿ,ಪಕ್ಷಿ ಕಾಶಿ,ಕಿಂಕಿಣಿ,ಅನಿಕೇತನ,ಮತ್ರಾಕ್ಷತೆ, ಹೊನ್ನಹೊತ್ತಾರು,ಕೊನೆಯ ತೆನೆ ಹಾಗೂ ವಿಶ್ವ ಮಾನವ ಸಂದೇಶ ಇನ್ನೂ ಮುಂತಾದ ಕವನ ಸಂಕಲನದಲ್ಲಿ ಕುವೆಂಪುರವರು ತಮ್ಮ ಅಗಾದ ಮೇಧಾ ಶಕ್ತಿ ಹಾಗೂ ಪ್ರಕೃತಿಯ ಮಡಿಲಿನ ಚಿತ್ರಣವನ್ನು ಓದುಗರ ಮನದಲ್ಲಿ ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳುವಂತೆ ಚಿತ್ರಿಸಿದ್ದಾರೆ. ಖಂಡ ಕಾವ್ಯ ಚಿತ್ರಾಂಗದ ಕೃತಿಯನ್ನು ಕೂಡ ರಚಿಸಿದ್ದಾರೆ.
ಸನ್ಯಾಸಿ ಮತ್ತ ಇತರ ಕಥೆಗಳು ಹಾಗೂ ನನ್ನ ದೇವರು ಇತರ ಕಥೆಗಳು ಕಥಾ ಸಂಕಲನ,
ಯಮನ ಸೋಲು,ಜಲಗಾರ,ಬಿರುಗಾಳಿ,ಶೂದ್ರ ತಪಸ್ವಿ,ಬೆರಳ್ ಗೆ ಕೊರಳ್,ಬಲಿದಾನ ಚಂದ್ರಹಾಸ ದಂತಹ ಪ್ರಮುಖ ನಾಟಕಗಳು ಅವರ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ.
ಕಾವ್ಯ ವಿಹಾರ,ತಪೊನಂದನ,ವಿಭೂತಿ ಪೂಜೆಯಂತ ವಿಮರ್ಶೆಗಳು,
ನೆನಪಿನ ದೋಣಿಯಲ್ಲಿಯಂತಹ ಆತ್ಮ ಕಥನಗಳು,ಸ್ವಾಮಿ ವಿವೇಕಾನಂದರ ಹಾಗೂ ರಾಮಕೃಷ್ಣರ ಜೀವನ ಚರಿತ್ರೆಗಳು ಅವರ ಅನುಭವದ ಸಾರಗಳು ಅಚ್ಚಳಿದೆ ಉಳಿದಿವೆ.
ವಿಚಾರ ಕ್ರಾಂತಿ ಅಹ್ವಾನ,ಮನುಜಮತ ವಿಶ್ವಪಥ ವೈಚಾರಿಕ ಲೇಖನಗಳು ಅವರ ತತ್ವ ಸಿದ್ದಾಂತಗಳನ್ನು ಹೊರಹಾಕುತ್ತವೆ.
ಇಷ್ಟಕ್ಕೆ ಅವರ ಸಾಹಿತ್ಯ ಕೃಷಿ ನಿಲ್ಲದೆ ಶಿಶು ಕಾವ್ಯ ಎಲ್ಲರ ಮನ ಸೆಳೆಯಿತು.ಅಮಲನ ಕಥೆ,ಹಾಳೂರು,ನನ್ನ ಗೋಪಾಲ,ಮರಿ ವಿಜ್ಞಾನಿ,ಜೊತೆ ಕನ್ನಡ ಡಿಂಡಿಮ,ಪ್ರಾರ್ಥನ ಗೀತೆಗಳು,ಜನಪ್ರಿಯ ವಾಲ್ಮೀಕಿ ರಾಮಾಯಣ, ಗುರುವಿನೊಡನೆ ದೇವರಡಿಗೆ ಇನ್ನಿತರ ಕೃತಿಗಳು ಅವರ ಸಾಹಿತ್ಯ ಬರವಣಿಗೆ ಎಲ್ಲರ ಜನ ಮಾನಸದಲ್ಲಿದೆ.
