ದತ್ತಾತ್ರೇಯ ತವಶರಣಂ | ದತ್ತನ್ನಾಥಾ ತವಶರಣಂ ..
ತ್ರಿಗುಣಾತ್ಮಕಾ ತ್ರಿಗುಣಾತೀತ ತ್ರಿಭುವನಪಾಲಕ ತವ ಶರಣಂ
ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತನ ಜನ್ಮವಾಯಿತು, ಆದುದರಿಂದ ಆ ದಿನ “ದತ್ತ ಜಯಂತಿ”ಯನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ. ದತ್ತನ ಜನ್ಮವು ಪ್ರಸ್ತುತ ಮನ್ವಂತರದ ಆರಂಭದಲ್ಲಿ ಪ್ರಥಮ ಪರ್ಯಾಯದಲ್ಲಿನ ತ್ರೇತಾಯುಗದಲ್ಲಿ ಆಗಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ.
ದತ್ತಜಯಂತಿಯ ಮಹತ್ವ
ದತ್ತಜಯಂತಿಯಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ 1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.
ದತ್ತಜಯಂತಿ ಆಚರಣೆ
ಮಾರ್ಗಶಿರ ಶುಕ್ಲ ಅಷ್ಟಮಿಯಿಂದ ಏಳು ದಿನಗಳ ವರೆಗೆ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ವಿಶೇಷವಾಗಿ ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ. ಮಹಾರಾಷ್ಟ್ರದಲ್ಲಿ ಔದುಂಬರ, ನರಸೋಬಾನ ವಾಡಿ, ಗಾಣಗಾಪುರ ಇತ್ಯಾದಿ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವವಿದೆ. ತಮಿಳುನಾಡಿನಲ್ಲಿಯೂ ದತ್ತಜಯಂತಿಯ ರೂಢಿಯಿದೆ.
ತ್ರಿಮೂರ್ತಿ ರೂಪ ದತ್ತಾತ್ರೇಯ
ಮೂರು ಮುಖ, ಆರು ಕೈ. ಕೆಳಗಿನ ಕೈಗಳಲ್ಲಿ ಮಾಲೆ, ಕಮಂಡಲ, ಮಧ್ಯದ ಕೈಗಳಲ್ಲಿ ಡಮರು, ತ್ರಿಶೂಲ, ಮೇಲಿನ ಕೈಗಳಲ್ಲಿ ಗದಾ, ಚಕ್ರ, ಕಾವಿಬಟ್ಟೆಯನ್ನು ತೊಟ್ಟು, ಜಡೆ, ವಿಭೂತಿಗಳಿಂದ ಅಲಂಕೃತನಾದ ದತ್ತಾತ್ರೇಯನ ಚಿತ್ರಣದಲ್ಲಿ ಹಸುವೊಂದಿದೆ. ಅದೇ ಕಾಮಧೇನು. ಆತನ ಹಿಂದೆ ದೊಡ್ಡ ಮರವಿದೆ. ಅದೇ ಕಲ್ಪವೃಕ್ಷ. ನಾಲ್ಕು ನಾಯಿಗಳಿವೆ. ಅವೇ ನಾಲ್ಕು ವೇದಗಳು. ಹೀಗೆ ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಙಾನ, ಅನುಕಂಪಗಳ ಸಾಕಾರ ಮೂರ್ತಿಯಾಗಿದೆ.
ದತ್ತಾತ್ರೇಯ
ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಆತ್ರೇಯ ಎಂದರೆ ಅತ್ರಿಋಷಿಗಳ ಮಗ. ದತ್ತ + ಆತ್ರೇಯ – ದತ್ತಾತ್ರೇಯ ಹೀಗೆ ರೂಪುಗೊಂಡಿದೆ.
ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವೂ ಗುರುವಾಗಿದೆ; ಏಕೆಂದರೆ ಪ್ರತಿಯೊಂದು ವಿಷಯದಿಂದಲೂ ಏನಾದರೊಂದು ಕಲಿಯಲು ಸಿಗುತ್ತದೆ. ಕೆಟ್ಟ ವಿಷಯಗಳಿಂದ ಯಾವ ದುರ್ಗುಣಗಳನ್ನು ಬಿಡಬೇಕು ಮತ್ತು ಒಳ್ಳೆಯ ವಿಷಯಗಳಿಂದ ಯಾವ ಸದ್ಗುಣಗಳನ್ನು ತೆಗೆದುಕೊಳ್ಳಬೇಕು ಎಂಬುದು ಕಲಿಯಲು ಸಿಗುತ್ತದೆ.
ಪುರಾಣ ಕಥೆ
ಪುರಾಣಗಳಿಗನುಸಾರ ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ತಡೆಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾಭೋಜನವನ್ನು ಮಾಡಲು ಬಂದಿದ್ದೇವೆ’ ಎಂದು ಹೇಳಿದರು. ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತುಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು. ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್|’ ಎಂದು ಹೇಳಿದಳು. ಇದರ ಅರ್ಥ – ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್‌ಜ್ಞಾನದಿಂದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿರಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದೂರ್ವಾಸರಾದರು.
ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ! ಎಂಬ ಶ್ಲೋಕ ಗುರುವನ್ನು ಬ್ರಹ್ಮ, ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಿದೆ.
ಯಾವುದೇ ತತ್ವವನ್ನು ಸ್ಪಷ್ಟವಾಗಿ ಅರಿಯಬೇಕಾದರೆ, ಅಥವಾ ಆ ತತ್ವದ ಮೇಲೆ ಹಿಡಿತ ಸಾಧಿಸಬೇಕಾದರೆ ಗುರುವಿನ ಪಾತ್ರ ಅತ್ಯಂತ ಮುಖ್ಯವಾದದ್ದು. ಆದ್ದರಿಂದಲೇ ಪ್ರತ್ಯಕ್ಷ ದೈವ ಹಾಗೂ ಎಲ್ಲಕ್ಕೂ ಮಿಗಿಲಾದ ತತ್ವರೂಪನಾದ ಗುರುವನ್ನು ಆಶ್ರಯಿಸಬೇಕು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ, ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಅಂತಹ ಶ್ರೇಷ್ಠ ಗುರುಗಳು ತ್ರಿಮೂರ್ತಿಗಳ ಸ್ವರೂಪರಾದ ದತ್ತಾತ್ರೇಯರು.
ಔದುಂಬರ ಪೂಜೆಯ ಮಹತ್ವ
ಮೂಲತೋ ಬ್ರಹ್ಮ ರೂಪಾಯ
ಮಧ್ಯತೋ ವಿಷ್ಣುರೂಪಿಣಿ
ಅಗ್ರತಃ ಶಿವರೂಪಾಯ ವೃಕ್ಷರಾಜಯಾ ತೇ ನಮಃ
ಗುರುಚರಿತ್ರೆಯು ದತ್ತಾತ್ರೇಯನ ಅವತಾರಗಳಾದ ಶ್ರೀಪಾದ ವಲ್ಲಭ ಮತ್ತು ನರಸಿಂಹ ಸರಸ್ವತಿ ಸ್ವಾಮಿಗಳ ಮಹಿಮೆಯನ್ನು ಹೇಳುತ್ತದೆ ಮತ್ತು ಔದುಂಬರ ಆರಾಧನೆಯ ಮಹತ್ವವನ್ನು ವಿವರಿಸುತ್ತದೆ.
ಗುರು ಪರಂಪರೆ (ದತ್ತ ಸಂಪ್ರದಾಯದಂತೆ)
ಗುರು-ವಂಶವು ಈ ಕೆಳಗಿನಂತಿರುತ್ತದೆ: ಶಂಕರ – ವಿಷ್ಣು – ಬ್ರಹ್ಮ – ವಸಿಷ್ಠ – ಪರಾಶರ – ವ್ಯಾಸ – ಶುಕ – ಗೌಡಪಾದಾಚಾರ್ಯ – ಗೋವಿಂದಾಚಾರ್ಯ – ಶಂಕರಾಚಾರ್ಯ – ವಿಶ್ವರೂಪಾಚಾರ್ಯ – ನಿತ್ಯಬೋಧಘನಾಚಾರ್ಯ – ಜ್ಞಾನಘನಾಚಾರ್ಯ – ಜ್ಞಾನಘನಾಚಾರ್ಯ – ಜ್ಞಾನಮೋತ್ತ್ಘನಾಚಾರ್ಯ – ವಿದ್ಯಾನಘನಾಚಾರ್ಯ – ಜ್ಞಾನಮೋತ್ತಮತ್ತಮಾಚಾರ್ಯ – ವಿದ್ಯಾನಗಿರಿಯೈರ್ತಾರ್ಥ – ಈಶ್ವರ ತೀರ್ಥ ಈಶ್ವರ ತೀರ್ಥ – ಸಿಂಹಗಿರಿಯ – ಸಿಂಹಗಿರಿಯ – ಸಿಂಹಗಿರಿಃ ಮಲಯಾನಂದಸರಸ್ವತಿ – ದೇವತೀರ್ಥ ಸರಸ್ವತಿ – ಯಾದವೇಂದ್ರ ಸರಸ್ವತಿ – ಕೃಷ್ಣ ಸರಸ್ವತಿ -ನರಸಿಂಹ ಸರಸ್ವತಿ.
