ಸ್ನೇಹ, ಪ್ರೀತಿ, ವಿಶ್ವಾಸ, ಅಭಿಮಾನ ಎನ್ನುವುದು ಹಣ ಕೊಟ್ಟು ಕೊಳ್ಳುವುದಲ್ಲ. ಅದು ತಾನಾಗೇ ಹುಟ್ಟಿಕೊಳ್ಳುವಂಥದ್ದು. ಯಾರ ಮೇಲೆ ಯಾರಿಗೆ ಸ್ನೇಹವುಂಟಾಗುತ್ತದೆ, ಪ್ರೀತಿ ಮೂಡುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವೇನಿಲ್ಲ.
ಬ್ಯಾಂಕರ್ಸ್ ಡೈರಿಗೂ ಸ್ನೇಹ ವಿಶ್ವಾಸಕೂ ಏನು ಸಂಬಂಧ ಎಂದಿರಾ? ಬ್ಯಾಂಕು ಕಲ್ಲು ಕಟ್ಟಡವಾಗಿದ್ದರೂ, ಒಳಗೆ ಕೆಲಸ ಮಾಡುವವರು ಕಲ್ಲುಗಳೇನಲ್ಲ. ಇರುವ ಸಹೋದ್ಯೋಗಿಗಳೊಂದಿಗೆ, ಬರುವ ಗ್ರಾಹಕರೊಂದಿಗೆ ಒಡನಾಟ, ಬಾಂಧವ್ಯ ಇದ್ದೇ ಇರುತ್ತದೆ. ಎಲ್ಲರೊಂದಿಗೂ ಅಲ್ಲವಾದರೂ ಕೆಲವರೊಂದಿಗಾದರೂ ನಂಟು ಬೆಳೆದುಬಿಡುತ್ತದೆ. ಕೆಲವು ಗ್ರಾಹಕರು ಮತ್ತು ಸಹೋದ್ಯೋಗಿಗಳು ಕುಟುಂಬ ಸ್ನೇಹಿತರೇ ಆಗಿಬಿಡುತ್ತಾರೆ. ಇನ್ನೂ ಕೆಲವರ ವಿಶ್ವಾಸ ನೆನಪಿನಲ್ಲಿ ಆಗಾಗ ಸುಳಿಯುತ್ತಾ ಇರುತ್ತದೆ. ಆದರೆ ಅವರೆಲ್ಲ ತೋರುವ ವಿಶ್ವಾಸ ಮನಸನ್ನು ತುಂಬಿಬಿಡುತ್ತದೆ. ಈ ಮುವ್ವತ್ತು ವರ್ಷಗಳ ಸೇವಾವಧಿಯಲ್ಲಿ ಅಂಥ ಸಾಕಷ್ಟು ಉದಾಹರಣೆಗಳು ನಡೆದಿವೆ. ಹಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೀನಿ ಕೂಡ.
