- ಓದುಗರ ಪ್ರೀತಿ, ಅಭಿಮಾನಕ್ಕೆ ಚಿರಋಣಿ
ನಮಸ್ಕಾರ
ಡಿಜಿಟಲ್ ಮೀಡಿಯಾ ಕ್ಷೇತ್ರಕ್ಕೆ ‘ನ್ಯೂಸ್ ಸ್ನ್ಯಾಪ್ ‘ ದಾಪುಗಾಲು ಹಾಕಿ ಇಂದಿಗೆ ಮೂರು ವರ್ಷ ಪೂರ್ಣಗೊಂಡು ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಮೂರು ವರ್ಷಗಳು ಉರುಳಿದ್ದೇ ಗೊತ್ತಾಗಲಿಲ್ಲ. ನಮ್ಮ ಪ್ರೀತಿಯ ಓದುಗರ ಅಭಿಮಾನದಿಂದಾಗಿ ನಾವು ಮೂರು ವರ್ಷಗಳ ಕಾಲ ಸುದ್ದಿ ಹುಡುಕಿ ಬರೆದಿದ್ದು, ಶ್ರಮ ಹಾಕಿ ಓದುಗರ ನಿರೀಕ್ಷೆ ತಲುಪಿದ ರೀತಿ ನೋಡಿದರೆ ದಣಿವಿಲ್ಲದೇ ಸವೆಸಿದ ದಾರಿ ಬಲು ದೂರ ಎನಿಸಲೇ ಇಲ್ಲ.
2020 ಆಗಸ್ಟ್ 28 ರಂದು ಡಿಜಿಟಲ್ ಮೀಡಿಯಾ ಕ್ಷೇತ್ರಕ್ಕೆ ಕಾಲಿಟ್ಟ ದಿನ. 30 ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿದ ಅನುಭವದ ಮೂಟೆ ಹೊತ್ತುಕೊಂಡು ಬಂದು ದಿಢೀರ್ ಎಂದು ಇಳಿಸಿದ್ದು ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ.
ಆಗ ನನಗೆ ಎಲ್ಲವೂ ಹೊಸತು. ಮಕ್ಕಳ ಒತ್ತಾಸೆ. ಕಾಲಮಾನ ಬದಲಾಗುತ್ತದೆ. ತಂತ್ರಜ್ಞಾನಕ್ಕೆ ನಾವು ಹೊಂದಿಕೊಳ್ಳಬೇಕು. ಅಸಾಧ್ಯವಾದದ್ದು ಯಾವುದೂ ಇಲ್ಲ. ಪತ್ರಿಕೋದ್ಯಮದ ಬಾಷೆ, ಭಾಷ್ಯ ಎರಡನ್ನೂ ಹೊಸ ರೀತಿಯಲ್ಲಿ ಕಲಿತು ಪೈಪೋಟಿ ಯುಗಕ್ಕೆ ಹೆಜ್ಜೆ ಹಾಕಿ ಎಂದು ದುಂಬಾಲು ಬಿದ್ದು ನಾನು ಕಲಿಯುವಂತೆ ಮಾಡಿದರು. ನಾನು ಕಲಿತೆ ಎನ್ನುವುದರ ಬದಲು ಇಬ್ಬರು ಮಕ್ಕಳೇ ನನಗೆ ಡಿಜಿಟಲ್ ಕ್ಷೇತ್ರದ ದರ್ಶನ ಮಾಡಿಸಿದರು . ಈ ಮೂರೇ ವರ್ಷದಲ್ಲಿ ಮೂವತ್ತು ವರ್ಷ ಕಲಿತಿರುವುದಷ್ಟು ಸಮಾನ ಎನ್ನುವ ರೀತಿಯಲ್ಲಿ ವೃತ್ತಿ ಮತ್ತು ಬದುಕು ಜಗದ ನಿಯಮದಂತೆ ಅಷ್ಟೊಂದು ಬದಲಾವಣೆಯಾಗಿದೆ.
‘ನ್ಯೂಸ್ ಸ್ನ್ಯಾಪ್ ‘ಓದುಗರ ಸಂಖ್ಯೆ 15 ಲಕ್ಷ ಮೀರಿದೆ. ಬೇಸರವಿಲ್ಲದೇ ಓದಿ ಪ್ರೋತ್ಸಾಹಿಸುವ ಓದುಗರ, ಅಭಿಮಾನಿಗಳ ಬಲದಿಂದ ಬಲಿಷ್ಠವಾಗಿರುವ ನ್ಯೂಸ್ ಸ್ನ್ಯಾಪ್ ಗೆ ಗೂಗಲ್ ನವರು ನೀಡುವ ಜಾಹೀರಾತು ಶಕ್ತಿಯೇ ಆರ್ಥಿಕ ಸ್ಥಿರತೆಗೆ ಶ್ರೀರಕ್ಷೆಯಾಗಿದೆ.