ಔದುಂಬರನು ಕಲಿಯುಗದಲ್ಲಿ ಕಲ್ಪತರು, ಆದ್ದರಿಂದ ಭಗವಾನ್ ದತ್ತಾತ್ರೇಯನ ಎರಡನೇ ಅವತಾರವಾದ ಶ್ರೀ ಗುರು ನರಸಿಂಹ ಸರಸ್ವತಿ ಸ್ವಾಮಿಯು ಅದರ ಅಡಿಯಲ್ಲಿ ವಾಸಿಸುತ್ತಿದ್ದರು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಶ್ರೀ ದತ್ತಾತ್ರೇಯನ ರೂಪದಲ್ಲಿ ವಾಸಿಸುತ್ತಾರೆ. ಎಲ್ಲೆಲ್ಲಿ ದತ್ತ ಕ್ಷೇತ್ರಗಳಿವೆಯೋ ಅಲ್ಲೆಲ್ಲ ಭಗವಂತ ಈ ಔದುಂಬರ ವೃಕ್ಷದ ಕೆಳಗೆ ಇರುವುದನ್ನು ಗಮನಿಸಬಹುದು.
ಗಾಣಗಾಪುರ
ಗಾಣಗಾಪುರ, ಕಲಬುರಗಿಯ ಅಫಜಲ್‌ಪುರ ತಾಲೂಕಿನಲ್ಲಿರುವ ಒಂದು ಪವಿತ್ರ ಧಾರ್ಮಿಕ ಕ್ಷೇತ್ರ. ಭೀಮಾ ನದಿಯ ತಟದಲ್ಲಿ ನೆಲೆನಿಂತಿರುವ ಈ ಪೀಠಕ್ಕೆ ನಿರ್ಗುಣ ಮಠ ಎಂತಲೂ ಕರೆಯುತ್ತಾರೆ. ಇದು ಬ್ರಹ್ಮ, ವಿಷ್ಣು, ಮಹೇಶ್ವರರ ಅವತಾರವಾದ ದತ್ತಾತ್ರೇಯರು ನೆಲೆಸಿರುವ ಪಾವನ ಪುಣ್ಯಕ್ಷೇತ್ರ.
ಗಾಣಗಾಪುರ, ಭೀಮಾನದಿ ಹಾಗೂ ಅಮರಜ ನದಿಗಳ ಸಂಗಮ ಕ್ಷೇತ್ರವಾಗಿದೆ. ಇದರಲ್ಲಿ ಸ್ನಾನ ಮಾಡುವುದರಿಂದ ಭಕ್ತಾದಿಗಳ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಇಲ್ಲಿರುವ ಪವಿತ್ರ ಔದುಂಬರ ಮರದ ಕೆಳಗೆ ಕುಳಿತು ಶ್ರೀಗುರು ಚರಿತ್ರೆಯನ್ನು ಪಾರಾಯಣ ಮಾಡಲಾಗುತ್ತದೆ. ಪುರಾಣದ ಪ್ರಕಾರ ಹಿಂದೆ ನರಹರಿ ಎಂಬ ಬ್ರಾಹ್ಮಣ, ದತ್ತಾತ್ರೇಯರಲ್ಲಿಗೆ ಬಂದು ತಾನು ನೋವಿನಿಂದ ನರಳುತ್ತಿರುವುದಾಗಿ, ಹೇಗಾದರೂ ಮಾಡಿ ತಮ್ಮ ಕೃಪೆಯಿಂದ ಅದನ್ನು ವಾಸಿಮಾಡಿ ಎಂದು ಕೇಳಿಕೊಂಡನಂತೆ.
ದತ್ತರು, ಅಲ್ಲಿದ್ದ ಔದುಂಬರ ಮರದ ಒಂದು ಕೊರಡನ್ನು ಬ್ರಾಹ್ಮಣನಿಗೆ ಕೊಟ್ಟು, ನದಿಗಳ ಸಂಗಮ ಸ್ಥಾನದಲ್ಲಿ ಅದನ್ನು ನೆಡಲು ಹೇಳಿ, ದಿನಕ್ಕೆ ಮೂರು ಬಾರಿ ಆ ಮರದ ಕೊರಡಿಗೆ ನೀರು ಹಾಕುವಂತೆ ಆದೇಶಿಸಿದರು. ಬ್ರಾಹ್ಮಣ ಹಾಗೆಯೇ ಮಾಡಿದ. ಒಂದು ದಿನ ಗುರುಗಳು ಅವನಲ್ಲಿಗೆ ಹೋಗಿ ಸಂಗಮದ ಪವಿತ್ರ ನೀರಿನಿಂದ ಅವನಿಗೆ ಹಾಗೂ ಅವನು ನೆಟ್ಟ ಮರದ ಕೊರಡಿಗೆ ಪ್ರೋಕ್ಷಣೆ ಮಾಡಿದರು. ತಕ್ಷಣ ಅವನ ನೋವು ವಾಸಿಯಾಯಿತೆಂದು ಹೇಳಲಾಗುತ್ತದೆ. ದತ್ತ ಜಯಂತಿಯಂದು ಜನಸಾಗರವೇ ಹರಿದು ಬರುವ ಈ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