ಲೋಕಸಭೆ, ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪ್ರಚಾರದ ವೆಚ್ಚದ ಮಿತಿ ಹೆಚ್ಚಳ

Team Newsnap
1 Min Read

ಚುನಾವಣಾ ಆಯೋಗದ ಶಿಫಾರಸಿನ ಅನ್ವಯ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಕಾರ್ಯಗಳಿಗೆ ಖರ್ಚು ಮಾಡುವ ಹಣದ ಮಿತಿಯನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದ ನಿರ್ಬಂಧನೆಯ ನಡುವೆ ಅಭ್ಯರ್ಥಿಗಳು ಎದುರಿಸಬಹುದಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು  ಆಯೋಗ ಈ ಶಿಫಾರಸು ಮಾಡಿದೆ.

ವೆಚ್ಚದ ಮಿತಿಯ ಹೆಚ್ಚಳದಿಂದಾಗಿ ಬಿಹಾರ ವಿಧಾನಸಭಾ ಚುನಾವಣೆ, ಒಂದು ಲೋಕಸಭಾ ಹಾಗೂ 50 ವಿಧಾನಸಭೆಯ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ.

ಕೋವಿಡ್‌ 19 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲೂ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಶೇ 10 ರಷ್ಟು ಹೆಚ್ಚಿಸಲು ಚುನಾವಣಾ ಆಯೋಗವು ಒಂದು ತಿಂಗಳ ಹಿಂದೆ ಶಿಫಾರಸು ಮಾಡಿತ್ತು.

ಸಾಂಕ್ರಾಮಿಕ ರೋಗದ ನಿರ್ಬಂಧಗಳ ನಡುವೆ ಚುನಾವಣೆಯ ಪ್ರಚಾರ, ರ್‍ಯಾಲಿಗಳನ್ನು ಆಯೋಜಿಸುವಾಗ ಸ್ಪರ್ಧಿಗಳು ಎದುರಿಸುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಿತಿಯನ್ನು ಹೆಚ್ಚಿಸಲಾಗಿದೆ.

ಇಲ್ಲಿಯವರೆಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಚಾರಕ್ಕಾಗಿ ನಿಗದಿಪಡಿಸಿದ ಗರಿಷ್ಠ ವೆಚ್ಚದ ಮಿತಿ ₹70 ಲಕ್ಷ. ವಿಧಾನಸಭಾ ಅಭ್ಯರ್ಥಿಗೆ ಗರಿಷ್ಠ ₹28 ಲಕ್ಷ.

ಚುನಾವಣಾ ಆಯೋಗದ ಶಿಫಾರಸಿನ ನಂತರ, ಕಾನೂನು ಸಚಿವಾಲಯ ಸೋಮವಾರ ರಾತ್ರಿ ಹೊರಡಿಸಿದ ಅಧಿಸೂಚನೆ ಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅಭ್ಯರ್ಥಿಯೊಬ್ಬರ ಗರಿಷ್ಠ ವೆಚ್ಚದ ಮಿತಿ ₹77 ಲಕ್ಷ, ವಿಧಾನಸಭಾ ಅಭ್ಯರ್ಥಿಯ ಗರಿಷ್ಠ ವೆಚ್ಚದ ಮಿತಿ 30.8 ಲಕ್ಷಕ್ಕೆ ಏರಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಖರ್ಚು ಮಾಡುವ ಗರಿಷ್ಠ ಖರ್ಚು ಮಿತಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

Share This Article
Leave a comment