ಬೆರಳಂಚಿನಲ್ಲೇ ಸುದ್ದಿ, ಲೇಖನಗಳನ್ನು ತಂಡ ಸಿದ್ದಪಡಿಸಲು ಸದಾ ಸಿದ್ದವಾಗಿರುತ್ತದೆ. ‘ ಇ -ವೆಬ್ ‘ ಪತ್ರಿಕೆಯ ರೂಪಕ್ಕೆ ಅಡಿಪಾಯ ಹಾಕಿ, ಹೊಸ ಭರವಸೆ ಮೂಡಿಸುತ್ತಲೇ ಬಂದಿರುವ ಪುತ್ರ ಕೆ . ಆರ್. ಮಿಹಿರ್ ಆಕಾಶ್ , ತಂತ್ರಜ್ಞಾನಕ್ಕೆ ಮೆರಗು ನೀಡಲು ಶ್ರಮಿಸುವ ಮಗಳು ಅನನ್ಯ, ಸುದ್ದಿಯನ್ನೂ ನಿರ್ವಹಣೆ ಮಾಡಿ, ಅದನ್ನು ತ್ವರಿತವಾಗಿ ಓದುಗರಿಗೆ ತಲುಪಿಸಲು ನಮ್ಮ ತಂಡದ ಶ್ರೇಯಾ, ಪತ್ನಿ ಸುಮಾರವಿ ಸೇರಿದಂತೆ ಲೇಖಕಿ ಶುಭಶ್ರೀ ಪ್ರಸಾದ್ , ಫೇಸ್ ಬುಕ್ ಅಂಗಳದ ಕಥಾ ಅರಮನೆಯ ತಂಡದ ಮುಖ್ಯಸ್ಥರಾದ ಗುಡ್ಡಾಭಟ್ ಜೋಶಿ ಹೊಳಲು, ಜಾನಕಿ ರಾವ್ , ಡಾ. ರಾಜಶೇಖರ ನಾಗೂರ, ಸ್ನೇಹ ಆನಂದ್ ಹಾಗೂ ಆ ತಂಡದ ಅನೇಕ ಲೇಖಕರ ಬಳಗದ ಅವಿರತವಾದ ಬೆಂಬಲ, ಪ್ರೋತ್ಸಾಹವನ್ನು ನಾವು ಸ್ಮರಿಸುತ್ತೇವೆ.
ಈಗ ‘ವರ್ತಮಾನ’ ಪತ್ರಿಕೆ ನಮಗೆ ಸಹೋದರ ಸಂಸ್ಥೆಯಾಗಿದೆ. ನಮ್ಮ ಮನೆಯ ಹೊಸ ಸದಸ್ಯನಾಗಿ ಸೇರಿದೆ. ಕಳೆದ ಎಂಟು ತಿಂಗಳಿನಿಂದ ಮುದ್ರಣ ಮತ್ತು ಡಿಜಿಟಲ್ ಎರಡೂ ಮಾಧ್ಯಮ ಕ್ಷೇತ್ರಗಳನ್ನು ನಿರ್ವಹಿಸಬೇಕಾಗಿದೆ. ಜವಾಬ್ದಾರಿ, ನಿರಂತರ ನಿರ್ವಹಣೆ ಒಂದು ದೊಡ್ಡ ಸವಾಲು.
ಆದರೆ ಒಂದಂತೂ ನಿಜ. ಓದುಗರ ಸಹಕಾರದಿಂದ ನಾವು ಸದಾ ನಂಬುವ ಭಗವಂತನ ಕೃಪೆಯಿಂದಲೇ ನಮ್ಮ ವೃತ್ತಿ ಮತ್ತು ಜೀವನದ ಬಂಡಿ ಮುಂದೆ ಸಾಗುತ್ತಿದೆ. ನಾವು ಸ್ಥಿತಪ್ರಜ್ಞೆಯಲ್ಲೇ ಬಂದದ್ದನ್ನು ಸ್ವೀಕರಿಸಿ ಮುನ್ನಡೆದಿದ್ದೇವೆ.
ನಮಸ್ಕಾರ
ಕೆ. ಎನ್. ರವಿ
ಸಂಪಾದಕರು
ನ್ಯೂಸ್ ಸ್ನ್ಯಾಪ್ – ಮಂಡ್ಯ
ವರ್ತಮಾನ
ಪ್ರಾದೇಶಿಕ ದಿನ ಪತ್ರಿಕೆ ಮೈಸೂರು.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