December 23, 2024

Newsnap Kannada

The World at your finger tips!

almatti

ಉತ್ತರ ಕರ್ನಾಟಕಕ್ಕೆ ಜಲ ಶಕ್ತಿ ತುಂಬಲು ಈಗ ಸಕಾಲ!

Spread the love

ನ್ಯೂಸ್ ಸ್ನ್ಯಾಪ್
ವಿಶೇಷ ಪ್ರತಿನಿಧಿಯಿಂದ
ಬೆಂಗಳೂರು
ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯು ಬಹಳ ಪ್ರಮುಖ. ಅದು ಪೂರ್ಣಗೊಂಡಲ್ಲಿ ಬೆಳಗಾವಿಯಿಂದ ಹಿಡಿದು ಬೀದರ್ ವರೆಗೆ ಹಚ್ಚಹರಿಸಿನ ನಾಡನ್ನು
ಕಾಣಬಹುದು. ಹಿಂದೆ ಒಂದು ಕಾಲವಿತ್ತು. ಚಿತ್ರದುರ್ಗ ದಾಟಿದರೆ ಎಲ್ಲವೂ ಬೆಂಗಾಡು. ತುಂಗಭದ್ರ ಹೊರತುಪಡಿಸಿದರೆ ನದಿಯೇ ಇರಲಿಲ್ಲ. ಭೀಮೆಯಲ್ಲೂ ಹೆಚ್ಚು ನೀರು
ಇರುತ್ತಿರಲಿಲ್ಲ. ಅಲ್ಲದೆ ಸೊಲ್ಲಾಪುರದ ಕೊಳಚೆ ನೀರು ಭೀಮೆಗೆ ಬಂದು ಕಲಬುರ್ಗಿ ಜನರಿಗೆ ಪ್ರತಿ ವರ್ಷ ಕಾಮಾಲೆ ರೋಗ ಸಾಮಾನ್ಯವಾಗಿತ್ತು. ಬೇಸಿಗೆ ಬಂತು ಎಂದರೆ ಕುಡಿಯುವ ನೀರಿಗೂ ಪರದಾಟ. ಅಂಥ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಇತ್ತು.
ಅಲ್ಲಿಯ ಜನ ಬರಗಾಲ ಎದುರಿಸಲು ಸರ್ಕಾರದ ನೆರವು ಕೋರುತ್ತಿದ್ದರು. ಬರಗಾಲದಲ್ಲಿ ಕಾಮಗಾರಿ ಕೈಗೊಳ್ಳಲು ಒಂದು ರಾಜಕಾರಣಿಗಳ ಪಡೆಯೇ ಇತ್ತು. ಅಧಿಕಾರಿಗಳು
ಹೈದರಾಬಾದ್ ಕರ್ನಾಟಕ ಎಂದರೆ ಹೆದರುತ್ತಿದ್ದರು. ಯುಕೆಪಿ ಯೋಜನೆ ಆರಂಭಗೊಂಡ ಮೇಲೆ ಎಲ್ಲ ಎಂಜಿನಿಯರ್ ಗಳು ಉತ್ತರ ಕರ್ನಾಟಕಕ್ಕೆ ಲಗ್ಗೆ ಇಟ್ಟರು.
ಅಲ್ಲಲ್ಲಿ ಹಸಿರನ್ನು ಕಾಣುವಂತಾಗಿದೆ. ಮುಂಬರುವ ದಿನಗಳಲ್ಲಿ ಇಡೀ ಉತ್ತರ ಕರ್ನಾಟಕ ರಾಜ್ಯದ ಭಾಗ್ಯದ ಬಾಗಿಲನ್ನು ತೆರೆಯಲಿದೆ.
ಕರ್ನಾಟಕದ ಏಕೀಕರಣ ಕಾಲದಲ್ಲಿ ಈ ಭಾಗವನ್ನು ಹಸಿರಾಗಿಸುವ ಪಣ ತೊಡಲಾಗಿತ್ತು. ಏಕೀಕರಣಕ್ಕೆ ಮುನ್ನ ಈ ಭಾಗ ಬರಗಾಲದಲ್ಲಿ ಬಳಲುತಿತ್ತು. ಜನ ಕುಡಿಯುವ ನೀರಿಗೂ ಪರದಾಡುತ್ತಿದ್ದರು. ಆಗಲೂ ಇಲ್ಲಿ ಕೃಷ್ಣೆ ಹರಿಯುತ್ತಿತ್ತು. ಆದರೆ ಮಹಾರಾಷ್ಟ್ರ ಮತ್ತು ಆಂಧ್ರದವರು ಮಾತ್ರ ಜಾಣ್ಮೆಯಿಂದ ಬಳಸಿಕೊಳ್ಳುತ್ತಿದ್ದರು. ಆಗ ನಮ್ಮಲ್ಲಿ ಹಣವೂ ಇರಲಿಲ್ಲ. ರಾಜಕೀಯ ಇಚ್ಛಾಶಕ್ತಿಯೂ ಇರಲಿಲ್ಲ. ದೇವರು ದಯೆ ತೋರಿದ್ದರೂ ಅದೃಷ್ಟ ಇರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಹಣ ಇದೆ. ಸಂಪನ್ಮೂಲ ಇದೆ. ರಾಜಕೀಯ ಇಚ್ಛಾಶಕ್ತಿಗೆ ಕೊರತೆ ಇಲ್ಲ. ಜನ-ಜನಪ್ರತಿನಿಧಿಗಳು ಒಮ್ಮತದಿಂದ ಆರ್ಥಿಕ-ಸಾಮಾಜಿಕ ಬದಲಾವಣೆಗೆ ಹೋರಾಡಲು ಮಾನಸಿಕವಾಗಿ ದೃಢಗೊಂಡಿದ್ದಾರೆ.
ಬಚಾವತ್ ಆಯೋಗದ ವರದಿಯೂ ನಮ್ಮ ಪರ ಇದೆ. ಆಲಮಟ್ಟಿ ಗೇಟ್ ಎತ್ತರಿಸಲು ಈಗ ಕಾನೂನು ಬೆಂಬಲವೂ ಇದೆ. ಗೇಟ್ ಎತ್ತರಿಸಬೇಕು ಎಂದರೆ ಮುಳುಗಡೆ ಪ್ರದೇಶ ಅಧಿಕಗೊಳ್ಳಲಿದೆ. ವಿಜಯಪುರದ ಜನ ಈಗಾಗಲೇ ಸಾಕಷ್ಟು ತ್ಯಾಗ ಮಾಡಿದ್ದಾರೆ. ಇದರ ಫಲವನ್ನು ಬಾಗಲಕೋಟೆ, ಕೊಪ್ಪಳ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಕಾಣಬಹುದು. ಹುಣಸಗಿ ಒಂದಾನೊಂದು ಕಾಲದಲ್ಲಿ ಬರಗಾಲದ ನಾಡಾಗಿತ್ತು ಎಂದರೆ ಈಗ ಯಾರೂ ನಂಬುವುದಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಈ ಭಾಗದ 5 ಜಿಲ್ಲೆಗಳ ಚಿತ್ರಣವನ್ನೇ ಬದಲಿಸಿದೆ. ಮುಂದೆ ಇನ್ನೂ ಬದಲಾವಣೆ ಬರಲಿದೆ.
ಈ ಹಿಂದೆ ಕಾವೇರಿ- ಕೃಷ್ಣೆಗೆ ಒಂದು ರೀತಿಯ ಪೈಪೋಟಿ ಏರ್ಪಟ್ಟಿತ್ತು. ಕೃಷ್ಣೆಗೆ ಕೊಡುವಷ್ಟು ಹಣವನ್ನು ಕಾವೇರಿಗೂ ನೀಡಬೇಕೆಂಬ ಬೇಡಿಕೆ ಇತ್ತು. ಇದರಿಂದ ಕೃಷ್ಣೆಯಲ್ಲಿ ಕಾಮಗಾರಿಗಳು ವಿಳಂಬವಾದವು. ಅಲ್ಲದೆ ಮುಳುಗಡೆ ಮತ್ತು ಸ್ಥಳಾಂತರ ಹಾಗೂ ಪುನರ್ವಸತಿ ಕೆಲಸಗಳು ಮಂದಗತಿಯಲ್ಲಿ ನಡೆದವು. ಕಾವೇರಿ ಕಣಿವೆಯಲ್ಲಿ ಈ ಸಮಸ್ಯೆ ಇರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ಇಲ್ಲಿ ವಿದ್ಯುತ್, ನೀರಾವರಿ ಕಾಮಗಾರಿಗಳು ಫಲ ನೀಡಿದ್ದವು. ಕಾವೇರಿ ನೀರಿಗಾಗಿ ಹೋರಾಡ ಬೇಕಾದ ಬಂದು ಹೋಗಿದೆ. ಆದರೆ ಕೃಷ್ಣೆಯಲ್ಲಿ ಈ ಸಮಸ್ಯೆ ಇಲ್ಲ. ಇಲ್ಲಿ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಅದರಲ್ಲೂ ಕಾಲುವೆಗಳ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಕಪ್ಪುನೆಲ