ಬೆರಳ್ ಗೆ ಕೊರಳ್ ಕಾನೂರು ಹೆಗ್ಗಡತಿ ಚಲನ ಚಿತ್ರಗಳಾಗಿವೆ, ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ನಾಟಕವನ್ನಾಗಿ ರಚಿಸಿ ಪ್ರದರ್ಶನ ನೀಡಲಾಗಿದೆ. ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ನಂತಹ ಕಾವ್ಯ ರಚಿಸಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು.ವಿಶ್ವಮಾನವ ಸಂದೇಶ,ಸರಳ ವಿವಾಹ ಪದ್ಧತಿ,ಬಂಡಾಯ ಚಳುವಳಿಗೆ ನಾಂದಿಯಾದರು. 1985 ರಲ್ಲಿ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು. ಹೊಸಬೆಳಕು ಚಲನ ಚಿತ್ರದಲ್ಲಿ ಕೂಡ ಇವರ ಒಂದು ಹಾಡನ್ನು ಬಳಸಿಕೊಳ್ಳಲಾಗಿದೆ.
ಸಂದ ಗೌರವ ಪ್ರಶಸ್ತಿ:
ಕುವೆಂಪುರವರ ಸಾಹಿತ್ಯ ಸೇವೆಗೆ ಮುಕುಟ ಪ್ರಾಯದಂತೆ ಅಗಣಿತ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಗೌರವ ಡಿ.ಲಿಟ್,ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲದಿಂದ ಗೌರವ ಡಿ.ಲಿಟ್ ಪ್ರಶಸ್ತಿ,ಪದ್ಮಭೂಷಣ,ರಾಷ್ಟ್ರಕವಿ ಪುರಸ್ಕಾರ(1964)ಜ್ಞಾನ ಪೀಠ ಪ್ರಶಸ್ತಿ(1968),ಪಂಪ ಪ್ರಶಸ್ತಿ,ಕರ್ನಾಟಕ ರತ್ನ,ಪದ್ಮ ಭೂಷಣ ಪ್ರಶಸ್ತಿ, ನಾಡೋಜ ಪ್ರಶಸ್ತಿ,ಹೀಗೆ ನೂರಾರು ಪ್ರಶಸ್ತಿಗಳು ಕುವೆಂಪು ಸಾಧನೆಗೆ ಕೈಗನ್ನಡಿಯಾಗಿದೆ.
ಇದರ ಜೊತೆ ಇವರ ಸಾಧನೆ ಚಿರವಾಗಿರಲಿ ಎಂದು ಕುವೆಂಪು ಹುಟ್ಟಿದ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ನಿರ್ಮಿಸಲಾಗಿದೆ.ಇಲ್ಲೇ ಇರುವ ಸಮಾಧಿ ಸ್ಥಳವನ್ನು ಕವಿಶೈಲ ಸ್ಮಾರಕವಾಗಿ ನಿರ್ಮಿಸಲಾಗಿದೆ.
ಕುವೆಂಪು ವಿಶ್ವ ವಿದ್ಯಾಲಯನ್ನು ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿ ಸ್ಥಾಪಿಸಲಾಗಿದೆ.ಮೈಸೂರು ವಿಶ್ವವಿದ್ಯಾಲಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿಸಲಾಗಿದೆ.ಬೆಂಗಳೂರಿನ ಭಾಷಾ ಭಾರತಿ ಸಂಸ್ಥೆಗೆ ಇವರ ಹೆಸರು ನಾಮಕರಣ ಮಾಡಲಾಗಿದೆ. ಕುವೆಂಪು ರವರು 1994 ನವೆಂಬರ್ 11 ರಂದು ಮೈಸೂರಿನಲ್ಲಿ ನಿಧನರಾದರು.ಅವರ ಅಂತ್ಯ ಸಂಸ್ಕಾರ ಕುಪ್ಪಳ್ಳಿಯಲ್ಲಿ ನಡೆಯಿತು.
ಇಷ್ಟೇಲ್ಲ ಸಾಧನೆ ಮಾಡಿದ ನಮ್ಮ ಕನ್ನಡದ ರಸ ಋಷಿ ಕುವೆಂಪು ಕನ್ನಡದ ಮೇರು ಪುತ್ರರಾಗಿ ನಿಲ್ಲುತ್ತಾರೆ.ಸದಾ ಅವರ ಸಾಹಿತ್ಯದ ಮೆಲುಕು ನಮ್ಮೆಲ್ಲರ ದಾರಿ ದೀಪವಾಗಿದೆ.
More Stories
ನಂಬುಗೆಯೇ ಇಂಬು
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