ನಾನು ಕೆಲಸ ಮಾಡುವ ಒಂದು ಶಾಖೆಯಲ್ಲಿನ ಗ್ರಾಹಕರೊಬ್ಬರು ಸರಕಾರೀ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೂ ಚಿಕ್ಕ ಹುಡುಗ. ಸಾಹಿತ್ಯದಲ್ಲಿ ಆಸಕ್ತಿಯೂ ಇತ್ತು. ಹಾಗಾಗಿ ನನ್ನ ಬರಹಗಳನ್ನು ಓದಿ ಸಾಹಿತ್ತಿಕವಾಗಿ ಪ್ರತಿಕ್ರಿಯಿಸುತ್ತಿದ್ದ. ಆಗೊಮ್ಮೆ ಈಗೊಮ್ಮೆ ಬ್ಯಾಂಕಿಗೆ ಬಂದಾಗ ವಿಶ್ವಾಸವಾಗಿ ಮಾತನಾಡುತ್ತಿದ್ದರು. ನನ್ನನ್ನೂ ನಿಮ್ಮ ತಮ್ಮ ಅಂತ ತಿಳ್ಕೊಳ್ಳಿ ಅಂತಲೂ ಅನ್ನುತ್ತಿದ್ದ. ಅದೊಂದು ದಿನ ಆ ಹುಡುಗ ಬ್ಯಾಂಕಿಗೆ ಬಂದು ‘ಮೇಡಂ ನಾಲ್ಕು ದಿನದ ಹಿಂದೆ ನಮ್ಮೂರಿನಲ್ಲಿ ನನ್ನ ಎಂಗೇಜ್‍ಮೆಂಟ್ ಆಯ್ತು’ ಎಂದ. ಖುಷಿಯಾಯಿತು – ಹಾರೈಸಿದೆ. ‘ಏನು ಹುಡುಗಿ ಹೆಸರು? ಎಲ್ಲಿಯವರು’ ಎಂದು ಕೇಳಿದೆ. ‘ನನ್ನ ಅಕ್ಕನ ಮಗಳೇ ಮೇಡಂ ನಮ್ಮೂರೇ. ನಮ್ ಕಡೆ ಮದುವೆ ಸಮಯದಲ್ಲಿ ಹುಡುಗಿಯ ಹೆಸರು ಬದಲಾಯಿಸುತ್ತಾರೆ. ಅಯ್ನೋರು ಹುಡುಗಿ ಹೆಸರು ಏನಂತ ಇಡುವಾ ಅಂತ ಕೇಳಿದಾಗ ತಕ್ಷಣ ನನಗೆ ನಿಮ್ಮ ಹೆಸರೇ ನೆನಪಾದದ್ದು. ನಾ ಈ ಊರಿಂದ ವರ್ಗ ಆದ್ರೂ ನಿಮ್ ನೆನಪು ಅಳಿಸ್ಬಾರ್ದು ಅಂತ ನಿಮ್ ಹೆಸರೇ ಇಟ್ಟಿದ್ದೀನಿ. ನೋಡಿ ಸಾಕ್ಷಿಗೆ’ ಅಂತ ಫೆÇೀಟೋ ತೋರಿಸಿದ. ವಧು ವರರ ಹೆಸರಿನ ಬೋರ್ಡಿನಲ್ಲಿ ನನ್ನ ಹೆಸರೇ ಇತ್ತು.
ಒಂದು ಕ್ಷಣ ಸಂತೋಷ, ಹೆಮ್ಮೆ ಎನಿಸಿದರೂ ಈ ವಿಶ್ವಾಸಕ್ಕೆ ನಾನೇನು ಕೊಡಬಲ್ಲೆ ಎನಿಸಿ ಮನ ಭಾರವಾದದ್ದು ಸುಳ್ಳಲ್ಲ. ಕುಟುಂಬದಲ್ಲಿನ ವ್ಯತ್ಯಯದಿಂದಾಗಿ ಅರೆಬರೆ ತಲೆ ಕೆಟ್ಟ ಲಿಂಗಪ್ಪ (ಹೆಸರು ಬದಲಿಸಲಾಗಿದೆ) ಕೂಡ ನಮ್ಮ ಶಾಖೆಯ ಗ್ರಾಹಕನೇ. ದಿನವೂ ಬ್ಯಾಂಕಿಗೆ ಬಂದು ‘ಮಗ್ಳೇ ತಿಂಡಿ ಆಯ್ತಾ? ಮಗ್ಳೇ ಊಟ ಆಯ್ತಾ?’ ಎಂದು ಕೇಳೋದು. ಮ್ಯಾನೇಜರ್ ಅವರನ್ನು ‘ತಮ್ಮಾ ತಿಂಡಿ ಆಯ್ತಾ? ಟೈಮ್ ಗೆ ಸರ್ಯಾಗಿ ತಿನ್ನು’ ಅನ್ನೋದು ನಡೆಯುತ್ತಲೇ ಇರುತ್ತದೆ. ಒಂದೊಂದು ಸಲ ಒಂದೊಂದು ಮಾತು ‘ ಮಗ್ಳೇ ಏರ್ ಪೆÇೀರ್ಟ್ ರಸ್ತೆಯಲ್ಲಿ ನಿನ್ನ ಹೆಸರಿಗೆ ಒಂದು ಮನೆ ಬರ್ದಿದೀನಿ. ನೀನು ನಿನ್ ಗಂಡನ ಜೊತೆ ಹೋಗಿ ಅಲ್ಲಿರು’ ಎನ್ನುವುದು, ಇನ್ನೊಂದು ಸಲ ‘ಮಗ್ಳೇ ನಿಂಗೆ ಅಮೇರಿಕನ್ ಡೈಮಂಡ್ ನೆಕ್ಲೇಸ್ ಮಾಡ್ಸಿದೀನಿ. ತಂದು ಕೊಡ್ತೀನಿ ಯಾರ್ಗೂ ಹೇಳ್ಬೇಡ’ ಅಂತ ಪಿಸುದನಿಯಲ್ಲಿ ಹೇಳುವುದು ನಡೆಯುತ್ತಲೇ ಇರುತ್ತವೆ. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲವಾದ್ದರಿಂದ ಅವರನ್ನು ಯಾರೂ ತಡೆಯುತ್ತಿರಲಿಲ್ಲ. ಅದೊಂದು ದಿನ ಕೌಂಟರಿನ ಮುಂದೆ ಬಂದು ನಿಂತು ಕೈತುಂಬ ನಾಣ್ಯಗಳನ್ನು ಹಿಡಿದು ‘ಮಗ್ಳೇ ತೊಗೋ ನಿಂಗೆ ನನ್ ಉಡುಗೊರೆ’ ಎಂದ. ನಾನು ಸುಮ್ಮನೆ ಕತ್ತೆತ್ತಿ ನೋಡಿದೆ ‘ಅರಿಶಿನ ಕುಂಕುಮಕ್ಕೆ ಕೊಡ್ತಿದೀನಿ ತೊಗೋ’ ಎಂದು ಕೈಯ್ಯನ್ನು ಮುಂದೆ ಚಾಚಿದ. ಒಂದು ಕ್ಷಣ ನಾನು ಅವಾಕ್ಕಾದೆ.
ಹೇಳಿದ್ದು ಎರಡು ಘಟನೆಗಳಷ್ಟೇ. ಹೇಳಲು ಬಾಕಿ ಉಳಿದಿರೋದು ಬಹಳಷ್ಟಿವೆ.
ಇಂಥ ಅನೇಕರ ವಿಶ್ವಾಸ ಹಾರೈಕೆಗಳೇ ನಮ್ಮಂಥವರ ಶಕ್ತಿ ಎಂದರೆ ಅತಿಶಯೋಕ್ತಿಯಲ್ಲ. ಹಣದ ರಾಶಿಯ ಮುಂದಿಟ್ಟುಕೊಂಡು ನಾಲ್ಕು ಮೂಲೆಯ ಗೂಡಿನೊಳಗೆ ಅವಿತಂತೆ ಕುಳಿತಿದ್ದರೂ ನಾವು ನಿರ್ಜೀವಿಗಳಲ್ಲವಲ್ಲಾ. ಈ ತರಹದ ಅನೇಕ ಘಟನೆಗಳು ಇನ್ನೂ ಮಾನವತ್ವ ಸ್ನೇಹ ಪ್ರೀತಿಗಳು ಎಲ್ಲ ಎಲ್ಲೆಯ ಮೀರಿ ಬದುಕನ್ನು ಮತ್ತಷ್ಟು ಹಸನಾಗಿಸುತ್ತವೆ ಎಂಬ ಆಶೆಯನ್ನು ಜೀವಂತವಾಗಿಸುತ್ತದೆ.
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಓದಿನ ಮಹತ್ವ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಅಹಂಕಾರ , ಒಣಜಂಭ ಬೇಡ
- ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)