ಸಂಪೂರ್ಣ ನೀರಾವರಿಗೆ ಹೇಳಿ ಮಾಡಿಸಿದ್ದಲ್ಲ. ಆದರೂ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ ಅನುಸರಿಸಿದರೆ ಇಡೀ ಉತ್ತರ ಕರ್ನಾಟಕವನ್ನು ಹಸಿರಾಗಿಸಬಹುದು. ತೋಟಗಾರಿಕೆಗೆ ಹೇಳಿ ಮಾಡಿಸಿದ ನೆಲ. ಈಗ ಎಲ್ಲ ಕಡೆ ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿವೆ. ಕೃಷಿಯೊಂದಿಗೆ ಕೈಗಾರಿಕೆ ತಲೆ ಎತ್ತಬೇಕು. ಆಲಮಟ್ಟಿ, ಕೂಡಗು ರಾಯಚೂರು, ಬಳ್ಳಾರಿ, ಯರಮರಸ್ ವಿದ್ಯುತ್ ಕೇಂದ್ರಗಳಿವೆ. ವಿದ್ಯುತ್ ಕೊರತೆ ಇಲ್ಲ. ರೈಲು, ರಸ್ತೆ ಮತ್ತು ವಿಮಾನ ಸಂಪರ್ಕ ಇದೆ. ವ್ಯಾಪಾರ- ವಹಿವಾಟು ಉತ್ತಮಗೊಳ್ಳಲು ಎಲ್ಲ ವಾತಾವರಣವಿದೆ. ಬೆಳಗಾವಿಯಿಂದ ಹಿಡಿದು ಬೀದರ್ ವರಗೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಬೆಳಗಾವಿಯಲ್ಲಿ ಮತ್ತೊಂದು ವಿಧಾನಸೌಧ ಕೆಲಸ ಮಾಡುತ್ತಿದೆ. ಆಡಳಿತ ಮನೆಮನೆಗೂ ತಲುವುದಕ್ಕೆ ಈಗ ಇಂಟರ್ ನೆಟ್ ಸವಲತ್ತು ಅಭಿವೃದ್ಧಿಗೊಂಡಿದೆ. ಬೀದರ್ ಜನ ಈಗ ಅರ್ಜಿ ಹಿಡಿದು ಬೆಂಗಳೂರಿಗೆ ಬರುವ ಅಗತ್ಯವಿಲ್ಲ. ಅಧಿಕಾರಿಯೇ ಅವರ ಮನೆ ಬಾಗಿಲಿಗೆ ಬರುತ್ತಾನೆ. ಕೃಷ್ಣೆ ಆ ಕೆಲಸ ಮಾಡಿಸುತ್ತದೆ. ಉತ್ತರ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗುವ ಕಾಲ ದೂರವಿಲ್ಲ. ಹೈದರಾಬಾದ್ ನಿಜಾಂ ಆಡಳಿತದಲ್ಲಿ ಕುಗ್ಗಿ ಹೋಗಿದ್ದ ಜನರ ಬೆನ್ನು ಈಗ ಸ್ವಲ್ಪ ನೇರವಾಗಿದೆ. ಮುಂದಿನ ದಿನಗಳಲ್ಲಿ ಎದೆಯುಬ್ಬಿಸಿ ನಿಲ್ಲುವ ಕಾಲ ದೂರವಿಲ್ಲ. ಬೆಂಗಳೂರಿನಿಂದ ಬಂದ ಅಧಿಕಾರಿಗೆ ದೂರದಲ್ಲಿ ನಿಂತು ಕೈಮುಗಿದು ನಿಂಬೆ ಹಣ್ಣು ನೀಡಿ ಬೇಡುವ ಕಾಲ ಈಗ ಇಲ್ಲ. ಸರಿಸಮಾನವಾಗಿ ನಿಂತು ಪ್ರಶ್ನಿಸುವ ಕಾಲ ಬಂದಿದೆ. ಕೃಷ್ಣೆಯ ಋಣ ತೀರಿಸುವ ಕಾಲ ಸನ್ನಿಹಿತವಾಗಿದೆ.

Copyright © All rights reserved Newsnap | Newsever by AF themes.
error: Content is protected !!